ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆ ಅನುಮೋದನೆ

ಬುಧವಾರ, ಜೂಲೈ 24, 2019
28 °C

ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆ ಅನುಮೋದನೆ

Published:
Updated:

ದಾವಣಗೆರೆ: ಜಿಲ್ಲಾ ಪಂಚಾಯ್ತಿಗೆ 2010-11ನೇ ಸಾಲಿಗೆ ದೊರೆತ rರೂ 66.57 ಕೋಟಿ ಅನುದಾನದ ಕ್ರಿಯಾ ಯೋಜನೆಗೆ ಮಂಗಳವಾರ ನಡೆದ ಸಾಮಾನ್ಯಸಭೆ ಅನುಮೋದನೆ ನೀಡಿತು.ಪ್ರಸಕ್ತ ವರ್ಷ ಯೋಜನಾ ಉದ್ದೇಶಕ್ಕಾಗಿ ಪಂಚಾಯತ್ ರಾಜ್ ಇಲಾಖೆಯಿಂದ ಜಿಲ್ಲೆಗೆ ದೊರೆತ ರೂ 146 ಕೋಟಿ ಅನುದಾನದಲ್ಲಿ ಜಿಲ್ಲಾ ಪಂಚಾಯ್ತಿಗೆ ರೂ 66.57 ಕೋಟಿ, ತಾಲ್ಲೂಕು ಪಂಚಾಯ್ತಿಗೆ ರೂ 45.65 ಕೋಟಿ ಹಾಗೂ ಗ್ರಾಮ ಪಂಚಾಯ್ತಿಗೆ ರೂ 34.73 ಕೋಟಿ ಹಂಚಿಕೆಯಾಗಿದೆ. ಜತೆಗೆ, ಜಿಲ್ಲಾ ಪಂಚಾಯ್ತಿಗೆ ರೂ 108.66 ಕೋಟಿ ಯೋಜನೇತರ ಅನುದಾನ ಪ್ರಸಕ್ತ ಸಾಲಿಗೆ ದೊರೆತಿದೆ.ಕೆಲ ದಿನಗಳ ಮೊದಲೇ ವಿವಿಧ ಸ್ಥಾಯಿ ಸಮಿತಿಗಳ ಅನುಮೋದನೆ ಪಡೆದುಕೊಂಡಿದ್ದ ಕ್ರಿಯಾಯೋಜನೆಯನ್ನು ಅಧ್ಯಕ್ಷ ಕೆ.ಜಿ. ಬಸವಲಿಂಗಪ್ಪ ಸಭೆಯಲ್ಲಿ ಮಂಡಿಸಿದರು. ಹಲವು ವಿಷಯಗಳ ಕುರಿತು ಚರ್ಚೆ ನಡೆದ ಬಳಿಕ ಸದಸ್ಯರು ಸರ್ವಾನುಮತದಿಂದ ಅನುಮೋದನೆ ನೀಡಿದರು.ಆರೋಗ್ಯ ಮತ್ತು ಶಿಕ್ಷಣ, ಕೃಷಿ ಮತ್ತು ಕೈಗಾರಿಕೆ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗಳಲ್ಲಿ ಈಚೆಗೆ ತೆಗೆದುಕೊಂಡ ನಿರ್ಣಯಗಳ ಅನುಷ್ಠಾನಕ್ಕೂ ಸಾಮಾನ್ಯ ಸಭೆ ಅನುಮೋದನೆ ನೀಡಿತು.ಹರಿಹರ ತಾಲ್ಲೂಕು ಹಾಲಿವಾಣದಲ್ಲಿ ಪಶು ಚಿಕಿತ್ಸಾಲಯ ಆರಂಭಿಸುವಂತೆ ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ ಕೋರಿದರು. ಅಗತ್ಯ ಕ್ರಮ ಕೈಗೊಳ್ಳುವಂತೆ ಪಶು ಪಾಲನಾ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಲಾಯಿತು.

ಅಧಿಕಾರಿಗಳು ಜಿಲ್ಲಾ ಪಂಚಾಯ್ತಿ ಸದಸ್ಯರಿಗೆ ಸರಿಯಾದ ಮಾಹಿತಿ ನೀಡುವುದಿಲ್ಲ. ಅವರೇ ಎಲ್ಲ ಮಾಡುವುದಾದರೆ ಚುನಾಯಿತ ಪ್ರತಿನಿಧಿಗಳ ಅಗತ್ಯವಾದರೂ ಏನು ಎಂದು ಸದಸ್ಯ ಕೆ.ಪಿ. ಪಾಲಯ್ಯ ಅಸಮಾಧಾನ ವ್ಯಕ್ತಪಡಿಸಿದರು.ಸದಸ್ಯ ಈಶ್ವರಪ್ಪ ಮಾತನಾಡಿ, ಯರಬಾಳು ಗ್ರಾಮದಲ್ಲಿ ಇದ್ದ ನಾಲ್ಕು ಮಂದಿ ಶಿಕ್ಷಕರನ್ನು ವರ್ಗ ಮಾಡಲಾಗಿದೆ. ಶಿಕ್ಷಕರಿಲ್ಲದೇ ಶಾಲೆ ಹೇಗೆ ನಡೆಯುತ್ತದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಡಿಡಿಪಿಐ ಬೆಳ್ಳಶೆಟ್ಟಿ, ಕೌನ್ಸೆಲಿಂಗ್‌ನಲ್ಲಿ ಶಿಕ್ಷಕರು ವರ್ಗಾವಣೆ ಪಡೆದಿದ್ದಾರೆ. ಕೂಡಲೇ, ಅಲ್ಲಿಗೆ ಬೇರೆ ಶಾಲೆಯಿಂದ ಶಿಕ್ಷಕರನ್ನು ನೇಮಿಸಲಾಗುವುದು ಎಂದು ಸಮಜಾಯಿಷಿ ನೀಡಿದರು.ಅಕ್ಷರ ದಾಸೋಹ ಹೊಣೆಗಾರಿಕೆ ಎಸ್‌ಡಿಎಂಸಿಗೆ ನೀಡಬೇಕು ಎಂದು ಸದಸ್ಯ ಎಚ್.ವಿ. ರುದ್ರಪ್ಪ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಅಕ್ಷರ ದಾಸೋಹ ಸಂಯೋಜಕ ಜಗದೀಶ್, 32 ಶಾಲೆಗಳು ಸ್ವಯಂ ಇಚ್ಛೆಯಿಂದ ಮುಂದೆ ಬಂದಿವೆ. ಅಂತಹ ಶಾಲೆಗಳಿಗೆ ಹೊಣೆಗಾರಿಕೆ ನೀಡಲಾಗಿದೆ. ಮೂಲ ಸೌಲಭ್ಯ ಇಲ್ಲದಿರುವ ಶಾಲೆಗಳಿಗೆ ನಿರಾಕರಿಸಲಾಗಿದೆ. ಕೆಲ ಶಾಲೆಗಳು ಏಜೆನ್ಸಿ ಮೂಲಕವೇ ಬಿಸಿಯೂಟ ಸರಬರಾಜು ಮಾಡಲು ಕೋರಿವೆ ಎಂದು ಮಾಹಿತಿ ನೀಡಿದರು.ಸದಸ್ಯೆ ಪ್ರೇಮಾ ಲೋಕೇಶಪ್ಪ ಮಾತನಾಡಿ, ಹಿರೇಮಳಲಿಯಲ್ಲಿ ಸ್ಟಾಫ್‌ನರ್ಸ್ ಮತ್ತು ಸಿಬ್ಬಂದಿ ಇಲ್ಲದೇ ಸುತ್ತಲ ಗ್ರಾಮಸ್ಥರಿಗೆ ತೊಂದರೆಯಾಗಿದೆ. ಆರೋಗ್ಯ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕು. ನಲ್ಲೂರು ಉರ್ದು ಶಾಲೆಗೆ ಮೂಲ ಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.ಸದಸ್ಯೆ ಸಹನಾ ರವಿ ಮಾತನಾಡಿ, ಜಿಲ್ಲೆಯಲ್ಲಿ ಸಾವಯವ ಕೃಷಿ, ಹೈನುಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಅಂತರ್ಜಲದ ಬಗ್ಗೆ ರೈತರಿಗೆ ಸರಿಯಾದ ತಿಳಿವಳಿಕೆ ನೀಡಬೇಕು. ಪ್ರಕೃತಿ ವಿಕೋಪದಿಂದ ಆರ್ಥಿಕ ನಷ್ಟ ಅನುಭವಿಸಿದ ಮೀನುಗಾರರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ಐಗೂರು ಚಿದಾನಂದ ಮಾತನಾಡಿ, ಜಿಲ್ಲೆಯಲ್ಲಿ ಖಾಲಿ ಇರುವ ವೈದ್ಯರು ಹಾಗೂ ಸಿಬ್ಬಂದಿ ನೇಮಕಕ್ಕೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸುವಂತೆ ಒತ್ತಾಯಿಸಿದರು. ಉಪಾಧ್ಯಕ್ಷ ಟಿ. ಮುಕುಂದ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಧಾ ವೀರೇಂದ್ರ ಪಾಟೀಲ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಡಿ.ಆರ್. ಅಂಬಿಕಾ, ಸಾಮಾನ್ಯ ಸಮಿತಿ ಅಧ್ಯಕ್ಷೆ ಜಯಲಕ್ಷ್ಮೀ, ಉಪ ಕಾರ್ಯದರ್ಶಿ ಷಡಾಕ್ಷರಪ್ಪ ಮತ್ತಿತರರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry