ಗುರುವಾರ , ಮೇ 19, 2022
24 °C

ಜಿಲ್ಲೆಗೆ ಇನ್ನೂ ಹೆಚ್ಚಿನ ಅನುದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಳಂದೂರು: ಜಿಲ್ಲೆಯನ್ನು ಯಾವ ಕಾರಣದಿಂದಲೂ ನಿರ್ಲಕ್ಷಿಸಿಲ್ಲ. ಬಿಜೆಪಿ ಸರ್ಕಾರದಲ್ಲೇ ಜಿಲ್ಲೆಗೆ ಹೆಚ್ಚಿನ ಅನುದಾನಗಳು ಹರಿದು ಬಂದಿದ್ದು, ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಲ್ಲಿ ಇನ್ನಷ್ಟು ಅನುದಾನ ಬಿಡುಗಡೆಗೊಳಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ರೇಣುಕಾಚಾರ್ಯ ತಿಳಿಸಿದರು.ಬುಧವಾರ ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ಕರೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.ಅಧಿಕಾರಿಗಳು ಪಕ್ಷಾತೀತವಾಗಿ, ಜಾತ್ಯತೀತವಾಗಿ ಕೆಲಸ ಮಾಡಬೇಕು. ಬಿಡುಗಡೆಯಾಗಿರುವ ಅನುದಾನ  ಸಮರ್ಪಕವಾಗಿ ಬಳಸಿಕೊಳ್ಳಬೇಕು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಜಿಲ್ಲೆಯು ತೀರಾ ಹಿಂದೆ ಬಿದ್ದಿದ್ದು ಮುಂದಿನ ವರ್ಷ ಕಾಮಗಾರಿಗಳನ್ನು ಹೆಚ್ಚು ಮಾಡುವಂತೆ ಸೂಚಿಸಿದರು.ಸಾಮಾಜಿಕ ಪಿಂಚಣಿ, ಆದಾಯ, ಜಾತಿ ಪ್ರಮಾಣ ಪತ್ರ, ಪಡಿತರ ವ್ಯವಸ್ಥೆಯಲ್ಲಿ ಶೀಘ್ರವಾಗಿ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದರ ಬಗ್ಗೆ ದೂರು ಗಳು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.ಕಬ್ಬಿನ ಹಾನಿಗೆ ಶೀಘ್ರ ಪರಿಹಾರ: ಇತ್ತೀಚೆಗೆ ತಾಲ್ಲೂಕಿನಾದ್ಯಂತ ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಆದ ಹಾನಿಗೆ ಶೀಘ್ರವಾಗಿ ಪರಿಹಾರ ಕೊಡಿಸಿಕೊಡುವಂತೆ ಸೆಸ್ಕ್ ಅಧಿಕಾರಿ ಗಳಿಗೆ ಸೂಚಿಸಿದರು. ಪಟ್ಟಣ ದಲ್ಲಿ ಎಂಎಸ್‌ಐಎಲ್ ವತಿಯಿಂದ ತೆರೆಯ ಬೇಕಾಗಿರುವ ಮದ್ಯ ಮಾರಾಟ ಮಳಿಗೆ ಶೀಘ್ರ ಆರಂಭಿಸುವ ಭರವಸೆ ನೀಡಿದರು.ಕಂದಾಯ, ತಾಲ್ಲೂಕು ಅಧಿಕಾರಿಗಳು ಗ್ರಾ.ಪಂ. ಕಾರ್ಯ ದರ್ಶಿಗಳು ಕೇಂದ್ರ ಸ್ಥಾನದಲ್ಲಿ ಇರಬೇಕೆಂದು ಸೂಚನೆ ನೀಡಿದರು. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಕಡೆಯಲ್ಲೂ ಪ್ರವಾಸ ಮಾಡಿ ಕೆಲಸ ಕಾರ್ಯಗಳ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.ಜಿಪಂ ಉಪಾಧ್ಯಕ್ಷ ಸಿದ್ದರಾಜು, ತಾ.ಪಂ. ಅಧ್ಯಕ್ಷ ಗೌರಮ್ಮ ಮಹದೇವಸ್ವಾಮಿ, ಉಪಾಧ್ಯಕ್ಷ ವಿಜಯಲಕ್ಷ್ಮಿ, ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ್ ನಾಯಕ್, ತಹಶೀಲ್ದಾರ್ ಹನುಮಂತರಾಯಪ್ಪ, ಇಒ ಡಾ.ಶಿವಣ್ಣ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.ಪೂರ್ವಭಾವಿ ಸಭೆ

ಯಳಂದೂರು: ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಬಾಬು ಜಗ ಜೀವನರಾಂ ಹಾಗೂ ಅಂಬೇಡ್ಕರ್ ಜಯಂತಿ ನಿಮಿತ್ತ ಮಾ.26ರ ಮಧ್ಯಾಹ್ನ 3.30ಕ್ಕೆ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.ಎಲ್ಲ ಸಂಘ ಸಂಸ್ಥೆಗಳ ಪದಾಧಿ ಕಾರಿಗಳು, ಅಧಿಕಾರಿಗಳು ಹಾಜರಾಗಿ ತಮ್ಮ ಸಲಹೆ ಸೂಚನೆ ನೀಡುವಂತೆ ತಹಶೀಲ್ದಾರ್ ಹಾಗೂ ಸಮಾಜ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.