ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ

7
ವರುಣ ಸಿಂಚನ: 23 ಡಿಗ್ರಿಗೆ ಇಳಿದ ಉಷ್ಣಾಂಶ

ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ

Published:
Updated:
ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ

ಹುಬ್ಬಳ್ಳಿ: ನಾಲ್ಕೈದು ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿದಿದ್ದು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಮಳೆಯ ಪ್ರಮಾಣ ದ್ವಿಗುಣಗೊಂಡಿದೆ.ಜಿಲ್ಲೆಯಲ್ಲಿನ ಸರಾಸರಿ ಮಳೆ ಪ್ರಮಾಣಕ್ಕಿಂತ ಈ ಬಾರಿ ಹೆಚ್ಚಿಗೆ ಮಳೆಯಾಗಿದೆ. ಇನ್ನೂ ಕೆಲವು ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆಗಳಿವೆ. ಕೃಷಿ ವಿಶ್ವವಿದ್ಯಾಲಯದ ಕೃಷಿ ಹವಾಮಾನ ಸಲಹಾ ಘಟಕವು ನೀಡಿರುವ ಮಾಹಿತಿಯಂತೆ, ಜಿಲ್ಲೆಯಲ್ಲಿ ಜನವರಿಯಿಂದ ಜುಲೈ 23ರ ವರೆಗೆ ಸರಾಸರಿ 323 ಮಿ.ಮೀ. ಮಳೆ ಸುರಿಯುತ್ತದೆ. ಈ ವರ್ಷ ಇದೇ ಅವಧಿಯಲ್ಲಿ ಜಿಲ್ಲೆಯಲ್ಲಿ 354.8 ಮೀ.ಮೀ. ಮಳೆ ಬಿದ್ದಿದೆ. ವಾಡಿಕೆಗಿಂತ 31.8 ಮಿ.ಮೀ. ಹೆಚ್ಚಿಗೆ ಮಳೆಯಾಗಿದೆ.`ಕಳೆದ ವರ್ಷ ಜಿಲ್ಲೆಯಲ್ಲಿ ನಿರೀಕ್ಷೆಯ ಪ್ರಮಾಣದಲ್ಲಿ ಮಳೆ ಬಿದ್ದಿರಲಿಲ್ಲ. ಹೀಗಾಗಿ ಕೃಷಿ ಚಟುವಟಿಕೆಗೂ ಹಿನ್ನಡೆಯಾಗಿತ್ತು. ಈ ವರ್ಷ ಪರಿಸ್ಥಿತಿ ಭಿನ್ನವಾಗಿದೆ. ಜೂನ್‌ನಿಂದಲೇ ಮುಂಗಾರು ಉತ್ತಮವಾಗಿದೆ. ಸಾಮಾನ್ಯವಾಗಿ ಜುಲೈನಲ್ಲಿ 141 ಮಿ.ಮೀ. ನಷ್ಟು ಮಳೆ ಸುರಿಯುತ್ತದೆ. ಮಳೆ ಹೀಗೆ ಮುಂದುವರಿದರೆ ವಾಡಿಕೆಗಿಂತ ಹೆಚ್ಚಾಗಲಿದೆ' ಎಂದು ಕೃಷಿ ವಿಶ್ವವಿದ್ಯಾಲಯದ ಕೃಷಿ ಹವಾಮಾನ ಸಲಹಾ ಘಟಕದ ತಾಂತ್ರಿಕ ಅಧಿಕಾರಿ ಎನ್.ಎ. ನವೀನ್ `ಪ್ರಜಾವಾಣಿ'ಗೆ ತಿಳಿಸಿದರು.ಬೇಸಿಗೆಯಲ್ಲೂ ಹೆಚ್ಚು: ಈ ಬಾರಿ ಬೇಸಿಗೆಯಲ್ಲೂ ಉತ್ತಮ ಮಳೆಯಾದ ಕಾರಣ ಒಟ್ಟಾರೆ ಮಳೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಮೇನಲ್ಲಿ 124 ಮಿ.ಮೀ. ಹಾಗೂ ಜೂನ್‌ನಲ್ಲಿ 75.4 ಮೀ.ಮೀ. ಮಳೆ ಸುರಿದಿದೆ. ಜುಲೈ ತಿಂಗಳಲ್ಲಿ 25ರ ವರೆಗೆ ಒಟ್ಟು 127.8 ಮೀ.ಮೀ. ಮಳೆಯಾಗಿದೆ.ಕಳೆದ ವರ್ಷ ಕನಿಷ್ಠ: ಕಳೆದ 25 ವರ್ಷದ ಸರಾಸರಿಯನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಜಿಲ್ಲೆಯಲ್ಲಿ ವಾರ್ಷಿಕ 720.8  ಮಿ.ಮೀನಷ್ಟು ಮಳೆಯಾಗುತ್ತಿದೆ. 2011ರಲ್ಲಿ ಧಾರವಾಡದಾದ್ಯಂತ ಉತ್ತಮ ಮಳೆ ಸುರಿದಿತ್ತು. ಆ ವರ್ಷ 71 ದಿನ ಮಳೆ ಸುರಿದಿದ್ದು, 922.7 ಮಿ.ಮೀನಷ್ಟು ಮಳೆ ದಾಖಲಾಗಿತ್ತು. ಕಳೆದ ವರ್ಷ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಎದುರಾಗಿದ್ದು, ಕೇವಲ 47 ದಿನಗಳಲ್ಲಷ್ಟೇ ಮಳೆ ಬಿದ್ದಿತ್ತು. ಒಟ್ಟಾರೆ 540.1 ಮಿ.ಮೀ. ಮಳೆಯಾಗಿದ್ದು, ವಾರ್ಷಿಕ ಸರಾಸರಿಗಿಂತ 180.7 ಮಿ.ಮೀ. ನಷ್ಟು ಕಡಿಮೆ ಮಳೆ ಸುರಿದಿತ್ತು.ಮೈ ಕೊರೆವ ಚಳಿ: ಮಳೆಯೊಂದಿಗೆ ತಂಪಾದ ಗಾಳಿಯೂ ವಾತಾವರಣವನ್ನು ಆವರಿಸಿದೆ. ಪರಿಣಾಮ ತಾಪಮಾನದ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಚಳಿ ಮೈ ಕೊರೆಯುವಂತಿದೆ. ಗರಿಷ್ಠ ಉಷ್ಣಾಂಶ  24 ಡಿಗ್ರಿ ಸೆಲ್ಸಿಯಸ್‌ಗೆ ಇಳಿದರೆ, ಕನಿಷ್ಠ ಉಷ್ಣಾಂಶವು 19-20 ಡಿಗ್ರಿ ಆಸುಪಾಸಿನಲ್ಲಿದೆ. `ಮಳೆಗಾಲದಲ್ಲಿ ಉಷ್ಣಾಂಶವು ಸಾಮಾನ್ಯವಾಗಿ 30 ಡಿಗ್ರಿ ಒಳಗೆ ಇರುತ್ತದೆ.ಜಿಲ್ಲೆಯಲ್ಲಿ ಈ ಹೊತ್ತಿಗೆ ಸರಾಸರಿ 26-27 ಡಿಗ್ರಿಯಷ್ಟು ತಾಪವಿರುತ್ತದೆ. ಆದರೆ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಬೀಳುತ್ತಿರುವ ಕಾರಣ ಈ ಉಷ್ಣಾಂಶವು 2-3 ಡಿಗ್ರಿಯಷ್ಟು ಕಡಿಮೆಯಾಗಿದೆ. ಆಗಸದಲ್ಲಿ ಮೋಡಗಳ ಹೊದಿಕೆಯಿಂದ ಉಷ್ಣಾಂಶದಲ್ಲಿ ಏರಿಳಿತವಾಗುತ್ತದೆ. ಅದರಲ್ಲೂ ರಾತ್ರಿ ಹೊತ್ತಿನಲ್ಲಿ ಚಳಿ ಹೆಚ್ಚು' ಎನ್ನುತ್ತಾರೆ ತಾಂತ್ರಿಕ ಅಧಿಕಾರಿ ಎನ್. ಎ. ನವೀನ್.ಶೇ 82 ಕ್ಷೇತ್ರದಲ್ಲಿ ಬಿತ್ತನೆ: `ಮುಂಗಾರು ಕೃಷಿ ಕ್ಷೇತ್ರಕ್ಕೆ ವರವಾಗಿ ಪರಿಣಮಿಸಿದ್ದು, ಜಿಲ್ಲೆಯಲ್ಲಿ ಒಟ್ಟಾರೆ 1.72 ಲಕ್ಷ ಹೆಕ್ಟೇರ್ ಕೃಷಿ ಜಮೀನಿನಲ್ಲಿ ಬಿತ್ತನೆ ಕಾರ್ಯ ನಡೆದಿದೆ. ಮುಂಗಾರಿನಲ್ಲಿ ಶೇ 82ರಷ್ಟು ಪ್ರಮಾಣದಲ್ಲಿ ಬಿತ್ತನೆ ಕಾರ್ಯ ನಡೆದಿದೆ' ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಸ್.ಎಂ. ಗಡಾದ `ಪ್ರಜಾವಾಣಿ'ಗೆ ತಿಳಿಸಿದರು.ಧಾರವಾಡ, ಕುಂದಗೋಳ, ಕಲಘಟಗಿ ತಾಲ್ಲೂಕಿನಲ್ಲಿ ನಿರೀಕ್ಷೆಯಷ್ಟು ಬಿತ್ತನೆ ಕಾರ್ಯ ನಡೆದಿದೆ. ನವಲಗುಂದ ತಾಲ್ಲೂಕಿನಲ್ಲಿ ಕೃಷಿಗೆ ಹಿನ್ನಡೆಯಾಗಿತ್ತು. ಇದೀಗ ಆ ಭಾಗದಲ್ಲೂ ಮಳೆ ಸುರಿದಿದ್ದು, ನೆಲ ಹಸಿಯಾಗಿದೆ. ಹೀಗಾಗಿ ರೈತರು ಬಿತ್ತನೆ ಕಾರ್ಯ ಕೈಗೊಳ್ಳಬಹುದು ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry