ಭಾನುವಾರ, ನವೆಂಬರ್ 17, 2019
29 °C

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಆರೋಪ, ತರಾಟೆ

Published:
Updated:

ಚಿಕ್ಕಬಳ್ಳಾಪುರ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ (ಎನ್‌ಆರ್‌ಇಜಿಎಸ್) ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸದಸ್ಯರು ಅಧಿಕಾರಿಗಳ ವಿರುದ್ಧ ಆರೋಪಿಸಿದರೆ, ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳದಿರಲು ಕಾರಣಗಳೇನು ಎಂದು ಶಾಸಕರು ತರಾಟೆ ತೆಗೆದುಕೊಂಡರು.ಕಾಗದಪತ್ರ ಎಲ್ಲವನ್ನೂ ನೋಡಿಕೊಂಡು ಅಧಿಕಾರಿಗಳು ಉತ್ತರ ಕೊಡಲು ಸಿದ್ಧವಾಗುವಷ್ಟರಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, `ಇಲ್ಲಸಲ್ಲದ ಕಾರಣ ಹೇಳದೆ ಮೊದಲು ಸರಿಯಾಗಿ ಕೆಲಸ ಮಾಡಿ~ ಎಂದು ತಾಕೀತು ಮಾಡಿದರು.ಬೆಳಿಗ್ಗೆಯಿಂದ ಸಂಜೆವರೆಗೆ ದೀರ್ಘ ಕಾಲ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕಂಡು ಬಂದ ಪ್ರಮುಖ ದೃಶ್ಯಗಳಿವು.ಪ್ರಶ್ನೆಯೊಂದಕ್ಕೆ ಉತ್ತರಿಸಲು ಅಧಿಕಾರಿಗಳು ತಡಬಡಾಯಿಸಿದ ಕೂಡಲೇ ಜಿಲ್ಲಾ ಪಂಚಾಯಿತಿ ಸದಸ್ಯರು, `ಯಾವುದೇ ಅಂಕಿ-ಅಂಶ ಮತ್ತು ಮಾಹಿತಿ ಹೊಂದದೆ ಸಭೆಗೆ ಹೇಗೆ ಬಂದಿದ್ದೀರಿ? ಈವರೆಗೆ ಯಾವ್ಯಾವ ಅಭಿವೃದ್ಧಿ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿ. ಎಷ್ಟು ಯಶಸ್ಸು? ಎಷ್ಟು ವಿಫಲವಾಗಿವೆ ಉತ್ತರಿಸಿ~ ಎಂದು ಪಟ್ಟು ಹಿಡಿಯುತ್ತಿದ್ದರು.ಎನ್‌ಆರ್‌ಇಜಿ ಯೋಜನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿ ಎಂದು ಒತ್ತಾಯಿಸಿದ ಸದಸ್ಯರು, `2009ರಿಂದ 2012ರ ಅವಧಿಯಲ್ಲಿ ಯೋಜನೆಯಡಿ ಎಷ್ಟು ಕಾಮಗಾರಿಗಳನ್ನು ಎಲ್ಲೆಲ್ಲಿ ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ವಿವರಣೆ ನೀಡಿ. ಜಿಲ್ಲಾ ಪಂಚಾಯಿತಿ ಸದಸ್ಯರ ಗಮನಕ್ಕೆ ತಾರದೆ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದು ಮತ್ತು ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು ಹೇಗೆ? ಯೋಜನೆಗಳಿಗೆ ಅನುಮೋದನೆ ಮಾಡಲು ಮಾತ್ರವೇ ನಾವು ಸದಸ್ಯರೇ? ನಮಗೆ ಏನೂ ಮಾಹಿತಿ ಇಲ್ಲದಿರುವಾಗ ಅನುಮೋದನೆ ನೀಡುವುದಾದರೂ ಹೇಗೆ~ ಎಂದು ಪ್ರಶ್ನಿಸಿದರು.ಸದಸ್ಯರ ಪ್ರಶ್ನೆಗಳಿಗೆ ಸಹಮತ ವ್ಯಕ್ತಪಡಿಸಿದ ಚಿಂತಾಮಣಿ ಶಾಸಕ ಡಾ.ಎಂ.ಸಿ.ಸುಧಾಕರ್, `ಪ್ರಸಕ್ತ ಪಂಚಾಯಿತಿ ಪದ್ಧತಿ ಮತ್ತು ಪರಿಸ್ಥಿತಿ ಬಗ್ಗೆ ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಅರಿವಿದೆ. ಯೋಜನೆ ರೂಪುರೇಷೆ ಬಗ್ಗೆ ವಿವರಣೆ ನೀಡುವ ಬದಲು ಕೈಗೊಂಡಿರುವ ಕಾರ್ಯಗಳ ಬಗ್ಗೆ ಅಂಕಿ ಅಂಶಗಳ ಸಹಿತ ಮಾಹಿತಿ ನೀಡಿ. ನಾಲ್ಕು ವರ್ಷಗಳ ಅವಧಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಎಲ್ಲೆಲ್ಲೆ ಕಾಮಗಾರಿ ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಸಮಗ್ರ ಮಾಹಿತಿ ನೀಡಿ. ಪುಸ್ತಕ ರೂಪದಲ್ಲಿ ವಿವರಣೆ ನೀಡಿ~ ಎಂದರು.ಖಾತ್ರಿ ಯೋಜನೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸಲಾಗುತ್ತದೆ. ಇದಕ್ಕೆ ಇರುವ ನೀತಿ-ನಿಯಮ ಹೀಗೆ ಎಂದು ಯೋಜನೆಯ ವಿವರಣೆ ನೀಡಲು ಮುಂದಾದ ಅಧಿಕಾರಿ ಚಂದ್ರಪ್ಪ ಅವರನ್ನು ತಡೆದ ಬಾಗೇಪಲ್ಲಿ ಶಾಸಕ ಎನ್.ಸಂಪಂಗಿ, `ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾತ್ರವಲ್ಲ. ಗ್ರಾಮಸಭೆ, ವಾರ್ಡ್ ಸಭೆಗಳು ಕೂಡ ಸರಿಯಾಗಿ ನಡೆಯುತ್ತಿಲ್ಲ. ಜಿಲ್ಲಾ ಪಂಚಾಯಿತಿ ಸದಸ್ಯರ ಗಮನಕ್ಕೂ ತರಲಾಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಯೋಜನೆ ಹೇಗೆ ಅನುಷ್ಠಾನಗೊಳ್ಳುತ್ತದೆ~ ಎಂದು ತರಾಟೆ ತೆಗೆದುಕೊಂಡರು.`ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಜೀವಗಾಂಧಿ ಸೇವಾ ಕೇಂದ್ರ ಆರಂಭಿಸುವುದಕ್ಕೆ ಕೇಂದ್ರ ಸರ್ಕಾರದಿಂದ 10 ಲಕ್ಷ ರೂಪಾಯಿ ಬಿಡುಗಡೆಯಾಗಿದೆ.ಹಣ ಬಿಡುಗಡೆಗೊಂಡು ವರ್ಷಗಳೇ ಕಳೆದರೂ ಕೇಂದ್ರಗಳು ಯಾವ ಹಂತದಲ್ಲಿವೆ ಎಂಬುದರ ಬಗ್ಗೆಯೂ ಮಾಹಿತಿಯಿಲ್ಲ. ಜಿಲ್ಲೆಯಲ್ಲಿ 151 ಗ್ರಾಮ ಪಂಚಾಯಿತಿಗಳಿದ್ದು, ಪ್ರಗತಿಯ ಕುರಿತು ಪೂರ್ಣ ಪ್ರಮಾಣದ ಮಾಹಿತಿ ಲಭ್ಯವಾಗಿಲ್ಲ. ಹೀಗಾದರೆ ಅಧಿಕಾರಿಗಳನ್ನು ನಂಬುವುದಾದರೂ ಹೇಗೆ? ಕಾರ್ಯಗಳು ಅನುಷ್ಠಾನವಾಗುವುದು ಯಾವಾಗ~ ಎಂದು ಅವರು ಪ್ರಶ್ನಿಸಿದರು.ಅಧಿಕಾರಿ ಚಂದ್ರಪ್ಪ ಮಾತನಾಡಿ, `ಎನ್‌ಆರ್‌ಇಜಿಎಸ್ ಕ್ರಿಯಾ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಕೆಲವು ಬದಲಾವಣೆ ತಂದಿದ್ದು, ಈ ಬಾರಿ 73 ಕೋಟಿ ರೂಪಾಯಿ ಬದಲು 29 ಕೋಟಿ ರೂಪಾಯಿ ವೆಚ್ಚದ ಕ್ರಿಯಾ ಯೋಜನೆ ಮಾತ್ರವೇ ಸಿದ್ಧಪಡಿಸುವಂತೆ ಸೂಚಿಸಿದೆ. ಜಿಲ್ಲಾ ಪಂಚಾಯಿತಿ ಸದಸ್ಯರ ಸಲಹೆ, ಸೂಚನೆ ಪಡೆದು ಮತ್ತೆ ಹೊಸದಾಗಿ ಕ್ರಿಯಾ ಯೋಜನೆ ಸಿದ್ಧಪಡಿಸಬೇಕಿದೆ. 29 ಕೋಟಿ ರೂಪಾಯಿ ಸದ್ಬಳಕೆಯಾದ ನಂತರ ಸರ್ಕಾರ ಮತ್ತೆ ಅನುದಾನ ಬಿಡುಗಡೆ ಮಾಡಲಿದೆ~ ಎಂದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ವಿ.ಕೃಷ್ಣಪ್ಪ, ಉಪಾಧ್ಯಕ್ಷೆ ಬಿ.ಸಾವಿತ್ರಮ್ಮ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಎಸ್.ಶೇಖರಪ್ಪ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

`ನನಗೆ ಬರುತ್ತೆ ಅರೆಸ್ಟ್ ವಾರೆಂಟ್~

ಚಿಕ್ಕಬಳ್ಳಾಪುರ: `ಹೆಸರು ಮತ್ತು ಹುದ್ದೆಗೆ ನಾನು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ. ಆದರೆ ಯಾವುದೇ ಅಧಿಕಾರಿ ವಿರುದ್ಧ ನೇರವಾಗಿ ಕಠಿಣ ಕ್ರಮ ತೆಗೆದುಕೊಳ್ಳುವ ಅಧಿಕಾರ ನನಗಿಲ್ಲ.ಒಂದು ವೇಳೆ ಕಠಿಣ ಕ್ರಮ ತೆಗೆದುಕೊಂಡರೆ, ನ್ಯಾಯಾಲಯದಿಂದ ನನಗೆ ಅರೆಸ್ಟ್ ವಾರೆಂಟ್ ಜಾರಿಯಾಗುತ್ತದೆ~ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಬಿ.ಎಸ್.ಶೇಖರಪ್ಪ ಅಸಹಾಯಕತೆ ತೋಡಿಕೊಂಡರು.ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಈ ವಿಷಯ ಬಹಿರಂಗಗೊಳಿಸಿದ ಅವರು, `ಕರ್ತವ್ಯಲೋಪ ಅಥವಾ ಇತರ ಕಾರಣಗಳಿಗಾಗಿ ಅಧಿಕಾರಿ ಅಮಾನತುಗೊಳಿಸಿದರೆ ಅಥವಾ ಕಠಿಣ ಕ್ರಮ ತೆಗೆದುಕೊಂಡರೆ, ಅದನ್ನು ಪ್ರಶ್ನಿಸಿ ನ್ಯಾಯಾಲಯದಿಂದ ನನಗೆ ಸಮನ್ಸ್ ಜಾರಿಯಾಗುತ್ತದೆ. ನಿಗದಿತ ದಿನಾಂಕ ನ್ಯಾಯಾಲಯಕ್ಕೆ ಹಾಜರಾಗದಿದ್ದರೆ, ನನ್ನ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ನಾನು ಯಾರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯ~ ಎಂದು ಅವರು ಹೇಳಿದರು.

ಪ್ರತಿಕ್ರಿಯಿಸಿ (+)