ಗುರುವಾರ , ನವೆಂಬರ್ 21, 2019
27 °C
2012-13 ಸಾಲಿಗೆ ರೂ 54.25 ಕೋಟಿ ತೆರಿಗೆ ಸಂಗ್ರಹ

ಜಿಲ್ಲೆಯಲ್ಲಿ ಮೂರು ಲಕ್ಷ ವಾಹನ!

Published:
Updated:

ಗುಲ್ಬರ್ಗ: ಜಿಲ್ಲೆಯ ರಸ್ತೆಗಳಲ್ಲಿ ವಾಹನಗಳ ಭರಾಟೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಸಾರಿಗೆ ಹಾಗೂ ಸಾರಿಗೇತರ ವಾಹನಗಳ ಸಂಖ್ಯೆ ಒಟ್ಟು 3 ಲಕ್ಷ ಗಡಿಗೆ ಸಮೀಪಿಸಿದೆ. ವಾಹನ ಹೆಚ್ಚಳದಿಂದಾಗಿ ಜಿಲ್ಲಾ ಸಾರಿಗೆ ಇಲಾಖೆ (ಆರ್‌ಟಿಒ)ಗೆ 2012-13ನೇ ಸಾಲಿನಲ್ಲಿ ಗುರಿ ಮೀರಿ ಒಟ್ಟು ರೂ 54.25 ಕೋಟಿ ತೆರಿಗೆ ಸಂಗ್ರಹವಾಗಿದ್ದು, ರಾಜ್ಯ ಸರ್ಕಾರದಿಂದ ಬೇಷ್ ಎನಿಸಿಕೊಂಡಿದೆ.2012-13ನೇ ಆರ್ಥಿಕ ವರ್ಷದಲ್ಲಿ ಒಟ್ಟು 28,108 ಹೊಸ ವಾಹನಗಳು ನೋಂದಾವಣೆಯಾಗಿವೆ. ಇದರಲ್ಲಿ ಗೃಹೋಪಯೋಗಿ ವಾಹನಗಳ ಸಂಖ್ಯೆಯೇ ಹೆಚ್ಚು. ಗೃಹ ಹಾಗೂ ಕೃಷಿ ಬಳಕೆ ಉದ್ದೇಶಕ್ಕಾಗಿ ಬಳಸುವ ವಾಹನಗಳು 25,232 ಹೊಸದಾಗಿ ಸೇರ್ಪಡೆಯಾದರೆ, ವಾಣಿಜ್ಯ ಉದ್ದೇಶದ 2,876 ಸಾರಿಗೆ ವಾಹನಗಳು 2012-13 ಆರ್ಥಿಕ ವರ್ಷದಲ್ಲಿ ರಸ್ತೆಗೆ ಇಳಿದಿವೆ. 22,386 ಬೈಕ್ ನೋಂದಾವಣೆಯಾದರೆ, ಕಾರು-ಜೀಪು-ಓಬಿ ವ್ಯಾನ್ ಸೇರಿ ಒಟ್ಟು 1,573 ನೋಂದಾವಣೆಯಾಗಿವೆ. ಇದರಲ್ಲಿ ತ್ರಿಚಕ್ರ ವಾಹನಗಳು (ಆಟೋ)1,082 ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ.ಹಿಂದಿನ ಆರ್ಥಿಕ ವರ್ಷ 2011-12ನೇ ಸಾಲಿಗೆ ಹೋಲಿಸಿದರೆ ಈ ಸಲ ವಾಹನಗಳ ಸಂಖ್ಯೆ 2,044ರಷ್ಟು ಹೆಚ್ಚಳವಾಗಿದೆ. 2011-2012ರಲ್ಲಿ ಸಾರಿಗೆಯೇತರ ವಾಹನಗಳು 20,772 ನೋಂದಾಯಿಸಿಕೊಂಡಿದ್ದರೆ, 2,416 ವಾಣಿಜ್ಯ ಉದ್ದೇಶಿತ ಸಾರಿಗೆ ವಾಹನಗಳ ನೋಂದಾವಣೆಯಾಗಿದೆ. ಇದರಲ್ಲಿ 17,914 ಬೈಕ್, 1065 ಕಾರು, 243 ಜೀಪು, 109 ಮೋಟರ್ ಕ್ಯಾಬ್ ಸೇರಿಕೊಂಡಿದ್ದವು.ಟ್ರೇಲರ್‌ವೊಂದನ್ನು ಹೊರತುಪಡಿಸಿ ಸಾರಿಗೆ ಹಾಗೂ ಸಾರಿಗೆಯೇತರ ಪ್ರತಿಯೊಂದು ವಾಹನ ವಿಭಾಗದಲ್ಲೂ 2011-12ಕ್ಕಿಂತ 2012-13ರಲ್ಲಿ ಹೆಚ್ಚಳವಾಗಿವೆ. ಹಿಂದಿನ ಆರ್ಥಿಕ ವರ್ಷದಲ್ಲಿ ಟ್ರೇಲರ್‌ಗಳು 520 ಸೇರ್ಪಡೆಯಾಗಿದ್ದರೆ, ಈ ಸಲ 415 ನೋಂದಾಯಿಸಿಕೊಂಡಿವೆ.ಗುಲ್ಬರ್ಗ ಸೇರಿ ಜಿಲ್ಲೆಯ ಏಳು ತಾಲ್ಲೂಕುಗಳ ಪೈಕಿ ಸಹಜವಾಗಿ ಗುಲ್ಬರ್ಗ ಮಹಾನಗರದಲ್ಲೆ ಅತಿಹೆಚ್ಚು ವಾಹನಗಳು ನೋಂದಾವಣೆಯಾಗಿವೆ ಎನ್ನುವುದು ಸಾರಿಗೆ ಇಲಾಖೆ ಅಧಿಕಾರಿಗಳ ವಿವರ. `ಹದಗೆಟ್ಟ ರಸ್ತೆಗಳನ್ನು ಸುಧಾರಿಸಿದ ಮೇಲೆ ನಗರ ಸಾರಿಗೆಗೆ ಸರ್ಕಾರ ಹೊಸದಾಗಿ ಬಸ್ ಸೇರ್ಪಡೆಗೊಳಿಸಿದ್ದರೆ ತಾಪತ್ರಯ ಇರುತ್ತಿರಲಿಲ್ಲ. ಇಕ್ಕಟ್ಟಾದ ರಸ್ತೆಯಲ್ಲೆ ಬಸ್‌ಗಳು, ಕಾರು, ಬೈಕ್, ಆಟೋಗಳ ಸಂಖ್ಯೆ ಮಿತಿಮೀರುತ್ತಿರುವುದರಿಂದ ನಗರ ಸಂಚಾರ ಸಂಕಟವಾಗಿ ಪರಿಣಮಿಸುತ್ತಿದೆ. ಇನ್ನು ಕೆಲವೇ ವರ್ಷದಲ್ಲಿ ಬೆಂಗಳೂರಿನಂತಹ ಪರಿಸ್ಥಿತಿ ಗುಲ್ಬರ್ಗದಲ್ಲಿ ನಿರ್ಮಾಣವಾಗಬಹುದು' ಎನ್ನುತ್ತಾರೆ ಕಾಲೇಜು ವಿದ್ಯಾರ್ಥಿ ಮನೋಹರ.ಹೆಚ್ಚಿದ ತೆರಿಗೆ ಸಂಗ್ರಹ: ಗುಲ್ಬರ್ಗ ಜಿಲ್ಲೆಯಲ್ಲಿ ಹೊಸ ವಾಹನಗಳ ನೋಂದಾವಣೆ ಹೆಚ್ಚಳದೊಂದಿಗೆ ರಸ್ತೆ ತೆರಿಗೆ ಕೂಡಾ ಗಣನೀಯ ಹೆಚ್ಚುತ್ತಿದೆ ಎನ್ನುವುದು ಸಾರಿಗೆ ಇಲಾಖೆಯ ವಿಶ್ಲೇಷಣೆ. 2011-12ನೇ ಸಾಲಿನಲ್ಲಿ ರೂ 37 ಕೋಟಿ ಗುರಿ ನಿಗದಿಪಡಿಸಲಾಗಿತ್ತು. ಆದರೆ ಗುರಿಮೀರಿ ರೂ 45.93 ಕೋಟಿ ತೆರಿಗೆ ಸಂಗ್ರಹವಾಗಿತ್ತು.2012-13ನೇ ಸಾಲಿನಲ್ಲಿ ರೂ 50. 5 ಕೋಟಿ ರಸ್ತೆ ತೆರಿಗೆ ಸಂಗ್ರಹ ಗುರಿ ನೀಡಲಾಗಿತ್ತು. ಆದರೆ ನಿಗದಿತ ಗುರಿಮೀರಿ ರೂ 54.25 ಕೋಟಿ ತೆರಿಗೆ ಸಂಗ್ರಹವಾಗಿದೆ. ಮಾರ್ಚ್ 31, 2013ಕ್ಕೆ ಆರ್ಥಿಕ ವರ್ಷದ ಲೆಕ್ಕಪತ್ರ ಮುಕ್ತಾಯವಾಗಿದ್ದು, ಶೀಘ್ರದಲ್ಲೆ ಹೊಸ ಗುರಿ ನಿಶ್ಚಯವಾಗಲಿದೆ ಎನ್ನುವುದು ಸಾರಿಗೆ ಇಲಾಖೆಯ ವಿವರ.ಹೊಸ ಸೌಲಭ್ಯ: ತೆರಿಗೆ ಗುರಿ ಸಾಧಿಸಿರುವ ಗುಲ್ಬರ್ಗ ಜಿಲ್ಲಾ ಸಾರಿಗೆ ಇಲಾಖೆಗೆ ಸರ್ಕಾರವು ನೂತನ ಸೌಲಭ್ಯಗಳನ್ನು ಮಂಜೂರು ಮಾಡಿದೆ. ವಾಹನ ಚಾಲನೆ ಪರವಾನಿಗೆ ನೀಡುವುದಕ್ಕೆ `ಹೈಟೆಕ್ ಟ್ರ್ಯಾಕ್' ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಿದದು, ಈಗಾಗಲೇ ಅದರ ಕಾರ್ಯ ಆರಂಭವಾಗಿದೆ. ಅಲ್ಲದೆ ಸಾರಿಗೆ ಇಲಾಖೆ ಕಚೇರಿ ಕಟ್ಟಡದ ನವೀಕರಣ ಕೂಡಾ ಕೈಗೊಳ್ಳಲಾಗುತ್ತಿದೆ.1952ರಿಂದ ಇಲ್ಲಿಯವರೆಗೂ ಒಟ್ಟು 31,046 ಸಾರಿಗೆ ವಾಹನಗಳು ಹಾಗೂ 2,45,162 ಸಾರಿಗೆಯೇತರ ವಾಹನಗಳು ಗುಲ್ಬರ್ಗ ಜಿಲ್ಲೆಯಲ್ಲಿ ನೋಂದಾಯಿಸಿಕೊಂಡಿವೆ. ಜಿಲ್ಲೆಯ ರಸ್ತೆಗಳಲ್ಲಿ ಒಟ್ಟು 2,76,208 ವಾಹನಗಳ ಓಡಾಡುತಿದ್ದು, ಸದ್ಯದ ಹೊಸ ವಾಹನಗಳ ನೋಂದಾವಣೆ ಭರಾಟೆ ನೋಡಿದರೆ, ಪ್ರಸಕ್ತ ಆರ್ಥಿಕ ವರ್ಷ ಮುಗಿಯುವುದರೊಳಗೆ ವಾಹನಗಳ ಸಂಖ್ಯೆ ಮೂರು ಲಕ್ಷ ಗಡಿ ದಾಟುತ್ತದೆ.

ಪ್ರತಿಕ್ರಿಯಿಸಿ (+)