ಜಿಲ್ಲೆಯಲ್ಲಿ ಪಶುವೈದ್ಯರ ಹುದ್ದೆ ಖಾಲಿ, ಖಾಲಿ!

ಶುಕ್ರವಾರ, ಜೂಲೈ 19, 2019
28 °C

ಜಿಲ್ಲೆಯಲ್ಲಿ ಪಶುವೈದ್ಯರ ಹುದ್ದೆ ಖಾಲಿ, ಖಾಲಿ!

Published:
Updated:

ಯಾದಗಿರಿ: ಪಶು ಸಂಗೋಪನಾ ಖಾತೆ ಸಚಿವರೇ ಉಸ್ತುವಾರಿ ಹೊತ್ತಿರುವ ಗುಲ್ಬರ್ಗ ಜಿಲ್ಲೆಯಿಂದ ಬೇರ್ಪಟ್ಟು ಹೊಸ ಜಿಲ್ಲೆಯಾಗಿರುವ ಯಾದಗಿರಿಯಲ್ಲಿ, ಪಶು ವೈದ್ಯರ ಕೊರತೆಯೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಜಿಲ್ಲೆಯಾದ್ಯಂತ ಕೇವಲ 10 ಪಶುವೈದ್ಯರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ಪ್ರದೇಶಗಳ ಜಾನುವಾರುಗಳ ಚಿಕಿತ್ಸೆಗೆ ತೀವ್ರ ತೊಂದರೆಯಾಗಿ ಪರಿಣಮಿಸಿದೆ.ಜಿಲ್ಲೆಯ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯಲ್ಲಿ ಪ್ರಮುಖ ಹುದ್ದೆಗಳ ಖಾಲಿ ಉಳಿದಿದ್ದು, ಭರ್ತಿಗೆ ಕ್ರಮ ಕೈಗೊಳ್ಳಬೇಕಾಗಿದೆ. ಜಿಲ್ಲೆಯಾದ ನಂತರ ಇಲಾಖೆಗೆ ಮಂಜೂರಾಗಿದ್ದ 381 ಹುದ್ದೆಗಳಲ್ಲಿ, 228 ಭರ್ತಿಯಾಗಿದ್ದು, ಇನ್ನೂ 153 ಹುದ್ದೆಗಳು ಖಾಲಿ ಉಳಿದಿವೆ.ಇಲಾಖೆಯ ಸಹಾಯಕ ನಿರ್ದೇಶಕರ 6 ಹುದ್ದೆಗಳು ಮಂಜೂರಾಗಿದ್ದರೂ, ಕೇವಲ ಒಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ ಐದು ಹುದ್ದೆಗಳು ಖಾಲಿಯಾಗಿವೆ. ಪಶು ವೈದ್ಯಾಧಿಕಾರಿಗಳ 52 ಹುದ್ದೆಗಳು ಮಂಜೂರಾಗಿದ್ದು, ಕೇವಲ 10 ವೈದ್ಯರು ಕೆಲಸ ಮಾಡುತ್ತಿದ್ದಾರೆ. 42 ವೈದ್ಯರ ಹುದ್ದೆಗಳು ಭರ್ತಿಯಾಗಿಲ್ಲ.ಉಳಿದಂತೆ ಪಶು ವೈದ್ಯಕೀಯ ಪರೀಕ್ಷಕರ 36 ಹುದ್ದೆಗಳಲ್ಲಿ 8 ಖಾಲಿ ಇವೆ. ಪಶು ವೈದ್ಯಕೀಯ ಸಹಾಯಕ 63 ಹುದ್ದೆಗಳಲ್ಲಿ 25 ಮಾತ್ರ ಭರ್ತಿಯಾಗಿವೆ. ಬೆರಳಚ್ಚುಗಾರರ ಒಂದೇ ಹುದ್ದೆ ಇದ್ದು, ಅದೂ ಖಾಲಿ ಉಳಿದಿದೆ. ಡಿ ದರ್ಜೆ ನೌಕರರ 151 ಹುದ್ದೆಗಳಲ್ಲಿ 92 ಭರ್ತಿಯಾಗಿದ್ದು, 59 ಹುದ್ದೆ ಖಾಲಿ ಉಳಿದಿವೆ.ಇನ್ನು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಗೆ ಉಪನಿರ್ದೇಶಕ ಹುದ್ದೆ ಭರ್ತಿಯಾಗಿದ್ದು, ಡಾ. ರಾಮಮೋಹನ ಕಾರ್ಯನಿರ್ವಹಿಸುತ್ತಿದ್ದಾರೆ. ಉಪನಿರ್ದೇಶಕರ ಕಚೇರಿಯಲ್ಲೂ ಸಿಬ್ಬಂದಿಯ ಕೊರತೆ ಕಾಡುತ್ತಿದೆ. ಕಚೇರಿಯಲ್ಲಿ 12 ಹುದ್ದೆಗಳಲ್ಲಿ 9 ಹುದ್ದೆಗಳು ಖಾಲಿ 3 ಜನರು ಮಾತ್ರ ಕೆಲಸ ಮಾಡುತ್ತಿದ್ದಾರೆ.ಕಚೇರಿಯಲ್ಲಿ ಒಂದು ಸಹಾಯಕ ನಿರ್ದೇಶಕರ ಹುದ್ದೆ, ಪಶು ವೈದ್ಯಕೀಯ ಪರೀಕ್ಷಕರ ಒಂದು ಹುದ್ದೆ, ಅಧೀಕ್ಷಕರ ಒಂದು ಹುದ್ದೆ, ಪ್ರಥಮ ದರ್ಜೆ ಸಹಾಯಕರ ಒಂದು ಹುದ್ದೆ, ದ್ವಿತೀಯ ದರ್ಜೆ ಸಹಾಯಕರ ಎರಡು ಹುದ್ದೆ, ಚಾಲಕರ ಎರಡು ಹುದ್ದೆ, ಬೆರಳಚ್ಚುಗಾರರ ಒಂದು ಹುದ್ದೆಗಳು ಖಾಲಿ ಉಳಿದಿವೆ.ಜಾನುವಾರುಗಳ ಚಿಕಿತ್ಸೆಗೆ ತೊಂದರೆ: ಇದೀಗ ಮಳೆಗಾಲ ಆರಂಭವಾಗಿದ್ದು, ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ರೈತರು ಸಜ್ಜಾಗುತ್ತಿದ್ದಾರೆ. ಈ ಹಂತದಲ್ಲಿ ಜಾನುವಾರುಗಳ ಆರೋಗ್ಯ ರಕ್ಷಣೆಗೆ ವಿಶೇಷ ಗಮನ ನೀಡಲಾಗುತ್ತಿದೆ. ಆದರೆ ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕಿರುವ ಪಶು ವೈದ್ಯರ ಹುದ್ದೆಗಳೇ ಹೆಚ್ಚಿನ ಸಂಖ್ಯೆಯಲ್ಲಿ ಖಾಲಿ ಇರುವುದು ತೀವ್ರ ಆತಂಕವನ್ನು ಉಂಟು ಮಾಡಿದೆ.ಜಾನುವಾರುಗಳಿಗೆ ಕಾಲುಬಾಯಿ ರೋಗ ಸೇರಿದಂತೆ ಹಲವಾರು ರೋಗಗಳು ಬರುತ್ತಿದ್ದು, ಇದಕ್ಕಾಗಿ ಹತ್ತಿರದ ಪಶು ಚಿಕಿತ್ಸಾ ಕೇಂದ್ರಗಳಿಗೆ ತೆರಳಬೇಕು. ಆದರೆ ವೈದ್ಯರೇ ಇಲ್ಲದಿರುವುದರಿಂದ ಪಶುವೈದ್ಯಕೀಯ ಪರೀಕ್ಷಕರೇ, ವೈದ್ಯರಾಗಿ ಕೆಲಸ ಮಾಡುವ ಅನಿವಾರ್ಯತೆ ಎದುರಾಗಿದೆ. ಇದರಿಂದಾಗಿ ಬಹುತೇಕ ರೈತರು ಪಶು ಚಿಕಿತ್ಸಾಲಯಗಳಿಗಿಂತ ನಾಟಿ ಔಷಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.ಜೊತೆಗೆ ಆಡಳಿತಾತ್ಮಕ ಕೆಲಸಗಳನ್ನು ಪೂರೈಸಲು ಅಗತ್ಯವಾಗಿರುವ ಸಹಾಯಕ ನಿರ್ದೇಶಕರ ಹುದ್ದೆಗಳೂ ಬಹುತೇಕ ಖಾಲಿ ಉಳಿದಿದ್ದು, ಆಡಳಿತ ಯಂತ್ರಕ್ಕೆ ತೀವ್ರ ಹಿನ್ನಡೆ ಉಂಟಾಗಿದೆ ಎಂದು ಇಲಾಖೆಯ ಅಧಿಕಾರಿಗಳೇ ಹೇಳುತ್ತಿದ್ದಾರೆ.101 ಕೇಂದ್ರಗಳು: ಪಶು ಆಸ್ಪತ್ರೆ, ಪಶು ಚಿಕಿತ್ಸಾಲಯ, ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ, ಸಂಚಾರಿ ಪಶು ಚಿಕಿತ್ಸಾ ಕೇಂದ್ರ, ಕೃತಕ ಗರ್ಭಧಾರಣೆ ಕೇಂದ್ರ, ಕುರಿ ಉಣ್ಣೆ ಅಭಿವೃದ್ಧಿ ಕೇಂದ್ರಗಳು ಸೇರಿದಂತೆ ಜಿಲ್ಲೆಯಲ್ಲಿ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ 101 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.ಜಿಲ್ಲೆಯ 6 ಪಶು ಆಸ್ಪತ್ರೆಗಳು, 45 ಪಶು ಚಿಕಿತ್ಸಾಲಯಗಳು, 37 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು, 3 ಸಂಚಾರಿ ಪಶು ಚಿಕಿತ್ಸಾ ಕೇಂದ್ರಗಳು, 3 ಕೃತಕ ಗರ್ಭಧಾರಣೆ ಕೇಂದ್ರಗಳು ಹಾಗೂ 7 ಕುರಿ ಉಣ್ಣೆ ಅಭಿವೃದ್ಧಿ ಕೇಂದ್ರಗಳಿವೆ.ಇಷ್ಟೆಲ್ಲ ಕೇಂದ್ರಗಳಿದ್ದರೂ, ಸಿಬ್ಬಂದಿಗಳ ಕೊರತೆಯಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಔಷಧಿ, ಉಪಕರಣ ಸೇರಿದಂತೆ ಯಾವುದೇ ಕೊರತೆ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry