ಜಿಲ್ಲೆಯಲ್ಲಿ ಸಂಭ್ರಮದ ಸಂಕ್ರಾಂತಿ

7
ನದಿಗಳು ಬತ್ತಿದರೂ ಜನರಲ್ಲಿ ಬತ್ತದ ಉತ್ಸಾಹ

ಜಿಲ್ಲೆಯಲ್ಲಿ ಸಂಭ್ರಮದ ಸಂಕ್ರಾಂತಿ

Published:
Updated:
ಜಿಲ್ಲೆಯಲ್ಲಿ ಸಂಭ್ರಮದ ಸಂಕ್ರಾಂತಿ

ಹಾವೇರಿ: ಪ್ರಕೃತಿಯ ಬದಲಾವಣೆ ಸಂಕೇತವಾಗಿ ಆಚರಿಸಲ್ಪಡುವ ಮಕರ ಸಂಕ್ರಾಂತಿ ಹಬ್ಬವನ್ನು ಜಿಲ್ಲೆಯ ಜನರು ನದಿಗಳಲ್ಲಿ ಪುಣ್ಯ ಸ್ನಾನ ಮಾಡಿ ಶ್ರದ್ಧಾಭಕ್ತಿ ಹಾಗೂ ಸಡಗರ ಸಂಭ್ರಮದಿಂದ ಆಚರಿಸಿದರು.ಸೂರ್ಯ ತನ್ನ ಪಥ ಬದಲಿಸುವ ಪ್ರವಿತ್ರ ಘಳಿಗೆ, ಉತ್ತರಾಯಣ ಪುಣ್ಯ ಕಾಲದ ಆರಂಭದ ದಿನ ಹಾಗೂ ಸುಗ್ಗಿ ಹಬ್ಬ ಎಂಬ ನಂಬಿಕೆಯಲ್ಲಿ ಮಕರ ಸಂಕ್ರಮಣ ಹಬ್ಬವನ್ನು ಜಿಲ್ಲೆಯಾದ್ಯಂತ ಹಿಂದಿನಿಂದ ಆಚರಿಸುತ್ತಾ ಬಂದ ರೀತಿಯಲ್ಲಿಯೇ ಈ ವರ್ಷವೂ ಆಚರಿಸಿದ್ದು ಕಂಡು ಬಂದಿತು.ಹಬ್ಬದ ದಿನವಾದ ಸೋಮವಾರ ಬೆಳಿಗ್ಗೆಯಿಂದಲೇ ಜನರು ಹೊಸ ಹೊಸ ಬಟ್ಟೆಗಳನ್ನು ತೊಟ್ಟು ಚಕ್ಕಡಿ, ದ್ವಿಚಕ್ರ ವಾಹನ.ಟಂ ಟಂ ವಾಹನ, ಕಾರು, ಜೀಪುಗಳಲ್ಲಿ ಮನೆಮಂದಿಯಲ್ಲ ಸೇರಿಕೊಂಡು ನದಿಗಳ ತೀರಗಳಿಗೆ ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.ಜಿಲ್ಲೆಯ ತುಂಗಭದ್ರ ನದಿ ತೀರದ ಕುಮಾರಪಟ್ಟಣಂ, ಐರಣಿ, ಹೊಳೆ ಅನ್ವರಿ, ಮುದೇನೂರು, ಗಳಗನಾಥ, ಚೌಡಯ್ಯದಾನಪುರ, ವರದಾ ನದಿ ತೀರದ ಕರ್ಜಗಿ, ಹೊಸರಿತ್ತಿ, ಕೊರಡೂರು, ದೇವಗಿರಿ, ಕಲಕೋಟಿ, ತೆವರಮೆಳ್ಳಳ್ಳಿ, ಧರ್ಮಾ ನದಿ ದಂಡದ ಸಂಗೂರ ಹಾಗೂ ಕುಮದ್ವತಿ ನದಿಗಳಲ್ಲಿ ಸಹಸ್ರಾರು ಜನರು ಪುಣ್ಯ ಸ್ನಾನ ಮಾಡಿದರು.ಆದರೆ, ಬಹುತೇಕ ನದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ಇಲ್ಲದ್ದರಿಂದ ಕಳೆದ ವರ್ಷಕ್ಕಿಂತ ಈ ವರ್ಷ ನದಿಗಳಲ್ಲಿ ಸ್ನಾನ ಮಾಡುವವರ ಸಂಖ್ಯೆ ಕಡಿಮೆಯಾಗಿತ್ತು. ಆದರೂ ನದಿಗಳಿಗೆ ಬಂದ ಜನರು ಉತ್ಸಾಹದಿಂದಲೇ ಇದ್ದ ನೀರಿನಲ್ಲಿ ಸ್ನಾನ ಮುಗಿಸಿಕೊಂಡ ಮಹಿಳೆಯರು ಮಕ್ಕಳು ಗಂಗಾ ಮಾತೆಗೆ ಭಕ್ತಿ, ಭಾವದಿಂದ ವಿಶೇಷ ಪೂಜೆ ಸಲ್ಲಿಸಿದರಲ್ಲದೇ, ನದಿ ದಂಡೆಗಳ ಮೇಲೆ ಹಾಗೂ ಪುಣ್ಯ ಕ್ಷೇತ್ರಗಳಲ್ಲಿ ಸಾಮೂಹಿಕ ಭೋಜನ ಮಾಡುವ ಮೂಲಕ ಸಂಕ್ರಾಂತಿ ಆಚರಿಸಿದರು.ನದಿಗಳಿಗೆ ಸ್ನಾನಕ್ಕೆ ತೆರಳದೇ ಕೆಲವರು ರಾಣೆಬೆನ್ನೂರಿನ ಚೌಡಯ್ಯದಾನಪುರ, ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆ, ಹಾವೇರಿಯ ಪುರಸಿದ್ದೇಶ್ವರ ದೇವಸ್ಥಾನ, ರಾಣೆಬೆನ್ನೂರಿನ ಕೃಷ್ಣಮೃಗ ಅಭಯಾರಣ್ಯ, ಗೊಟಗೋಡಿಯ ರಾಕ್ ಗಾರ್ಡನ್, ಬಾಡ ಗ್ರಾಮದ ಕನಕ ಅರಮನೆ ಹಾಗೂ ಕೆಲವರು ತಮ್ಮ ಹೊಲಗಳಿಗೆ ತೆರಳಿ ಸಾಮೂಹಿಕ ಭೋಜನ ಮಾಡುವ ಮೂಲಕ ಸಂಕ್ರಮಣ ಆಚರಿಸಿದ್ದು ವಿಶೇಷವಾಗಿತ್ತು.ಜಿಲ್ಲೆಯಲ್ಲಿ ಸಂಕ್ರಮಣ ಹಬ್ಬಕ್ಕಾಗಿಯೇ ವಿಶೇಷ ಭಕ್ಷ್ಯ ಬೋಜ್ಯಗಳನ್ನು ತಯಾರಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹಬ್ಬದ ವಿಶೇಷತೆಗಾಗಿ ಎಳ್ಳು ಹಚ್ಚಿದ ಕಡಕ್ ಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ಚಪಾತಿ, ಬದನೆಕಾಯಿ ಎಣ್ಣೆಗಾಯಿ, ಹೆಸರು, ಮಡಕೆ ಸೇರಿದಂತೆ ವಿವಿಧ ತರಕಾರಿಗಳ ಪಲ್ಯ, ಕೆಂಪು ಮೆನಸಿಕಾಯಿ ಚಟ್ನಿ, ಶೇಂಗಾ, ಪುಠಾಣಿ ಚಟ್ನಿಪುಡಿ, ಕರ್ಚಿಕಾಯಿ, ಎಣ್ಣೆ ಹೋಳಿಗೆ, ಕಡಬು, ಶೇಂಗಾ ಹೋಳಿಗೆ, ಎಳ್ಳ ಹೋಳಿಗೆ, ಅನ್ನ, ಸಾಂಬರು, ಅನ್ನದ ಬುತ್ತಿ, ಫಲಾವ್ ಹೀಗೆ ನಾನಾ ತರಹದ ಭೋಜ್ಯಗಳನ್ನು ತಯಾರಿಸಿಕೊಂಡು ಬಂದಿದ್ದರು. ಹೀಗೆ ತಂದ ಅಡುಗೆಯನ್ನು ಪರಸ್ಪರ ವಿನಿಮಯ ಮಾಡಿಕೊಂಡು ಊಟ ಮಾಡುತ್ತಿದ್ದರು.ನಂತರ ಸುಮಾರು ಹೊತ್ತು ಅಲ್ಲಿಯೇ ಆಟವಾಡಿ ಸಂಜೆ ಹೊತ್ತಿಗೆ ತಮ್ಮ ತಮ್ಮ ಊರುಗಳಿಗೆ ವಾಪಸ್ಸಾಗುವ ದೃಶ್ಯ ಸಾಮಾನ್ಯವಾಗಿತ್ತು.ಬೈಕ್‌ಗೆ ಸೌಂಡ್ ಸಿಸ್ಟಮ್: ಹಬ್ಬಕ್ಕಾಗಿ ಹೊಸ ಬಟ್ಟೆ ತೊಟ್ಟ ಸಂಭ್ರಮಿಸುವವರನ್ನು ಕಂಡಿದ್ದೇವೆ. ಈ ಸಲದ ಸಂಕ್ರಮಕ್ಕೆ ಕೆಲ ಯುವಕರು ತಮ್ಮ ಬೈಕ್‌ಗಳಿಗೆ ಸೌಂಡ್ ಸಿಸ್ಟಮ್ ಕಟ್ಟಿಕೊಂಡು ದೊಡ್ಡದಾದ ಧ್ವನಿಯಲ್ಲಿ ಹಾಡುಗಳನ್ನು ಹಚ್ಚಿಕೊಂಡು ಸಂಕ್ರಮಣ ಹಬ್ಬಕ್ಕೆ ಮತ್ತಷ್ಟು ಮೆರಗು ತಂದಿದ್ದರು.ವಿವಿಧೆಡೆ ಸಂಕ್ರಾಂತಿ

ರಾಣೆಬೆನ್ನೂರು:
ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆ, ಗುಡಗೂರು ಅಸುಂಡಿ ನಾಲಾ ಕೆರೆ, ಮೇಡ್ಲೇರಿ ಬೀರೇಶ್ವರ ದೇವಸ್ಥಾನ, ಉಕ್ಕಡಗಾತ್ರಿ ಕರಿಬಸವೇಶ್ವರ ದೇವಸ್ಥಾನ, ಮಾಕನೂರು ಮೂರ್ಕಂಡೇಶ್ವರ ದೇವಸ್ಥಾನ, ಕುಮಾರಪಟ್ಟಣ ಬಳಿ ಅಯ್ಯಪ್ಪಸ್ವಾಮಿ ದೇವಸ್ಥಾನ, ಐರಾವತ ಕ್ಷೇತ್ರ ಐರಣಿಯ ಹೊಳೆಮಠ, ಹರನಗಿರಿ ಹೊಳೆ ಬಸವೇಶ್ವರ, ಮುದೇನೂರಿನ ಶ್ರೀಶೈಲ ಪೀಠದ ದಿ.ವಾಗೀಶ ಪಂಡಿತಾರಾಧ್ಯ ಸ್ವಾಮೀಜಿ ಮತ್ತು ಉಜ್ಜಯಿನಿ ಜಗದ್ಗುರುಗಳ ಹುಟ್ಟೂರಿನಲ್ಲಿ ಸಾವಿರಾರು ಜನರು ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿದರು. ಅಲ್ಲದೆ `ಕೃಷ್ಣಮೃಗ ಅಭಯಾರಣ್ಯ'ದಲ್ಲಿಯೂ ಸಂಕ್ರಾಂತಿ ಸಂಭ್ರಮ ಆಚರಿಸಿದರು. ನಗರದ ಜನರು ನಗರದಲ್ಲಿನ ಉದ್ಯಾನಗಳಲ್ಲಿಯೇ ಸಂಕ್ರಾಂತಿ ಸಂಭ್ರಮ ಆಚರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry