ಸೋಮವಾರ, ಏಪ್ರಿಲ್ 19, 2021
23 °C

ಜಿಲ್ಲೆಯಲ್ಲಿ ಮನೋರೋಗ ತಜ್ಞ ವೈದ್ಯರ ಕೊರತೆ:ಹೆಚ್ಚುತ್ತಿರುವ ಮಾನಸಿಕ ರೋಗಿಗಳ ಸಂಖ್ಯೆ

ಪ್ರಜಾವಾಣಿ ವಾರ್ತೆ/ಸುದೇಶ ದೊಡ್ಡಪಾಳ್ಯ Updated:

ಅಕ್ಷರ ಗಾತ್ರ : | |

ಮೈಸೂರು: ನಗರ ಮತ್ತು ಜಿಲ್ಲೆಯಲ್ಲಿ ಮನೋರೋಗ ತಜ್ಞ ವೈದ್ಯರ ಕೊರತೆ ಅತಿಯಾಗಿ ಕಾಡುತ್ತಿದೆ. ನಗರದಲ್ಲಿ ಬೆರಳೆಣಿಕೆ ಯಷ್ಟು ಮನೋರೋಗ ತಜ್ಞ ವೈದ್ಯರು ಇದ್ದರೆ, ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಇಲ್ಲವೇ ಇಲ್ಲ ಎಂದು ಹೇಳಬಹುದು.ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ 20 ಸಾವಿರ ಮಂದಿಗೆ ಒಬ್ಬ ಮನೋರೋಗ ತಜ್ಞ ವೈದ್ಯ ಇರಬೇಕು. ಮೈಸೂರು 15 ಲಕ್ಷ ಜನ ಸಂಖ್ಯೆಯನ್ನು ಹೊಂದಿದೆ. ಅಂದರೆ 75 ಮಂದಿ ಮನೋರೋಗ ತಜ್ಞ ವೈದ್ಯರು ಇರಬೇಕು. ಹೆಚ್ಚು ಅಂದರೆ 20 ಮಂದಿ ಮಾತ್ರ ಇದ್ದಾರೆ.ಜನರ ಮಾನಸಿಕ ಆರೋಗ್ಯವನ್ನು ಕಾಪಾಡುವುದು ಸರ್ಕಾರದ ಕರ್ತವ್ಯ. ಆದರೆ ಸರ್ಕಾರ ಮಾನಸಿಕ ಆರೋಗ್ಯ ವನ್ನು ನಿರ್ಲಕ್ಷಿಸಿದೆ. ಆದ್ದರಿಂದಲೇ ಜಿಲ್ಲಾ ಮತ್ತು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನುರಿತ ಮನೋರೋಗ ತಜ್ಞ ವೈದ್ಯರು, ದಾದಿಯರನ್ನು ನೇಮಕ ಮಾಡಿಲ್ಲ.ಅರಿವು ಕಾರ್ಯಕ್ರಮ: ಮಾನಸಿಕ ಆರೋಗ್ಯ ಪ್ರಾಧಿಕಾರ ಮತ್ತು ಕಾನೂನು ಸೇವಾ ಘಟಕವು ಜಿಲ್ಲೆಯಲ್ಲಿರುವ ಜನರ ಮಾನಸಿಕ ಆರೋಗ್ಯವನ್ನು ಕಾಪಾಡುವ ಸಲುವಾಗಿ ಸಮಾಜ ಸೇವಾ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುವ ದಾದಿಯರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ.ಸಾಮಾನ್ಯ ಮಾನಸಿಕ ಕಾಯಿಲೆಗಳನ್ನು ಗುರುತಿಸುವುದು, ಅವುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡುವುದು, ಮಿತಿಮೀರಿದ ಮಾನಸಿಕ ರೋಗಕ್ಕೆ ಎಲ್ಲಿ ಚಿಕಿತ್ಸೆ ಪಡೆಯಬೇಕು ಎನ್ನುವ ಬಗ್ಗೆ ತರಬೇತಿ ನೀಡುತ್ತವೆ. ಅಕ್ಟೋಬರ್ 4 ರಿಂದ 10 ರ ವರೆಗೆ ವಿಶ್ವ ಮಾನಸಿಕ ಆರೋಗ್ಯ ಸಪ್ತಾಹ, ಅಕ್ಟೋಬರ್ 10 ರಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸುವ ಮೂಲಕ ಸಾಮಾನ್ಯ ಮಾನಸಿಕ ಕಾಯಿಲೆಗಳನ್ನು ಹೇಗೆ ನಿಭಾಯಿಸಿ ಕೊಳ್ಳಬೇಕು ಕುರಿತು ಕರಪತ್ರವನ್ನು ಹಂಚ ಲಾಗುತ್ತದೆ. ಅಲ್ಲದೇ ಪೊಲೀಸ್ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ವಕೀಲರಿಗೂ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.ಮಾನಸಿಕ ಆರೋಗ್ಯ ಪ್ರಾಧಿಕಾರ: ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಮಾನಸಿಕ ಆರೋಗ್ಯ ಪ್ರಾಧಿಕಾರವಿದೆ. ಈ ಪ್ರಾಧಿಕಾರದಲ್ಲಿ ಕೆ.ಆರ್.ಆಸ್ಪತ್ರೆಯ ಮಾನಸಿಕ ರೋಗಿಗಳ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಬಿ.ಎನ್. ರವೀಶ್ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಜಿಲ್ಲಾ ಪ್ರಧಾನ ನ್ಯಾಯಾಧೀಶರು, ಜಿಲ್ಲಾ ಸರ್ಜನ್, ಜಿಲ್ಲಾ ಕುಟುಂಬ ಕಲ್ಯಾಣ ಮತ್ತು ಆರೋಗ್ಯಾಧಿಕಾರಿ, ಸಮಾಜ ಕಲ್ಯಾಣ ಮತ್ತು ಅಂಗವಿಕಲ ಇಲಾಖೆ ಅಧಿಕಾರಿಗಳು, ಸೇವಾ ಕಾರ್ಯಕರ್ತ ಸದಸ್ಯರಾಗಿರುತ್ತಾರೆ.ಇವರು ನಗರ ಮತ್ತು ಜಿಲ್ಲೆಯಲ್ಲಿರುವ ಮಾನಸಿಕ ಚಿಕತ್ಸಾ ಕೇಂದ್ರಗಳಿಗೆ ಮೊದಲೇ ತಿಳಿಸಿ ಇಲ್ಲವೇ ದಿಢೀರ್ ಭೇಟಿ ನೀಡಿ ಅಲ್ಲಿನ ಸವಲತ್ತುಗಳನ್ನು ಪರಿಶೀಲಿಸಬಹುದು. ಇಲ್ಲವೇ ದೂರು ಬಂದರೂ ಭೇಟಿ ನೀಡಬಹುದು. ಅಗತ್ಯ ಸೌಲಭ್ಯ ಹೊಂದಿಲ್ಲದೇ ಇದ್ದರೆ    ಅಥವಾ ಮಾನವ ಹಕ್ಕು ಉಲ್ಲಂಘನೆ ಯಾಗಿದ್ದರೆ ಪ್ರಾಧಿಕಾರ ಲೈಸನ್ಸ್ ರದ್ದುಪಡಿಸಬಹುದು.ಮಾನಸಿಕ ಚಿಕಿತ್ಸಾ ಕೇಂದ್ರ ಇಲ್ಲವೇ ಆಸ್ಪತ್ರೆಯನ್ನು ನಡೆಸಲು ಮಾನಸಿಕ ಆರೋಗ್ಯ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಯಿಂದ ಲೈಸನ್ಸ್ ಪಡೆಯಬೇಕು. ಇದರ ಪ್ರಕಾರ ನಗರದಲ್ಲಿ 14 ಮಾನಸಿಕ ಆಸ್ಪತ್ರೆಗಳು ಕೆಲಸ ಮಾಡುತ್ತಿವೆ. ಸರಿಯಾದ ಸವಲತ್ತು ಹೊಂದಿರದ ಎರಡು ಆಸ್ಪತ್ರೆಗಳು ಲೈಸನ್ಸ್ ಅನ್ನು ರದ್ದುಪಡಿಸಲಾಗಿದೆ. ನಂಜನಗೂಡು ಮತ್ತು ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ       ತಲಾ ಒಂದೊಂದು ಮಾನಸಿಕ ಚಿಕಿತ್ಸಾ ಆಸ್ಪತ್ರೆಗಳಿವೆ.ಮಾನಸಿಕ ರೋಗಿಗಳ ಸಂಖ್ಯೆ ಹೆಚ್ಚಳ

ಚಿಕ್ಕ ಮಕ್ಕಳಿಂದ ವೃದ್ಧರ ತನಕ ಮಾನಸಿಕ ಕಾಯಿಲೆಯಿಂದ ಬಳಲುವವರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಕೆ.ಆರ್.ಆಸ್ಪತ್ರೆಯಲ್ಲಿರುವ ಮಾನಸಿಕ ಚಿಕಿತ್ಸಾ ವಿಭಾಗದಲ್ಲಿ 20 ಹಾಸಿಗೆಗಳು ಮಾತ್ರ ಇವೆ. ಆದರೆ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ಹಾಸಿಗೆಗಳ ಸಮಸ್ಯೆ ಕಾಡುತ್ತಿದೆ. ನಿತ್ಯ 120 ರಿಂದ 140 ಮಂದಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಭಾಗವನ್ನು ಇನ್ನಷ್ಟು ವಿಸ್ತರಿಸುವ ಅಗತ್ಯವಿದೆ.

-ಡಾ.ರವೀಶ್ ಬಿ.ಎನ್., ಮನೋರೋಗ ತಜ್ಞ, ಕೆ.ಆರ್.ಆಸ್ಪತ್ರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.