ಜಿಲ್ಲಾ ಪಂಚಾಯ್ತಿ ನೂತನ ಅಧ್ಯಕ್ಷೆ ಗೀತಾ

7

ಜಿಲ್ಲಾ ಪಂಚಾಯ್ತಿ ನೂತನ ಅಧ್ಯಕ್ಷೆ ಗೀತಾ

Published:
Updated:

ಚಿತ್ರದುರ್ಗ: ಜಿಲ್ಲಾ ಪಂಚಾಯ್ತಿಯ ಎರಡನೇ ಅವಧಿಗೆ ಅಧ್ಯಕ್ಷರಾಗಿ ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ಕ್ಷೇತ್ರದ ಕಾಂಗ್ರೆಸ್ ಸದಸ್ಯೆ ಬಿ. ಗೀತಾ ಬಸವರಾಜು ಮತ್ತು ಉಪಾಧ್ಯಕ್ಷರಾಗಿ ಹಿರಿಯೂರು ತಾಲ್ಲೂಕಿನ ಐಮಂಗಲ ಕ್ಷೇತ್ರದ ಜೆಡಿಎಸ್ ಸದಸ್ಯ ಕೆ. ದ್ಯಾಮಣ್ಣ ಆಯ್ಕೆಯಾಗಿದ್ದಾರೆ.ಶನಿವಾರ ನಡೆದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆಯಿತು. ಬಿಜೆಪಿ ಔಪಚಾರಿಕವಾಗಿ ಮಾತ್ರ ತನ್ನ ಅಭ್ಯರ್ಥಿಗಳನ್ನು ಸ್ಪರ್ಧೆಗಳಿಸಿತ್ತು.

ಬಿ.ಗೀತಾ ಬಸವರಾಜು ಅವರ ಪರವಾಗಿ 22 ಮತಗಳು ಮತ್ತು ಇವರ ಪ್ರತಿ ಸ್ಪರ್ಧಿ ಬಿ.ಜಿ. ಕೆರೆ ಕ್ಷೇತ್ರದ ಮಾರಕ್ಕ ಅವರು 12 ಮತಗಳನ್ನು ಪಡೆದರು.ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಕೆ. ದ್ಯಾಮಣ್ಣ ಅವರ ಪರವಾಗಿ 22 ಮತಗಳು ಮತ್ತು ಇವರ ಪ್ರತಿಸ್ಪರ್ಧಿ ತಾಳ್ಯ ಕ್ಷೇತ್ರದ ಪಿ.ಆರ್.ಶಿವಕುಮಾರ್ 12 ಮತಗಳನ್ನು ಪಡೆದರು.ಈ ಮೂಲಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದಿನ 20 ತಿಂಗಳು ಮುಂದುವರಿಯಲಿದ್ದು, ಉಪಾಧ್ಯಕ್ಷ ಸ್ಥಾನ ಪಡೆಯುವಲ್ಲಿ ಜೆಡಿಎಸ್ ಕೊನೆಗೂ ಯಶಸ್ವಿಯಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ರಾತ್ರಿ ಚರ್ಚೆ ನಡೆದು ಗೀತಾ ಬಸವರಾಜು ಅವರ ಹೆಸರನ್ನು ಅಂತಿಮಗೊಳಿಸಲಾಯಿತು.ಪ್ರಾದೇಶಿಕ ಆಯುಕ್ತ ಕೆ.ಶಿವರಾಂ ಅವರು ಚುನಾವಣಾಧಿಯಾಗಿ ಕಾರ್ಯ ನಿರ್ವಹಿಸಿದರು. ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಅಭಿನಂದಿಸಿದರು. ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ನಾರಾಯಣಸ್ವಾಮಿ, ಅಪರ ಪ್ರಾದೇಶಿಕ ಆಯುಕ್ತ ವೆಂಕಟೇಶ್ ಉಪಸ್ಥಿತರಿದ್ದರು.ಮೂಲಸೌಕರ್ಯಕ್ಕೆ ಆದ್ಯತೆ:
ಕುಡಿಯುವ ನೀರು, ಮನೆ, ಜಾನುವಾರುಗಳಿಗೆ ಮೇವು, ರಸ್ತೆ ಸ್ವಚ್ಛತೆ ಆದ್ಯತೆ ನೀಡುವ ಜತೆಗೆ ಸರ್ಕಾರದಿಂದ ಬರುವಂತೆ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಜಿಲ್ಲೆಯನ್ನು ಸಾಧ್ಯವಾದಷ್ಟು ಅಭಿವೃದ್ಧಿ ಮಾಡಲಾಗುವುದು ಎಂದು ನೂತನ ಅಧ್ಯಕ್ಷೆ  ಗೀತಾ ಬಸವರಾಜು ತಿಳಿಸಿದರು.

ಉಪಾಧ್ಯಕ್ಷ ಕೆ. ದ್ಯಾಮಣ್ಣ ಮಾತನಾಡಿ, ಕುಡಿಯುವ ನೀರು ಹಾಗೂ ಮೂಲಸೌಕರ್ಯ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸೇತುರಾಂ, ಮಾಜಿ ಶಾಸಕ ಆಂಜನೇಯ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದು, ಶುಭ ಹಾರೈಸಿದರು.`ಸಮಪಾಲು~ ಸೂತ್ರ!

ಜಿಲ್ಲಾ ಪಂಚಾಯ್ತಿ ಸದಸ್ಯರು ಅಧಿಕಾರ ಹಂಚಿಕೆಯಲ್ಲಿ `ಸಮಪಾಲು, ಸಮಬಾಳು~ ಸೂತ್ರ ಅಳವಡಿಸಿಕೊಂಡಿದ್ದಾರೆ.

ಈ ಸೂತ್ರದ ಅನ್ವಯವೇ ಶನಿವಾರ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಎರಡನೇ ಅವಧಿಯ ಮುಂದಿನ 20 ತಿಂಗಳನ್ನು ಮೂವರಿಗೆ ಅಧ್ಯಕ್ಷ ಸ್ಥಾನ ಹಂಚಲು ಕಾಂಗ್ರೆಸ್ ನಿರ್ಧರಿಸಿದೆ.  20 ತಿಂಗಳ ಪೈಕಿ 6 ತಿಂಗಳು ಮತ್ತು 7 ತಿಂಗಳು ಹಾಗೂ ಉಳಿದ 7 ತಿಂಗಳನ್ನು ಮೂವರಿಗೆ ಹಂಚಲು ಕಾಂಗ್ರೆಸ್ ನಿರ್ಧರಿಸಿದೆ. ಜಾತಿ ಲೆಕ್ಕಾಚಾರವೇ ಇಲ್ಲಿ ಪ್ರಮುಖ ಅಂಶವಾಗಿದೆ.ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸೇತುರಾಂ, ಹೊಂದಾಣಿಕೆ ರಾಜಕೀಯ ಅನಿವಾರ್ಯವಾಗಿರುವುದರಿಂದ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಎಲ್ಲರೂ ಆಸೆಪಟ್ಟಿರುವುದರಿಂದ ಅಧಿಕಾರ ಹಂಚಿಕೆ ಮಾಡುವುದು ಅನಿವಾರ್ಯ. 5 ತಿಂಗಳಿಗೊಮ್ಮೆ ಅಧ್ಯಕ್ಷರನ್ನು ಬದಲಾವಣೆ ಮಾಡಬೇಕು ಎಂದು ಅಭಿಪ್ರಾಯಗಳು ವ್ಯಕ್ತವಾಯಿತು. ಕೊನೆಗೆ 6,7,7 ಸೂತ್ರಕ್ಕೆ ಬರಲಾಗಿದೆ.  ಈ ರೀತಿ ಅಧ್ಯಕ್ಷರ ಬದಲಾವಣೆಯಿಂದ `ಏನೂ ಆಗಲ್ಲ~. ಎಲ್ಲವೂ ಸುಸೂತ್ರವಾಗಿ ನಡೆಯತ್ತದೆ ಎಂದು ಪ್ರತಿಪಾದಿಸಿದರು.ಪ್ರಸ್ತುತ ಜೆಡಿಎಸ್ ಜತೆ 10 ತಿಂಗಳ ಅವಧಿಗೆ ಮಾತುಕತೆಯಾಗಿದೆ. ಅದರಂತೆ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಮುಂದಿನ 20 ತಿಂಗಳು ಮಾತ್ರ ಕಾಂಗ್ರೆಸ್  ಸದಸ್ಯರೇ ಅಧ್ಯಕ್ಷ ಸ್ಥಾನ ಅಲಂಕರಿಸಿ ಆಡಳಿತ ನಡೆಸಲಿದ್ದಾರೆ.  ಜೆಡಿಎಸ್‌ಗೆ ಉಪಾಧ್ಯಕ್ಷ ಸ್ಥಾನದ ಜತೆ ಒಂದು ಸ್ಥಾಯಿ ಸಮಿತಿ ಸ್ಥಾನ ನೀಡಲಾಗುವುದು ಎಂದು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry