ಗುರುವಾರ , ಮೇ 26, 2022
30 °C

ಜಿಲ್ಲೆಯಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಪೆಟ್ರೋಲ್ ದರ ಏರಿಕೆ ವಿರೋಧಿಸಿ ಗುರುವಾರ ನಡೆದ `ಭಾರತ್ ಬಂದ್~ಗೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.ಜಿಲ್ಲಾದ್ಯಂತ ದೈನಂದಿನ ವ್ಯಾಪಾರ-ವಹಿವಾಟು ಸಂಪೂರ್ಣ ಸ್ಥಗಿತಗೊಂಡಿತ್ತು. ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸ್ಥಗಿತಗೊಂಡಿತ್ತು. ನಗರ ಬಸ್ ಸಂಚಾರ ಬೆಳಿಗ್ಗೆ ಕೆಲ ಹೊತ್ತಿನವರೆಗೆ ಮಾತ್ರ ಕಾರ್ಯನಿರ್ವಹಿಸಿತು.ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳಾದ ಗಾಂಧಿಬಜಾರ್, ಬಿ.ಎಚ್. ರಸ್ತೆ, ನೆಹರು ರಸ್ತೆ ಮತ್ತು ಸರ್‌ಎಂವಿ ರಸ್ತೆಯಲ್ಲಿನ ವ್ಯಾಪಾರ ಮಳಿಗೆಗಳು ಬಾಗಿಲು ಹಾಕಿದ್ದವು. ಬ್ಯಾಂಕ್‌ಗಳು ಬಾಗಿಲು ತೆರೆದವಾದರೂ ಬಿಜೆಪಿ ಕಾರ್ಯಕರ್ತರು ಬಂದು ಪ್ರತಿಭಟನೆ ನಡೆಸಿದ ಪರಿಣಾಮ ಕೆಲ ಹೊತ್ತಿನಲ್ಲಿ ಬಾಗಿಲು ಮುಚ್ಚಬೇಕಾಯಿತು.ಚಲನಚಿತ್ರ ಮಂದಿರ, ಹೋಟೆಲ್, ಪೆಟ್ರೋಲ್ ಬಂಕ್ ಮುಚ್ಚಿದ್ದವು. ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣಗಳಲ್ಲಿ ಜನ, ಬಸ್‌ಗಾಗಿ ಕಾಯುತ್ತಿದ್ದ ದೃಶ್ಯ ಕಂಡುಬಂತು. ಹೊರ ಊರುಗಳಿಗೆ ಹೋಗಬೇಕಾದವರು ಅಕ್ಷರಶಃ ಪರದಾಡಿದರು. ಆಟೋಗಳು ವಿರಳ ಸಂಖ್ಯೆಯಲ್ಲಿ ರಸ್ತೆಗೆ ಇಳಿದಿದ್ದವು. ಜನ ಸಂಚಾರ, ವಾಹನ ಚಾಲಕರು ಎಂದಿನಂತೆ ಓಡಾಟ ನಡೆಸಿದರು.ಅಲ್ಲಲ್ಲಿ ತೆರೆದಿದ್ದ ಒಂದರೆಡು ಅಂಗಡಿ-ಮುಂಗಟ್ಟುಗಳನ್ನು ಬಿಜೆಪಿ ಕಾರ್ಯಕರ್ತರು ಬಲವಂತಾಗಿ  ಮುಚ್ಚಿಸಿದರು. ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಆದರೆ, ನೌಕರರ ಸಂಖ್ಯೆ ವಿರಳವಾಗಿತ್ತು. ಸಾರ್ವಜನಿಕರ ಭೇಟಿಯೂ ಕಡಿಮೆ ಇತ್ತು.ಭದ್ರಾವತಿ ವರದಿ

ಕೇಂದ್ರ ಯುಪಿಎ ಸರ್ಕಾರದ ಪೆಟ್ರೋಲ್ ದರ ಏರಿಕೆಯನ್ನು ಖಂಡಿಸಿ ಎನ್‌ಡಿಎ ಮಿತ್ರಕೂಟ ಕರೆದಿದ್ದ ಭಾರತ್ ಬಂದ್‌ಗೆ ಗುರುವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.ಗ್ರಾಮಾಂತರ ಹಾಗೂ ನಗರ ಸಾರಿಗೆ ವ್ಯವಸ್ಥೆ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತ ಮಾಡಿದ್ದ ಹಿನ್ನೆಲೆಯಲ್ಲಿ ನಗರದ ಮುಖ್ಯರಸ್ತೆಗಳಲ್ಲಿ ವಾಹನ ಹಾಗೂ ಜನಸಂಚಾರ ದಟ್ಟಣೆ ವಿರಳವಾಗಿತ್ತು.ಹೊರ ಊರುಗಳಿಂದ ಬಂದ ಬಸ್‌ಗಳು ಬೈಪಾಸ್ ರಸ್ತೆ ಮೂಲಕ ಸಂಚಾರ ನಡೆಸಿದ್ದ ಪರಿಣಾಮ ಪ್ರಯಾಣಿಕರು ತಾವು ತಲುಪಬೇಕಾದ ಸ್ಥಳಕ್ಕೆ ಬಹಳಷ್ಟು ತೊಂದರೆ ಎದುರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಬೆಳಿಗ್ಗೆ ಶಿವಮೊಗ್ಗ-ಭದ್ರಾವತಿ ಸಾರಿಗೆ ವ್ಯವಸ್ಥೆ 9 ಗಂಟೆ ತನಕ ನಿರಾತಂಕವಾಗಿ ಸಾಗಿದ್ದರೂ ಸಹ ನಂತರ ಬಂದ್ ಬಿಸಿ ಹೆಚ್ಚಾದ ಹಿನ್ನೆಲೆಯಲ್ಲಿ ಸಂಚಾರ ಸ್ಥಗಿತ ಮಾಡಲಾಗಿತ್ತು.ನಗರದ ಚಿತ್ರಮಂದಿರ, ವಾಣಿಜ್ಯ ಸಂಸ್ಥೆಗಳು, ಆಟೋ, ಟ್ಯಾಕ್ಸ್ ಚಾಲಕರು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದ ಕಾರಣ ಸಂಚಾರ ದಟ್ಟಣೆ ಸ್ಥಗಿತವಾಗಿತ್ತು. ಬಿಜೆಪಿ ಕಾರ್ಯಕರ್ತರು ದ್ವಿಚಕ್ರ ವಾಹನದಲ್ಲಿ ಸಂಚರಿಸಿ, ಗಲ್ಲಿಗಳಲ್ಲಿ ತೆರೆದಿದ್ದ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿಸುತ್ತಿದ್ದ ದೃಶ್ಯ ಕಂಡುಬಂತು.ಶಾಲಾ, ಕಾಲೇಜುಗಳಿಗೆ ಬಂದ್ ಹಿನ್ನೆಲೆಯಲ್ಲಿ ಬುಧವಾರವೇ ರಜೆ ಘೋಷಣೆ ಮಾಡಲಾಗಿತ್ತು. ಸ್ಥಳೀಯ ವಕೀಲರು ಬಂದ್ ಕರೆಗೆ ಬೆಂಬಲ ಸೂಚಿಸಿ ಕಲಾಪದಿಂದ ಹೊರಗುಳಿದಿದ್ದರು.ಯಾವುದೇ, ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿದ್ದ ಪೊಲೀಸ್ ಇಲಾಖೆ ಆಯಾಕಟ್ಟಿನ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿತ್ತು.ಹೊಸನಗರ ವರದಿ

ತಾಲ್ಲೂಕಿನಾದ್ಯಂತ ಬಂದ್ ಸಂಪೂರ್ಣ ಯಶಸ್ವಿಯಾಯಿತು.

ಅಂಗಡಿ ಮುಂಗಟ್ಟು, ಹೋಟೆಲ್, ಶಾಲಾ-ಕಾಲೇಜು, ಆಟೋ, ಖಾಸಗಿ ಬಸ್ ಸಂಚಾರ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿ, ನ್ಯಾಯಾಲಯ, ಬ್ಯಾಂಕ್‌ಗಳು ತೆರೆದಿದ್ದರೂ ಜನರಿಲ್ಲದೇ ಬಣ ಬಣ ಎನ್ನುತ್ತಿತ್ತು.ಪ್ರತಿಭಟನಾ ಸಭೆ: ಬೆರಳೆಣಿಕೆಯ ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ನಂತರ ತಹಶೀಲ್ದಾರ್‌ಗೆ ಕೇಂದ್ರ ಸರ್ಕಾರದ ಪೆಟ್ರೋಲ್ ಬೆಲೆ ಏರಿಕೆ ನೀತಿಯನ್ನು ಖಂಡಿಸಿದ ಮನವಿ ಸಲ್ಲಿಸಿದರು.ಶಿವಮೊಗ್ಗಕ್ಕೆ ್ಙ 200!: ್ಙ 50 ಬಸ್ ದರ ಇರುವ ಹೊಸನಗರದಿಂದ ಶಿವಮೊಗ್ಗ- ಸಾಗರಕ್ಕೆ ಬಂದ್ ಪ್ರಯುಕ್ತ ನಾಲ್ಕುಪಟ್ಟು ್ಙ 200 ತೆತ್ತು ಆಟೋ, ಖಾಸಗಿ ವಾಹನಗಳಲ್ಲಿ ತೆರಳಿದ ಘಟನೆ ವರದಿಯಾಗಿದೆ. ಶಿರಾಳಕೊಪ್ಪ ವರದಿ

ಕೇಂದ್ರ ಸರ್ಕಾರ ಏಕಾಏಕಿ ಪೆಟ್ರೋಲ್ ದರ ಹೆಚ್ಚಿಸಿದ ಕ್ರಮ ವಿರೋಧಿಸಿ ಬಿಜೆಪಿ ಹಾಗೂ ಎಡಪಕ್ಷಗಳು ಗುರುವಾರ  ಕರೆ ನೀಡಿದ್ದ `ಭಾರತ ಬಂದ್~ಗೆ ಶಿರಾಳಕೊಪ್ಪ ಪಟ್ಟದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಾರ್ವಜನಿಕರು ಎಂದಿನಂತೆ ತಮ್ಮ ಕೆಲಸ ಕಾರ್ಯಗಳಿಗೆ ತೆರಳಿದ್ದು, ಸಾಮಾನ್ಯ ಆಗಿತ್ತು. ಪ್ರತಿನಿತ್ಯದಂತೆ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಬಸ್ ಸಂಚಾರ ರದ್ದು ಮಾಡಿದ್ದರಿಂದ ಪ್ರಯಾಣಿಕರ ಸಂಖ್ಯೆ ವಿರಳವಾಗಿ ಕಂಡುಬಂತು. ಮುಂಜಾಗ್ರತಾ ಕ್ರಮವಾಗಿ ಪೋಲಿಸರು ಬಿಗಿಬಂದೋಬಸ್ತ್ ಏರ್ಪಡಿಸಿದ್ದರು.ಕಾರ್ಗಲ್ ವರದಿ

ಬಂದ್ ಕರೆಗೆ ಜೋಗ ಕಾರ್ಗಲ್ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತು ಸಂಪೂರ್ಣ ಯಶಸ್ವಿಯಾಗಿ ನಡೆಯಿತು. ಇಲ್ಲಿನ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬೆಳೆಗ್ಗೆಯಿಂದಲೇ ಮುಚ್ಚಿ ಬೆಂಬಲ ಸೂಚಿಸಿದರು.ಬ್ಯಾಂಕ್, ಅಂಚೆ ಕಚೇರಿ, ಔಷಧಿ ಅಂಗಡಿ ಹೊರತುಪಡಿಸಿ, ಉಳಿದಂತೆ ವ್ಯಾಪಾರ ವಹಿವಾಟುಗಳು ಸಂಪೂರ್ಣ ಸ್ಥಗಿತಗೊಂಡಿತ್ತು. ಬಸ್‌ಸಂಚಾರ ಇಲ್ಲದ ಹಿನ್ನೆಲೆಯಲ್ಲಿ ಇಲ್ಲಿನ ಜನನಿಬಿಡ ಪ್ರದೇಶವಾದ ಪೇಟೆಯಲ್ಲಿ ಜನರ ಓಡಾಟವೇ ಇರಲಿಲ್ಲ. ಶಾಲಾ-ಕಾಲೇಜುಗಳಿಗೆ ಬಂದ್ ಹಿನ್ನೆಲೆಯಲ್ಲಿ ರಜಾ ಘೋಷಣೆ ಮಾಡಿದ್ದರು.

ಇಲ್ಲಿನ ಬಿಜೆಪಿ ಶಕ್ತಿ ಕೇಂದ್ರ ಘಟಕದ ಪ್ರಮುಖರಾದ ಕೆ.ಎನ್. ಕೃಷ್ಣಮೂರ್ತಿ ನೇತೃತ್ವದಲ್ಲಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಮೂಲಕ ಕೇಂದ್ರ ಸರ್ಕಾರ ಪೆಟ್ರೋಲ್ ದರ ಏರಿಕೆ ಹಿಂಪಡೆಯುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.ಪ್ರಮುಖರಾದ ಮಹಿಳಾ ಘಟಕದ ಲಕ್ಷ್ಮೀರಾಜು, ಎಚ್.ಎಸ್. ಸಾಧಿಕ್, ಜಾನ್ ಲಿಂಗನಮಕ್ಕಿ, ಪಿ. ರಾಮು, ಶ್ರೀನಾಥ್, ಸುಬ್ರಾವ್ ಇನ್ನಿತರರು ಇದ್ದರು.ಸೊರಬ ವರದಿ

ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಗುರುವಾರ ಕರೆದಿದ್ದ ಭಾರತ್ ಬಂದ್‌ಗೆ ತಾಲ್ಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಸೊರಬ, ಆನವಟ್ಟಿ, ಉಳವಿ ಹೋಬಳಿಗಳಲ್ಲಿ ಭಾಗಶಃ ಯಶಸ್ವಿಯಾದರೆ, ಜಡೆ ಹೋಬಳಿಯಲ್ಲಿ ಬೆಳಿಗ್ಗೆಯಿಂದಲೇ ಬಂದ್‌ಗೆ ಉತ್ತಮ ಬೆಂಬಲ ವ್ಯಕ್ತವಾಯಿತು. ಚಂದ್ರಗುತ್ತಿ ಹೋಬಳಿಯಲ್ಲಿ ಮಾತ್ರ ಯಾವುದೇ ಪ್ರತಿಕ್ರಿಯೆ ಇಲ್ಲದೇ ನೀರಸ ವಾತಾವರಣ ಉಂಟಾಗಿತ್ತು

ಹೊಳೆಹೊನ್ನೂರು ವರದಿ

ಪೆಟ್ರೋಲ್ ದರ ಏರಿಸಿರುವುದನ್ನು ವಿರೋಧಿಸಿ ರಸ್ತೆತಡೆ ನಡೆಸಲಾಯಿತು.

ಪ್ರತಿಭಟನೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಹಾಲಸ್ವಾಮಿ, ಕಾರ್ಯದರ್ಶಿ ರುದ್ರೇಶ್, ಮಾಧ್ಯಮ ಪ್ರಮುಖ ರಾಮಕೃಷ್ಣ ಮೇಸ್ತ, ಜಿಲ್ಲಾ ಯುವ ಮೋರ್ಚಾ ಮುಖಂಡ ಪ್ರಕಾಶ್, ಅಗಸನಹಳ್ಳಿ ಕೃಷ್ಣಮೂರ್ತಿ, ತಟ್ಟೆಹಳ್ಳಿ ರುದ್ರೋಜಿರಾವ್, ರುದ್ರೇಶ್, ಸುರೇಶ್ ನೇತೃತ್ವ ವಹಿಸಿದ್ದರು.ಬಸ್ ಸಂಚಾರ ಇಲ್ಲದೇ ಜನರು ಪರದಾಡುತ್ತಿದ್ದರು. ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆಯಿಂದ ಪಟ್ಟಣ ಬಿಕೋ ಎನ್ನುತ್ತಿತ್ತು.ಪ್ರತಿಭಟನೆ ಶಾಂತಿಯುತವಾಗಿದ್ದು, ಹೊಳೆಹೊನ್ನೂರು ಪೊಲೀಸ್ ಠಾಣೆಯ ಪಿಎಸ್‌ಐ ರಾಘವೇಂದ್ರ ಕಾಂಡಿಕೆ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.