ಜಿಲ್ಲೆಗೆ ಅಭಿವೃದ್ಧಿ ಮುಗಿಲು ಮಲ್ಲಿಗೆ

7

ಜಿಲ್ಲೆಗೆ ಅಭಿವೃದ್ಧಿ ಮುಗಿಲು ಮಲ್ಲಿಗೆ

Published:
Updated:

ಚಿಕ್ಕಬಳ್ಳಾಪುರ: ಜಿಲ್ಲೆಗೆ ‘ಅಭಿವೃದ್ಧಿ’ ಎಂಬುದು ಮುಗಿಲು ಮಲ್ಲಿಗೆಯಾಗಿದೆಯೋ ಅಥವಾ ನಿರಂತರ ಪ್ರತಿಭಟನೆ, ಹೋರಾಟಗಳು ಸರ್ಕಾರದ ಗಮನ ಸಳೆಯುವಲ್ಲಿ ವಿಫಲವಾಗಿದೆಯೋ ಎಂಬುದು ಸ್ಪಷ್ಟವಾಗುತ್ತಿಲ್ಲ. ಪ್ರತಿ ಬಾರಿ ಹೋರಾಟ ನಡೆಸಿದಾಗಲೆಲ್ಲ ಜಯ ಸಿಕ್ಕೇಬಿಟ್ಟಿತು ಎಂಬ ಭಾವನೆ ಹೋರಾಟಗಾರರಲ್ಲಿ ವ್ಯಕ್ತವಾಗುತ್ತದೆ. ‘ಅಭಿವೃದ್ಧಿ’ ಎಂಬುದು ಸನಿಹದಲ್ಲಿದೆ ಎಂಬ ಆತ್ಮವಿಶ್ವಾಸ ಮೂಡುತ್ತದೆ. ಆದರೆ ಅಂತಿಮ ಕ್ಷಣಗಳಲ್ಲಿ ಎಲ್ಲವೂ ಬುಡಮೇಲಾಗುತ್ತದೆ. ಅಕ್ಷರಶಃ ‘ಅಭಿವೃದ್ಧಿ’ ಎಂಬುದು ನಿಲುಕದ ನಕ್ಷತ್ರ ಎಂಬಂತೆ ಕಾಣತೊಡಗುತ್ತದೆ. ಈ ರೀತಿಯ ಅಭಿಪ್ರಾಯಗಳನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ.ರಾಜ್ಯ ಬಜೆಟ್‌ನಲ್ಲಿ ಸಿಕ್ಕ ಕಡಿಮೆ ಅನುದಾನದಿಂದ ಈಗಾಗಲೇ ನೊಂದಿದ್ದ  ಜಿಲ್ಲೆಯ ಜನರು ಕೇಂದ್ರ ರೈಲ್ವೆ ಬಜೆಟ್ ಇನ್ನಷ್ಟು ನಿರಾಶೆ ಮೂಡಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆಗೆ ಒಂದೇ ಒಂದು ಯೋಜನೆ ಜಾರಿಯಾಗದಿರುವ ಹಿನ್ನೆಲೆಯಲ್ಲಿ  ಬೇಸರ ವ್ಯಕ್ತಪಡಿಸುತ್ತಿರುವ ಸಾರ್ವಜನಿಕರು ‘ಅಭಿವೃದ್ಧಿ’ ಎಂಬುದು ನಿಧಾನ. ಒಂದರ್ಥದಲ್ಲಿ ಕನಸಿನ ಮಾತು ಎಂಬಂತೆ ಹೇಳುತ್ತಿದ್ದಾರೆ.ಶಾಶ್ವತ ನೀರಾವರಿ ಅನುಷ್ಠಾನಕ್ಕಾಗಿ ನಡೆದಿದ ಹೋರಾಟ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ. ಚಿಕ್ಕಬಳ್ಳಾಪುರ ರೈಲ್ವೆ ನಿಲ್ದಾಣದ ಮೂಲಸೌಕರ್ಯ ಪೂರೈಕೆ ಮತ್ತು ಅಭಿವೃದ್ಧಿಗಾಗಿ ನಿರಂತರ ಹೋರಾಟ ನಡೆಸಿದರೂ ಪ್ರತಿಫಲ ಸಿಗಲಿಲ್ಲ. ಬಂದ್, ಪ್ರತಿಭಟನೆ, ಒತ್ತಡ ಹೇರಿಕೆ ಮಾಡಿದರೂ ಜಿಲ್ಲೆಯ ಜನರತ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಲವು ತೋರಲಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.ಆದಿಚುಂಚನಗಿರಿಮಠದ ವೀರಾಂಜನೇಯಸ್ವಾಮಿ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಅವರು, ‘ಚಿಕ್ಕಬಳ್ಳಾಪುರ ಜಿಲ್ಲೆಗೆ ಸಿಹಿ ಸುದ್ದಿ. ಸದ್ಯಕ್ಕೆ ಏನನ್ನೂ ಹೇಳಲ್ಲ. ಬಜೆಟ್‌ನಲ್ಲಿ ನೀವೇ ನೋಡಿ’ ಎಂದು ಹೇಳಿ ಆಶಾಭಾವನೆ ಮೂಡಿಸಿದ್ದರು. ಆದರೆ ಶುಕ್ರವಾರ ಕೇಂದ್ರ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಮಂಡಿಸಿದ ಬಜೆಟ್‌ನಲ್ಲಿ ಚಿಕ್ಕಬಳ್ಳಾಪುರದ ಬಗ್ಗೆ ಒಂದು ಅಕ್ಷರ ಪ್ರಸ್ತಾಪ  ಇರಲಿಲ್ಲ.ಕೋಲಾರ ಜಿಲ್ಲೆಗೆ ನೂತನ ಕೋಚ್ ಕಾರ್ಖಾನೆ, ಹೊಸ ರೈಲುಗಳು ಮುಂತಾದ ವಿಷಯಗಳು ಪ್ರಸ್ತಾಪವಾಯಿತಾದರೂ ನೆರೆಯ ಚಿಕ್ಕಬಳ್ಳಾಪುರ ಜಿಲ್ಲೆಯ ರೈಲು ನಿಲ್ದಾಣಗಳ ಮೂಲಸೌಕರ್ಯ ಮತ್ತು ಅಭಿವೃದ್ಧಿ ವಿಷಯ ಪ್ರಸ್ತಾಪವಾಗಲಿಲ್ಲ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಒಮ್ಮೆಯೂ ಚಿಕ್ಕಬಳ್ಳಾಪುರ ರೈಲು ನಿಲ್ದಾಣಕ್ಕೆ ಭೇಟಿ ನೀಡದ ಕೆ.ಎಚ್.ಮುನಿಯಪ್ಪ ಅವರು ಕಳೆದ ತಿಂಗಳವಷ್ಟೇ ಚಿಕ್ಕಬಳ್ಳಾಪುರ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗುವುದು.ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದು ಹೇಳಿದ್ದರು. ರೈಲು ನಿಲ್ದಾಣದ ಸ್ಥಳಾಂತರ ವಿಷಯಕ್ಕೆ ವಿರೋಧ ವ್ಯಕ್ತವಾದಾಗ ಪರಿಸ್ಥಿತಿ ನಿಭಾಯಿಸುವ ಕಾರ್ಯವನ್ನು ಚಿಕ್ಕಬಳ್ಳಾಪುರ ಸ್ಥಳೀಯ ಶಾಸಕ ಕೆ.ಪಿ.ಬಚ್ಚೇಗೌಡ ಮತ್ತು ಜಿಲ್ಲಾಧಿಕಾರಿ ಡಾ. ಎನ್.ಮಂಜುಳಾ ಅವರಿಗೆ ವಹಿಸಿಕೊಟ್ಟರು. ‘ರೈಲು ನಿಲ್ದಾಣದ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅಭಿಪ್ರಾಯ ಪಡೆದು ವರದಿ ಸಲ್ಲಿಸಿ’ ಎಂದು ತಿಳಿಸಿದ್ದರು.ರೈಲು ನಿಲ್ದಾಣ ಸ್ಥಳಾಂತರ ವಿಷಯವನ್ನು ಪಕ್ಕಕ್ಕಿಟ್ಟ ಅವರು ‘ರೈಲು ನಿಲ್ದಾಣಕ್ಕೆ ಮೂಲಸೌಕರ್ಯ ಕಲ್ಪಿಸಲು ಇನ್ನೂ 15 ದಿನಗಳಲ್ಲಿ ಕ್ರಮ ಕೈಗೊಳ್ಳುತ್ತೇನೆ’ ಎಂದು ಹೇಳಿದ್ದರು.

ನಿಲ್ದಾಣದ ಮೂಲಸೌಕರ್ಯ ಪೂರೈಕೆ ಮತ್ತು ಅಭಿವೃದ್ಧಿ ವಿಷಯಕ್ಕೂ ಬಜೆಟ್‌ನಲ್ಲಿ ಆದ್ಯತೆ ಸಿಗಲಿಲ್ಲ.‘ನಮ್ಮ ಜಿಲ್ಲೆಗೆ ಇಬ್ಬರು ಕೇಂದ್ರ ಸಚಿವರು ಇದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ವೀರಪ್ಪ ಮೊಯಿಲಿ ಅಥವಾ ಕೆ.ಎಚ್.ಮುನಿಯಪ್ಪ ಇಬ್ಬರಲ್ಲಿ ಒಬ್ಬರಾದರೂ ಜಿಲ್ಲೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತಾರೆ ಎಂದು ಭಾವಿಸಿದ್ದೆವು. ಆದರೆ ಜಿಲ್ಲೆಗೆ ಇಬ್ಬರೂ ಕೇಂದ್ರದ ಪ್ರಭಾವಿ ಸಚಿವರಿದ್ದರೂ ಏನೂ ಪ್ರಯೋಜನವಾಗಲಿಲ್ಲ. ಸದ್ಯಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಹೊಸ ಯೋಜನೆ ಮತ್ತು ಅನುದಾನಗಳ ಲವಲಕ್ಷಣಗಳು ಕಾಣಿಸುತ್ತಿಲ್ಲ’ ಎಂದು ಸಾರ್ವಜನಿಕರು ಅಭಿಪ್ರಾಯಪಡುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry