ಜಿಲ್ಲಾ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ

7

ಜಿಲ್ಲಾ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ

Published:
Updated:

 


ಹಾವೇರಿ: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸುವ ಮೂಲಕ ಸತತ ಮೂರನೇ ಬಾರಿ ಬಿಜೆಪಿಗೆ ಅಧಿಕಾರ ತಂದುಕೊಟ್ಟ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಹ್ಯಾಟ್ರಿಕ್ ಸಾಧನೆ ಹಿನ್ನಲೆಯಲ್ಲಿ ಬಿಜೆಪಿ ಜಿಲ್ಲಾ ಘಟಕ ಗುರುವಾರ ನಗರದಲ್ಲಿ ವಿಜಯೋತ್ಸವ ಆಚರಿಸಿತು.

 

ಪಕ್ಷದ ಜಿಲ್ಲಾ ಕಚೇರಿಯಿಂದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಕೈಯಲ್ಲಿ ಹಿಡಿದು ಮೆರವಣಿಗೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಮಾರ್ಗದುದ್ದಕ್ಕೂ ನರೇಂದ್ರ ಮೋದಿ ಹಾಗೂ ಬಿಜೆಪಿಗೆ ಜೈಕಾರ ಹಾಕುತ್ತಾ ಹೊಸಮನಿ ಸಿದ್ಧಪ್ಪ ವೃತ್ತಕ್ಕೆ ಆಗಮಿಸಿದರು. ನಂತರ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮ ವ್ಯಕ್ತಪಡಿಸಿದರು.

 

ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಸಿದ್ಧರಾಜ ಕಲಕೋಟಿ ಮಾತನಾಡಿ, ಗುಜರಾತ್‌ನಲ್ಲಿ ಭಾರತೀಯ ಜನತಾ ಪಕ್ಷ ಜಯಭೇರಿ ಬಾರಿಸಿರುವುದು ಪಕ್ಷದ ಜನಪರ ಆಡಳಿತಕ್ಕೆ ಸಂದ ಜಯವಾಗಿದೆ. ಗುಜರಾತನಲ್ಲಿ ಉತ್ತಮ ಆಡಳಿತ ನೀಡುವ ಮೂಲಕ ನರೇಂದ್ರ ಮೋದಿ ಅವರು ಹ್ಯಾಟ್ರಿಕ್ ಸಾಧನೆ ಮಾಡುವ ಮೂಲಕ ವಿರೋಧ ಪಕ್ಷಗಳಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.

 

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿಯೂ ಗುಜರಾತ್ ಪಲಿತಾಂಶ ಪುನರಾವರ್ತನೆಯಾಗುವ ಮೂಲಕ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಇದಕ್ಕೆ ಗುಜರಾತ್ ಚುನಾವಣಾ ಫಲಿತಾಂಶವೇ ಮುನ್ಸೂಚನೆ ಎಂದು ಹೇಳಿದರು.

 

ರಾಷ್ಟ್ರೀಯ ಪಕ್ಷವಾದ ಬಿಜೆಪಿ ತೊರೆದು ಜಾತಿ ಆಧಾರದ ಮೇಲೆ ಪಕ್ಷ ಕಟ್ಟಲು ಹೋದ ಕೇಶುಭಾಯಿ ಪಟೇಲ ಅವರಿಗೆ ಚುನಾವಣೆಯಲ್ಲಿ ಮತದಾರರು ಸರಿಯಾಗಿ ಮುಖಭಂಗ ಮಾಡಿದ್ದಾರೆ. ಕರ್ನಾಟಕದಲ್ಲಿಯೂ ಬಿಜೆಪಿ ತೊರೆದು ಪ್ರತ್ಯೇಕ ಪಕ್ಷ ಕಟ್ಟಲು ಹೊರಟಿರುವವರಿಗೆ ರಾಜ್ಯದ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. 

 

ಜಿ.ಪಂ. ಮಾಜಿ ಅಧ್ಯಕ್ಷ ಮಲ್ಲೇಶಪ್ಪ ಹರಿಜನ ಮಾತನಾಡಿ, ಜನಪರ ಆಡಳಿತಕ್ಕೆ ಮತದಾರರಿಂದ ಮನ್ನಣೆ ದೊರೆಯಲಿದೆ ಎಂಬುದಕ್ಕೆ ಗುಜರಾತ್ ಚುನಾವಣಾ ಪಲಿತಾಂಶವೇ ಸಾಕ್ಷಿ. ರಾಜ್ಯದಲ್ಲಿ ಕಳೆದ ನಾಲ್ಕುವರೆ ವರ್ಷದಲ್ಲಿ ಬಿಜೆಪಿ ಉತ್ತಮ ಆಡಳಿತ ನೀಡಿದೆ ಎಂದು ಹೇಳಿದರು.

 

ವಿಜಯೋತ್ಸವದ ಮೆರವಣಿಗೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಲಲಿತಾ ಗುಂಡೇನಹಳ್ಳಿ, ಮಾಜಿ ಅಧ್ಯಕ್ಷೆ ಮಂಜುಳಾ ಕರಬಸಮ್ಮನವರ ಇನ್ನಿತರ ಮಹಿಳಾ ಸದಸ್ಯರು ಡೋಲು ಬಡಿದು ಸಂಭ್ರಮಿಸಿದ್ದು ವಿಶೇಷವಾಗಿತ್ತು. ವಿಜಯೋತ್ಸವದಲ್ಲಿ ಬಿಜೆಪಿ ಸ್ಲಂ ಮೋರ್ಚಾ ಅಧ್ಯಕ್ಷ ಬಸವರಾಜ ಪೇಲನವರ, ನಗರಸಭೆ ಸದಸ್ಯರಾದ ನಿರಂಜನ ಹೇರೂರ, ವೇದವ್ಯಾಸ ಕಟ್ಟಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೋಮಶೇಖರ ತಿಪ್ಪಶೆಟ್ಟಿ, ಮುಖಂಡರಾದ ಪ್ರಭು ಹಿಟ್ನಳ್ಳಿ, ಮಾಣಿಕಚಂದ ಲಾಡರ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

 

ಹಿರೇಕೆರೂರು ವರದಿ

ಹಿರೇಕೆರೂರ: ಗುಜರಾತ್ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಹ್ಯಾಟ್ರಿಕ್ ವಿಜಯ ಸಾಧಿಸುತ್ತಿದ್ದಂತೆ ಪಟ್ಟಣದಲ್ಲಿ ಗುರುವಾರ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ನಿಂಗಪ್ಪ ಚಳಗೇರಿ, ಪ್ರ.ಕಾ. ಉಮೇಶ ಬಣಕಾರ, ಸಣ್ಣಗೌಡ ಪಾಟೀಲ, ಶಂಭು ಕರ್ಜಗಿ, ಗಂಗಾಧರ ಮಾಗನೂರ, ರಾಮು ಮುರಡೇಶ್ವರ, ನಾರಾಯಣ ಬೆಳ್ಳೂರ, ಉಳವಿಗೌಡ ವೀರನಗೌಡ್ರ ಮೊದಲಾದವರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry