ಜಿಲ್ಲೆಯಲ್ಲಿ ಮೂಡಿದೆ ಸ್ಕೇಟಿಂಗ್ ಸಂಚಲನ

ಶುಕ್ರವಾರ, ಜೂಲೈ 19, 2019
23 °C

ಜಿಲ್ಲೆಯಲ್ಲಿ ಮೂಡಿದೆ ಸ್ಕೇಟಿಂಗ್ ಸಂಚಲನ

Published:
Updated:

ಚಿಕ್ಕಬಳ್ಳಾಪುರ: ಕ್ರೀಡಾ ಚಟುವಟಿಕೆಗಳಿಗೆ ಜಿಲ್ಲೆಯಲ್ಲಿ ಅತ್ಯಲ್ಪ ಸೌಕರ್ಯಗಳು ಇದ್ದರೂ ಏನೂ ತೊಂದರೆಯಿಲ್ಲ ಎಂಬಂತೆ ವಿವಿಧ ಕ್ರೀಡೆಗಳಲ್ಲಿ ಕ್ರೀಡಾಪಟುಗಳು ಒಬ್ಬೊಬ್ಬರಾಗಿ ಹೊರಹೊಮ್ಮುತ್ತಿದ್ದಾರೆ. ಓಟ, ಈಜು, ಬಾಸ್ಕೆಟ್‌ಬಾಲ್ ಮುಂತಾದ ಕ್ರೀಡೆಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಇಂಥವರ ಸಾಲಿಗೆ ಈಗ ಸ್ಕೇಟಿಂಗ್‌ಪಟುಗಳು ಸೇರ್ಪಡೆಗೊಳ್ಳುತ್ತಿದ್ದಾರೆ.ಚಿಕ್ಕಬಳ್ಳಾಪುರದಲ್ಲಿ ಕಳೆದ ಒಂದು ವರ್ಷದಿಂದ ಸದ್ದುಗದ್ದಲವಿಲ್ಲದೇ ಸ್ಕೇಟಿಂಗ್ ಚಟುವಟಿಕೆ ನಡೆಯುತ್ತಿದ್ದು, ಕಿರಿಯರು ಮತ್ತು ಹಿರಿಯರು ತರಬೇತಿ ಪಡೆಯುತ್ತಿದ್ದಾರೆ. ಪ್ರತ್ಯೇಕ ಕ್ರೀಡಾಂಗಣ ಮತ್ತು ಸೌಲಭ್ಯ ಇಲ್ಲದಿದ್ದರೂ ಇರುವ ಅಲ್ಪಸ್ವಲ್ಪ ಸೌಕರ್ಯಗಳಲ್ಲೇ ಸ್ಕೇಟಿಂಗ್ ಕಲಿಯುತ್ತಿದ್ದಾರೆ. ಪರಿಣತಿಯು ಸಾಧಿಸುತ್ತಿದ್ದಾರೆ.ಸ್ಕೇಟಿಂಗ್‌ನಲ್ಲಿ ತರಬೇತಿ ಪಡೆದ ಕೆಲ ಮಕ್ಕಳು ತುಮಕೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಬಹುಮಾನಗಳನ್ನು ಗಳಿಸಿದ್ದಾರೆ. ಅಷ್ಟೇ ಅಲ್ಲ, ಬೆಂಗಳೂರು ಸೇರಿದಂತೆ ಇತರ ಪ್ರದೇಶಗಳಲ್ಲಿರುವ ಸ್ಕೇಟಿಂಗ್‌ಪಟುಗಳಿಗೂ ಸವಾಲು ಒಡ್ಡುತ್ತಿದ್ದಾರೆ.ಜಿಲ್ಲೆಯಲ್ಲಿ ಸ್ಕೇಟಿಂಗ್ ಕೊಂಚ ಮಟ್ಟಿಗೆ ಅಸ್ತಿತ್ವ ಪಡೆದುಕೊಳ್ಳುವುದರ ಹಿಂದೆ ಕೆಲ ಯುವಕರು ಕಾರಣಕರ್ತರಾಗಿದ್ದಾರೆ. ತಮ್ಮ ಪಾಡಿಗೆ ತಾವು ಪರಿಣತಿ ಸಾಧಿಸುತ್ತಿದ್ದ ಯುವಕರು ನಿಧಾನವಾಗಿ ನಗರ ಮಟ್ಟದಲ್ಲಿ ಕ್ಲಬ್‌ವೊಂದನ್ನು ಹುಟ್ಟುಹಾಕಿದರು. ತಾಲ್ಲೂಕುಮಟ್ಟದಲ್ಲಿ ಕೆಲ ಪ್ರತಿಭಾವಂತ ಕ್ರೀಡಾಪಟುಗಳು ಸೇರಿಕೊಂಡ ನಂತರ ಜಿಲ್ಲಾಮಟ್ಟದ ಸಂಘವನ್ನೇ ಸ್ಥಾಪಿಸಿದರು.ಚಿಕ್ಕಬಳ್ಳಾಪುರ ಜಿಲ್ಲಾ ಗ್ರಾಮೀಣ ಸ್ಕೇಟರ್ಸ್‌ ಅಸೋಸಿಯೇಷನ್ ಎಂಬ ಸಂಘವೊಂದು ಕೆಲ ದಿನಗಳ ಹಿಂದೆಯಷ್ಟೇ ಅಸ್ತಿತ್ವಕ್ಕೆ ಬಂದಿದ್ದು, ಇದರ ಮೂಲಕ ಕಿರಿಯರು ಮತ್ತು ಹಿರಿಯರು ಸ್ಕೇಟಿಂಗ್ ತರಬೇತಿ ಪಡೆಯುತ್ತಿದ್ದಾರೆ. ವಾರದಲ್ಲಿ ನಾಲ್ಕು ದಿನಗಳಂದು ನಡೆಯುವ ತರಬೇತಿ ತರಗತಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.ಕ್ರೀಡಾಂಗಣದ ಕೊರತೆ: `ಸ್ಕೇಟಿಂಗ್‌ನಲ್ಲಿ ಆಸಕ್ತಿ ಹೊಂದಿದ್ದ ಯುವಕರೆಲ್ಲ ಸೇರಿಕೊಂಡು ಕ್ಲಬ್ ಮತ್ತು ಸಂಘವನ್ನು ಆರಂಭಿಸಿದ್ದೇವೆ. ಮಕ್ಕಳಿಗೆ ಮತ್ತು ಹಿರಿಯರಿಗೆ ಒಂದು ವರ್ಷದಿಂದ ತರಬೇತಿ ನೀಡುತ್ತಿದ್ದೇವೆ.ಬೇಸಿಗೆ ರಜೆಗಳಲ್ಲಿ ಇಂಡಿಯನ್ ಪಬ್ಲಿಕ್ ಶಾಲೆ ಆವರಣದಲ್ಲಿ ಮತ್ತು ಇತರ ದಿನಗಳಲ್ಲಿ ಸಿಟಿಜನ್ಸ್ ಕ್ಲಬ್‌ನ ಸಭಾಂಗಣದಲ್ಲೇ ತರಬೇತಿ ನೀಡುತ್ತೇವೆ. ವಿಶಾಲವಾದ ಸ್ಥಳವಿಲ್ಲದಿದ್ದರೂ ಅದರಲ್ಲೇ ತರಬೇತಿ ನೀಡುತ್ತೇವೆ~ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಗ್ರಾಮೀಣ ಸ್ಕೇಟರ್ಸ್‌ ಅಸೋಸಿಯೇಷನ್ ಕಾರ್ಯದರ್ಶಿ ಮಹಮ್ಮದ್ ಜಬೀಉಲ್ಲಾ `ಪ್ರಜಾವಾಣಿ~ಗೆ ತಿಳಿಸಿದರು.`ನಮಗೆ ಪ್ರತ್ಯೇಕ ಕ್ರೀಡಾಂಗಣ ಇರದ ಕಾರಣ ನಾವು ಸಿಟಿಜನ್ಸ್ ಕ್ಲಬ್ ಸಭಾಂಗಣದಲ್ಲೇ ತರಬೇತಿ ನೀಡುತ್ತಿದ್ದೇವೆ. ನಾಲ್ಕು ಗೋಡೆಗಳ ನಡುವೆ ಕಿರಿದಾದ ಜಾಗದಲ್ಲೇ ಅವರು ಕಲಿಯುತ್ತಿದ್ದಾರೆ.ಈಜುಪಟುಗಳಿಗೆ ನೂತನ ಈಜುಕೊಳ ನಿರ್ಮಿಸಲಾಗಿದೆ. ಬಾಸ್ಕೆಟ್‌ಬಾಲ್ ಕ್ರೀಡಾಪಟುಗಳಿಗೆ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. ಸ್ಕೇಟಿಂಗ್‌ಪಟುಗಳಿಗೂ ಪ್ರತ್ಯೇಕ ಕ್ರೀಡಾಂಗಣ ಅವಕಾಶ ಕಲ್ಪಿಸಿಕೊಟ್ಟರೆ ನಮಗೆ ಅನುಕೂಲ          ಆಗುತ್ತದೆ. ಜಿಲ್ಲಾಡಳಿತ ಇದರತ್ತ ಗಮನಹರಿಸಿದರೆ ಸಹಕಾರಿಯಾಗುತ್ತದೆ~ ಎಂದು ಅವರು ತಿಳಿಸಿದರು.ಕ್ರೀಡಾಂಗಣದ ಅಗತ್ಯತೆ: ಒಟ್ಟು 100 ಮೀಟರ್ ವೃತ್ತಾಕಾರ ವಿಸ್ತೀರ್ಣದಲ್ಲಿ 30 ಮೀಟರ್ ಮತ್ತು 50 ಮೀಟರ್‌ನಷ್ಟು ಸ್ಥಳಾವಕಾಶ ಮಾಡಿಕೊಂಡು ಕ್ರೀಡಾಂಗಣ ನಿರ್ಮಿಸಿದ್ದಲ್ಲಿ, ಏಕಕಾಲಕ್ಕೆ 50 ಮಂದಿಗೆ ಸ್ಕೇಟಿಂಗ್ ತರಬೇತಿ ನೀಡಬಹುದು. ಏಕಕಾಲಕ್ಕೆ 15 ಮಂದಿ ಸ್ಪರ್ಧಾಳುಗಳಿಗೆ ಸ್ಪರ್ಧೆಯನ್ನು ಆಯೋಜಿಸಬಹುದು. ಸಿಮೆಂಟ್‌ನಿಂದ ಕೂಡಿದ ಸಮತಟ್ಟಾದ ನೆಲ ಮತ್ತು ಸುತ್ತಲೂ ಹಿಡಿದುಕೊಳ್ಳಲು ಕಂಬಿಗಳಿದ್ದಲ್ಲಿ, ಸ್ಕೇಟಿಂಗ್ ಕಲಿಯಲು ಇನ್ನಷ್ಟು ಅನುಕೂಲ ಆಗಲಿದೆ ಎಂದು ಅವರು ಹೇಳಿದರು.ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿರುವ ಸಂಘವು ಜಿಲ್ಲಾಡಳಿತದ ಗಮನಸೆಳೆಯಲು ತನ್ನದೇ ಆದ ರೀತಿಯಲ್ಲಿ ಪ್ರಯತ್ನಿಸುತ್ತಿದೆ. ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಒಳಾಂಗಣ ಕ್ರೀಡಾಂಗಣದಲ್ಲಿ ಸ್ಕೇಟಿಂಗ್‌ಗೆ ಸ್ಥಳಾವಕಾಶ ಮಾಡಿಕೊಡುವಂತೆ ಸಂಘದ ಸದಸ್ಯರು ಕೋರುತ್ತಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry