ಶುಕ್ರವಾರ, ಜೂನ್ 18, 2021
20 °C

ಜಿಲ್ಲೆಗೆ ನಿರಾಶೆ ತಂದ ಬಜೆಟ್: ಮಾವು ಮಂಡಳಿ ಮತ್ತೆ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ರಾಜ್ಯ ಬಜೆಟ್ ಜಿಲ್ಲೆಯ ಮಟ್ಟಿಗೆ ಹೆಚ್ಚಿನ ಸಂತೋಷ ತಂದಿಲ್ಲ. ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ಸಲುವಾಗಿ ಪರಮಶಿವಯ್ಯ ಯೋಜನೆ ಜಾರಿಗೆ ತರಬೇಕು ಎಂದು ಜಿಲ್ಲೆಯ ವಿವಿಧ ಸಂಘಟನೆಗಳು ಹಲವು ತಿಂಗಳಿಂದ ನಡೆಸಿದ ಹೋರಾಟಕ್ಕೆ ಬಜೆಟ್ ಯಾವ ಫಲವನ್ನೂ ನೀಡಿಲ್ಲ. ಬದಲಿಗೆ ಜಿಲ್ಲೆಯ ಬಹುತೇಕರು ವಿರೋಧಿಸುತ್ತಿದ್ದ ಎತ್ತಿನಹೊಳೆ ಯೋಜನೆಗೆ 400 ಕೋಟಿ ರೂಪಾಯಿ ಮೀಸಲಿಟ್ಟಿರುವುದು ತೀವ್ರ ನಿರಾಶೆ ಮೂಡಿಸಿದೆ.ಇದೇ ಯೋಜನೆಯ ಹೆಸರಿನಲ್ಲಿ ಕಳೆದ ಬಜೆಟ್‌ನಲ್ಲೂ 200 ಕೋಟಿ ರೂಪಾಯಿ ಮೀಸಲಿಟ್ಟಿದ್ದ ರಾಜ್ಯ ಸರ್ಕಾರ ಅದರ ಬಹುಭಾಗವನ್ನು ಇನ್ನೂ ಖರ್ಚು ಮಾಡಿಲ್ಲ. ಈಗ ಮತ್ತೆ 400 ಕೋಟಿ ಮೀಸಲಿಟ್ಟಿರುವು ದಾಗಿ ಘೋಷಿಸಲಾಗಿದೆ.ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಗೆ ಈ ಯೋಜನೆ ಯಿಂದ ಪ್ರಯೋಜನವಿಲ್ಲ ಎಂದು ನಿರಂತರವಾಗಿ ಪ್ರತಿಭಟನೆ, ಧರಣಿ, ಮೆರವಣಿಗೆಯಂಥ ಕಾರ್ಯಕ್ರಮ ಗಳನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಅಲ್ಲದೆ, ನೇರವಾಗಿ ಮುಖ್ಯಮಂತ್ರಿಗಳಿಗೇ ಈ ಬಗ್ಗೆ ಕೆಲವೊಮ್ಮೆ ಮನವಿ ಸಲ್ಲಿಸಲಾಗಿತ್ತು.

 

ಆದರೆ ಅವುಗಳಿಗೆ ಕಿಮ್ಮತ್ತು ದೊರೆತಿಲ್ಲ. ಪೈಪ್‌ಲೈನ್ ಮೂಲಕ ಕೋಲಾರ ತಾಲ್ಲೂಕಿನ 19 ಕೆರೆಗಳನ್ನು ತುಂಬಿಸುವ ಈ ಯೋಜನೆ ಅನುಷ್ಠಾನ ಮತ್ತು ಪ್ರಯೋಜನದ ಕುರಿತು ಜಿಲ್ಲೆಯಲ್ಲಿ ವ್ಯಾಪಕ ವಿರೋಧವಿದೆ. ಜಿಲ್ಲೆಯ ಜನ ಬಯಸದಿರುವ ಯೋಜನೆಯನ್ನು ಬಜೆಟ್ ಬಾಗಿಲಿಗೆ ತಂದಿದೆ.ಮಾವು ಮಂಡಳಿ: ರಾಜ್ಯದಲ್ಲಿ ಹೆಚ್ಚು ಮಾವು ಬೆಳೆಯುವ ಜಿಲ್ಲೆಯೆಂದೇ ಖ್ಯಾತಿಯಾದ ಕೋಲಾರ ದಲ್ಲಿ ಮಾವು ಅಭಿವೃದ್ಧಿ ಮಂಡಳಿ ರಚಿಸುವ ಘೋಷಣೆ ಯನ್ನು ಎರಡು ವರ್ಷದ ಹಿಂದಿನ ಬಜೆಟ್‌ನಲ್ಲೆ ಘೋಷಿಸಲಾಗಿತ್ತು. ಆದರೆ ಅದು ಏನಾಯಿತು ಎಂಬ ಬಗ್ಗೆ ಯಾರಿಗೂ ಗೊತ್ತಿಲ್ಲ. ಆದರೆ ಈ ವರ್ಷದ ಬಜೆಟ್‌ನಲ್ಲೂ ಅದೇ ಘೋಷಣೆಯನ್ನು ಮತ್ತೆ ಮಾಡಲಾಗಿದೆ ಎಂಬ ಅಸಹನೆ ಮಾವು ಬೆಳೆಗಾರರಲ್ಲಿ ಮೂಡಿದೆ.ಮಾವು ಸಂಸ್ಕರಣೆ, ಮಾರುಕಟ್ಟೆ ಮೂಲಸೌಕರ್ಯ ಗಳಿಂದ ವಂಚಿತರಾಗಿರುವ ಬೆಳೆಗಾರರ ಹಿತದೃಷ್ಟಿ ಯಿಂದ ಮಾವು ಅಭಿವೃದ್ಧಿ ಮಂಡಳಿಯನ್ನು ಸಾಧ್ಯ ವಾದಷ್ಟು ಬೇಗ ರಚಿಸಿ ಕಾರ್ಯರೂಪಕ್ಕೆ ತರಬೇಕೆಂಬ ಆಗ್ರಹವೂ ಇದೇ ಸಂದರ್ಭದಲ್ಲಿ ಮೂಡಿದೆ.ರೇಷ್ಮೆ : ರೇಷ್ಮೆ ಬೆಳೆಗಾರರು ಎದುರಿಸುತ್ತಿರುವ ಸುಂಕದ ಸಮಸ್ಯೆಗೂ ಈ ಬಜೆಟ್ ಸ್ಪಂದಿಸಿಲ್ಲ ಎಂಬುದು ಮತ್ತೊಂದು ಅಸಮಾಧಾನ. ಕೇಂದ್ರ ಸರ್ಕಾರದ ಮನ ಒಲಿಸುವ ಕೆಲಸವನ್ನೂ ರಾಜ್ಯ ಸರ್ಕಾರ ಸಮರ್ಪಕವಾಗಿ ಮಾಡಿಲ್ಲ. ಇದೇ ಉದ್ಯಮವನ್ನು ನೆಚ್ಚಿಕೊಂಡಿರುವ ಬೆಳೆಗಾರರು, ರೀಲರ್‌ಗಳ ಕಷ್ಟಪರಂಪರೆಗೆ ತಡೆಯೊಡ್ಡುವ ಯಾವ ಪ್ರಯತ್ನೂ ಬಜೆಟ್‌ನಲ್ಲಿ ಇಲ್ಲ ಎಂಬ ಅಸಮಾಧಾನಕ್ಕೂ ಈ ಬಾರಿಯ ಬಜೆಟ್ ದಾರಿ ಮಾಡಿದೆ.10 ಎಚ್‌ಪಿ ಮೋಟರ್ ಪಂಪ್‌ಗೆ ಉಚಿತ ವಿದ್ಯುತ್ ಘೋಷಿಸಲಾಗಿದೆ. ಆದರೆ ಜಿಲ್ಲೆಯ ಮಟ್ಟಿಗೆ ಇದು ಅನುಷ್ಠಾನಗೊಳ್ಳಲು ಸಾಧ್ಯವಾಗದ ಲಾಭ. ಏಕೆಂದರೆ ಜಿಲ್ಲೆಯಲ್ಲಿ ಅಂತರ್ಜಲ ಸಾವಿರಾರು ಅಡಿಗೆ ಕುಸಿದಿದೆ. ಅದನ್ನು ತೆಗೆಯಲು 20 ಎಚ್‌ಪಿ ಮೋಟರ್ ಬೇಕೇ ಬೇಕು. 10 ಎಚ್‌ಪಿ ಮೋಟರ್ ಕೆಲಸಕ್ಕೆ ಬರುವುದಿಲ್ಲ. ಇಂಥ ಸನ್ನಿವೇಶದಲ್ಲಿ ರಾಜ್ಯ ಸರ್ಕಾರ ಘೋಷಿಸಿರುವ ಉಚಿತ ವಿದ್ಯುತ್ ಸೌಲಭ್ಯ ರೈತರಿಗೆ ದಕ್ಕುವುದು ಅಪರೂಪ. ಬರಪೀಡಿತ ತಾಲ್ಲೂಕುಗಳಿಗೆ ನೀಡಿರುವ ಹಣವೂ ಅಗತ್ಯಕ್ಕಿಂತ ಅತಿ ಕಡಿಮೆ. ಜಿಲ್ಲೆಯ ಇಂಥ ಕೊರತೆಯ ಅಂಶಗಳನ್ನು ಸರ್ಕಾರ ವಿಶೇಷವಾಗಿ ಗಮನಿಸಬೇಕಿತ್ತು ಎಂಬುದು ಹಲವರ ಸಲಹೆಯ ನುಡಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.