ಜಿಲ್ಲಾ ಪಂಚಾಯ್ತಿ: ವೀರೇಶ್ ಅಧ್ಯಕ್ಷ, ಪ್ರೇಮಾ ಸಿದ್ದೇಶ್ ಉಪಾಧ್ಯಕ್ಷೆ

7

ಜಿಲ್ಲಾ ಪಂಚಾಯ್ತಿ: ವೀರೇಶ್ ಅಧ್ಯಕ್ಷ, ಪ್ರೇಮಾ ಸಿದ್ದೇಶ್ ಉಪಾಧ್ಯಕ್ಷೆ

Published:
Updated:

ದಾವಣಗೆರೆ: ಜಿಲ್ಲಾ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಹರಿಹರ ತಾಲ್ಲೂಕು ಕೊಂಡಜ್ಜಿ ಕ್ಷೇತ್ರದ ಬಿಜೆಪಿ ಸದಸ್ಯ ಎಸ್.ಎಂ. ವೀರೇಶ್ ಹನಗವಾಡಿ ಹಾಗೂ ಉಪಾಧ್ಯಕ್ಷರಾಗಿ ಚನ್ನಗಿರಿ ತಾಲ್ಲೂಕು ಸಂತೇಬೆನ್ನೂರು ಕ್ಷೇತ್ರದ ಬಿಜೆಪಿ ಸದಸ್ಯೆ ಪ್ರೇಮಾ ಸಿದ್ದೇಶ್ ಆಯ್ಕೆಯಾದರು.ಮೊದಲ ಅವಧಿಯ 8 ತಿಂಗಳು ಆಡಳಿತ ನಡೆಸಿದ ಬಸವಲಿಂಗಪ್ಪ ಅವರು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಟಿ. ಮುಕುಂದ್ ಅವರು ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ, ಜಿ.ಪಂ. ಸಭಾಂಗಣದಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಈ ಆಯ್ಕೆ ಮಾಡಲಾಯಿತು.ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ವೀರೇಶ್ ಹಾಗೂ ಕಾಂಗ್ರೆಸ್‌ನಿಂದ ಕುಂದೂರು ಕ್ಷೇತ್ರದ ಕೆ.ಎಚ್. ಗುರುಮೂರ್ತಿ ನಾಮಪತ್ರ ಸಲ್ಲಿಸಿದರು. ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದರಿಂದ ಚುನಾವಣೆ ಅನಿವಾರ್ಯವಾಯಿತು. ಕೈ ಎತ್ತುವ ಮೂಲಕ ನಡೆದ ಚುನಾವಣೆಯಲ್ಲಿ ವೀರೇಶ್ ಅವರಿಗೆ 18 ಹಾಗೂ ಗುರುಮೂರ್ತಿ ಅವರಿಗೆ 16 ಮತಗಳು ಬಂದವು.ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಪ್ರೇಮಾ ಸಿದ್ದೇಶ್, ಕಾಂಗ್ರೆಸ್‌ನಿಂದ ದೊಣೆಹಳ್ಳಿ ಕ್ಷೇತ್ರದ ಕೆ.ಪಿ. ಪಾಲಯ್ಯ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಪ್ರೇಮಾ ಸಿದ್ದೇಶ್ 18 ಹಾಗೂ ಪಾಲಯ್ಯ 16 ಮತಗಳನ್ನು ಪಡೆದರು.ಚುನಾವಣಾ ಅಧಿಕಾರಿಯಾಗಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಎಸ್.ಎನ್. ಜಯರಾಂ ಕಾರ್ಯ ನಿರ್ವಹಿಸಿದರು. ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಬಿ.ಸಿ. ಚಂದ್ರಶೇಖರ್, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗುತ್ತಿ ಜಂಬುನಾಥ್, ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಸಭೆಯಲ್ಲಿ ಹಾಜರಿದ್ದರು.ಜಿ.ಪಂ.ನ ಒಟ್ಟು 34 ಸ್ಥಾನಗಳಲ್ಲಿ ಬಿಜೆಪಿಯ 18 ಹಾಗೂ ಕಾಂಗ್ರೆಸ್‌ನ 16 ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry