ಮಂಗಳವಾರ, ಡಿಸೆಂಬರ್ 10, 2019
26 °C

ಜಿಲ್ಲಾ-ತಾಲ್ಲೂಕು ಪಂಚಾಯಿತಿ: ಅತಂತ್ರಜಿಲ್ಲೆಗಳಲ್ಲಿ ಆಪರೇಷನ್ ತಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿಲ್ಲಾ-ತಾಲ್ಲೂಕು ಪಂಚಾಯಿತಿ: ಅತಂತ್ರಜಿಲ್ಲೆಗಳಲ್ಲಿ ಆಪರೇಷನ್ ತಂತ್ರ

ಬೆಂಗಳೂರು/ಬಳ್ಳಾರಿ/ರಾಮನಗರ: ಅತಂತ್ರ ಫಲಿತಾಂಶ ಬಂದಿರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ‘ಆಪರೇಷನ್ ಕಮಲ’ ಕಾರ್ಯಾಚರಣೆಗೆ ಮತ್ತೆ ಚಾಲನೆ ನೀಡಿದೆ. ಫಲಿತಾಂಶ ಪ್ರಕಟವಾದ 24 ಗಂಟೆಗಳಲ್ಲೇ ರೆಡ್ಡಿ ಸಹೋದರರು ‘ಆಪರೇಷನ್ ಕಮಲ’ದ ಮೂಲಕ ಬಳ್ಳಾರಿಯಲ್ಲಿ ಬಿಜೆಪಿಗೆ ಬಹುಮತ ಬರುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಬಳ್ಳಾರಿ ಜಿಲ್ಲಾ ಪಂಚಾಯಿತಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿಗೆ ಒಂದು ಸ್ಥಾನದ ಕೊರತೆ ಇತ್ತು. ಕಾಂಗ್ರೆಸ್‌ನ ನಾಗರತ್ನಮ್ಮ ಅವರನ್ನು ಸೆಳೆಯುವ ಮೂಲಕ ಸುಲಭವಾಗಿ ಆ ಕೊರತೆಯನ್ನು ನೀಗಿಸಿಕೊಂಡಿದೆ. ಸಿರುಗುಪ್ಪ ತಾಲ್ಲೂಕಿನ ಹಳೆಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ನಾಗರತ್ನಮ್ಮ ಬುಧವಾರ ಸಚಿವರಾದ ಜಿ.ಜನಾರ್ದನರೆಡ್ಡಿ ಹಾಗೂ ಬಿ.ಶ್ರೀರಾಮುಲು ಅವರ ಸಮ್ಮುಖದಲ್ಲಿ ಬಿಜೆಪಿಗೆ ಬೆಂಬಲ ಘೋಷಿಸುವುದಾಗಿ ಪ್ರಕಟಿಸಿದರು.ಇದೇ ರೀತಿ ಅತಂತ್ರವಾಗಿರುವ ಕಡೆ ಆಪರೇಷನ್ ಕಮಲ ಕಾರ್ಯಾಚರಣೆ  ನಡೆಯುವ ಸಾಧ್ಯತೆಗಳಿವೆ. ಗುಲ್ಬರ್ಗ, ಕೊಪ್ಪಳ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸೇರಿದಂತೆ 4-5 ಕಡೆ ಬಿಜೆಪಿಗೆ ಅಧಿಕಾರಕ್ಕೆ ಬರಲು 3ರಿಂದ 4 ಸ್ಥಾನಗಳ ಕೊರತೆ ಇದೆ. ಇದನ್ನು ಹೇಗೆ ನೀಗಿಸಿಕೊಳ್ಳಬೇಕು ಎಂಬ ಬಗ್ಗೆ ಬಿಜೆಪಿಯಲ್ಲಿ ಗಂಭೀರ ಚರ್ಚೆ ನಡೆದಿದೆ. ‘ಆಪರೇಷನ್ ಕಮಲ’ ಮತ್ತು ಮೀಸಲಾತಿ ನಿಗದಿ ಮಾಡುವಾಗ ‘ಕೈಚಳಕ’ ತೋರಿಸುವ ಮೂಲಕ ಪ್ರತಿಪಕ್ಷಗಳಿಗೆ ಅವಕಾಶ ಇಲ್ಲದಂತೆ ಮಾಡಲು ಪ್ರಯತ್ನಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.ಕಳೆದ ಬಾರಿ ನಡೆದ ಜಿಲ್ಲಾ ಪಂಚಾಯಿತಿ ಉಪ ಚುನಾವಣೆಯಲ್ಲಿ ಸಿರುಗುಪ್ಪ ತಾಲ್ಲೂಕಿನ ರಾರಾವಿ ಕ್ಷೇತ್ರದಿಂದ ಜಯಗಳಿಸಿದ್ದ ದೊಡ್ಡಹನುಮಂತಪ್ಪ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಂಡೆದ್ದು, ಕಾಂಗ್ರೆಸ್ ಕದ ತಟ್ಟಿ, ಪತ್ನಿ ನಾಗರತ್ನಮ್ಮ ಅವರಿಗೆ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಹಳೆಕೋಟೆ ಕ್ಷೇತ್ರದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.ನಾಗರತ್ನಮ್ಮ ಅವರನ್ನು ಬಿಜೆಪಿಗೆ ಸೆಳೆದುಕೊಂಡಿ ರುವುದನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಖಂಡಿಸಿದ್ದು, ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ತಿಳಿಸಿದರು.ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಆಪರೇಷನ್ ಕಮಲ ಚಾಲನೆ ಪಡೆದುಕೊಳ್ಳುತ್ತದೆ ಎಂಬ ಅನುಮಾನ ಮೊದಲೇ ಇತ್ತು. ಈಗ ಆ ಅನುಮಾನ ನಿಜವಾಗಿದೆ’ ಎಂದರು.‘ಫಲಿತಾಂಶ ಬಂದು ಒಂದು ದಿನ ಕಳೆಯುವುದರೊಳಗೆ ಇಂತಹ ಕೆಲಸಕ್ಕೆ ಕೈಹಾಕಿದ ಇಬ್ಬರು ಸಚಿವರನ್ನು ಸಂಪುಟದಿಂದ ಕೈಬಿಡಬೇಕು. ಸಚಿವರು ಇಂತಹ ಕೆಲಸ ಮಾಡಿದ್ದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ರಾಜ್ಯದ ಜನತೆಯ ಮುಂದೆ ತಪ್ಪೊಪ್ಪಿಕೊಳ್ಳಬೇಕು’ ಎಂದು ಆಗ್ರಹಿಸಿದರು.‘ನಾಗರತ್ನಮ್ಮ ಅವರಿಗೆ ಎರಡು ಕೋಟಿ ರೂಪಾಯಿ ಆಮಿಷ ಒಡ್ಡಿದ್ದಾರೆ, ಅಲ್ಲದೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದಾರೆ ಎಂಬ ಮಾಹಿತಿ ಇದೆ. ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸುವ ಈ ಕಾರ್ಯದ ವಿರುದ್ಧ ಕಾಂಗ್ರೆಸ್ ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ನಡೆಸಲಿದೆ’ ಎಂದರು.

ಮೈತ್ರಿಗೆ ಯತ್ನ: ಈ ಮಧ್ಯೆ ಸ್ಪಷ್ಟ ಬಹುಮತ ಬಾರದೆ ಅತಂತ್ರವಾಗಿರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಲ್ಲಿ ಮೈತ್ರಿ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್- ಜೆಡಿಎಸ್ ಪ್ರಯತ್ನ ನಡೆಸಿವೆ.ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಮೈತ್ರಿಗೆ ಒಲವು ತೋರಿದ್ದು, ಒಂದೆರಡು ದಿನಗಳಲ್ಲಿ ಈ ಬಗ್ಗೆ ಸ್ಪಷ್ಟಚಿತ್ರಣ ದೊರೆಯುವ ಸಾಧ್ಯತೆ ಇದೆ.‘ಅತಂತ್ರ ಫಲಿತಾಂಶ ಬಂದಿರುವ ಜಿಲ್ಲಾ ಪಂಚಾಯಿತಿಗಳಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ ಜೆಡಿಎಸ್ ಜೊತೆ ತಾತ್ವಿಕವಾಗಿ ಹೊಂದಾಣಿಕೆ ಮಾಡಿಕೊಳ್ಳಲು ಉತ್ಸುಕರಾಗಿದ್ದೇವೆ. ಈ ಬಗ್ಗೆ ಪಕ್ಷದ ವರಿಷ್ಠರ ಜೊತೆ ಮಾತನಾಡಿದ್ದೇನೆ, ಅವರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಜೆಡಿಎಸ್ ವರಿಷ್ಠರ ಜೊತೆ ಇನ್ನೂ ಮಾತುಕತೆ ನಡೆಸಿಲ್ಲ’ ಎಂದು ಪರಮೇಶ್ವರ್ ತಿಳಿಸಿದರು.ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ‘ಕಾಂಗ್ರೆಸ್‌ನೊಂದಿಗೆ ಕೈಜೋಡಿಸಲು ಸಿದ್ದವಿರುವುದಾಗಿ ಹೇಳಿದ್ದಾರೆ. ಅತಂತ್ರ ಫಲಿತಾಂಶ ಬಂದಿರುವ ಕಡೆ ಕಾಂಗ್ರೆಸ್‌ಗೆ ಸಹಕಾರ ನೀಡಲು ಅಭ್ಯಂತರವಿಲ್ಲ. ಆದರೆ ಕಾಂಗ್ರೆಸ್‌ನವರು ಇನ್ನಾದರೂ ನಡವಳಿಕೆಯನ್ನು ಸರಿಪಡಿಸಿಕೊಳ್ಳಲಿ’ ಎಂದರು.ಶೀಘ್ರ ಅಧಿಸೂಚನೆ: ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳ ಪಟ್ಟಿಯನ್ನು ಗೆಜೆಟ್‌ನಲ್ಲಿ ಪ್ರಕಟಿಸಿದ ನಂತರ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿ ಮಾಡಲಾಗುತ್ತದೆ. ಈ ವಾರದಲ್ಲಿ ಗೆಜೆಟ್ ಪ್ರಕಟವಾಗುವ ನಿರೀಕ್ಷೆ ಇದ್ದು, ಮುಂದಿನ ವಾರ ಮೀಸಲಾತಿ ನಿಗದಿಯಾಗುವ ಸಂಭವವಿದೆ. ಅಧ್ಯಕ್ಷ- ಉಪಾಧ್ಯಕ್ಷರ ಅವಧಿ 20 ತಿಂಗಳಾಗಿದ್ದು, ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ಇರುತ್ತದೆ.ಗ್ರಾ.ಪಂ. ಸದಸ್ಯನ ಮನೆ ಮೇಲೆ ದಾಳಿ: ರಾಮನಗರದ ಕೂಟಗಲ್ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ರಾಜಕೀಯ ವೈಷಮ್ಯ ಭುಗಿಲೆದ್ದಿದೆ. ಇದರ ಪರಿಣಾಮ ತಡಿಕವಾಗಿಲು ಗ್ರಾಮದ ಜೆಡಿಎಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯ ಬೆಟ್ಟ ಮುನಿಯಪ್ಪ ಅವರ ಮನೆಯ ಮೇಲೆ ಕೆಲ ದುಷ್ಕರ್ಮಿಗಳು ದಾಳಿ ನಡೆಸಿ ಆಸ್ತಿ-ಪಾಸ್ತಿ ನಾಶ ಮಾಡಿದ್ದಾರೆ.‘ಮಂಗಳವಾರ ರಾತ್ರಿ 11.30ಕ್ಕೆ ಮನೆಯ ಮೇಲೆ ಸುಮಾರು 10ರಿಂದ 15 ಜನರ ಗುಂಪು ದಾಳಿ ನಡೆಸಿತು. ಈ ಗುಂಪಿನವರ ಕೈಯಲ್ಲಿ ಲಾಂಗು, ಮಚ್ಚು, ಕಬ್ಬಿಣದ ಸಲಾಕೆ ಇದ್ದವು. ಏಕಾಏಕಿ ದಾಳಿ ನಡೆಸಿದ ಇವರು ಮನೆಯ ಗೇಟು, ಬಾಗಿಲನ್ನು ಹೊಡೆದು ಹಾಕಿದರು. ನಂತರ ಮನೆಯ ಕಿಟಕಿಗಳ ಗಾಜುಗಳನ್ನು ಪುಡಿ ಪುಡಿ ಮಾಡಿದರು. ಅಲ್ಲದೆ ಟಿ.ವಿ, ರೆಫ್ರಿಜರೇಟರ್ ಹೊಡೆದು ಹಾಕಿದ್ದಾರೆ’ ಎಂದು ಮನೆ ಮಾಲೀಕ ಬೆಟ್ಟ ಮುನಿಯಪ್ಪ ದೂರಿದ್ದಾರೆ.ಕೆಜಿಎಫ್ ವರದಿ: ತಾಲ್ಲೂಕು ಪಂಚಾಯಿತಿ ಚುನಾವಣೆ ವೈಷಮ್ಯದ ಹಿನ್ನೆಲೆಯಲ್ಲಿ ಸಮೀಪದ ಆಡಂಪಲ್ಲಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಬುಧವಾರ ಘರ್ಷಣೆ ನಡೆದು ಗುಡಿಸಲು ಬೆಂಕಿಗೆ ಆಹುತಿಯಾಗಿದೆ. ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ.ಕಳೆದ ಎರಡು ದಿನಗಳಿಂದ ಎರಡೂ ಪಂಗಡಗಳ ನಡುವೆ ಬೂದಿ ಮುಚ್ಚಿದಂತೆ ಇದ್ದ ಹಗೆತನ ಮಧ್ಯಾಹ್ನ ಸ್ಫೋಟಗೊಂಡಿದೆ. ಪಾರಾಂಡಹಳ್ಳಿ ತಾಲ್ಲೂಕು ಪಂಚಾಯಿತಿ ಕ್ಷೇತ್ರದಿಂದ ಸ್ಪರ್ಧಿಸಿ ವಿಜೇತರಾಗಿದ್ದ ರಮೇಶ್ ಪತ್ನಿ ನಾರಾಯಣಮ್ಮ ಅವರನ್ನು ಮನೆಯಿಂದ ಎಳೆದುಕೊಂಡು ಹೋದ ಜೆಡಿಎಸ್ ಪರ ಗುಂಪು ಅವರನ್ನು ಗುಡಿಸಲಿನಲ್ಲಿ ಕೂಡಿಟ್ಟು, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚುವ ಪ್ರಯತ್ನ ಮಾಡಿದೆ.ಈ ಸಂಬಂಧ ನಡೆದ ಗುಂಪು ಘರ್ಷಣೆಯಲ್ಲಿ ನಾರಾಯಣಮ್ಮ ಹಾಗೂ ಪರಾಜಿತ ಜೆಡಿಎಸ್ ಅಭ್ಯರ್ಥಿ ಕುಮಾರ್ ಪತ್ನಿ ವಿಮಲಾ ಗಾಯಗೊಂಡಿದ್ದಾರೆ. ಇಬ್ಬರನ್ನೂ ರಾಬರ್ಟಸನ್‌ಪೇಟೆ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ.

ಪ್ರತಿಕ್ರಿಯಿಸಿ (+)