ಜಿಲ್ಲಾ ಸಂಕ್ಷಿಪ್ತ ಸುದ್ದಿಗಳು

7

ಜಿಲ್ಲಾ ಸಂಕ್ಷಿಪ್ತ ಸುದ್ದಿಗಳು

Published:
Updated:

ಜೆಡಿಎಸ್ ಸೇರುವುದಿಲ್ಲ- ಜಾರಕಿಹೊಳಿ

ಗುಲ್ಬರ್ಗ:
ಸರ್ಕಾರ ಐದು ವರ್ಷಗಳ ಅವಧಿ ಪೂರ್ಣಗೊಳಿಸಲಿದ್ದು, ಮುಂದಿನ ಚುನಾವಣೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ನಡೆಯಲಿ ಎಂದು ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ ಗುರುವಾರ ಇಲ್ಲಿ ತಿಳಿಸಿದರು. ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ. ಜೆಡಿಎಸ್ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಬ್ಲಾಕ್‌ಮೇಲ್ ತಂತ್ರ ಯಾರು ಉಪಯೋಗಿಸುತ್ತಾರೆ ಎಂಬುದು ಜಗಜ್ಜಾಹೀರಾಗಿದೆ ಎಂದು ಸಚಿವ ರೇಣುಕಾಚಾರ್ಯರ ಹೇಳಿಕೆಗೆ ಪ್ರತಿಕ್ರಿಯಿಸಿದರು.ಹೆಚ್ಚುವರಿ ಖಾತೆ ನೀಡಿರುವುದಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ ಕುರಿತು ಕೇಳಲಾದ ಪ್ರಶ್ನೆಗೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆಲ್ಲ ಸಹಜ. ಅಂಥವರು ಪಕ್ಷದ ಹೈಕಮಾಂಡ್ ಮುಂದೆ ಅಸಮಾಧಾನ ತೋಡಿಕೊಳ್ಳಬೇಕೇ ವಿನಃ ಮಾಧ್ಯಮದವರ ಮುಂದೆ ಅಲ್ಲ ಎಂದು ಉತ್ತರಿಸಿದರು.ಬಿಎಸ್‌ವೈ, ಸಜ್ಜನ್ ಜಿಂದಾಲ್ ಬಂಧನಕ್ಕೆ ಆಗ್ರಹ

ಬಳ್ಳಾರಿ: 
`ಪ್ರೇರಣಾ ಶಿಕ್ಷಣ ಸಂಸ್ಥೆಗೆ ಅಪಾರ ಪ್ರಮಾಣದ ದೇಣಿಗೆ ಪಡೆದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ದೇಣಿಗೆ ನೀಡಿರುವ  ಜೆಎಸ್‌ಡಬ್ಲ್ಯೂ ಸ್ಟೀಲ್ಸ್ ಕಂಪೆನಿಯ ಮಾಲೀಕ ಸಜ್ಜನ್ ಜಿಂದಾಲ್ ಅವರನ್ನು ಕೂಡಲೇ ಬಂಧಿಸಬೇಕು~ ಎಂದು ಸಮಾಜ ಪರಿವರ್ತನ ಸಮುದಾಯದ ಎಸ್.ಆರ್. ಹಿರೇಮಠ ಒತ್ತಾಯಿಸಿದ್ದಾರೆ.ಈ ಪ್ರಕರಣದ ತನಿಖೆ ನಡೆಸಿರುವ ಸಿಬಿಐ ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಅವರಿಬ್ಬರನ್ನೂ ತಕ್ಷಣ ಬಂಧಿಸಬೇಕು ಎಂದು ಗುರುವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.ಕ್ರೇನ್ ಡಿಕ್ಕಿ: ಬಾಲಕ ಸಾವು

ಚನ್ನರಾಯಪಟ್ಟಣ:  
ರಸ್ತೆ ಕಾಮಗಾರಿ ನಿರ್ವಹಣೆ ಕ್ರೇನ್ ಡಿಕ್ಕಿ ಹೊಡೆದ ಪರಿಣಾಮ ಬಾಲಕನೊಬ್ಬ ಮೃತಪಟ್ಟು, ಮತ್ತೊಬ್ಬ ವ್ಯಕ್ತಿ ಗಾಯಗೊಂಡ ಘಟನೆ ತಾಲ್ಲೂಕಿನ ಉದಯಪುರ ಗ್ರಾಮದ (ರಾಷ್ಟ್ರೀಯ ಹೆದ್ದಾರಿ 48) ಬಳಿ ಗುರುವಾರ ನಡೆದಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಕೂಡ್ಲು ಗ್ರಾಮದ ಯಶವಂತ್ (14) ಮೃತಪಟ್ಟ ಬಾಲಕ. ಗಾಯಾಳು ಬಾಲಕನ ಸಂಬಂಧಿ ಸತೀಶ್ ಬಾಬು ಅವರನ್ನು ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಯಡಿಯೂರಪ್ಪ ಆಶೀರ್ವಾದ ಬೇಕು: ಶೆಟ್ಟರ್

ಗುಲ್ಬರ್ಗ:
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪಕ್ಷದ ಹಿರಿಯ ನಾಯಕರು. ಅವರ ಆರ್ಶೀವಾದ ನಮಗೆ ಸದಾ ಬೇಕು ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.ಗುರುವಾರ ಇಲ್ಲಿ ಸಚಿವ ಸಂಪುಟ ಸಭೆಯ ತೀರ್ಮಾನಗಳನ್ನು ವಿವರಿಸಿದ ನಂತರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.`ಶೆಟ್ಟರ್ ಅವರೂ ಡಿ.ವಿ. ಸದಾನಂದಗೌಡರ ಹಾದಿಯನ್ನೇ ತುಳಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದರಿಂದ ಎದುರಾಗುವ ಸಮಸ್ಯೆಗೆ ಅವರೇ ಹೊಣೆ ಹೊರಬೇಕಾಗುತ್ತದೆ~ ಎಂದು ಯಡಿಯೂರಪ್ಪ ನೀಡಿದ ಎಚ್ಚರಿಕೆಯ ಮಾತುಗಳಿಗೆ ಈ ಮೇಲಿನಂತೆ ಪ್ರತಿಕ್ರಿಯಸಿದರು.

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ, ರಸ್ತೆ ತಡೆ

ಹೊಸಕೋಟೆ:  ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಸಮತಾ ಸೈನಿಕ ದಳದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು. ಪ್ರವಾಸಿ ಮಂದಿರದಿಂದ ಮೆರಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಕೆಲಕಾಲ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿದರು.ನಂತರ ತಾಲ್ಲೂಕು ಕಚೇರಿ ಮುಂದೆ ಸಭೆ ಸೇರಿದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಬಿ.ಚನ್ನಕೃಷ್ಣಪ್ಪ, `ಪಟ್ಟಣದಲ್ಲಿ ಡಾ.ಅಂಬೇಡ್ಕರ್ ಅವರ ಪುತ್ಥಳಿ ಸ್ಥಾಪಿಸಬೇಕು, ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವ ದಲಿತರಿಗೆ ಶೀಘ್ರವೇ ಹಕ್ಕುಪತ್ರ ನೀಡಬೇಕು, ಜೀತ ವಿಮುಕ್ತಿದಾರರಿಗೆ ಪುನರ್ವಸತಿ ಕಲ್ಪಿಸಬೇಕು~ ಎಂದು ಒತ್ತಾಯಿಸಿದರು.ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಆಂಜಿನಪ್ಪ, ರೈತ ಸಂಘದ ಅಧ್ಯಕ್ಷ ಎಂ.ಕೆಂಚೇಗೌಡ ಮತ್ತಿತರರು ಮಾತನಾಡಿದರು. ನಂತರ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry