`ಜಿಲ್ಲೆಯಲ್ಲಿ ಮಕ್ಕಳ ಹಕ್ಕು ಉಲ್ಲಂಘನೆ'

7

`ಜಿಲ್ಲೆಯಲ್ಲಿ ಮಕ್ಕಳ ಹಕ್ಕು ಉಲ್ಲಂಘನೆ'

Published:
Updated:

ಕೋಲಾರ: ಜಿಲ್ಲೆಯಲ್ಲಿ ಮಕ್ಕಳ ಹಕ್ಕು ಉಲ್ಲಂಘನೆಯಾಗುತ್ತಿರುವುದು ಅತ್ಯಂತ ಕಳವಳಕಾರಿ ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಎಡ್ವರ್ಡ್ ಥಾಮಸ್ ಬುಧವಾರ ಇಲ್ಲಿ ತಿಳಿಸಿದರು.ನಗರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮತ್ತು ಸ್ವಯಂಸೇವಾ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ,  ಮಕ್ಕಳ ಕಲ್ಯಾಣ ಸಮಿತಿ ಸಮರ್ಪಕವಾಗಿ ಕೆಲಸ ಮಾಡಲು ವಾರಕ್ಕೆ ಎರಡು ಬಾರಿಯಾದರೂ ಜಿಲ್ಲಾ ಕೇಂದ್ರದಲ್ಲಿ ಸಭೆ ನಡೆಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಇನ್ನೊಬ್ಬ ಸದಸ್ಯೆ ಮುಕ್ತಾ ಸಲಹೆ ನೀಡಿದರು.ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದು ಬೆಳಕಿಗೆ ಬರುತ್ತಿದೆ. ವಿಶೇಷವಾಗಿ ಅಂಗನವಾಡಿಗಳಲ್ಲಿ ಮಕ್ಕಳ ಅಭ್ಯುದಯಕ್ಕೆ ಸಾಕಷ್ಟು ಅವಕಾಶ ದೊರಕುತ್ತಿಲ್ಲ . ಇದೇ ರೀತಿ ಸರ್ವ ಶಿಕ್ಷಣ ಅಭಿಯಾನದಲ್ಲಿ ಮಕ್ಕಳ ಸ್ಥಿತಿ ಗತಿ ಬಗ್ಗೆ ಸಾಕಷ್ಟು ಕಾಳಜಿ ತೆಗೆದುಕೊಳ್ಳುತ್ತಿಲ್ಲ ಎಂಬುದಾಗಿ ದೂರುಗಳು ಬರುತ್ತಿವೆ ಎಂದು ಹೇಳಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಸ್ತಿತ್ವದಲ್ಲಿದೆ. ಆದರೆ ಅದಕ್ಕೆ ಉಸ್ತುವಾರಿ ಅಧಿಕಾರಿಯೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಘಟಕ ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಸ್ವಯಂಸೇವಾ ಸಂಘಟನೆಗಳ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಸದಸ್ಯೆ ಮುಕ್ತಾ, ಈ ಸಂಬಂಧ ಸರ್ಕಾರದ ಜೊತೆ ಪತ್ರ ವ್ಯವಹಾರ ನಡೆಸಿ ಕೂಡಲೇ ಅಧಿಕಾರಿಯನ್ನು ನೇಮಕ ಮಾಡುವಂತೆ ಕೋರಲಾಗುವುದು ಎಂದರು.ಇತ್ತೀಚಿಗೆ ಮಾದಕ ದ್ರವ್ಯದ ಬಗ್ಗೆ ಮಕ್ಕಳು ಆಕರ್ಷಿತರಾಗುತ್ತಿರುವ ಬಗ್ಗೆ ಸಭೆಯಲ್ಲಿ ಹಲವರು ಆತಂಕ ವ್ಯಕ್ತಪಡಿಸಿದರು.

ನೈಲ್ ಪಾಲಿಷ್ ಮತ್ತು ಕುಡಿದು ಬಿಸಾಡಿದ ಮದ್ಯದ ಬಾಟಲಿಗಳನ್ನು ಮೂಸಿ ನೋಡುವುದು ಮತ್ತಿತರ ವ್ಯಸನಕ್ಕೆ ಮಕ್ಕಳು ಬಲಿಯಾಗುತ್ತಿದ್ದಾರೆ. ಇಂತಹ ಘಟನೆಗಳ ಬಗ್ಗೆ ಜಾಗರೂಕವಾಗಿರಬೇಕು. ಸಂದರ್ಭ ಬಂದರೆ ಪೊಲೀಸರ ಸಹಕಾರ ಪಡೆಯಬೇಕು ಎಂದು ಸಭೆಯಲ್ಲಿ  ತಿಳಿಸಲಾಯಿತು.ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಯಶೋದಮ್ಮ, ಶ್ರೀಧರ್, ಪನ್ನಮುತ್ತು, ಸ್ವಯಂಸೇವಾ ಸಂಘಟನೆ ನಿಕೋಲಾಸ್, ಸುಸೈರಾಜ್, ಎಸ್.ಎಚ್.ಚೌಡಪ್ಪ, ಮಕ್ಕಳ ರಕ್ಷಣಾ ಘಟಕದ ದಿವಾಕರ್, ಜಗದೀಶ್, ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿಗಳು, ಕೆಜಿಎಫ್ ಬಾಲ ಮತ್ತು ಬಾಲಕಿಯರ ಮಂದಿರದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry