ಮಂಗಳವಾರ, ಜನವರಿ 28, 2020
22 °C
ಪ್ರವಾಸಿಗರನ್ನು ಸೆಳೆಯುವಲ್ಲಿ ವಿಫಲ; ಅಭಿವೃದ್ಧಿಗೆ ವಿಪುಲ ಅವಕಾಶ

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ನನೆಗುದಿಗೆ

ಪ್ರಜಾವಾಣಿ ವಾರ್ತೆ / ಎಂ.ಮಹೇಶ Updated:

ಅಕ್ಷರ ಗಾತ್ರ : | |

ದಾವಣಗೆರೆ: ಜಿಲ್ಲೆಯಲ್ಲಿ ಅಲ್ಲಲ್ಲಿ ಬಹಳಷ್ಟು ಪ್ರವಾಸಿ ತಾಣಗಳಿವೆ. ಆದರೆ, ಅವುಗಳ ಕಡೆಗೆ ಪ್ರವಾಸಿಗರನ್ನು ಸೆಳೆಯುವಲ್ಲಿ, ಸಮರ್ಪಕವಾಗಿ ಅಭಿವೃದ್ಧಿಪಡಿಸುವಲ್ಲಿ ಹಾಗೂ ಪ್ರಚಾರ ನೀಡುವಲ್ಲಿ ಜಿಲ್ಲಾಡಳಿತ ಗಮನಹರಿಸುತ್ತಿಲ್ಲ. ಇದರಿಂದ ‘ಪ್ರವಾಸೋದ್ಯಮ ಅಭಿವೃದ್ಧಿ’ ಎಂಬ ಸಂಗತಿ ನನೆಗುದಿಗೆ ಬಿದ್ದಿದೆ.ಹಿಂದಿನ ಸರ್ಕಾರ ರಾಜ್ಯಾದ್ಯಂತ ಪ್ರವಾಸೋದ್ಯಮ ಅಭಿವೃದ್ಧಿಗೋಸ್ಕರ ಮಾಸ್ಟರ್‌ ಪ್ಲಾನ್‌ ರೂಪಿಸಲು ನಿರ್ಧರಿಸಿತ್ತು. ಅದರಂತೆ, ಕಳೆದ ವರ್ಷ ಪ್ರವಾಸೋದ್ಯಮ ಇಲಾಖೆ ನೇಮಿಸಿದ್ದ ಏಜೆನ್ಸಿಯೊಂದಕ್ಕೆ ಈ ಜವಾಬ್ದಾರಿ ವಹಿಸಲಾಗಿತ್ತು. ಕ್ರಿಯಾಯೋಜನೆ ಸಿದ್ಧಗೊಂಡ ನಂತರ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮೂಲಕ ಅಗತ್ಯ ಅನುದಾನ ಪಡೆಯಬಹುದು ಎಂಬುದು ಯೋಜನೆಯ ಉದ್ದೇಶವಾಗಿತ್ತು.ಈ ಹಿನ್ನೆಲೆಯಲ್ಲಿ ಅಂದಿನ ಜಿಲ್ಲಾಧಿಕಾರಿ ಎಸ್‌.ಎಸ್.ಪಟ್ಟಣಶೆಟ್ಟಿ ಹಾಗೂ ಇತರ ಇಲಾಖೆಗಳ ಅಧಿಕಾರಿಗಳೊಂದಿಗೆ ಸಂಸತ್‌ ಸದಸ್ಯ ಜಿ.ಎಂ.ಸಿದ್ದೇಶ್ವರ ‘ಪ್ರವಾಸೋದ್ಯಮ ಅಭಿವೃದ್ಧಿಗೆ ಪಾಲುದಾರರ ಪಾತ್ರ’ ಕುರಿತು ಸಭೆ ನಡೆಸಿದ್ದರು. ಅಂದು, ಜಿಲ್ಲೆಯ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗೆ ಸಮರ್ಪಕ `ಮಾಸ್ಟರ್ ಪ್ಲಾನ್' ಸಿದ್ಧಪಡಿಸಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರೆ, ಪರಿಷ್ಕೃತ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆಯೇ ಇಲ್ಲವೇ ಎಂಬ ಮಾಹಿತಿ ದೊರೆಯುತ್ತಿಲ್ಲ. ‘ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಹಳೆಯ ಯೋಜನೆಯ ಕಥೆ ಮುಗಿದಿದೆ’ ಎನ್ನಲಾಗುತ್ತಿದೆ.ಆ ಯೋಜನೆಯಲ್ಲೇನಿತ್ತು?: ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ, ನಗರದಲ್ಲಿರುವ ಬಸ್ ನಿಲ್ದಾಣವನ್ನು ಬೇರೆಡೆಗೆ ವಿಶಾಲ ಜಾಗಕ್ಕೆ ಸ್ಥಳಾಂತರಿಸಬೇಕು. ಪ್ರಮುಖವಾಗಿ ಮುಖ್ಯ ರಸ್ತೆಗಳ ವಿಸ್ತರಣೆ ನಡೆಯಬೇಕು. ಈ ನಿಟ್ಟಿನಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಿ ಸಲ್ಲಿಸಿದರೆ, ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಅನುದಾನ ತರಲು ಅನುಕೂಲ ಆಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆ ನೇಮಿಸಿರುವ ಏಜೆನ್ಸಿಗೆ ಸೂಚಿಸಲಾಗಿತ್ತು.ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಇರುವ ಅವಕಾಶಗಳ ಬಗ್ಗೆ ಕ್ರಿಯಾಯೋಜನೆ ಸಿದ್ಧಪಡಿಸಲಾಗಿತ್ತು. ಜಿಲ್ಲೆಯ ಸೂಳೆಕೆರೆ, ಹರಿಹರೇಶ್ವರ ದೇವಸ್ಥಾನ, ಕುಂದುವಾಡ ಕೆರೆ, ಉಚ್ಚಂಗಿದುರ್ಗ, ಸಂತೇಬೆನ್ನೂರು ಪುಷ್ಕರಿಣಿ, ತೀರ್ಥರಾಮೇಶ್ವರ ಕ್ಷೇತ್ರ, ಆನೆಕೊಂಡ- ಈ ಪ್ರವಾಸಿ ತಾಣಗಳನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕು.

ಜಿಲ್ಲೆಯಲ್ಲಿ ₨ 14.16 ಕೋಟಿ ವೆಚ್ಚದಲ್ಲಿ ವಿವಿಧ ಯೋಜನೆಗಳು ಪ್ರಗತಿಯಲ್ಲಿವೆ. ಸೂಳೆಕೆರೆ ಹಾಗೂ ಕುಂದವಾಡ ಕೆರೆಯಲ್ಲಿ ಜಲಕ್ರೀಡೆಗಳು, ‘ಪರಿಸರ ಕ್ಯಾಂಪ್‌’ಗಳನ್ನು ಮಾಡಿ ಪ್ರವಾಸಿಗರನ್ನು ಸೆಳೆಯಲು ಬಹಳಷ್ಟು ಅವಕಾಶವಿದೆ. `ಪರಿಸರ ಪ್ರವಾಸೋದ್ಯಮ' (ಇಕೋ ಟೂರಿಸಂ)ಕ್ಕೂ ಬಹಳ ಅವಕಾಶಗಳಿವೆ ಎಂದು ಕ್ರಿಯಾಯೋಜನೆಯ ಸಾರಾಂಶವಾಗಿತ್ತು.ನಿರ್ವಹಣೆ, ಮಾಹಿತಿ ಕೊರತೆ: ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ, ಸಮರ್ಪಕ ನಿರ್ವಹಣೆ ಕಂಡುಬರುತ್ತಿಲ್ಲ. ಹೇಗೆ ಹೋಗಬೇಕು? ಏನೇನು ಸೌಲಭ್ಯಗಳಿವೆ ಎಂಬ ಮಾಹಿತಿ ಇಲ್ಲ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ನಗರದಲ್ಲಿ ಅಲ್ಲಲ್ಲಿ ಮಾಹಿತಿ ಕೇಂದ್ರ ತೆರೆಯಬೇಕು. ಈ ತಾಣಗಳಲ್ಲಿ ಮೂಲಸೌಕರ್ಯ ವೃದ್ಧಿಸಬೇಕು ಎಂಬುದು ಒಳಗೊಂಡಂತೆ, ‘ಕರಡು ಮಾಸ್ಟರ್ ಪ್ಲಾನ್’ ಸಿದ್ಧಪಡಿಸಿ ಇಲಾಖೆಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿತ್ತು.‘ಸೂಳೆಕರೆ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ₨ 6.15 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಮಾಸ್ಟರ್ ಪ್ಲಾನ್‌ನಲ್ಲಿ, ಹೊದಿಗೆರೆಯ ಷಹಾಜಿ ಸಮಾಧಿ, ಕೊಂಡಜ್ಜಿ ಕೆರೆ, ಬಾತಿ ಕೆರೆ, ಆನಗೋಡು ಇಂದಿರಾಗಾಂಧಿ ಪ್ರಿಯದರ್ಶಿನಿ ಕಿರು ಪ್ರಾಣಿ ಸಂಗ್ರಹಾಲಯ, ಬಾಗಳಿ, ಚನ್ನಗಿರಿ ಕೋಟೆ, ಉಕ್ಕಡಗಾತ್ರಿ, ಜಗಳೂರು ಕೆರೆ ಅಭಿವೃದ್ಧಿ ವಿಷಯವನ್ನೂ ಯೋಜನೆಯಲ್ಲಿ ಸೇರಿಸಬೇಕು. ನಗರದಲ್ಲಿ ಮಕ್ಕಳ ಆಟಿಕೆ ರೈಲು ಯೋಜನೆ ಸಿದ್ಧಪಡಿಸಬೇಕು. ಕಾರ್ಯಕ್ರಮ ಅನುಷ್ಠಾನಕ್ಕೆ ಎಷ್ಟು ವೆಚ್ಚವಾಗುತ್ತದೆ ಎಂಬ ಅಂದಾಜು ಪಟ್ಟಿ ಸಿದ್ಧಪಡಿಸಿ ಸಭೆ ಕರೆಯಬೇಕು’ ಎಂದು ಸೂಚಿಸಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆಗೆ ಅಧಿಕಾರಿಗಳು ಲಭ್ಯವಾಗಲಿಲ್ಲ.

ಸೂಳೆಕೆರೆಯಲ್ಲಿ ಒಂದಷ್ಟು ಕೆಲಸ...

ಚನ್ನಗಿರಿ ತಾಲ್ಲೂಕಿನಲ್ಲಿರುವ ವಿಶ್ವದ ಅತಿ ದೊಡ್ಡ ಕೆರೆಗಳಲ್ಲಿ ಒಂದಾಗಿರುವ ಸೂಳೆಕೆರೆ (ಶಾಂತಿಸಾಗರ)ಯನ್ನು ಅಭಿವೃದ್ಧಿಪಡಿಸಲು ಗಮನಹರಿಸಲಾಗಿದೆ.  ಕೇಂದ್ರ ಪ್ರವಾಸೋದ್ಯಮ ಇಲಾಖೆ ವತಿಯಿಂದ ಕೆಲ ಕಾಮಗಾರಿಗಳು ನಡೆದಿವೆ. ಅಲ್ಲಿ ಸುಸಜ್ಜಿತ ದೋಣಿ ವಿಹಾರ ಕೇಂದ್ರವಿದೆ. ಆದರೆ, ಬೋಟಿಂಗ್‌ ಸೌಲಭ್ಯ ಕಲ್ಪಿಸಬೇಕಿದೆ.ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ವತಿಯಿಂದ ಕೈಗೊಂಡಿರುವ ಪಾದಚಾರಿ ಮಾರ್ಗ, ವಾಹನ ನಿಲುಗಡೆ ಸ್ಥಳ, ಶೌಚಾಲಯ ಮೊದಲಾದ ಕಾಮಗಾರಿಗಳನ್ನು ನಡೆಸಲಾಗಿದೆ. ಸೂಳೆಕೆರೆ ವೀಕ್ಷಣೆಗೆ ಬರುವ ಪ್ರವಾಸಿಗರ ಅನುಕೂಲಕ್ಕೆಂದು ಯಾತ್ರಿ ನಿವಾಸ ನಿರ್ಮಿಸಲಾಗಿದೆ. ಅದೂ ಕೂಡ ನಿರ್ವಹಣೆ ಇಲ್ಲದೇ ಸೊರಗಿದೆ. ಹೀಗಾಗಿ, ಯಾತ್ರಿ ನಿವಾಸದ ಬಳಿ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಿದೆ.ಇದಕ್ಕಾಗಿ, ತಮ್ಮ ನಿಧಿಯಿಂದ ₨ 5 ಲಕ್ಷ ನೀಡಲಾಗುವುದು ಎಂದು ಈಚೆಗೆ ಅಲ್ಲಿಗೆ ಭೇಟಿ ನೀಡಿದ್ದ ಸಂಸತ್‌ ಸದಸ್ಯ ಜಿ.ಎಂ.ಸಿದ್ದೇಶ್ವರ ತಿಳಿಸಿದ್ದಾರೆ. ಸೂಕ್ತ ನಿರ್ವಹಣೆ ಮಾಡುವವರಿಗೆ ಮಾತ್ರ ಯಾತ್ರಿನಿವಾಸ ನಿರ್ವಹಣೆ ಕಾರ್ಯ ವಹಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗುವುದು ಎಂದು ಹೇಳಿದ್ದಾರೆ.

ಹೊಸ ಜಿಲ್ಲಾಧಿಕಾರಿ ಗಮನಹರಿಸುವರೇ?

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಈ ಸಭೆ ನಡೆದಿತ್ತು. ಆದರೆ, ಈವರೆಗೂ ಈ ನಿಟ್ಟಿನಲ್ಲಿ ಕೆಲಸ ನಡೆದಿಲ್ಲ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಯೋಜನೆಗಳನ್ನು ಕೈಗೊಳ್ಳುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ನಗರವನ್ನು ‘ಸ್ವಚ್ಛ ಸುಂದರ ಹಾಗೂ ಯೋಜಿತ ನಗರ’ವನ್ನಾಗಿ ರೂಪಿಸಲಾಗುವುದು ಎಂಬ ಮಾತುಗಳನ್ನಾಡುತ್ತಿರುವ ಜಿಲ್ಲಾಧಿಕಾರಿ ಎಸ್‌.ಟಿ.ಅಂಜನಕುಮಾರ್‌ ಅವರು ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಯತ್ತಲೂ ಗಮನಹರಿಸಬೇಕಿದೆ.

ಉಚ್ಚಂಗಿದುರ್ಗಕ್ಕೆ ‘ಮಾನ್ಯತೆ’

ಜಿಲ್ಲೆಯ ಉಚ್ಚಂಗಿದುರ್ಗವನ್ನು
ಹೊಸದಾಗಿ ಪ್ರವಾಸಿ ತಾಣಗಳ ಪಟ್ಟಿಗೆ ಸೇರಿಸಲಾಗಿದೆ ಎಂದು ಈಚೆಗೆ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರ ಘೋಷಿಸಿದೆ. ಪ್ರವಾಸಿಗರನ್ನು ಆ ಸ್ಥಳದತ್ತ ಸೆಳೆಯಲು ಆಕರ್ಷದ ಯೋಜನೆಯನ್ನು ಹಾಕಿಕೊಳ್ಳಬೇಕಿದೆ ಎಂಬ ಒತ್ತಾಯ ಕೇಳಿಬರುತ್ತಿದೆ.ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಹಲವು ತಿಂಗಳುಗಳೇ ಕಳೆದಿವೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಶಿವಶಂಕರಪ್ಪ ಅವರು ಈವರೆಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿದ ವರದಿಯಾಗಿಲ್ಲ!

ಪ್ರತಿಕ್ರಿಯಿಸಿ (+)