ಶನಿವಾರ, ಮೇ 21, 2022
20 °C

ಜಿಲ್ಲಾ ಕೇಂದ್ರದಲ್ಲಿ ಸ್ವಚ್ಛತೆ ಕಣ್ಮರೆ...!

ಕೆ.ಎಚ್. ಓಬಳೇಶ್ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಜಿಲ್ಲಾ ಕೇಂದ್ರದ ವ್ಯಾಪ್ತಿ ತ್ಯಾಜ್ಯ ನಿರ್ವಹಣೆಗೆ ನಗರಸಭೆ ಆಡಳಿತ ಸಂಪೂರ್ಣವಾಗಿ ನಿರ್ಲಕ್ಷ್ಯವಹಿಸಿರುವ ಪರಿಣಾಮ ರಸ್ತೆಬದಿಯಲ್ಲಿ ಕಸದ ರಾಶಿಗಳು ಸೃಷ್ಟಿಯಾಗುತ್ತಿವೆ.ಇಂದಿಗೂ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡುವ ಪ್ರಯತ್ನ ನಡೆದಿಲ್ಲ. ಹೀಗಾಗಿ, ಎಲ್ಲ ವಾರ್ಡ್‌ಗಳಲ್ಲಿ ಅನೈರ್ಮಲ್ಯ ಸೃಷ್ಟಿಯಾಗಿದ್ದು,  ಪರಿಸರ ಮಾಲಿನ್ಯ ಹೆಚ್ಚುತ್ತಿದೆ. ಪೌರ ಕಾರ್ಮಿಕರ ಕೊರತೆಯ ನೆಪವೊಡ್ಡಿ ಕಸ ವಿಲೇವಾರಿಗೆ ಹಿಂದೇಟು ಹಾಕಲಾಗುತ್ತಿದೆ. ಇದು ನಗರದ ಸೌಂದರ್ಯಕ್ಕೂ ಧಕ್ಕೆ ತರುತ್ತಿದೆ.ನಗರಸಭೆ ವ್ಯಾಪ್ತಿಯಲ್ಲಿ 14 ಕೈಗಾರಿಕೆಗಳು, 7 ಕಲ್ಯಾಣ ಮಂಟಪ, 34 ದೇವಸ್ಥಾನ ಸೇರಿದಂತೆ 14 ಸಾವಿರಕ್ಕೂ ಹೆಚ್ಚು ಮನೆಗಳಿವೆ. ಘೋಷಿತ 15 ಕೊಳಚೆಪ್ರದೇಶಗಳಿವೆ. ಜನಸಂಖ್ಯೆ ಸುಮಾರು 1ಲಕ್ಷದಷ್ಟಿದೆ. ಹೀಗಾಗಿ, ಪ್ರತಿನಿತ್ಯ ತ್ಯಾಜ್ಯದ ಉತ್ಪಾದನೆ ಹೆಚ್ಚಿದೆ. ಆದರೆ, ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ ಎನ್ನುವುದು ನಾಗರಿಕರ ದೂರು.ಕೆಲವು ವಾರ್ಡ್‌ಗಳಲ್ಲಿ ಈ ಹಿಂದೆ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ಕಸ ವಿಲೇವಾರಿಯ ಉಸ್ತುವಾರಿ ನೀಡಲಾಗಿತ್ತು. ಶೂನ್ಯ ತ್ಯಾಜ್ಯ ಸಂಗ್ರಹ ಘಟಕ ಕೂಡ ತೆರೆಯಲಾಗಿತ್ತು. ಸದ್ಯ ಈ ಘಟಕವೂ ಸ್ಥಗಿತಗೊಂಡಿದೆ. ನಾಗರಿಕರ ಅಸಹಕಾರದಿಂದ ಸ್ವಸಹಾಯ ಸಂಘಗಳು ಕಸ ವಿಲೇವಾರಿಗೆ ಹಿಂದೇಟು ಹಾಕಿವೆ. ಇದರ ಪರಿಣಾಮ ನಗರದ ರಸ್ತೆಬದಿಗಳಲ್ಲಿ ಕಸದ ರಾಶಿಗಳು ಸೃಷ್ಟಿಯಾಗಿದ್ದು, ಕಲ್ಮಷ ವಾತಾವರಣ ಸೃಷ್ಟಿಯಾಗುತ್ತಿದೆ.ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುವುದು ಸೇರಿದಂತೆ ಪ್ರತಿದಿನವೂ ಕಸ ವಿಲೇವಾರಿ ಅಗತ್ಯ ಸಿಬ್ಬಂದಿಯ ನೇಮಕಕ್ಕೆ ಸ್ಥಳೀಯ ಆಡಳಿತ ಮುಂದಾಗಿಲ್ಲ ಎನ್ನುವುದು ಸಾರ್ವಜನಿಕರ ಆರೋಪ. ಕಸ ವಿಲೇವಾರಿಗೆ ನಿರ್ಲಕ್ಷ್ಯವಹಿಸುವ ಅಧಿಕಾರಶಾಹಿ ಹಾಗೂ ಜನಪ್ರತಿನಿಧಿಗಳಿಂದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವೇ? ಎಂಬುದು ಅವರ ಪ್ರಶ್ನೆ.ಕೇವಲ ತೋರಿಕೆಗಾಗಿ ಮಾತ್ರವೇ ಕೆಲವು ರಸ್ತೆಬದಿಯಲ್ಲಿ ಕಸ ಸಂಗ್ರಹಿಸುವ ಪ್ಲಾಸ್ಟಿಕ್ ಡಬ್ಬಿ ಇಡಲಾಗಿದೆ. ಅವುಗಳ ನಿರ್ವಹಣೆಯೂ ಸಮರ್ಪಕವಾಗಿಲ್ಲ. ನಾಗರಿಕರು ಕೂಡ ಡಬ್ಬಿಯೊಳಗೆ ಕಸ ಹಾಕುವ ಪರಿಪಾಠ ಬೆಳೆಸಿಕೊಂಡಿಲ್ಲ. ಸ್ವಚ್ಛತೆ ಕುರಿತು ನಗರಸಭೆ ಆಡಳಿತವೂ ಜನರಿಗೆ ಅರಿವು ಮೂಡಿಸಲು ಮುಂದಾಗಿಲ್ಲ.`ನಗರಸಭೆ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಯದ್ದೇ ಬಹುದೊಡ್ಡ ಸಮಸ್ಯೆಯಾಗಿದೆ. ಪ್ರತಿನಿತ್ಯ ಕುಡಿಯುವ ನೀರು ಪೂರೈಕೆಗೂ ದಿವ್ಯನಿರ್ಲಕ್ಷ್ಯ ತಳೆದಿರುವ ನಗರಸಭೆ ಆಡಳಿತ ಕನಿಷ್ಠ ತ್ಯಾಜ್ಯ ವಿಲೇವಾರಿಗೂ ಮುಂದಾಗದಿರುವುದು ದುರಂತ. ಮತ್ತೊಂದೆಡೆ ಒಳಚರಂಡಿ ಕಾಮಗಾರಿಗೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು. ಇಂದಿಗೂ ಕಾಮಗಾರಿ ಆರಂಭವಾಗುವ ಲಕ್ಷಣಗಳೇ ಕಂಡುಬರುತ್ತಿಲ್ಲ~ ಎಂದು ದೂರುತ್ತಾರೆ ಸಿದ್ದಬಸಪ್ಪ.`ಕಸ ವಿಲೇವಾರಿಗೆ ಒತ್ತು ನೀಡುವುದರೊಂದಿಗೆ ನೈರ್ಮಲ್ಯ ಕಾಪಾಡಲು ನಗರಸಭೆ ಆಡಳಿತ ಮುಂದಾಗಬೇಕು. ಕೂಡಲೇ, ಒಳಚರಂಡಿ ಕಾಮಗಾರಿ ಆರಂಭಿಸಬೇಕು. ಸ್ವಚ್ಛತೆ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಬೇಕು~ ಎಂಬುದು ಅವರ ಒತ್ತಾಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.