ಬುಧವಾರ, ಜೂನ್ 23, 2021
30 °C
*₨ 4 ಸಾವಿರ ಕೋಟಿ ಹೂಡಿಕೆ *4 ಸಾವಿರ ಮಂದಿಗೆ ಉದ್ಯೋಗ

ಜಿಲ್ಲೆಗೆ ಎಚ್‌ಎಎಲ್: ನಿರ್ಣಾಯಕ ಸಭೆ

ಪ್ರಜಾವಾಣಿ ವಾರ್ತೆ/ ಸಿ.ಕೆ.ಮಹೇಂದ್ರ Updated:

ಅಕ್ಷರ ಗಾತ್ರ : | |

ತುಮಕೂರು: ಜಿಲ್ಲೆಯ ಅಭಿವೃದ್ಧಿ ಚಹರೆಯನ್ನೇ ಬದಲಿಸಬಲ್ಲ ಮಹಾ ನವರತ್ನ ಕಂಪೆನಿಗಳಲ್ಲಿ ಒಂದಾದ ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್‌ಎಎಲ್ (ಹಿಂದೂಸ್ತಾನ್‌ ಏರೋನ್ಯಾಟಿಕ್ಸ್‌ ಲಿಮಿಟೆಡ್‌) ಹೆಲಿಕಾಪ್ಟರ್‌ ತಯಾರಿಕಾ ಹಾಗೂ ದುರಸ್ತಿ ಘಟಕ ಜಿಲ್ಲೆಗೆ ನೀಡುವ ಕುರಿತ ಮಹತ್ವದ ನಿರ್ಣಾಯಕ ಸಭೆ ಶನಿವಾರ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ನಿರೀಕ್ಷೆ ಜತೆಗೆ ಕುತೂಹಲ ಮೂಡಿಸಿದೆ.2008ರಿಂದಲೂ ಜಿಲ್ಲೆಗೆ ಎಚ್‌ಎಎಲ್‌ ತರು­ವಲ್ಲಿ ನಿರಂತರ ಪ್ರಯತ್ನ ನಡೆಯುತ್ತಿವೆ.  ಕೇಂದ್ರ ಸಚಿವ ಮಲ್ಲಿಕಾರ್ಜುನ್‌ ಖರ್ಗೆ ಗುಲ್ಬರ್ಗಗಕ್ಕೆ, ಸಂಸದ ಧರ್ಮಸಿಂಗ್‌ ಬೀದರ್‌ ಜಿಲ್ಲೆಗೆ ತೀವ್ರ ಲಾಬಿ ನಡೆಸಿದ್ದಾರೆ. ಶಿರಾ ಬಳಿ ಎಚ್‌ಎಎಲ್‌ ಘಟಕ ಸ್ಥಾಪಿಸುವಂತೆ ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಕೂಡ ಬೇಡಿಕೆ ಮುಂದಿಟ್ಟಿದ್ದರು.ಈ ನಡುವೆ, ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಕೇಂದ್ರ ಕೃಷಿ ಸಚಿವ ಶರದ್‌ ಪವಾರ್‌ ಕೂಡ ತಮ್ಮ ರಾಜ್ಯದಲ್ಲೇ ಎಚ್‌ಎಎಲ್‌ ಘಟಕ ಸ್ಥಾಪಿಸುವಂತೆ ಕೋರಿ ಕೇಂದ್ರ ರಕ್ಷಣಾ ಇಲಾಖೆಗೆ ಪತ್ರ ಬರೆದಿದ್ದಾರೆ. ಈ ಎಲ್ಲ ಬೆಳವಣಿಗೆ­ಗಳ ನಡುವೆ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‌ನಲ್ಲಿ ಘಟಕ ಸ್ಥಾಪನೆಗೆ ಎಚ್‌ಎಎಲ್‌ ಮುಂದಾಗಿದೆ.ವಿಧಾನಸೌಧದ ಮೂರನೇ ಮಹಡಿಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್‌ ಮುಖರ್ಜಿ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 10.30ಕ್ಕೆ ಸಭೆ ಸೇರಲಿದೆ. ಘಟಕ ಸ್ಥಾಪನೆಗೆ ಎಚ್‌ಎಎಲ್‌ ಮುಂದಿಟ್ಟಿರುವ ಬೇಡಿಕೆಗಳ ಕುರಿತು ಸಭೆ ತೀರ್ಮಾನ ಕೈಗೊಳ್ಳಬೇಕಾಗಿದೆ. ಎಚ್‌ಎಎಲ್‌ ಅಧ್ಯಕ್ಷರು, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಂದಾಯ, ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ, ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಕೆ.ಎಸ್‌.ಸತ್ಯಮೂರ್ತಿ ಭಾಗವಹಿಸು­ವರು ಎಂದು ಮೂಲಗಳು ತಿಳಿಸಿವೆ.ನಿಟ್ಟೂರು ಹೋಬಳಿಗೆ ಸೇರಿದ ರಾಷ್ಟ್ರೀಯ ಹೆದ್ದಾರಿ 206ಕ್ಕೆ ಹೊಂದಿಕೊಂಡಂತಿರುವ ಬಿದರೆ­ಹಳ್ಳ ಕಾವಲ್‌ನ 600 ಎಕರೆ ಭೂಮಿ, ಹೆದ್ದಾರಿ­ಯಿಂದ ಬಿದರೆಹಳ್ಳಕಾವಲ್‌ಗೆ 45 ಮೀಟರ್‌ ಅಗ­ಲದ ರಸ್ತೆ ನಿರ್ಮಾಣ, ಟೌನ್‌ಶಿಪ್‌ ನಿರ್ಮಾಣಕ್ಕೆ 150 ಎಕರೆ ಭೂಮಿ, ಪ್ರತಿ ದಿನ 12 ಮೆಗಾವಾಟ್‌ ವಿದ್ಯುತ್‌, 42 ಲಕ್ಷ ಲೀಟರ್‌ ನೀರಿನ ಬೇಡಿಕೆಯನ್ನು ಎಚ್‌ಎಎಲ್‌ ರಾಜ್ಯ ಸರ್ಕಾರದ ಮುಂದಿರಿಸಿದೆ. ಈ ಬೇಡಿಕೆಗಳಿಗೆ ಒಪ್ಪಿಗೆ ಸಿಕ್ಕರೆ ಜಿಲ್ಲೆಗೆ ಎಚ್‌ಎಎಲ್‌ ಕನಸು ನನಸಾಗಲಿದೆ.600 ಎಕರೆಯಲ್ಲಿ ಕಾರ್ಖಾನೆ ತಲೆ ಎತ್ತಲಿದ್ದು ಆರಂಭಿಕ ಹಂತದಲ್ಲಿ ₨ 4 ಸಾವಿರ ಕೋಟಿ ಹೂಡಿಕೆ ಮಾಡಲಿದೆ. 150 ಎಕರೆಯಲ್ಲಿ ಟೌನ್‌­ಶಿಪ್‌ ನಿರ್ಮಾಣ ಮಾಡಲಿದೆ. ಮೊದಲ ಹಂತ­ದಲ್ಲಿ 3ರಿಂದ 4 ಸಾವಿರ ಮಂದಿಗೆ ಉದ್ಯೋಗ ಸಿಗಲಿದೆ. ಪ್ರತಿ ವರ್ಷ 50 ಹೆಲಿಕಾಪ್ಟರ್‌ ತಯಾರಿ­ಸುವ ಗುರಿ ಹೊಂದಲಾಗಿದೆ. ಮುಂದಿನ ದಿನ­ಗಳಲ್ಲಿ ಒಟ್ಟಾರೆ 60 ಸಾವಿರ ಕೋಟಿ ಹೂಡಿಕೆ ಮಾಡುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.ಮೂರು ರಾಜ್ಯಗಳಲ್ಲದೆ ರಾಜ್ಯದ ಪ್ರಭಾವಿ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಎನ್‌.ಧರ್ಮಸಿಂಗ್ ಕೂಡ ಆಸಕ್ತಿ ವಹಿಸಿರುವ ಕಾರಣ ಶನಿವಾರದ ಸಭೆಯಲ್ಲಿ ಸರ್ಕಾರ ಯಾವ ತೀರ್ಮಾನ ಕೈಗೊಳ್ಳಲಿದೆ ಮತ್ತು ಹೇಗೆ ಸ್ಪಂದಿಸ­ಲಿದೆ ಎಂಬ ಕುತೂಹಲ ಕೆರಳಿದೆ. ಜಿಲ್ಲೆಯವರೇ ಆದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಅವರಿಗೂ ಇದು ಪ್ರತಿಷ್ಠೆ ಪ್ರಶ್ನೆ. ಇವರಿಬ್ಬರು ಜಿಲ್ಲೆಗೆ ಘಟಕ ಕೈತಪ್ಪದಂತೆ ನೋಡಿಕೊಳ್ಳಬೇಕಿದೆ ಎಂಬ ಒತ್ತಾಯ ಕೇಳಿಬಂದಿದೆ.ಬಿದರೆಹಳ್ಳಕಾವಲ್‌ ಘಟಕ ಸ್ಥಾಪನೆಗೆ ಸೂಕ್ತ ಜಾಗ. ಸರ್ಕಾರ ಮೂಲ ಸೌಕರ್ಯ, ಭೂಮಿ ನೀಡಿದರೆ ಘಟಕ ಸ್ಥಾಪಿಸಬಹುದೆಂದು ಎಚ್‌ಎಎಲ್‌ ಹಿರಿಯ ಅಧಿಕಾರಿಗಳ ತಂಡ ವರದಿ ನೀಡಿದೆ. 2016ರೊಳಗೆ ಘಟಕ ಸ್ಥಾಪಿಸುವ ಕಾಲಮಿತಿಯ ಗುರಿ ಹಾಕಿಕೊಳ್ಳಲಾಗಿದೆ.ಬಿದರೆಹಳ್ಳಕಾವಲ್‌ನಲ್ಲಿ 939 ಎಕರೆ ಸರ್ಕಾರಿ ಭೂಮಿ ಇದೆ. ಇದರಲ್ಲಿ 151 ಎಕರೆ ದಲಿತರಿಗೆ ನೀಡಲಾಗಿದ್ದು ಉಳಿದ ಭೂಮಿ ಎಚ್‌ಎಎಲ್‌ ಘಟಕಕ್ಕೆ ಕೊಡಬಹುದೆಂದು ಜಿಲ್ಲಾಡಳಿತ ಸರ್ಕಾರಕ್ಕೆ ತಿಳಿಸಿದೆ. ಭೂಮಿ ನೀಡಲು ಯಾರಿಂ­ದಲೂ ವಿರೋಧ ಬಂದಿಲ್ಲ. ಭೂಸ್ವಾಧೀನದ ಪ್ರಶ್ನೆಯೂ ಉದ್ಭವಿಸುವುದಿಲ್ಲ. ಗುಬ್ಬಿ ಶಾಸಕ ಎಸ್.ಆರ್‌.ಶ್ರೀನಿವಾಸ್‌, ಸಂಸದ ಜಿ.ಎಸ್‌.ಬಸವ­ರಾಜ್‌ ಘಟಕ ಸ್ಥಾಪನೆಗೆ ಒತ್ತಾಸೆಯಾಗಿ ನಿಂತಿದ್ದಾರೆ. ಹೀಗಾಗಿ ಯಾವುದೇ ವಿವಾದವಿಲ್ಲದೆ ಯೋಜನೆ ಅನುಷ್ಠಾನಗೊಳಿಸಬಹುದು ಎಂದು ಹೇಳಲಾಗುತ್ತಿದೆ.‘ನೀರು, ಭೂಮಿ ಕೊಡಲು ಸರ್ಕಾರ ಈಗಾಗಲೇ ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದೆ. ಬಹುತೇಕ ನಾಳೆ ಸಭೆಯಲ್ಲಿ ಸರ್ಕಾರ ಒಪ್ಪಿಗೆ ನೀಡಲಿದೆ ಎಂಬ ವಿಶ್ವಾಸವಿದೆ’ ಎಂದು ಸಂಸದ ಜಿ.ಎಸ್‌.ಬಸವರಾಜ್‌ ತಿಳಿಸಿದರು.ಎಚ್‌ಎಎಲ್‌ ಘಟಕ ಸ್ಥಾಪಿಸುವಂತೆ 2008ರಿಂದಲೇ ಹೋರಾಟ ನಡೆಸುತ್ತಿರುವ ಅಭಿವೃದ್ಧಿ ರೆವೂಲ್ಯೂಷನ್‌ ಫೋರಂನ ಕುಂದರನಹಳ್ಳಿ ರಮೇಶ್‌, ಸರ್ಕಾರ ಜಿಲ್ಲೆಯ ಜನರ ನಿರೀಕ್ಷೆ ಹುಸಿ ಮಾಡುವುದಿಲ್ಲ ಎಂಬ ನಂಬಿಕೆಯಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.