ಶುಕ್ರವಾರ, ಮೇ 20, 2022
21 °C
ಯೋಜನಾ ಸಮಿತಿ ಸಭೆಯಲ್ಲಿ ಬಿಆರ್‌ಜಿಎಫ್ ಕ್ರಿಯಾಯೋಜನೆ

ಜಿಲ್ಲೆಗೆ ರೂ. 24.27 ಕೋಟಿ ಅನುದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಹಿಂದುಳಿದ ಪ್ರದೇಶಾಭಿವೃದ್ಧಿ ನಿಧಿ (ಬಿಆರ್‌ಜಿಎಫ್)ಯೋಜನೆ ಅಡಿ ಜಿಲ್ಲೆಗೆ ರೂ. 24. 27 ಕೋಟಿ ಅನುದಾನ ನಿಗದಿ...  ಅನುದಾನ ಶೇಕಡವಾರು ಅಸಮರ್ಪಕ ಹಂಚಿಕೆ ವಿರುದ್ಧ ಸದಸ್ಯರ ವಿರೋಧ... ಮೊರಾರ್ಜಿ ಮತ್ತು ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿನಿಯಲಗಳಿಗೆ ಮೂಲಸೌಲಭ್ಯಗಳ ಕೊರತೆ... ಕಗ್ಗತ್ತಲೆಯಲ್ಲಿ ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳು... ಜಿಲ್ಲಾ ಪಂಚಾಯ್ತಿ ಸದಸ್ಯರ ಹಕ್ಕುಚ್ಯುತಿ... ಅಕ್ಷರ  ದಾಸೋಹದಡಿ ನಿರ್ಮಿಸಲಾಗುತ್ತಿರುವ ಕಟ್ಟಡ ಕಾಮಗಾರಿ ವಿಳಂಬ...

-ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಪಂಚಾಯ್ತಿ ಯೋಜನಾ ಸಮಿತಿ ಸಭೆಯಲ್ಲಿ ಈ ಮೇಲಿನ ವಿಷಯಗಳು ಪ್ರತಿಧ್ವನಿಸಿದವು.ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಯೋಜನೆಯಡಿ (ಬಿಆರ್‌ಜಿಎಫ್) ರೂ. 24. 27 ಕೋಟಿ ಅನುದಾನ ಮಂಜೂರಾಗಿದೆ. ಇದರಲ್ಲಿ ಗ್ರಾಮ ಪಂಚಾಯ್ತಿಗೆ ಶೇ 70ರಷ್ಟು; ತಾಲ್ಲೂಕು ಪಂಚಾಯ್ತಿಗೆ ಶೇ.20ರಷ್ಟು ಹಾಗೂ ಜಿಲ್ಲಾ ಪಂಚಾಯ್ತಿಗೆ ಶೇ 10ರಷ್ಟು ಅನುದಾನ ಹಂಚಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ಕ್ರಿಯಾಯೋಜನೆ ರೂಪಿಸುವ ಮೂಲಕ ಅನುದಾನಕ್ಕಾಗಿ ಪ್ರಸ್ತಾವ ಕಳುಹಿಸಬೇಕಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ ವಿಶ್ವನಾಥ ಜಿ. ಮುದಜ್ಜಿ ವಿವರಿಸುವ ಮೂಲಕ ಸಭೆಗೆ ಚಾಲನೆ ನೀಡಿದರು.ಅನುದಾನ ಶೇಕಡವಾರು ಹಂಚಿಕೆಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರಿಗೆ ಶೇ 10ರಷ್ಟು ಹಂಚಿಕೆ ವಿರುದ್ಧ ಜಿ.ಪಂ. ಸದಸ್ಯರಾದ ವೀರೇಶ್ ಹನಗವಾಡಿ, ಎಚ್.ನಾಗರಾಜ್, ಮೆಳ್ಳೆಕಟ್ಟೆ ಚಿದಾನಂದ, ಗುರುಮೂರ್ತಿ, ಕವಿತಾ ರಾಮಗಿರಿ, ವೀರಭದ್ರಪ್ಪ ಅವರಿಂದ ತೀವ್ರ ವಿರೋಧ ವ್ಯಕ್ತವಾಯಿತು.30ರಿಂದ 40ರಷ್ಟು ಗ್ರಾಮಗಳ ಅಭಿವೃದ್ಧಿ ಜವಾಬ್ದಾರಿ ಹೊತ್ತ ಜಿಲ್ಲಾ ಪಂಚಾಯ್ತಿ ಸದಸ್ಯರಿಗೆ ಭಾರಿ ಮೊತ್ತದ ಯಾವುದೇ ಅನುದಾನ ನೀಡುತ್ತಿಲ್ಲ. ಪ್ರತಿಯೊಂದಕ್ಕೂ ಸರ್ಕಾರ ಗ್ರಾಮ ಪಂಚಾಯ್ತಿಗಳಿಗೆ ಮಣೆಹಾಕುತ್ತಾ ಬರುತ್ತಿದೆ. ಈಗ ಬಿಆರ್‌ಜಿಎಫ್ ಯೋಜನೆಯಡಿ ಶೇ 10 ರಷ್ಟು ಅನುದಾನ ಕಲ್ಪಿಸಿದರೆ ಯಾವ ಅಭಿವೃದ್ಧಿ ಮಾಡಲು ಸಾಧ್ಯ? ಜಿ.ಪಂ. ಅನುದಾನದಲ್ಲಿ ರಸ್ತೆ ಅಭಿವೃದ್ಧಿ, ಶಾಲಾ ಕಟ್ಟಡ ನಿರ್ಮಾಣ, ವಸತಿ ಶಾಲೆ ನಿರ್ವಹಣೆ, ದುರಸ್ತಿ ಹೀಗೆ ನಾನಾ ಅಭಿವೃದ್ಧಿಗೊಳಿಸುವಂತೆ ನಮಗೆ ಜನರು ಒತ್ತಾಯಿಸುತ್ತಾರೆ. ಯಾವುದೇಅನುದಾನ ಇಲ್ಲದ ನಾವು ಬರೀ ಅವರಿಗೆ ಆಶ್ವಾಸನೆ ನೀಡುವಂತಾಗಿದೆ. ಹೀಗಾದರೆ ನಾವು ಜನರ ನಂಬಿಕೆ ಉಳಿಸಿಕೊಳ್ಳುವುದಾದರೂ ಹೇಗೆ? ಜನರಿಗೆ ಉತ್ತರದಾಯಿತ್ವ ಏನು? ಎಂದು ಪ್ರಶ್ನಿಸಿದರು. ಕೂಡಲೇ ಈ ಯೋಜನೆ ಕ್ರಿಯಾಯೋಜನೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.ಸದಸ್ಯರ ಪ್ರಶ್ನೆಗಳ ಸುರಿಮಳೆಯಲ್ಲಿ ಮಿಂದ ಜಿ.ಪಂ. ಸಿಇಒ ಎ.ಬಿ. ಹೇಮಚಂದ್ರ ತಣ್ಣಗೆ ಪ್ರತಿಕ್ರಿಯಿಸಿ, `ಸರ್ಕಾರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಸಮಸ್ಯೆ ಹಾಗೂ ಅಭಿವೃದ್ಧಿಪಡಿಸಬೇಕಾದ ಕಾರ್ಯಗಳನ್ನು ನೇರವಾಗಿ ಗಣಗೆ ತೆಗೆದುಕೊಂಡು ಆದ್ಯತೆ ಮೇರೆಗೆ ಯೋಜನೆ ರೂಪಿಸಿದೆ. ಜಿಲ್ಲಾ ಪಂಚಾಯ್ತಿ ದೊಡ್ಡಣ್ಣ ಇದ್ದಂತೆ. ಹಲವು ಯೋಜನೆಗಳು ಜಿಲ್ಲಾಮಟ್ಟದಲ್ಲಿ ಸರ್ಕಾರ ರೂಪಿಸುತ್ತಿದೆ. ಹಾಗಾಗಿ, ಬಿಆರ್‌ಜಿಎಫ್ ಯೋಜನೆಯ ಅನುಮೋದನೆಗೆ ಸಹಕರಿಸುವಂತೆ ಮನವಿ ಮಾಡಿದರು.ಸಿಇಒ ಹೇಮಚಂದ್ರ ಅವರ ಉತ್ತರದಿಂದ ಅಸಮಾಧಾನಗೊಂಡ ಸೊಕ್ಕೆ ಜಿಲ್ಲಾ ಪಂಚಾಯ್ತಿ ಸದಸ್ಯ ಎಚ್. ನಾಗರಾಜ್, `ಸರ್ಕಾರ ಹೊರಡಿಸುವ ಸುತ್ತೋಲೆಗಳೆಲ್ಲವೂ ಸರಿ ಎನ್ನುವುದಾದರೆ ಜಿಲ್ಲಾ ಯೋಜನಾ ಸಮಿತಿ ಏಕೆ? ನಮ್ಮ ಅಗತ್ಯವೇನು? ಜಿಲ್ಲಾ ಪಂಚಾಯ್ತಿ ಸದಸ್ಯರೂ ಜನರಿಂದ ಆಯ್ಕೆಗೊಂಡಿರುತ್ತಾರೆ ಎಂಬ ಕಲ್ಪನೆಯನ್ನು ಪಂಚಾಯತ್‌ರಾಜ್ ನಿರ್ದೇಶಕರು ಮರೆತಿದ್ದಾರೆ. ಆದ್ದರಿಂದ, ಇಂತಹ ಅಸಮರ್ಪಕ ಸುತ್ತೋಲೆ ಹೊರಡಿಸುತ್ತಿದ್ದಾರೆ. ಬಿಆರ್‌ಜಿಎಫ್ ಯೋಜನೆಯಡಿ ಜಿಲ್ಲಾ ಪಂಚಾಯ್ತಿಗೆ ಶೇ 50ರಷ್ಟಾದರೂ ಅನುದಾನ ಹಂಚಿಕೆಯಾಗಬೇಕು. ಇಲ್ಲವೇ ಅನುಮೋದನೆ ನೀಡುವಂತಿಲ್ಲ ಎಂದು ಪಟ್ಟುಹಿಡಿದರು. ಇದಕ್ಕೆ ಸರ್ವ ಸದಸ್ಯರ ಬೆಂಬಲವೂ ಸಿಕ್ಕಿತು.ಇದು ಕೇಂದ್ರದ ಯೋಜನೆಯಾಗಿದ್ದು, ಅನುದಾನ ಬಿಡುಗಡೆಗಾಗಿ ಪ್ರಸ್ತಾವ ಕಳುಹಿಸೋಣ. ನಂತರ ಬೇಕಾದರೆ ರಾಜ್ಯಮಟ್ಟದಲ್ಲಿ ಶೇಕಡವಾರು ಹಂಚಿಕೆಯಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಪ್ರಸ್ತಾವ ಕಳುಹಿಸುವುದೇ ತಡವಾದರೆ ಅನುದಾನ ಕೈತಪ್ಪಲಿದೆ ಎಂದು ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಜಯರಾಂ ಸಭೆಗೆ ತಿಳಿಸಿದರು.ಅನುದಾನ ಕೈ ತಪ್ಪುವುದು ಬೇಡ. ಆದರೆ, ಸರ್ಕಾರಕ್ಕೆ ಕಳುಹಿಸುವ ವರದಿಯಲ್ಲಿ ಹಿಂದಿನ ಕ್ರಿಯಾಯೋಜನೆಯಂತೆ ಜಿಲ್ಲಾ ಪಂಚಾಯ್ತಿಗೆ ಶೇ 20ರಷ್ಟು, ತಾಲ್ಲೂಕು ಪಂಚಾಯ್ತಿಗೆ ಶೇ 20ರಷ್ಟು ಹಾಗೂ ಗ್ರಾ.ಪಂ. ಗೆ ಶೇ 60ರಷ್ಟು ಶೇಕಡವಾರು ಅನುದಾನ ಹಂಚಿಕೆಗೊಳಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.ಮಾಯಕೊಂಡ ಕ್ಷೇತ್ರದ ಶಾಸಕ ಕೆ.ಶಿವಮೂರ್ತಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶೀಲಾ ಗದ್ದಿಗೇಶ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ನಾಗರಾಜ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಿ.ಎಲ್. ವೀರಭದ್ರಪ್ಪ, ಕೃಷಿ ಮತ್ತು ಕೈಗಾರಿಕೆ ಸ್ಥಾಮಿತಿ ಅಧ್ಯಕ್ಷೆ ಶಾರದಾ ಉಮೇಶ್‌ನಾಯ್ಕ, ಸದಸ್ಯರಾದ ಕೆ.ಪಿ.ಪಾಲಯ್ಯ, ಕೆ.ಎಚ್.ಗುರುಮೂರ್ತಿ, ಎಂ.ಟಿ.ಬಸವನಗೌಡ, ಪ್ರೇಮಾ ಸಿದ್ದೇಶ್, ಯಶೋಧಾ ಹಾಲೇಶಪ್ಪ, ಮೀನಾಕ್ಷಿಬಾಯಿ, ಉಷಾ ಅಶೋಕ, ಕವಿತಾ ರಾಮಗಿರಿ, ಚಿದಾನಂದ ಮೆಳ್ಳೆಕಟ್ಟೆ, ವೀರೇಶ್ ಹನಗವಾಡಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.