ಬುಧವಾರ, ಮೇ 12, 2021
26 °C

ಜಿಲ್ಲೆಯಲ್ಲಿ ಸಕಾಲ ಸೇವೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊಳಕಾಲ್ಮುರು: ಯಾವುದೇ ಹಂತದ ಅಧಿಕಾರಿಗಳಾಗಲಿ ವೃತ್ತಿಯಲ್ಲಿ ಸೇವಾ ಮನೋಭಾವನೆ ಹೊಂದುವ ಮೂಲಕ ಶೋಷಿತ ಹಾಗೂ ಅಶಕ್ತರ ನೆರವಿಗೆ ಧಾವಿಸಲು ಶ್ರಮಿಸಬೇಕು ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಸಲಹೆ ಮಾಡಿದರು.ಇಲ್ಲಿನ ತಾಲ್ಲೂಕು ಕಚೇರಿ ಆವರಣದಲ್ಲಿ ಸೋಮವಾರ ಕರ್ನಾಟಕ ನಾಗರಿಕ ಸೇವೆಗಳ ಖಾತರಿ ಅಧಿನಿಯಮ- 2012 (ಸಕಾಲ)ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ನಿರ್ದಿಷ್ಟ ಅವಧಿಯಲ್ಲಿ ಸಾರ್ವಜನಿಕರ ಕೆಲಸಗಳನ್ನು ಪೂರ್ಣಗೊಳಿಸಬೇಕು. ವಿನಾಕಾರಣ ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸದೇ ಅವರ ಹಣ ಹಾಗೂ ಅಮೂಲ್ಯ ಸಮಯ ವ್ಯರ್ಥವಾಗುವುದನ್ನು ತಪ್ಪಿಸುವ ಮೂಲಕ ಸರ್ಕಾರದ ಸವಲತ್ತುಗಳನ್ನು ತಲುಪಿಸಲು ಹಾಗೂ ಪಾರದರ್ಶಕ ಆಡಳಿತ ನೀಡುವ ನಿಟ್ಟಿನಲ್ಲಿ ಈ ಅಧಿನಿಯಮ ಜಾರಿ ಮಾಡಲಾಗಿದೆ. ಇದು ಉತ್ತಮ ಯೋಜನೆಯಾಗಿದ್ದು ಇದಕ್ಕೆ ರಾಜಕೀಯ ಬಣ್ಣ ಬೆರೆಸದೆ ಯೋಜನೆ ಯಶಸ್ವಿಗೆ ಮುಂದಾಗಬೇಕಿದೆ ಎಂದು ಹೇಳಿದರು.ಮೊಳಕಾಲ್ಮುರು ಗಡಿ ಹಾಗೂ ಆರ್ಥಿಕವಾಗಿ ಹಿಂದುಳಿದ ತಾಲ್ಲೂಕಾಗಿದೆ. ಬರಗಾಲ ತಾಂಡವವಾಡುತ್ತಿರುವ ದಿನಗಳಲ್ಲಿ ತಾಲ್ಲೂಕಿನ ಗೋಶಾಲೆಗಳಿಗೆ ಮೇವು ಸರಬರಾಜು ಮಾಡುವ ಪ್ರಕ್ರಿಯೆಯಲ್ಲಿ ಹಗರಣವಾಗಿದೆ ಎಂದು ದೂರುಗಳಿವೆ. ಮೂಕ ಪ್ರಾಣಿಗಳ ಆಹಾರ ಕಿತ್ತುಕೊಂಡು ತಾತ್ಕಾಲಿಕವಾಗಿ ಅನುಕೂಲ ಮಾಡಿಕೊಂಡಿರುವ ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಾಗಣೆ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಗಳ ಜತೆ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು.ತಹಶೀಲ್ದಾರ್ ವೆಂಕಟ ರಾಘವನ್ ನಾಯಕ್ ಮಾತನಾಡಿ, ಕಂದಾಯ ಇಲಾಖೆಯ 24 ಅಧಿಕಾರಿಗಳು ಈ ಅಧಿನಿಯಮ ವ್ಯಾಪ್ತಿಗೆ ಬರುತ್ತಾರೆ. ಯೋಜನೆ ಅಡಿ ಅರ್ಜಿ ಸ್ವೀಕರಿಸಲು ತಾಲ್ಲೂಕು ಕಚೇರಿಯಲ್ಲಿ ಪ್ರತ್ಯೇಕ ಕೌಂಟರ್ ಸ್ಥಾಪಿಸಲಾಗಿದ್ದು, ಇದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಜಿ.ಪಂ. ಮಾಜಿ ಸದಸ್ಯರಾದ ಕೆ. ಜಗಳೂರಯ್ಯ, ವಿ. ಮಾರನಾಯಕ ಮಾತನಾಡಿದರು.ತಾ.ಪಂ. ಇಒ ಅಂಜನ್‌ಕುಮಾರ್, ಜಿ.ಪಂ. ಎಇಇ ಶ್ರೀನಿವಾಸ್, ಉಪ ತಹಶೀಲ್ದಾರ್ ಖಾಸೀಂ, ಪ.ಪಂ. ಸದಸ್ಯ ಬಿ.ಜಿ. ಸೂರ್ಯನಾರಾಯಣ್, ಎ್ಲ್ಲಲ ತಾಲ್ಲೂಕುಮಟ್ಟದ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಸೇವೆಗೆ ಸತಾಯಿಸಬೇಡಿ

ಹಿರಿಯೂರು: ಸರ್ಕಾರಿ ಕಚೇರಿಗಳಲ್ಲಿ ತಮ್ಮ ಕೆಲಸಕ್ಕಾಗಿ ಅರ್ಜಿ ಹಿಡಿದು ಬರುವ ಸಾರ್ವಜನಿಕರನ್ನು ತಿಂಗಳುಗಟ್ಟಲೆ ಅಲೆದಾಡಿಸಲಾಗುತ್ತದೆ ಎಂಬ ಟೀಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದ್ದು ನಾಗರಿಕ ಸೇವೆಗಳ ಖಾತರಿ ಅಧಿನಿಯಮದಡಿ ಸಾರ್ವಜನಿಕರ ಸಮಸ್ಯೆಗಳಿಗೆ ಸರ್ಕಾರಿ ನೌಕರರು ಸ್ಪಂದಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ ಕರೆ ನೀಡಿದರು.ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಸೋಮವಾರ ಕರ್ನಾಟಕ ನಾಗರಿಕ ಸೇವೆಗಳ ಖಾತರಿ ಅಧಿನಿಯಮ-2011 ರ ಅನುಷ್ಠಾನದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಬದುಕಿನಲ್ಲಿ ನೊಂದು ಬೆಂದಿರುವ ವೃದ್ಧರು, ವಿಧವೆಯರು, ವಿಕಲಚೇತನರು ಸರ್ಕಾರ ಮಂಜೂರು ಮಾಡಿರುವ ಪಿಂಚಣಿ ಪಡೆಯಲು ಅರ್ಜಿ ಹಿಡಿದು ತಿಂಗಳಾನುಗಟ್ಟಲೆ ಅಲೆಯುವುದು ತಪ್ಪಬೇಕು. ಸರ್ಕಾರ ಈ ವರ್ಗದ ಫಲಾನುಭವಿಗಳ ಪಿಂಚಣಿಯನ್ನು ರೂ400ರಿಂದ ರೂ500ಕ್ಕೆ ಏರಿಸಿದೆ.

 

ಹಿಂದುಳಿದ ವರ್ಗದವರಿಗೆ ರೂಒಂದು ಸಾವಿರ ಕೋಟಿ, ಅಲ್ಪಸಂಖ್ಯಾತರಿಗೆ ರೂ385 ಕೋಟಿ, ಕ್ರಿಶ್ಚಿಯನ್ನರಿಗೆ ಪ್ರತ್ಯೇಕವಾಗಿ ರೂ50 ಕೋಟಿ ಮಂಜೂರು ಮಾಡಲಾಗಿದೆ. ರೈತರಿಗೆ ನೀಡುತ್ತಿರುವ ರೂ1 ಲಕ್ಷ ಸಾಲವನ್ನು ರೂ3 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ. ಸುಧಾಕರ್ ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ತಮ್ಮ ಕೆಲಸ ಆಗದವರು ಜನಪ್ರತಿನಿಧಿಗಳನ್ನು, ಸರ್ಕಾರವನ್ನು ಶಪಿಸುತ್ತಿದ್ದಾರೆ. ಇಂದಿನಿಂದ ಸೇವಾ ಖಾತರಿ ಯೋಜನೆ ಜಾರಿಗೆ ಬಂದಿರುವ ಕಾರಣ ನೆಪಗಳನ್ನು ಹೇಳುವಂತಿಲ್ಲ. ತಾಲ್ಲೂಕಿನಲ್ಲಿ ಸತತ ಎರಡು ವರ್ಷದಿಂದ ಬರಗಾಲವಿದೆ.

 

ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದೆ. ಕೊರೆಸಿದ ಕೊಳವೆ ಬಾವಿಗಳು ಒಂದೇ ವಾರದಲ್ಲಿ ಬತ್ತಿ ಹೋಗುತ್ತಿವೆ. ಜಿಲ್ಲಾಧಿಕಾರಿ, ಜಿಪಂ ಸಿಇಒ ಮತ್ತಿತರ ಅಧಿಕಾರಿಗಳು ಈ ಬಗ್ಗೆ ನಿಗಾ ವಹಿಸಬೇಕು. ಐಮಂಗಲ ಮತ್ತು ಯಲ್ಲದಕೆರೆ ಭಾಗದಲ್ಲಿ  ಇನ್ನೆರಡು ಗೋಶಾಲೆ ತೆರೆಯಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಎಸ್. ನಾರಾಯಣಸ್ವಾಮಿ ಮಾತನಾಡಿ, `ಸಕಾಲ~ ಯೋಜನೆ ಜಾರಿಯಿಂದ ಸರ್ಕಾರಿ ಕಚೇರಿಗಳಲ್ಲಿ ಲಂಚ, ವಿಳಂಬ ತಪ್ಪುತ್ತದೆ. ಇದರಿಂದ ಜನರ ಕೈಗೆ ಅಧಿಕಾರ ಸಿಕ್ಕಂತೆ ಆಗುತ್ತದೆ. ಎ್ಲ್ಲಲ ಇಲಾಖೆಗಳಿಗೂ ಈ ಕಾಯ್ದೆ ಅನ್ವಯ ಆಗಬೇಕು. ಇಂದಿನಿಂದ ಅಧಿಕಾರಿ, ಸಿಬ್ಬಂದಿಯ ಜವಾಬ್ದಾರಿ ಹೆಚ್ಚಿದೆ ಎಂದು ಅವರು ಹೇಳಿದರು.ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಮಾತನಾಡಿ, ರಾಜ್ಯದ 4 ಜಿಲ್ಲೆಗಳ 4 ತಾಲ್ಲೂಕುಗಳಲ್ಲಿ ಹಿಂದಿನ ತಿಂಗಳು ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಯಿತು. ಚಿತ್ರದುರ್ಗ ತಾಲ್ಲೂಕಿನಲ್ಲಿ ಸಾರ್ವಜನಿಕರು ನೀಡಿದ 8,300 ಅರ್ಜಿಗಳಲ್ಲಿ 6,300 ಅರ್ಜಿಗಳನ್ನು ವಿಲೇವಾರಿ ಮಾಡುವ ಮೂಲಕ ಯೋಜನೆ ಯಶಸ್ವಿಯಾಗಿದೆ. ಅಂತಿಮ ಗಡುವಿನವರೆಗೆ ಕಾಯದೆ, ಅವಧಿಗೆ ಮುಂಚೆಯೇ ಉತ್ತರ ನೀಡಿ ಎಂದು ಸರ್ಕಾರಿ ನೌಕರರಿಗೆ ಸಲಹೆ ಮಾಡಿದರು.ಜಿ.ಪಂ. ಸಿಇಒ ಎನ್. ಜಯರಾಂ ಮಾತನಾಡಿ, ಮುಂದಿನ ದಿನಗಳಲ್ಲಿ ಮಧ್ಯವರ್ತಿಗಳ ಸಹಾಯವಿಲ್ಲದೆ, ಸಾರ್ವಜನಿಕರು ನೇರವಾಗಿ ತಮ್ಮ ಕೆಲಸ ಮಾಡಿಸಿಕೊಳ್ಳಬಹುದಾಗಿದೆ. ಯೋಜನೆ ಯಶಸ್ಸಿಗೆ ಎಲ್ಲರೂ ಶ್ರಮಿಸಬೇಕು ಎಂದರು.ಪುರಸಭಾಧ್ಯಕ್ಷೆ ಮಂಜುಳಾ ವೆಂಕಟೇಶ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಗಿರಿಜಮ್ಮ, ಜಿ.ಪಂ. ಸದಸ್ಯ ದ್ಯಾಮೇಗೌಡ ಉಪಸ್ಥಿತರಿದ್ದರು. ತಹಶೀಲ್ದಾರ್ ಎನ್. ತಿಪ್ಪೇಸ್ವಾಮಿ ಸ್ವಾಗತಿಸಿದರು. ಶಿಶು ಯೋಜನಾಧಿಕಾರಿ ರುದ್ರಮುನಿ ವಂದಿಸಿದರು. ಶಿವಶಂಕರಮಠದ್ ಕಾರ್ಯಕ್ರಮ ನಿರೂಪಿಸಿದರು.ಭ್ರಷ್ಟಾಚಾರ ತಡೆಗೆ `ಸಕಾಲ~

ಚಳ್ಳಕೆರೆ: ಜನಸಾಮಾನ್ಯರಿಗೆ ಸರ್ಕಾರಿ ಕಚೇರಿಗಳಿಂದ ಆಗಬೇಕಾದ ಕೆಲಸಗಳನ್ನು ಸಕಾಲದಲ್ಲಿ ಮಾಡಿಕೊಡುವ ಸಲುವಾಗಿ ಕರ್ನಾಟಕ ನಾಗರಿಕ ಸೇವಾ ಖಾತರಿ ಕಾಯ್ದೆ ಜಾರಿಗೆ ತರಲಾಗಿದೆ ಎಂದು ಶಾಸಕ ತಿಪ್ಪೇಸ್ವಾಮಿ ಹೇಳಿದರು.ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ `ಕರ್ನಾಟಕ ನಾಗರಿಕ ಸೇವಾ ಖಾತರಿ ಕಾಯಿದೆ-2011~ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಗ್ರಾಮೀಣ ಪ್ರದೇಶಗಳಿಂದ ಕಾರ್ಯನಿಮಿತ್ತ ಸರ್ಕಾರಿ ಕಚೇರಿಗಳಿಗೆ ಆಗಮಿಸುವ ಸಾರ್ವಜನಿಕರಿಗೆ ಮಧ್ಯವರ್ತಿಗಳು ಮತ್ತು ನೌಕರರ ವರ್ತನೆ ಮತ್ತು ಲಂಚದ ಆಮಿಷಗಳು ಕೇಳಿಬರುತ್ತಿದ್ದವು. ಅದ್ದರಿಂದ, ಈ ಕಾಯ್ದೆ ಜಾರಿಗೆ ತರುವ ಮೂಲಕ ಯಾವುದೇ ಒಬ್ಬ ವ್ಯಕ್ತಿಯ ಕೆಲಸ ಶೀಘ್ರದಲ್ಲೇ ಮಾಡಿಕೊಡಲು ಕ್ರಮ ವಹಿಸಲಾಗಿದೆ ಎಂದರು.ಸರ್ಕಾರದ ಸೌಲಭ್ಯಗಳನ್ನು ಯಾವುದೇ ಶೋಷಣೆ ಮುಕ್ತವಾದ ರೀತಿಯಲ್ಲಿ ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬೇಕು. ಇದೀಗ ಜಾರಿಗೆ ಬಂದಿರುವ ಕಾಯ್ದೆ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದು ಸೂಚಿಸಿದರು.ತಹಶೀಲ್ದಾರ್ ರಾಮಚಂದ್ರಪ್ಪ ಮಾತನಾಡಿ, ಮಧ್ಯವರ್ತಿಗಳ ದಮನ, ಭ್ರಷ್ಟಾಚಾರ ತೊಲಗಿಸುವುದು, ಸಾಮಾನ್ಯ ವ್ಯಕ್ತಿಗೂ ನಿಗದಿತ ಸಮಯದಲ್ಲಿ ಕೆಲಸ ಮಾಡಿಕೊಡುವುದು ಈ ಕಾಯ್ದೆ ಉದ್ದೇಶ. ಅನಗತ್ಯವಾಗಿ ಕೆಲಸ ಮಾಡಿಕೊಡುವಲ್ಲಿ ವಿಳಂಬ ಧೋರಣೆ ತಳೆದರೆ ಸಂಬಂಧಿಸಿದ ಅಧಿಕಾರಿ ದಿನಕ್ಕೆ ಇಂತಿಷ್ಟು ಹಣವನ್ನು ತನ್ನ ಸಂಬಳದಲ್ಲಿ ಭರಿಸಬೇಕು ಎಂದು ತಿಳಿಸಿದರು.ಪುರಸಭೆ ಅಧ್ಯಕ್ಷೆ ಪಿ. ಶಂಷಾದ್, ತಾ.ಪಂ.ಉಪಾಧ್ಯಕ್ಷ ತಿಪ್ಪೇಶ್‌ಕುಮಾರ್ ಮಾತನಾಡಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಎಸ್. ಹೇಮಲತಾ, ಇಒ ತಿಪ್ಪೇಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎ. ತಿಮ್ಮಣ್ಣ, ಆರೋಗ್ಯಾಧಿಕಾರಿ ಡಾ.ಸಿ.ಎಲ್. ಪಾಲಾಕ್ಷ ಹಾಜರ್ದ್ದಿದರು.

ಯೋಜನೆಗಳನ್ನು ನಿಭಾಯಿಸುವುದು ಹೇಗೆ?

ಮೊಳಕಾಲ್ಮುರು: ಕಂದಾಯ ಇಲಾಖೆಗಳಿಗೆ ಸಂಬಂಧಪಟ್ಟಂತೆ ಹತ್ತಾರು ಯೋಜನೆಗಳನ್ನು ಸರ್ಕಾರ ಜಾರಿ ಮಾಡುವುದು ಒಂದೆಡೆಯಾದರೆ. ತಾಲ್ಲೂಕಿನಲ್ಲಿ ಸಿಬ್ಬಂದಿ ಸಮಸ್ಯೆಯಿಂದಾಗಿ ಇವುಗಳನ್ನು ಹೇಗೆ ನಿಭಾಯಿಸಬೇಕು ಎಂಬುದು ಪ್ರಶ್ನೆಯಾಗಿದೆ ಎಂದು ಶಾಸಕ ಎನ್.ವೈ, ಗೋಪಾಲಕೃಷ್ಣ ಹೇಳಿದರು.ಸೋಮವಾರ ಇಲ್ಲಿ ರಾಜ್ಯ ನಾಗರಿಕ ಸೇವೆಗಳ ಖಾತರಿ ಅಧಿನಿಯಮ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಇಲ್ಲಿನ ಕಂದಾಯ ಇಲಾಖೆಯಲ್ಲಿ ಹಲವು ಹಂತದ ಹುದ್ದೆಗಳು ಖಾಲಿ ಇವೆ. ಬರಸ್ಥಿತಿ, ಕುಡಿಯುವ ನೀರು, ಗೋಶಾಲೆ ಸೇರಿದಂತೆ ಹತ್ತಾರು ಯೋಜನೆಗಳನ್ನು ನಿಭಾಯಿಸಲು ಕಂದಾಯ ಇಲಾಖೆಯಿಂದ ಆಗುತ್ತಿಲ್ಲ. ಆದ್ದರಿಂದ ಜಿಲ್ಲಾಧಿಕಾರಿ ಇತ್ತ ಕೂಡಲೇ ಗಮನಹರಿಸಿ ಹುದ್ದೆಗಳನ್ನು ತುಂಬಲು ಕ್ರಮ ಕೈಗೊಳ್ಳುವ ಮೂಲಕ ಗಡಿ ತಾಲ್ಲೂಕಿನ ನೆರವಿಗೆ ಬರಬೇಕು ಎಂದು ಕೋರಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.