ಮಂಗಳವಾರ, ನವೆಂಬರ್ 12, 2019
24 °C
ವೆಂಕಟಶಿವಾರೆಡ್ಡಿ, ರಮೇಶ್‌ಕುಮಾರ್ ನಾಮಪತ್ರ ಸಲ್ಲಿಕೆ

ಜಿಲ್ಲೆಯಲ್ಲಿ ಐವರಿಂದ ಒಂಬತ್ತು ನಾಮಪತ್ರ

Published:
Updated:

ಕೋಲಾರ: ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಜಿಲ್ಲೆಯಲ್ಲಿ ಶುಕ್ರವಾರ ಒಟ್ಟು ಐವರು ಅಭ್ಯರ್ಥಿಗಳು 9 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. 


ರೆಡ್ಡಿ, ಸ್ವಾಮಿ ನಾಮಪತ್ರ ಸಲ್ಲಿಕೆ

ಶ್ರೀನಿವಾಸಪುರ:
ವಿಧಾನ ಸಭೆಯ ಮಾಜಿ ಅಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಕಾಂಗ್ರೆಸ್‌ನಿಂದ ಹಾಗೂ ಜೆಡಿಎಸ್‌ನಿಂದ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಶುಕ್ರವಾರ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.ಮಧ್ಯಾಹ್ನ 12.30 ಗಂಟೆಗೆ ಇದೇ ಮೊದಲ ಬಾರಿಗೆ ಬೆರಳೆಣಿಕೆಯಷ್ಟು ಮುಖಂಡರೊಂದಿಗೆ ಆಗಮಿಸಿದ ಕೆ.ಆರ್.ರಮೇಶ್ ಕುಮಾರ್ ನೇರವಾಗಿ ಮಿನಿ ವಿಧಾನ ಸೌಧಕ್ಕೆ ಆಗಮಿಸಿ ಚುನಾವಣಾಧಿಕಾರಿ ಜಿ.ಎಸ್.ಬದನೂರು ಅವರಿಗೆ ನಾಮಪತ್ರ ಸಲ್ಲಿಸಿದರು. ತಹಶೀಲ್ದಾರ್ ಎಚ್.ಜಯ ಇದ್ದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್, ತಾ.ಪಂ.ಮಾಜಿ ಅಧ್ಯಕ್ಷ ದಿಂಬಾಲ ನಾರಾಯಣಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಕ್ಬರ್ ಷರೀಫ್, ತಾ.ಪಂ.ಮಾಜಿ ಸದಸ್ಯ ದಿಂಬಾಲ ಅಶೋಕ್, ಮುಖಂಡ ಬಿ.ಎಲ್.ರಾಮಣ್ಣ ರಮೇಶ್ ಕುಮಾರ್ ಅವರ ಜೊತೆಗಿದ್ದರು.

ನಾಮಪತ್ರ ಸಲ್ಲಿಸಿದನಂತರ ಮಾತನಾಡಿದ ರಮೇಶ್ ಕುಮಾರ್, 1978 ರಲ್ಲಿ ರಾಜಕೀಯ ಪ್ರವೇಶಿಸಿದ ತಾವು ಈಗ 9ನೇ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು ಕ್ಷೇತ್ರದ ಮತದಾರರ ಆಶೀರ್ವಾದ ಬಯಸಿರುವುದಾಗಿ ತಿಳಿಸಿದರು.ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಜಾರಿ ತಮ್ಮ ಆದ್ಯತೆಯಾಗಿದೆ. ಎಲ್ಲರಿಗೂ ಸುರಕ್ಷಿತ ಕುಡಿಯುವ ನೀರು ಸಿಗಬೇಕು. ಜನ ಶಾಂತಿಯುತ ಸಹಬಾಳ್ವೆ ನಡೆಸಬೇಕು. ನೆಮ್ಮದಿಯಿಂದ ಕೂಡಿದ ಜೀವನ ಮಾಡಬೇಕು. ಸಾರ್ವಜನಿಕ ಜೀವನ ಸವಾಲಿನದು. ಅದನ್ನು ಸಮರ್ಥವಾಗಿ ನಡೆಸಿಕೊಂಡು ಹೋಗಬೇಕು ಎಂದು ಹೇಳಿದರು.ಮಧ್ಯಾಹ್ನ 2.30 ಗಂಟೆಗೆ ಸಾವಿರಾರು ಜೆಡಿಎಸ್ ಕಾರ್ಯಕರ್ತರೊಡನೆ ಮೆರವಣಿಗೆಯಲ್ಲಿ ಆಗಮಿಸಿದ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಚುನಾವಣಾ ನಿಯಮದಂತೆ ಕೆಲವೇ ಬೆಂಬಲಿಗರೊಂದಿಗೆ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಜಿ.ಪಂ.ಮಾಜಿ ಅಧ್ಯಕ್ಷ ಎಂ.ಶ್ರೀನಿವಾನ್, ಜಿ.ಪಂ.ಸದಸ್ಯ ಎಸ್.ಬಿ.ಮುನಿವೆಂಕಟಪ್ಪ, ವಕೀಲ ಸದಾಶಿವರೆಡ್ಡಿ, ಮುಖಂಡ ಸಿ.ಎಂ.ಮುನಿಯಪ್ಪ ಇದ್ದರು.ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ, ಮಿನಿ ವಿಧಾನ ಸೌಧದ ಹೊರಗೆ ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದ ಜನ ವೆಂಕಟಶಿವಾರೆಡ್ಡಿ ಪರ ಘೋಷಣೆ ಕೂಗುತ್ತಿದ್ದರು. ರಸ್ತೆಯಲ್ಲಿ ವಾಹನ ಸಂಚಾರ ಸಾಗುವಂತೆ ಮಾಡುವುದು ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ಪೊಲೀಸರಿಗೆ ನೆರವಾಗಲು ಸಿಆರ್‌ಪಿಎಫ್ ಸಿಬ್ಬಂದಿಯನ್ನು ನೇಮಿಸಲಾಗಿತ್ತು.

ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನ ಜೆಡಿಎಸ್ ಆದ್ಯತೆಯಾಗಿದೆ.ಸಮಾಜದ ಎಲ್ಲ ವರ್ಗದ ಜನರ ಕಲ್ಯಾಣ ಪಕ್ಷದ ಗುರಿಯಾಗಿದೆ. ಅಭಿವೃದ್ಧಿಗಾಗಿ ಮತ ನಿಡುವಂತೆ ಮತದಾರರಲ್ಲಿ ಮನವಿ ಮಾಡಲಾಗಿದೆ. ಈ ಬಾರಿ ಮತದಾರರ ಆಶೀರ್ವಾದದಿಂದ ಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಲಿದೆ ಎಂದು ಹೇಳಿದರು.ತಾಲ್ಲೂಕಿನ ಬೇರೆ ಬೇರೆ ಗ್ರಾಮಗಳಿಂದ ಮಾತ್ರವಲ್ಲದೆ, ಸುಗಟೂರು, ಹೋಳೂರು ಹೋಬಳಿಗಳಿಂದ ಆಗಮಿಸಿದ್ದ ಜೆಡಿಎಸ್ ಬೆಂಬಲಿಗರು ಹಾಗೂ ಮುಖಂಡರು ಮೆರವಣಿಗೆಯಲ್ಲಿ ಭಾಗವಹಿದ್ದರು. ಜೆಡಿಎಸ್ ಅಲ್ಪಸಂಖ್ಯಾತ ಸಮುದಾಯದ  ಬೆಂಬಲಿಗರು ಮೆರವಣಿಗೆ ಮುಂಚೂಣಿಯಲ್ಲಿದ್ದರು.

ಪ್ರತಿಕ್ರಿಯಿಸಿ (+)