ಸೋಮವಾರ, ಏಪ್ರಿಲ್ 19, 2021
30 °C

ಜಿಲ್ಲೆಯಲ್ಲಿ ನ.19 ರಿಂದ ಸ್ವಚ್ಛತಾ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಗ್ರಾಮೀಣ ಜನರಲ್ಲಿ ನೈರ್ಮಲ್ಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಜಿಲ್ಲೆಯಾದ್ಯಂತ ನ.19 ರಿಂದ 30ರ ವರೆಗೆ `ಸ್ವಚ್ಛತಾ ಉತ್ಸವ~ ಆಚರಿಸಲಿದ್ದು, ಅಗತ್ಯ ಸಿದ್ಧತೆ ನಡೆಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್. ಸೋಮಶೇಖರಪ್ಪ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ `ಸ್ವಚ್ಛತಾ ಉತ್ಸವ~ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಗ್ರಾಮೀಣ ಭಾಗದಲ್ಲಿ ಆಚರಣೆಯಲ್ಲಿರುವ ಅನೈರ್ಮಲ್ಯ ಅಭ್ಯಾಸಗಳನ್ನು ಹೋಗಲಾಡಿಸಲು ಹಾಗೂ ನಿರ್ಮಲ ಭಾರತ ಅಭಿಯಾನ ಕಾರ್ಯಕ್ರಮ ಯಶಸ್ವಿ ಅನುಷ್ಠಾನಕ್ಕಾಗಿ ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ವಚ್ಛತಾ ಉತ್ಸವ ಆಚರಿಸಲು ಸರ್ಕಾರ ನಿರ್ದೇಶನ ನೀಡಿದೆ. ಸರ್ಕಾರ ಹೊರಡಿಸಿರುವ ಸುತ್ತೋಲೆ ಅನ್ವಯ ಕಾರ್ಯಕ್ರಮದ ರೂಪುರೇಷೆ ತಯಾರಿಸಬೇಕು ನ.19 ರಂದು ವಿಶ್ವ ಶೌಚಾಲಯ ದಿನವೂ ಆಗಿರುವುದರಿಂದ ಅಂದೇ 10 ದಿನಗಳ ನೈರ್ಮಲ್ಯ ಉತ್ಸವಕ್ಕೆ ಚಾಲನೆ ನೀಡಲು ಅಧಿಕಾರಿಗಳು ಸಕಲ ಸಿದ್ಧತೆ ಕೈಗೊಳ್ಳಬೇಕು ಎಂದು ತಿಳಿಸಿದರು.ಆರೋಗ್ಯ ಶಿಬಿರ: ನೈರ್ಮಲ್ಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ಗ್ರಾಮಗಳ ಚಿತ್ರಣ ಹಾಗೂ ಪೂರಕ ಮಾಹಿತಿ ಒದಗಿಸುವ ಸಿ.ಡಿ ಗಳನ್ನು ಗ್ರಾಮ ಪಂಚಾಯಿತಿಗಳಿಗೆ ವಿತರಿಸಲಾಗುವುದು ಮತ್ತು ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಶಿಬಿರ ಏರ್ಪಡಿಸಬೇಕು ಎಂದರು.ಸ್ವಚ್ಛತಾ ಉತ್ಸವದ ಅಂಗವಾಗಿ ಗ್ರಾಮ ಪಂಚಾಯಿತಿ, ಶಾಲೆ, ಅಂಗನವಾಡಿ, ಸರ್ಕಾರಿ ಕಚೇರಿ ಅವರಣಗಳನ್ನು ಶ್ರಮದಾನದ ಮೂಲಕ ಶುಚಿಗೊಳಿಸಬೇಕು. ತಾಲ್ಲೂಕು, ಜಿಲ್ಲಾ ಮಟ್ಟದ ಕಚೇರಿಗಳಲ್ಲೂ ಅಧಿಕಾರಿ, ಸಿಬ್ಬಂದಿ ಶ್ರಮದಾನದಲ್ಲಿ ಪಾಲ್ಗೊಳ್ಳಬೇಕು. ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಬೇಕು ಎಂದರು.ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎ.ಪಿ. ಶಂಕರರಾಜು, ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಸಹಾಯಕ ಯೋಜನಾಧಿಕಾರಿ ಸಿದ್ದಲಿಂಗಸ್ವಾಮಿ, ಜಂಟಿ ಕೃಷಿ ನಿರ್ದೇಶಕ ಚಂದ್ರಶೇಖರ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಎಸ್.ಪ್ರತಿಭಾ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಬಿ. ಆರ್. ಗಿರೀಶ್, ನಿರ್ಮಲ ಭಾರತ್ ಅಭಿಯಾನದ ಜಿಲ್ಲಾ ಸಮಾಲೋಚಕ ಸ್ಯಾಮುಯಲ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಮಹದೇವಸ್ವಾಮಿ, ಶಿವಪ್ರಸಾದ್, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.