ಶುಕ್ರವಾರ, ಜೂನ್ 25, 2021
30 °C
ಚಿತ್ರದುರ್ಗ: ಬೆಳೆ ಸಂತ್ರಸ್ತರ ಆಕ್ಷೇಪ

ಜಿಲ್ಲೆಯನ್ನೇ ಮರೆತ ಕೇಂದ್ರ ಅಧ್ಯಯನ ತಂಡ

ಗಾಣಧಾಳು ಶ್ರೀಕಂಠ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಅತಿವೃಷ್ಟಿಯಿಂದ ಬೆಳೆ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿರುವ ಕೇಂದ್ರ ಅಧ್ಯಯನ ತಂಡ ಚಿತ್ರದುರ್ಗ ಜಿಲ್ಲೆಯಲ್ಲಿನ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡದಿರುವುದಕ್ಕೆ ಬೆಳೆ ಕಳೆದುಕೊಂಡ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆಗೆ ಮೂರು ತಾಲ್ಲೂಕುಗಳಲ್ಲಿ 873 ಎಕರೆ ಪ್ರದೇಶದಲ್ಲಿನ ತೋಟಗಾರಿಕಾ ಬೆಳೆಗಳು ನಾಶವಾಗಿದ್ದವು. ಅಂದಾಜು ₨ 20.99 ಕೋಟಿ ನಷ್ಟವಾಗಿತ್ತು.ಚಳ್ಳಕೆರೆ, ಹಿರಿಯೂರು ಹಾಗೂ ಮೊಳಕಾಲ್ಮುರು ತಾಲ್ಲೂಕುಗಳ ಕಂದಿಕೆರೆ, ರಂಗೇನಹಳ್ಳಿ, ಧರ್ಮಪುರದಲ್ಲಿ  96 ಹೆಕ್ಟೇರ್‌ ದಾಳಿಂಬೆ, 92 ಹೆಕ್ಟೇರ್‌ ಈರುಳ್ಳಿ, 44 ಹೆಕ್ಟೇರ್‌ ಬಾಳೆ, 49 ಹೆಕ್ಟೇರ್‌ ಅಡಿಕೆ ನಾಶವಾಗಿದೆ. 34 ಹೆಕ್ಟೇರ್‌ ಸಪೋಟ, 22 ಹೆಕ್ಟೇರ್‌ ಪಪ್ಪಾಯ, 11 ಹೆಕ್ಟೇರ್‌ ಮೂಸಂಬಿ, 12.40 ಹೆಕ್ಟೇರ್‌ ಕಲ್ಲಂಗಡಿ ಬೆಳೆ ಹಾಳಾಗಿತ್ತು. ಬೆಳೆ ಹಾನಿ ಸಮೀಕ್ಷೆ ನಡೆಸಿದ ತೋಟಗಾರಿಕಾ ಇಲಾಖೆ ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಿತ್ತು.ಈ ವರದಿ ಸಲ್ಲಿಕೆಯಾದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದೊಡ್ಡ ಪ್ರಮಾಣದಲ್ಲಿ ಹಾನಿಗೊಳಗಾದ ಬಿಜಾಪುರ, ಬೀದರ್ ಪ್ರದೇಶಗಳಿಗೆ ಭೇಟಿ ನೀಡಿದರು. ಆಗಲೂ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಯಲ್ಲಿ ಬೆಳೆ ಹಾನಿಗೊಳಗಾದ ಪ್ರದೇಶಗಳನ್ನು ಮರೆತರು. ಈಗ ಕೇಂದ್ರದಿಂದ ಬಂದಿದ್ದ ಅತಿವೃಷ್ಟಿ ಅಧ್ಯಯನ ತಂಡ ಕೂಡ ಈ ಎರಡು ಜಿಲ್ಲೆಗಳ ರೈತರನ್ನು ಮರೆತಿದೆ ಎಂದು ಹಿರಿಯೂರು ತಾಲ್ಲೂಕಿನ ಕೆಂದಗೋಳಿ ಹನುಮಂತಪ್ಪ, ಶಿವಮೂರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇತ್ತೀಚೆಗೆ ಸುರಿದ ಆಲಿಕಲ್ಲು ಮತ್ತು ಬೀಸಿದ ಬಿರುಗಾಳಿಗೆ ಮನುಷ್ಯರು ಸತ್ತಿಲ್ಲ. ಆದರೆ ರೈತರು ಪೋಷಿಸುತ್ತಿದ್ದ ಉಪ ಆದಾಯಕ್ಕಾಗಿ ಸಾಕಿದ್ದ ನೂರಾರು ಕುರಿ, ಕೋಳಿ ಮತ್ತಿತರ ಜಾನುವಾರುಗಳು ಸಾವನ್ನಪ್ಪಿದ್ದವು. ವರ್ಷ ವರ್ಷ ಫಲ ನೀಡಬೇಕಿದ್ದ ಬಹುವಾರ್ಷಿಕ ಬೆಳೆಗಳು ಬುಡಸಮೇತ ನೆಲ ಕಚ್ಚಿದ್ದವು. ‘ಧರ್ಮಪುರದಲ್ಲಿ ₨ 5 ಲಕ್ಷ ಮೌಲ್ಯದ ಪಪ್ಪಾಯಿ ಬೆಳೆ ನಷ್ಟವಾಗಿತ್ತು. ಇವೆಲ್ಲ ನಷ್ಟವಲ್ಲವೇ, ಕೇವಲ ದ್ರಾಕ್ಷಿ ಬೆಳೆ ನಾಶವಾಗಿರುವುದು ಮಾತ್ರ ನಷ್ಟವೇ.ಲಕ್ಷಗಟ್ಟಲೆ ಬಂಡವಾಳ ಹೂಡಿ, ಕೋಟಿ ಗಳಿಸುವ ರೈತರು ಮಾತ್ರ ನಿಮ್ಮ ಕಣ್ಣಿಗೆ ರೈತರಾಗಿ ಕಾಣುತ್ತಾರೆಯೇ’? ಎಂದು ಧರ್ಮಪುರದಲ್ಲಿ ಬೆಳೆ ಕಳೆದುಕೊಂಡಿರುವ ರೈತರು ಕೇಂದ್ರದ ಅಧ್ಯಯನ ತಂಡ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದಿದ್ದಾರೆ.ಜಿಲ್ಲೆಯ ಬೆಳೆ ಹಾನಿ ವಸ್ತು ಸ್ಥಿತಿಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವಲ್ಲಿ ಜಿಲ್ಲಾಡಳಿತ, ಜನಪ್ರತಿನಿಧಿಗಳು, ಜಿಲ್ಲಾ ಉಸ್ತುವಾರಿ ಸಚಿವರು ವಿಫಲವಾಗಿವೆ. ಇದೇ ಕಾರಣದಿಂದಲೇ ಕೇಂದ್ರ ಅಧ್ಯಯನ ತಂಡ ಚಿತ್ರದುರ್ಗ ಜಿಲ್ಲೆಗೆ ಆಗಮಿಸಿಲ್ಲ ಎಂದು ರೈತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಇಂಥ ಬಹುದೊಡ್ಡ ಬೆಳೆ ದುರಂತವೊಂದು ನಮ್ಮ ಜೋಡಿ ಜಿಲ್ಲೆಗಳಲ್ಲಿ ಸಂಭವಿಸಿದ್ದರೂ, ಯಾವ ರಾಜಕಾರಣಿಗಳು ಈ ಬಗ್ಗೆ ಚಕಾರವೆತ್ತುತ್ತಿಲ್ಲ. ಎಲ್ಲರೂ ಕೈಗೆ ಸಿಗದ ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಈ ಜನ್ಮದಲ್ಲಿ ಪೂರ್ಣಗೊಳ್ಳದ ರೈಲ್ವೆ ಯೋಜನೆ ಬಗ್ಗೆಯಷ್ಟೇ ಮಾತನಾಡುತ್ತಾರೆ ಎಂದು ನೊಂದ ರೈತರು ಬೇಸರ ವ್ಯಕ್ತಪಡಿಸಿದ್ದಾರೆ.ಬಾರದ ಅನಾವೃಷ್ಟಿ ಪರಿಹಾರ: ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ  ಜಿಲ್ಲೆಯಲ್ಲಿ ಇದೇ ರೀತಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಬೆಳೆ ಹಾನಿಯಾಗಿತ್ತು. ಹಾನಿಯ ಪ್ರಮಾಣ ₨ 350 ಕೋಟಿ. ಕೃಷಿ ಜಂಟಿ ನಿರ್ದೇಶಕರ ನೇತೃತ್ವ­ದಲ್ಲಿ ಜಿಲ್ಲಾಡಳಿತ ಸಮೀಕ್ಷೆ ನಡೆಸಿ ಈ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿತ್ತು. ವರದಿಯಲ್ಲಿ ಮಳೆ ಕೊರತೆ­ಯಿಂದ 1,14,608 ಹೆಕ್ಟೇರ್ ಪ್ರದೇಶದಲ್ಲಿ ₨ 312.83 ಕೋಟಿ ಬೆಳೆ ಒಣಗಿ ಹೋಗಿದೆ.ಅತಿ ಹೆಚ್ಚು ಮಳೆ­ಯಿಂದಾಗಿ 24,096 ಹೆಕ್ಟೇರ್ ಪ್ರದೇಶ­ದಲ್ಲಿ ₨ 37.70 ಕೋಟಿ ಮೊತ್ತದ ಬೆಳೆ ನಾಶ­ವಾಗಿದೆ ಎಂದು ಉಲ್ಲೇಖಿಸಲಾಗಿತ್ತು. ಈ ವರದಿ ಸಲ್ಲಿಸಿದ ನಂತರ ಬರ ಅಧ್ಯಯನ ತಂಡ ಬೆಳೆ ನಷ್ಟ ಪ್ರದೇಶಗಳಿಗೆ ಭೇಟ ನೀಡಿ, ನಂತರ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿತ್ತು. ಆದರೆ ಇಲ್ಲಿಯವರೆವಿಗೂ ಪರಿಹಾರ ನೀಡಿಲ್ಲ. ಈ ಬಗ್ಗೆ ರೈತ ಸಂಘಟನೆಗಳು 2013ರ ನವೆಂಬರ್ ತಿಂಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆದಿದ್ದವು. ಆದರೆ ಪ್ರತಿಭಟನೆಗೆ ಸರ್ಕಾರ ಸ್ಪಂದಿಸರಲಿಲ್ಲ.‘ಒಟ್ಟಾರೆ ರಾಜ್ಯ ಹಾಗೂ ಕೇಂದ್ರದಲ್ಲಿ ಯಾವುದೇ ಸರ್ಕಾರ ಬರಲಿ ಚಿತ್ರದುರ್ಗದ ರೈತರನ್ನು ಹಳ್ಳಿಗಳನ್ನು ನಿರ್ಲಕ್ಷ್ಯಿಸಲಾಗುತ್ತಿದೆ. ಇಂಥ ರಾಜಕಾರಣಿಗಳನ್ನು ನಾವೆಂದೂ ಆಯ್ಕೆ ಮಾಡುವುದಿಲ್ಲ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವುದಿಲ್ಲ’ ಎಂದು ಧರ್ಮಪುರ, ಹಿರಿಯೂರು ತಾಲ್ಲೂಕಿನ ಆಲಿಕಲ್ಲು ಮಳೆಯಿಂದ ಬೆಳೆ ಕಳೆದುಕೊಂಡಿರುವ ರೈತರು ಪ್ರತಿಜ್ಞೆ ಮಾಡಿದ್ದಾರೆ.ನಮ್ಮ ಗೋಳು ಕೇಳಬೇಕಿತ್ತು...

ಬಿಜಾಪುರದ ದ್ರಾಕ್ಷಿ ರೈತರಿಗೆ ಜಲಾಶಯಗಳ ನೀರಾಶ್ರಯವಿದೆ. ಆದರೆ ಚಿತ್ರದುರ್ಗ ಜಿಲ್ಲೆಯ ರೈತರಿಗೆ ಯಾವುದೇ ನೀರಿನ ಸೌಲಭ್ಯವಿಲ್ಲ. ದೊರೆಯುವ ಇಂಚಿಂಚು ನೀರನ್ನು ಜತನದಿಂದ ಕಾಪಾಡಿಕೊಂಡು ಸಾಲಮಾಡಿ ಹಣ ತೊಡಗಿಸಿ ಬೆಳೆ ಬೆಳೆಯುತ್ತೇವೆ. ನಮ್ಮ ಸಾಲ ತೀರಿಸಬೇಕಾದ ಬೆಳೆ ನೆಲಕಚ್ಚಿದೆ. ಕೇಂದ್ರ ಅಧ್ಯಯನ ತಂಡ ಮೊದಲು ನಮ್ಮಂಥ ಬರದ ಜಿಲ್ಲೆಗಳಿಗೆ ಭೇಟಿ ನೀಡಿ ವಸ್ತುಸ್ಥಿತಿಯನ್ನು ಸರ್ಕಾರಕ್ಕೆ ಮುಟ್ಟಿಸಬೇಕಿತ್ತು. ಅದನ್ನು ಬಿಟ್ಟು, ನೀರಾಶ್ರಯವಿರುವ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡಿರುವುದು ಸರಿಯಲ್ಲ.

–ಜಿ.ತಿಪ್ಪೇಸ್ವಾಮಿ, ಸಿದ್ದೇಶ್ವರ ಕೋಟಿ, ಕಣಜನಹಳ್ಳಿಆಲಿಕಲ್ಲು ಮಳೆಗೆ ಅಪಾರ ನಷ್ಟ

ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ₨ ೭೦ ಕೋಟಿಗೂ ಅಧಿಕ ನಷ್ಟವಾಗಿದೆ. ಈ ಎರಡು ಜಿಲ್ಲೆಗಳಲ್ಲಿ ಕೇಂದ್ರ ತಂಡ ಪರಿಶೀಲನೆ ಮಾಡಿಲ್ಲ. ಆದರೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ೨೪ರಂದು ಮಧ್ಯಾಹ್ನ ೧೨.೩೦ಕ್ಕೆ ಬೆಂಗಳೂರಿನಲ್ಲಿ ಕೇಂದ್ರ ತಂಡದ ಅಧಿಕಾರಿಗಳೊಂದಿಗೆ ಸಭೆ ನಡೆಯಲಿದ್ದು ಆಗ ಈ ಎರಡು ಜಿಲ್ಲೆಗಳ ಬೆಳೆ ಹಾನಿ, ನಷ್ಟದ ಬಗ್ಗೆ ಗಮನ ಸೆಳೆಯಲಾಗುತ್ತದೆ.

– ಟಿ.ಬಿ.ಜಯಚಂದ್ರ, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ


ಬೆಳೆ ಹಾನಿ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಆದರೆ ಕೇಂದ್ರ ಅಧ್ಯಯನ ತಂಡ ಏಕೆ ಬಂದಿಲ್ಲ ಎಂದು ತಮ್ಮ ಗಮನಕ್ಕೆ ಬಂದಿಲ್ಲ. ಈ ತಂಡ ಬರುವುದರ ಬಗ್ಗೆ ಮಾಹಿತಿಯೂ ಇಲ್ಲ.

ವಿ.ಪಿ.ಇಕ್ಕೇರಿ.ಜಿಲ್ಲಾಧಿಕಾರಿ, ಚಿತ್ರದುರ್ಗ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.