ಜಿಲ್ಲಾ ನೋಟ : 1.50 ಕೋಟಿ ಮೌಲ್ಯದ ಆಭರಣ ವಶ

7

ಜಿಲ್ಲಾ ನೋಟ : 1.50 ಕೋಟಿ ಮೌಲ್ಯದ ಆಭರಣ ವಶ

Published:
Updated:

ಕೋಲಾರ:  ಆಂಧ್ರಪ್ರದೇಶದ ಚಿತ್ತೂರು ಸಂಸದ ಆದಿಕೇಶವಲು ಅವರ ಬೆಂಗಳೂರು ಮನೆಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ನಗರ ಠಾಣೆ ಪೊಲೀಸರು  ಇಬ್ಬರು ಆರೋಪಿಗಳನ್ನು ಬಂಧಿಸಿ  ಸುಮಾರು ರೂ. 1.50 ಕೋಟಿ ಮೌಲ್ಯದ ಬೆಳ್ಳಿ, ವಜ್ರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಜಿಲ್ಲೆಯ ಪೊಲೀಸ್ ಇತಿಹಾಸದಲ್ಲಿ ಇದೊಂದು ಅಂತರ ರಾಜ್ಯ ಮಟ್ಟದ ದೊಡ್ಡ ಪ್ರಕರಣ ಎಂದು ಕೇಂದ್ರ ವಲಯ ಐಜಿಪಿ ಅಮರಕುಮಾರ್ ಪಾಂಡೆ ತಿಳಿಸಿದರು.ನಗರದ ಹೊರವಲಯದಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು ವಜ್ರ, ಮುತ್ತು, ಹವಳ ಅಳವಡಿಸಿದ ಚಿನ್ನದ ಸರಗಳು, ಬೆಳ್ಳಿ ಪಾತ್ರೆ, ವಿದೇಶಿ ಕೈಗಡಿಯಾರ, ಜರ್ಮನಿ ಕಂಪೆನಿಯೊಂದರ ಪುಟ್ಟ ಪಿಸ್ತೂಲ್, 5 ಗುಂಡು ಸೇರಿದಂತೆ 44 ವಸ್ತುಗಳನ್ನು ಕರ್ನಾಟಕ, ಆಂಧ್ರಪ್ರದೇಶ, ರಾಜಾಸ್ತಾನ, ಮುಂಬೈ ಮೊದಲಾದ ರಾಜ್ಯಗಳಲ್ಲಿ ಪತ್ತೆ ಹಚ್ಚಲಾಗಿದೆ ಎಂದರು.ಆದಿಕೇಶವಲು ಅವರ ಮನೆಯಲ್ಲಿ ನೌಕರನಾಗಿದ್ದ ಮದನಪಲ್ಲಿ ವಾಸಿ ಅಕ್ರಂ ಮೂರು ವರ್ಷಗಳ ಅವಧಿಯಲ್ಲಿ ಆಭರಣಗಳನ್ನು ಕಳವು ಮಾಡಿ ನಗರದ ಮಿಲ್ಲತ್ ನಗರದ ವಾಸಿ ಬಾಬಾಜಾನ್ ಮೂಲಕ ಮಾರಾಟ ಮಾಡುತ್ತಿದ್ದ.

 

ಅ. 8ರಂದು ನಗರದ ಕೀರ್ತಿಕುಮಾರ್ ಗಿರವಿ ಅಂಗಡಿ ಬಳಿ ಈ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು 10 ದಿನಗಳ ಅವಧಿಯಲ್ಲಿ ಕ್ಷಿಪ್ರ ತನಿಖೆ ನಡೆಸಿ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತಂದಿದ್ದಾರೆ ಎಂದರು. ಕಳವಿನ ಕುರಿತು ಆದಿಕೇಶವಲು ಇದುವರೆಗೆ ಯಾವುದೇ ದೂರು ದಾಖಲಿಸಿಲ್ಲ. ಆದರೆ ಅವರ ಮಗ ಶ್ರೀನಿವಾಸ್ ಎಂಬುವವರು ತಮ್ಮ ಹೆಸರಿನಲ್ಲಿದ್ದ ಪಿಸ್ತೂಲ್ ಕಳವಾಗಿರುವ ಬಗ್ಗೆ ಬೆಂಗಳೂರು ಸದಾಶಿವನಗರ ಠಾಣೆಯಲ್ಲಿ  ಏ. 3ರಂದು ದೂರು ದಾಖಲಿಸಿದ್ದರು ಎಂದು ಮಾಹಿತಿ ನೀಡಿದರು.ಏನೇನು?: ಪತ್ತೆ ಹಚ್ಚಲಾಗಿರುವ ವಸ್ತುಗಳಲ್ಲಿ ರೂ. 7.80 ಲಕ್ಷ ಮೌಲ್ಯದ ನವರತ್ನ ಹಾರ, 4 ಲಕ್ಷ ಮೌಲ್ಯದ ವಜ್ರ ಖಚಿತ ಕೈಗಡಿಯಾರ, 140 ವಜ್ರಗಳಿರುವ ರೂ 8.40 ಲಕ್ಷ ಮೌಲ್ಯದ ಸರ, 108 ವಜ್ರಗಳಿರುವ 10.30 ಲಕ್ಷ ಮೌಲ್ಯದ ಸರ, 38 ವಜ್ರ, ನವರತ್ನ, ಪದಕ ಅಳವಡಿಸಿರುವ 35 ಲಕ್ಷ ಮೌಲ್ಯದ ಮುತ್ತಿನ ಹಾರ, 86 ವಜ್ರಗಳಿರುವ ರೂ. 4.50 ಲಕ್ಷ ಮೌಲ್ಯದ ಬಂಗಾರದ ಓಲೆಗಳು, 20 ವಜ್ರಗಳಿರುವ 5.50 ಲಕ್ಷ ಮೌಲ್ಯದ ವೆಂಕಟೇಶ್ವರ ಸ್ವಾಮಿಯ ಪದಕದ ಸರ, ರೂ. 18 ಲಕ್ಷ ಮೌಲ್ಯದ 7 ಕ್ಯಾರೆಟ್‌ನ 4 ದೊಡ್ಡ ವಜ್ರಗಳು, ರೂ. 6 ಲಕ್ಷ ಮೌಲ್ಯದ 4 ಕ್ಯಾರೆಟ್‌ನ 4 ದೊಡ್ಡ ವಜ್ರಗಳಿವೆ ಎಂದು ವಿವರಿಸಿದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry