ಜಿಲ್ಲೆಯಲ್ಲಿ ಪಿ.ಜಿ ಕೋರ್ಸ್‌ಗಳ ಆರಂಭ

7
ಈ ವರ್ಷದಿಂದಲೇ ಚಾಲನೆ * ಗ್ರಾಮೀಣ ವಿದ್ಯಾರ್ಥಿಗಳಿಗೆ ವರ

ಜಿಲ್ಲೆಯಲ್ಲಿ ಪಿ.ಜಿ ಕೋರ್ಸ್‌ಗಳ ಆರಂಭ

Published:
Updated:

ರಾಮನಗರ: ಜಿಲ್ಲೆಯ ಎರಡು ಪ್ರತಿಷ್ಠಿತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿ (ಪಿ.ಜಿ) ಕೋರ್ಸ್‌ಗಳನ್ನು ಆರಂಭಿಸಲು ಬೆಂಗಳೂರು ವಿಶ್ವವಿದ್ಯಾಲಯ ಕೊನೆಗೂ ಮುಂದಾಗಿದೆ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸು ನನಸಾಗುವ ಕಾಲ ಬಂದಿದೆ.ಜಿಲ್ಲಾ ಕೇಂದ್ರ ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಚನ್ನಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್‌ಗಳು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಆರಂಭವಾಗಲಿವೆ. ರಾಮನಗರದ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರ (ಎಂ.ಕಾಂ) ಹಾಗೂ ರಾಜ್ಯಶಾಸ್ತ್ರ (ಎಂ.ಎ) ಕೋರ್ಸ್‌ಗಳು ಹಾಗೂ ಚನ್ನಪಟ್ಟಣದ ಕಾಲೇಜಿನಲ್ಲಿ ಕನ್ನಡ, ಇತಿಹಾಸ ಹಾಗೂ ಅರ್ಥಶಾಸ್ತ್ರ (ಎಂ.ಎ) ವಿಷಯಗಳ ಸ್ನಾತಕೋತ್ತರ ಪದವಿ ಕೋರ್ಸ್‌ಗಳು ಈ ವರ್ಷದಿಂದ ಪ್ರಾರಂಭವಾಗಲಿವೆ.ಪಿ.ಜಿ ಸೀಟುಗಳಲ್ಲಿ ಹೆಚ್ಚಳ

ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಬೆಂಗಳೂರು ವಿಶ್ವವಿದ್ಯಾಲಯದ ಆರಂಭಿಸಿರುವ ಕೌನ್ಸೆಲಿಂಗ್ ಪ್ರಕ್ರಿಯೆಗೆ ಈ ವರ್ಷದಿಂದ ಜಿಲ್ಲೆಯ ಈ ಎರಡೂ ಕಾಲೇಜುಗಳ ಐದು ಪಿ.ಜಿ ಕೋರ್ಸ್‌ಗಳು ಸೇರ್ಪಡೆಯಾಗಿದ್ದು, ಉನ್ನತ ಶಿಕ್ಷಣ ಪಡೆಯ ಬಯಸುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಸೀಟುಗಳು ಮತ್ತು ಆಯ್ಕೆ ಲಭ್ಯವಾದಂತಾಗಿವೆ.ಈಗಾಗಲೇ ಹಲವಾರು ವಿದ್ಯಾರ್ಥಿಗಳು ಕೌನ್ಸೆಲಿಂಗ್‌ನಲ್ಲಿ ರಾಮನಗರ ಮತ್ತು ಚನ್ನಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಲಭ್ಯ ಇರುವ ಪಿ.ಜಿ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡು, ಪ್ರವೇಶ ಪಡೆದಿದ್ದಾರೆ. ಇದರಿಂದ ಈ ಶೈಕ್ಷಣಿಕ ವರ್ಷದಿಂದಲೇ ತರಗತಿಗಳು ಆರಂಭವಾಗುವುದು ಬಹುತೇಕ ಖಚಿತವಾಗಿದೆ.ಎಂ.ಎ ಕೋರ್ಸ್‌ಗಳಿಗೆ ತಲಾ 20 ಸೀಟು

ಚನ್ನಪಟ್ಟಣ ಕಾಲೇಜಿನ ಕನ್ನಡ, ಇತಿಹಾಸ ಮತ್ತು ಅರ್ಥಶಾಸ್ತ್ರ ಕೋರ್ಸ್‌ಗಳಿಗೆ ತಲಾ 20 ಸೀಟುಗಳನ್ನು ಬೆಂಗಳೂರು ವಿಶ್ವವಿದ್ಯಾಲಯ ನಿಗದಿ ಮಾಡಿದೆ ಎಂದು ಚನ್ನಪಟ್ಟಣ ಸರ್ಕಾರಿ ಪ್ರರ್ಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಲಿಂಗಣ್ಣಯ್ಯ `ಪ್ರಜಾವಾಣಿ'ಗೆ ತಿಳಿಸಿದರು.`ಕಾಲೇಜಿಗೆ ಮೂರು ಪಿ.ಜಿ ಕೋರ್ಸ್‌ಗಳು ಬಂದಿರುವುದು ಸಂತಸ ತಂದಿದೆ. ಪಿ.ಜಿ ತರಗತಿಗಳನ್ನು ಆರಂಭಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ತರಗತಿಗಳನ್ನು ಹೊಂದಾಣಿಕೆ ಮಾಡಲಾಗುತ್ತಿದೆ. ಕಾಲೇಜಿನಲ್ಲಿ ಸುಮಾರು 2200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಇದೀಗ ಸ್ನಾತಕೋತ್ತರ ಕೋರ್ಸ್‌ಗಳು ಆರಂಭವಾಗಲಿರುವ ಕಾರಣ ಸುಮಾರು 4ರಿಂದ 5 ಕೊಠಡಿಗಳನ್ನು ಪಿ.ಜಿ ತರಗತಿಗಳಿಗೆ ಮತ್ತು ಬೋಧಕ ಸಿಬ್ಬಂದಿಗೆ ಮೀಸಲಿಡಬೇಕು. ಪ್ರಸ್ತುತ ಕಾಲೇಜಿನಲ್ಲಿ ಕೊಠಡಿಗಳ ಕೊರತೆ ಇದೆ. ಆದರೆ ಪಿ.ಜಿ ಕೋರ್ಸ್‌ಗಳಿಗೆ ಧಕ್ಕೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕಾಲೇಜಿನ ಬೋಧಕ ವರ್ಗ ಮತ್ತು ವಿದ್ಯಾರ್ಥಿಗಳ ಜತೆ ಮಾತುಕತೆ ನಡೆಸಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತಿದೆ' ಎಂದು `ಪ್ರಜಾವಾಣಿ'ಗೆ ತಿಳಿಸಿದರು.ಎಂ.ಕಾಂಗೆ 45 ಸೀಟು

`ರಾಮನಗರದ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ (ಎಂ.ಕಾಂ) ವಿಷಯಕ್ಕೆ 40 ಹಾಗೂ ರಾಜ್ಯಶಾಸ್ತ್ರ (ಎಂ.ಎ) ಕೋರ್ಸ್‌ಗೆ 25 ಸೀಟುಗಳನ್ನು ಬೆಂಗಳೂರು ವಿಶ್ವವಿದ್ಯಾಲಯ ನಿಗದಿ ಮಾಡಿದೆ. ನಮ್ಮ ಕಾಲೇಜಿನಲ್ಲೂ ಕೊಠಡಿಗಳ ಕೊರತೆ ಇದೆ, ಆದರೆ ಪಿ.ಜಿ ಕೋರ್ಸ್‌ಗಳಿಗೆ ಆಗದಂತೆ ಕೊಠಡಿ ವ್ಯವಸ್ಥೆ ಮಾಡಲಾಗುತ್ತಿದೆ' ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಕುಮಾರ್ ಪ್ರತಿಕ್ರಿಯಿಸಿದರುಎರಡೂ ಕಾಲೇಜುಗಳಲ್ಲಿ ಪದವಿ ತರಗತಿಗಳನ್ನು ಬೋಧಿಸುತ್ತಿರುವ ಆಯಾ ವಿಷಯಗಳ ಬೋಧಕರೇ ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೂ ಪಾಠ ಪ್ರವಚನ ಕೈಗೊಳ್ಳುವರು. ಪಿ.ಜಿ ಕೋರ್ಸ್‌ಗಳಿಗೆ ಆಯಾ ವಿಭಾಗಗಳಲ್ಲಿ ಒಬ್ಬರನ್ನು ಸಂಯೋಜಕರನ್ನು ನಿಯೋಜಿಸಿ, ಅವರ ಮೂಲಕ ನಿರ್ದಿಷ್ಟ ಬೋಧಕ ಸಿಬ್ಬಂದಿಯನ್ನು ಪಿ.ಜಿ ಕೋರ್ಸ್‌ಗಳಿಗೆ ನಿಯೋಜಿಸಲಾಗುವುದು. ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ಬೇಕಾಗುವ ಹೆಚ್ಚುವರಿ ಉಪನ್ಯಾಸಕರನ್ನು ಅತಿಥಿ ಉಪನ್ಯಾಸಕರನ್ನಾಗಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಕಾಲೇಜಿನ ಹಿರಿಯ ಪ್ರಾಧ್ಯಾಪಕರೊಬ್ಬರು ತಿಳಿಸಿದರು.ಎರಡು ವರ್ಷದ ಹಿಂದೆಯೇ ಆದೇಶ

ಈ ಎರಡೂ ಕಾಲೇಜುಗಳಲ್ಲಿ ಐದು ಪಿ.ಜಿ ಕೋರ್ಸ್‌ಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಎರಡು ವರ್ಷದ ಹಿಂದೆಯೇ ಆದೇಶ ಹೊರಡಿಸಿತ್ತು. ಆದರೆ ಇವುಗಳ ಆರಂಭಕ್ಕೆ ಅಗತ್ಯವಾದ ಕಾಲೇಜುಗಳಲ್ಲಿನ ಕೊಠಡಿ, ಬೋಧಕ ಸಿಬ್ಬಂದಿ ಸೇರಿದಂತೆ ಮೂಲ ಸೌಕರ್ಯದ ಸಮಸ್ಯೆ ಪ್ರಮುಖವಾಗಿತ್ತು. ವಿಶ್ವವಿದ್ಯಾಲಯದ ಸ್ಥಳೀಯ ತಪಾಸಣಾ ಸಮಿತಿ (ಎಲ್‌ಐಸಿ) ಕೂಡ ಇಂತಹ ಸಮಸ್ಯೆಗಳನ್ನು ಪ್ರಮುಖವಾಗಿ ವರದಿಯಲ್ಲಿ ಉಲ್ಲೇಖಿಸಿತ್ತು. ಇದೆಲ್ಲದರ ಪರಿಣಾಮ ಸರ್ಕಾರಿ ಆದೇಶವಾಗಿ ಎರಡು ವರ್ಷವಾದರೂ ಪಿ.ಜಿ ಕೋರ್ಸ್‌ಗಳು ಮಾತ್ರ ಆರಂಭವಾಗಿರಲಿಲ್ಲ.ವರದಾನ

ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ಭಾಗದಿಂದ ಉನ್ನತ ವ್ಯಾಸಂಗ ಬಯಸಿ ಬೆಂಗಳೂರಿಗೆ ಹೋಗುವ ಇಲ್ಲಿನ ಗ್ರಾಮೀಣ ವಿದ್ಯಾರ್ಥಿಗಳಿಗೆ ಇಲ್ಲಿಯೇ ಪಿ.ಜಿ ಕೋರ್ಸ್‌ಗಳು ಆರಂಭವಾಗಿರುವುದು ವರದಾನವಾಗಿ ಪರಿಣಮಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry