ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲು ಒತ್ತಾಯ

7

ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲು ಒತ್ತಾಯ

Published:
Updated:

ಗೋಣಿಕೊಪ್ಪಲು: ಕೊಡಗಿನ ರೈತರು ಶ್ರೀಮಂತರು ಎಂಬ ಭಾವನೆ ಇದೆ. ಆದರೆ ಇಲ್ಲಿಯ ಪರಿಸ್ಥಿತಿಯನ್ನು ಅವಲೋಕಿಸಿದಾಗ ವಾಸ್ತವಿಕ ಸ್ಥಿತಿಯೇ ಬೇರೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.ಅಮ್ಮತ್ತಿ ಕೊಡವ ಸಮಾಜದಲ್ಲಿ ಜಿಲ್ಲಾ ಬೆಳೆಗಾರರ ಒಕ್ಕೂಟ ಮಂಗಳವಾರ ಆಯೋಜಿಸಿದ್ದ ಬೆಳೆಗಾರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.ತೀವ್ರ ಸಮಸ್ಯೆಯಲ್ಲಿ ಸಿಲುಕಿರುವ ರೈತರು ಬೇಸಾಯದಿಂದ ದೂರವಾಗುತ್ತಿದ್ದಾರೆ. ಕೃಷಿ ಉಳಿಸಬೇಕಾದರೆ ಸರ್ಕಾರ ಕೂಡಲೇ ರೈತರ ಸಹಾಯಕ್ಕೆ ಧಾವಿಸಬೇಕು ಎಂದು ತಿಳಿಸಿದರು.ಕುರ್ಚಿ ಉಳಸಿಕೊಳ್ಳುವುದಕ್ಕಾಗಿ ಹೋರಾಡುತ್ತಿರುವ ಸರ್ಕಾರದ ನಾಯಕರು ರೈತರನ್ನು ಸಂಪೂರ್ಣವಾಗಿ ಮರೆತಿದ್ದಾರೆ. ಎಲ್ಲ ಕಡೆ ಬರ ಕಾಡುತ್ತಿದೆ. ಇದು ಕೊಡಗು ಜಿಲ್ಲೆಯನ್ನೂ ಬಿಟ್ಟಿಲ್ಲ. ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ನಿಜವಾದ ಕಾಳಜಿ ಇದ್ದರೆ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲಿ ಎಂದರು.ಕಾಫಿ ಬೆಳೆಗಾರರ ಸಂಘದ ಜಿಲ್ಲಾ ಅಧ್ಯಕ್ಷ ನೆರವಂಡ ಅಪ್ಪಯ್ಯ ಮಾತನಾಡಿ ಕಳೆದ ವರ್ಷ ಕಾಫಿ ಬಿಡಿಸುವ ವೇಳೆ ಸಂಘಟನೆ ನಿಗದಿ ಮಾಡಿದ್ದ ಕೂಲಿ ದರ ಜಾರಿಗೆ ಬರಲಿಲ್ಲ. ಆದರೆ  ಕಾರ್ಮಿಕರು ಮಾಲೀಕರ ಮೇಲೆ ಇಷ್ಟೇ ಕೂಲಿ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ ಎಂದು ದೂರಿದರು.ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷ ನಾಚಪ್ಪ ಮಾತನಾಡಿ ಈ ಬಾರಿ ಮಳೆಯ ಆಭಾವದಿಂದ ಕಾಫಿ ಬೆಳೆಗೆ ತೊಂದರೆಯಾಗಿದೆ. ಉತ್ತಮ ಫಸಲನ್ನು ಕಾಣಲು ಸಾಧ್ಯವಾಗಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಒಂದು ಕಡೆ ಕಾಡಾನೆ ಹಾವಳಿ, ಮತ್ತೊಂದು ಕಡೆ ಕೂಲಿ, ರಸಗೊಬ್ಬರ ಬೆಲೆಯಲ್ಲಿ ಹೆಚ್ಚಳ ಇವುಗಳಿಂದ ಬೆಳೆಗಾರರು ರೋಸಿ ಹೋಗಿದ್ದಾರೆ. ಸರ್ಕಾರ ಬೆಳೆಗಾರರ ನೆರವಿಗೆ ಬರದಿದ್ದರೆ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಗುರಿಯಾಗಲಿದ್ದಾರೆ ಎಂದು ಎಚ್ಚರಿಸಿದರು.ಮಾಚಿಮಾಡ ಸುರೇಶ್ ಅಯ್ಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ರೈತ ಸಂಘದ ತಾಲ್ಲೂಕು ಅಧ್ಯಕ್ಷ ಯು.ಎ.ಗಣಪತಿ ಅಧ್ಯಕ್ಷತೆ ವಹಿಸಿದ್ದರು. ಕುಟ್ಟಂಡ ಗಣಪತಿ, ಉಪಾಧ್ಯಕ್ಷ ಜವರಯ್ಯ, ಕಾರ್ಯದರ್ಶಿ ಹರೀಶ್ ಮಾದಪ್ಪ ಹಾಜರಿದ್ದರು.ಜಿಲ್ಲೆಯನ್ನು ಬರಪೀಡಿದ ಎಂದು ಘೋಷಿಸಬೇಕು. ಕೂಲಿ ಕಾರ್ಮಿರನ್ನು ಬಾಡಿಗೆ ವಾಹನದಲ್ಲಿ ಸಾಗಿಸಬಾರದು. ಕಾರ್ಮಿಕರಿಗೆ ರೂ. 140 ಕೂಲಿ ನಿಗದಿ ಪಡಿಸಬೇಕು ಮುಂತಾದ 19 ನಿರ್ಣಯಗಳನ್ನು ಸಭೆಯಲ್ಲಿ ಕೈಗೊಂಡು ಸರ್ಕಾರಕ್ಕೆ ಕಳಿಸಿಕೊಡಲು ತೀರ್ಮಾನಿಸಲಾಯಿತು. ಈ ಬೇಡಿಕೆಗಳನ್ನು 3 ತಿಂಗಳುಗಳೊಳಗೆ ಈಡೇರಿಸದಿದ್ದರೆ ತೀವ್ರ ಹೋರಾಟ ನಡೆಸಲು ನಿರ್ಧರಿಸಲಾಯಿತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry