ಶನಿವಾರ, ಮೇ 28, 2022
26 °C

ಜಿಲ್ಲೆಗೆ ಪಶ್ಚಿಮಾಭಿಮುಖ ಹರಿಯುವ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ತುಮಕೂರು ಸೇರಿದಂತೆ ರಾಜ್ಯದ 20 ಜಿಲ್ಲೆಗಳ ಸುಮಾರು 25 ಸಾವಿರ ಕೆರೆಗಳಿಗೆ ನದಿ ನೀರು ಹರಿಸುವ ಉದ್ದೇಶಕ್ಕೆ ಡಿಪಿಆರ್ (ವಿಸ್ತೃತ ಯೋಜನಾ ವರದಿ) ತಯಾರಿಸಲು ಜಲಸಂಪನ್ಮೂಲ ಇಲಾಖೆ ಆದೇಶ ನೀಡುವ ಮೂಲಕ ಯೋಜನೆಗೆ ಚಾಲನೆ ಸಿಕ್ಕಿದೆ ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.ಜಿ.ಎಸ್.ಪರಮಶಿವಯ್ಯ ವರದಿ ಆಧರಿಸಿ ಕುಡಿಯುವ ನೀರು ಹರಿಸುವ ಈ ಯೋಜನೆಯ ಮುಖ್ಯ ಕೆಲಸದ ಸಮೀಕ್ಷಾ ವರದಿಯನ್ನು ಕೇಂದ್ರ ಸರ್ಕಾರಿ ಸ್ವಾಮ್ಯದ ಹೈದರಾಬಾದ್‌ನ ಎನ್‌ಆರ್‌ಎಸ್‌ಎ (ನ್ಯಾಷಿನಲ್ ರಿಮೋಟ್ ಸೆನ್ಸಿಂಗ್ ಏಜೆನ್ಸಿ) ಸಿದ್ಧಪಡಿಸಿ, ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಇಲಾಖೆ ಟೆಂಡರ್ ಕರೆದಿದೆ. ವಿಸ್ತೃತ ಯೋಜನಾ ವರದಿ ತಯಾರಿಸಲು ರಾಜ್ಯ ಸರ್ಕಾರ ಅಂದಾಜು ರೂ. 18.65 ಕೋಟಿ ಮೀಸಲಿಟ್ಟಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಹಿಂದಿನ ಎಸ್.ಎಂ.ಕೃಷ್ಣ ನೇತೃತ್ವದ ಸರ್ಕಾರ ಯೋಜನೆಯ ಸಮೀಕ್ಷೆ ಹೊಣೆಯನ್ನು ಎನ್‌ಆರ್‌ಎಸ್‌ಎಗೆ ವಹಿಸಿತ್ತು. ಈಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಗತ್ಯ ಹಣ ಬಿಡುಗಡೆ ಮಾಡಿದ್ದರಿಂದ ಎನ್‌ಆರ್‌ಎಸ್‌ಎ ಶೀಘ್ರದಲ್ಲಿ ಸಮೀಕ್ಷಾ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದೆ. ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಚಾಲನೆ ಸಿಗುವಲ್ಲಿ ಸಿದ್ದಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿ, ಡಾ.ಬಾಲಗಂಗಾಧರನಾಥ ಸ್ವಾಮೀಜಿ ಸೇರಿದಂತೆ ನಾಡಿನ ಎಲ್ಲ ಸ್ವಾಮೀಜಿಗಳು, ಜಲಸಂಪನ್ಮೂಲ ಸಚಿವ ಆರ್.ಬಸವರಾಜ ಬೊಮ್ಮಾಯಿ, ಸಚಿವ ಸೋಮಣ್ಣ ಪ್ರಯತ್ನ ಶ್ಲಾಘನೀಯ ಎಂದು ಸಂಸದರು ಪ್ರಶಂಸಿಸಿದರು.ವ್ಯರ್ಥವಾಗಿ ಹರಿದು ಸಮುದ್ರ ಸೇರುವ ಮಳೆಗಾಲದ ನೀರನ್ನು ಪರಿಸರಕ್ಕೆ ಧಕ್ಕೆಯಾಗದ ಉನ್ನತ ಮಟ್ಟದ ತಾಂತ್ರಿಕತೆಯಿಂದ ಕೂಡಿದ ಹಾಗೂ ಸುರಂಗ ಮಾರ್ಗದ ಮೂಲಕ ಬರ ಪೀಡಿತ ಪ್ರದೇಶಕ್ಕೆ ತರಲಾಗುತ್ತದೆ. ಈ ಯೋಜನೆ ರಾಷ್ಟ್ರದಲ್ಲಿಯೇ ಮಾದರಿಯಾಗಲಿದೆ. ಕೇಂದ್ರ ಸಚಿವರು ಮತ್ತು ಉನ್ನತ ಅಧಿಕಾರಿಗಳೊಂದಿಗೆ ಈಗಾಗಲೇ ಸಮಾಲೋಚನೆ ನಡೆಸಲಾಗಿದೆ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ, ಪೇಜಾವರ ಮಠಾಧೀಶ ವಿಶ್ವೇಶ ತೀರ್ಥರ ಆಶೀರ್ವಾದ ಸಿಗುವ ಆಶಾಭಾವನೆ ಇದೆ. ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ನಂತರ ಅಗತ್ಯ ಆರ್ಥಿಕ ನೆರವು ಲಭ್ಯವಾಗುವ ಭರವಸೆ ಸಿಕ್ಕಿದೆ ಎಂದರು.ಕೃಷಿಗೆ ಪ್ರತ್ಯೇಕ ಬಜೆಟ್ ಮಂಡಿಸಿ ರೈತರ ಏಳಿಗೆಗೆ ಹೊಸ ನಾಂದಿ ಹಾಡಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಸನ್ಮಾನಿಸಲು ನಗರದಲ್ಲಿ ಸದ್ಯದಲ್ಲೇ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ಚಿಂತನೆ ನಡೆಯುತ್ತಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಶಾಶ್ವತ ನೀರಾವರಿ ಹೋರಾಟ ಸಮಿತಿ ಸಂಚಾಲಕ ಆರ್.ಆಂಜನೇಯರೆಡ್ಡಿ, ಕುಂದರನಹಳ್ಳಿ ರಮೇಶ್, ರಘೋತ್ತಮರಾವ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.