ಜಿಲ್ಲಾ ಧಾರ್ಮಿಕ ಪರಿಷತ್ತು ರಚನೆ

7

ಜಿಲ್ಲಾ ಧಾರ್ಮಿಕ ಪರಿಷತ್ತು ರಚನೆ

Published:
Updated:

ರಾಮನಗರ: ಜಿಲ್ಲೆಯಲ್ಲಿ ಮುಜುರಾಯಿ ಇಲಾಖೆ ವ್ಯಾಪ್ತಿಗೆ ಬರುವ ದೇವಾಲಯಗಳ ಮೇಲುಸ್ತುವಾರಿ ನೋಡಿಕೊಳ್ಳುವ ಸಂಬಂಧ ರಾಜ್ಯ ಸರ್ಕಾರ 10 ಜನರನ್ನು ಒಳಗೊಂಡ ಜಿಲ್ಲಾ ಧಾರ್ಮಿಕ ಪರಿಷತ್ತನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.ರಾಜ್ಯ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮಕ್ಕೆ ಸರ್ಕಾರ ತಿದ್ದುಪಡಿ ತಂದಿದ್ದು, ರಾಜ್ಯ ಮಟ್ಟದಲ್ಲಿ ರಾಜ್ಯ ಧಾರ್ಮಿಕ ಪರಿಷತ್ತು ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ತು ರಚನೆಗೆ ಅವಕಾಶ ಕಲ್ಪಿಸಿದೆ. ಅದರಂತೆ ಇದೀಗ ರಾಮನಗರ ಜಿಲ್ಲಾ ಪರಿಷತ್ತು ರಚನೆಯಾಗಿದೆ.ಈ ಸಂಬಂಧ ಕಂದಾಯ ಇಲಾಖೆ (ಮುಜುರಾಯಿ) ಅಧೀನ ಕಾರ್ಯದರ್ಶಿ ಎ.ವಿ.ಶ್ರೀನಿವಾಸ ದೀಕ್ಷಿತ್ ಅಕ್ಟೋಬರ್ 4ರಂದು ಸಹಿ ಮಾಡಿ ಆದೇಶ ಹೊರಡಿಸಿದ್ದಾರೆ.ಪರಿಷತ್ತಿನಲ್ಲಿ ಯಾರ‌್ಯಾರಿದ್ದಾರೆ ?: ಜಿಲ್ಲಾಧಿಕಾರಿ ಪರಿಷತ್ತಿನ ಅಧ್ಯಕ್ಷರಾಗಿದ್ದು, ಧಾರ್ಮಿಕ ದತ್ತಿ ತಹಸೀಲ್ದಾರ್ ಪದನಿಮಿತ್ತ ಕಾರ್ಯದರ್ಶಿಯಾಗಿರುತ್ತಾರೆ. ಸದಸ್ಯರಾಗಿ ನಿವೃತ್ತ ಜಿಲ್ಲಾ ನ್ಯಾಯಾಧೀಶ ಸಿ.ಜಿ.ಹುನಗುಂದ, ಆಗಮ ಪಂಡಿತ ಕನಕಪುರದ ಶೇರಗಾರ ಬೀದಿಯ ಶ್ರೀನಿವಾಸ ಗೋಪಾಲ ಭಟ್ಟ, ವೇದ ವಿದ್ವಾಂಸ ಚನ್ನಪಟ್ಟಣದ ಮಳೂರಿನ ರಾಮಕೃಷ್ಣ ಭಟ್ಟ, ಪರಿಶಿಷ್ಟ ಪಂಗಡದ ಪ್ರತಿನಿಧಿಯಾಗಿ ರಾಮನಗರದ ವಾಜತ್ ಬೀದಿಯ ಡಿ.ಲಕ್ಷ್ಮಣ, ಮಹಿಳಾ ಪ್ರತಿನಿಧಿಯಾಗಿ ಚನ್ನಪಟ್ಟಣದ ಬೇವೂರು ಮಂಡ್ಯದ ಕಲಾವತಿ, ಹಿಂದುಳಿದ ವರ್ಗದ ಪ್ರತಿನಿಧಿಯಾಗಿ ರಾಮನಗರದ ತಿಗಳರ ಬೀದಿಯ ಬಿ.ಕೆ.ಕೃಷ್ಣಮೂರ್ತಿ ಹಾಗೂ ಸಾಮಾನ್ಯ ಪ್ರವರ್ಗದಲ್ಲಿ ಕನಕಪುರದ ಎಚ್.ಬಿ.ವೆಂಕಟೇಶ್, ಮಾಗಡಿಯ ಬ್ರಾಹ್ಮಣರ ಬೀದಿಯ ಬಿ.ವಿ.ವೆಂಕಟೇಶ್ ಅಯ್ಯಂಗಾರ್ ಅವರನ್ನು ನೇಮಿಸಲಾಗಿದೆ.ಸದಸ್ಯರು ಮೂರು ವರ್ಷಗಳವರೆಗೆ ಅಥವಾ ಮುಂದಿನ ಆದೇಶದವರೆಗೆ ಸರ್ಕಾರದಿಂದ ನಾಮ ನಿರ್ದೇಶಿತರಾಗಿರುತ್ತಾರೆ ಎಂದು ಆದೇಶದಲ್ಲಿ ಹೇಳಲಾಗಿದೆ.ಅಧಿಕಾರ ಮತ್ತು ಕಾರ್ಯಗಳು: ದೇವಾಲಯಗಳ ನಿರ್ವಹಣೆಯ ಮೇಲುಸ್ತುವಾರಿ ವಹಿಸುವ ನಿಟ್ಟಿನಲ್ಲಿ ಈ ಪರಿಷತ್ತು ಮಹತ್ವದ ಕೆಲಸ ಮಾಡುತ್ತದೆ. ಅಲ್ಲದೆ ಜಿಲ್ಲಾ ಮಟ್ಟದಲ್ಲಿ ದೇವಾಲಯಗಳ ವಿಷಯದಲ್ಲಿ ಕೆಲ ಧಾರ್ಮಿಕ, ಆರ್ಥಿಕ ಅಧಿಕಾರಗಳನ್ನು ಹೊಂದಿದೆ. ಜತೆಗೆ ಕೆಲ ವಿವಾದಗಳನ್ನು ಬಗೆಹರಿಸುವ ಅಧಿಕಾರ ಕಾರ್ಯಗಳನ್ನು ಪರಿಷತ್ತು ಹೊಂದಿರುತ್ತದೆ ಎಂದು ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ ಗೆ ಮಾಹಿತಿ ನೀಡಿದರು.ಜಿಲ್ಲೆಯಲ್ಲಿ ಒಂದು ಲಕ್ಷದಿಂದ 10 ಲಕ್ಷ ರೂಪಾಯಿ ವರೆಗೆ ವಾರ್ಷಿಕ ಆದಾಯ ಹೊಂದಿರುವ ಅಧಿಸೂಚಿತ ಸಂಸ್ಥೆಗಳಿಗೆ ವ್ಯವಸ್ಥಾಪಕ ಸಮಿತಿ ರಚಿಸುವ ಹಾಗೂ ಅಂತಹ ಸಮಿತಿಯನ್ನು ವಿಸರ್ಜಿಸುವ ಮಹತ್ವದ ಅಧಿಕಾರವನ್ನು ಈ ಪರಿಷತ್ತು ಹೊಂದಿದೆ.ಅಲ್ಲದೆ ಜಿಲ್ಲಾ ಧಾರ್ಮಿಕ ಪರಿಷತ್ತಿನ ಅಧಿಕಾರ ವ್ಯಾಪ್ತಿಯೊಳಗೆ ಬರುವ ವಿವಾದಗಳನ್ನು, ಪರಿಷತ್ತಿನ ನ್ಯಾಯಿಕ ಸದಸ್ಯರು ಹಾಗೂ ಕಾರ್ಯದರ್ಶಿ ಒಳಗೊಂಡ ನ್ಯಾಯಾಧಿಕರಣವು ತೀರ್ಮಾನಿಸುತ್ತದೆ. ಯಾವುದೇ ಭಿನ್ನಾಭಿಪ್ರಾಯ ಅಥವಾ ವಿವಾದವನ್ನು ಜಿಲ್ಲಾ ಧಾರ್ಮಿಕ ಪರಿಷತ್ತು ನಿರ್ಧರಿಸಬಹುದಾಗಿದೆ ಎಂದು ವಿವರಿಸಿದರು.ಇದರ ಜತೆಗೆ ದೇವಾಲಯದಲ್ಲಿ ನೇಮಕಾತಿ ನಡೆಯುವ ಸಂದರ್ಭದಲ್ಲೂ ಪರಿಷತ್ತು ಪ್ರಮುಖ ಪಾತ್ರ ವಹಿಸುತ್ತದೆ. ದೇವಾಲಯಗಳ ಸಮಿತಿಗಳು ನೀಡುವ ವರದಿಯನ್ನೂ ಕೂಲಂಕಷವಾಗಿ ಪರಿಶೀಲಿಸಿ, ಸೂಕ್ತ ಅಭ್ಯರ್ಥಿಯನ್ನು ನೇಮಕ ಮಾಡಲು ಶಿಫಾರಸು ಮಾಡುವ ಅಧಿಕಾರವನ್ನು ಈ ಪರಿಷತ್ತು ಹೊಂದಿದೆ ಎಂದು ಅವರು ತಿಳಿಸಿದರು.ದೇವಾಲಯಗಳಲ್ಲಿನ ಧಾರ್ಮಿಕ ಆಚರಣೆ ಸೇರಿದಂತೆ ವಿವಿಧ ವಿಷಯಗಳಲ್ಲಿ ಪರಿಷತ್ತು ಆದೇಶಗಳನ್ನು ಹೊರಡಿಸಬಹುದು. ಆದರೆ ಈ ಆದೇಶಗಳನ್ನು ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ಅಪೀಲು ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಇರುತ್ತದೆ ಎಂದು ಅವರು ಹೇಳಿದರು.ರಾಜ್ಯ ಧಾರ್ಮಿಕ ಪರಿಷತ್ತು ಹೆಚ್ಚು ಅಧಿಕಾರವನ್ನು ಹೊಂದಿದೆ. ದೇವಾಲಯದ ಧಾರ್ಮಿಕ ಪದ್ಧತಿ, ರೂಢಿಗಳು, ಆಚರಣೆ, ಸಂಪ್ರದಾಯಗಳ ಬಗೆಗಿನ ಯಾವುದೇ ವಿವಾದವನ್ನು ಬಗೆಹರಿಸುವ ಅಧಿಕಾರಿ ರಾಜ್ಯ ಪರಿಷತ್ತಿಗಿದೆ.ಅಲ್ಲದೆ ದೇವಸ್ಥಾನವು ಸಾರ್ವಜನಿಕವೇ ಅಥವಾ ಖಾಸಗಿಯದ್ದೇ ಅಥವಾ ಯಾವುದಾದರೂ ವರ್ಗಕ್ಕೆ ಸೇರಿದ್ದೇ ಎಂಬುದನ್ನು ನಿರ್ಧರಿಸುವ ಅಧಿಕಾರನ್ನೂ ಹೊಂದಿರುತ್ತದೆ.ಜಿಲ್ಲೆಯ ದೇವಾಲಯಗಳ ವಿವರ: ರಾಮನಗರ ಜಿಲ್ಲೆಯಲ್ಲಿ ಮುಜುರಾಯಿ ಇಲಾಖಾ ವ್ಯಾಪ್ತಿಯಲ್ಲಿ ಒಟ್ಟು 873 ದೇವಾಲಯಗಳು ಬರಲಿವೆ. ದೇವಾಲಯಗಳ ವಾರ್ಷಿಕ ಆದಾಯವನ್ನು ಆಧರಿಸಿ `ಎ~, `ಬಿ~ ಮತ್ತು `ಸಿ~ ವರ್ಗ ಎಂದು ವಿಭಜಿಸಲಾಗಿದೆ. ವಾರ್ಷಿಕ ಆದಾಯ ರೂ 25 ಲಕ್ಷಕ್ಕೂ ಮಿಗಿಲಾಗಿದ್ದರೆ `ಎ~ ವರ್ಗ, ರೂ 5 ಲಕ್ಷದಿಂದ 25 ಲಕ್ಷದೊಳಗಿದ್ದರೆ `ಬಿ~ ವರ್ಗ, ರೂ 1 ಲಕ್ಷದಿಂದ 5 ಲಕ್ಷದೊಳಗಿದ್ದರೆ `ಸಿ~ ವರ್ಗ ಎಂದು ವಿಭಜಿಸಲಾಗಿದೆ.ರಾಮನಗರದಲ್ಲಿ ಒಂದು `ಎ~ ವರ್ಗ (ಅವ್ವೇರಹಳ್ಳಿ ರೇವಣಸಿದ್ದೇಶ್ವರ ದೇವಾಲಯ), 167 `ಸಿ~ ವರ್ಗದ ದೇವಸ್ಥಾನಗಳಿವೆ. ಚನ್ನಪಟ್ಟಣದಲ್ಲಿ ಎರಡು `ಎ~ ವರ್ಗ (ಮಳೂರಿನ ಅಪ್ರಮೇಯ ಮತ್ತು ಕೆಂಗಲ್‌ನ ಆಂಜನೇಯ), 160 `ಸಿ~ ವರ್ಗದ ದೇವಾಲಯಗಳಿವೆ. ಕನಕಪುರದಲ್ಲಿ ಕಬ್ಬಾಳಮ್ಮ `ಎ~ ವರ್ಗದ ದೇವಾಲಯವಾಗಿದ್ದು, ಒಂದು `ಬಿ~ ವರ್ಗ ಮತ್ತು 270 `ಸಿ~ ವರ್ಗದ ದೇವಸ್ಥಾನಗಳಿವೆ. ಮಾಗಡಿಯಲ್ಲಿ ಮೂರು `ಬಿ~ ವರ್ಗ (ಸುಗ್ಗನಹಳ್ಳಿ ಲಕ್ಷ್ಮನರಸಿಂಹಸ್ವಾಮಿ, ಮಾಗಡಿ ತಿರುಮಲ ಸ್ವಾಮಿ, ಸಾವನದುರ್ಗ ಲಕ್ಷ್ಮೀ ವೆಂಕಟರಮಣ ಸ್ವಾಮಿ) ಮತ್ತು 268 `ಸಿ~ ವರ್ಗದ ದೇವಾಲಯಗಳಿವೆ ಎಂದು ಜಿಲ್ಲಾಡಳಿತದ ಹಿರಿಯ ಅಧಿಕಾರಿ ಮಾಹಿತಿ ನೀಡಿದರು.ಈ ದೇವಾಲಯಗಳ ಮೇಲುಸ್ತುವಾರಿಯನ್ನು ಜಿಲ್ಲಾ ಧಾರ್ಮಿಕ ಪರಿಷತ್ತು ನೋಡಿಕೊಳ್ಳುತ್ತದೆ. ಈ ಪರಿಷತ್ತಿನಿಂದ ಜಿಲ್ಲೆಯಲ್ಲಿ ದೇವಾಲಯಗಳು ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಅಗತ್ಯ ಮೂಲ ಸೌಕರ್ಯಗಳನ್ನು ನಿರೀಕ್ಷಿಸಬಹುದಾಗಿದೆ ಎಂದು ಅವರು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry