ಜಿಲ್ಲೆಯಲ್ಲಿ ಸ್ತಬ್ಧಗೊಂಡ ಕನ್ನಡ ಸಾಹಿತ್ಯ ಪರಿಷತ್ತು

7

ಜಿಲ್ಲೆಯಲ್ಲಿ ಸ್ತಬ್ಧಗೊಂಡ ಕನ್ನಡ ಸಾಹಿತ್ಯ ಪರಿಷತ್ತು

Published:
Updated:

ಯಾದಗಿರಿ: ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ರಾಜ್ಯದ 30ನೇ ಜಿಲ್ಲೆ ಯಾದಗಿರಿ. ಈಗಾಗಲೇ ಎರಡು ವರ್ಷ ಪೂರೈಸಿರುವ ಯಾದಗಿರಿ ಜಿಲ್ಲೆಯಲ್ಲಿ ಕನ್ನಡವನ್ನು ಕಟ್ಟುವ ಕೆಲಸಗಳು ಹೇಳಿಕೊಳ್ಳುವ ಪ್ರಮಾಣದಷ್ಟು ನಡೆಯುತ್ತಿಲ್ಲ. ಜಿಲ್ಲೆಯಾದ ನಂತರ ಜಿಲ್ಲಾ ಕೇಂದ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನ್ನಡದ ಯಾವುದೇ ಕಾರ್ಯಕ್ರಮಗಳು ನಡೆಯದೇ ಇರುವುದು ಜಿಲ್ಲೆಯ ಜನರಲ್ಲಿ ಬೇಸರ ಮೂಡಿಸಿದೆ.ಈ ಮಧ್ಯೆ ಕನ್ನಡ ನುಡಿಯ ಬಗ್ಗೆ ಅಭಿಮಾನ ಮೂಡಿಸುವ ಪ್ರಯತ್ನಕ್ಕೆ ಸಂಘ-ಸಂಸ್ಥೆಗಳು ಮುಂದಾಗಿರುವುದು ಸ್ವಲ್ಪ ನೆಮ್ಮದಿ ನೀಡಿದೆ.ಜಿಲ್ಲೆಯಾಗಿ ಎರಡು ವರ್ಷ ಕಳೆದರೂ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಇನ್ನೂ ರಚನೆ ಆಗಿಲ್ಲ. ಗುಲ್ಬರ್ಗ ಜಿಲ್ಲಾ ಘಟಕದ ಅಧ್ಯಕ್ಷರೇ, ಯಾದಗಿರಿಗೂ ಉಸ್ತುವಾರಿ.

 

ಆದರೆ ಜಿಲ್ಲಾ ಘಟಕದ ಅಧ್ಯಕ್ಷರು ಸಭೆಗೋ, ಸಮಾರಂಭಕ್ಕೋ ಒಂದು ಬಾರಿ ಯಾದಗಿರಿಗೆ ಬಂದಿದ್ದು ಬಿಟ್ಟರೇ, ಜಿಲ್ಲೆಯಲ್ಲಿನ ಕನ್ನಡದ ಕೆಲಸದಲ್ಲಿ ಕಾಣಿಸಿಕೊಂಡಿಲ್ಲ.

 

ಶಹಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನವನ್ನು ಸಂಘಟನೆ ಮಾಡಲಾಯಿತು. ಆದರೆ ಜಿಲ್ಲಾ ಕೇಂದ್ರದಲ್ಲಿ ಮಾತ್ರ ಸಾಹಿತ್ಯ ಪರಿಷತ್ತಿನಿಂದ ಯಾವುದೇ ಕನ್ನಡ ಪರ ಕಾರ್ಯಕ್ರಮಗಳ ಆಯೋಜನೆ ಆಗಿಲ್ಲ.ಗಡಿ ಜಿಲ್ಲೆಯಲ್ಲಿ ಕನ್ನಡವನ್ನು ಉಳಿಸಿ, ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕಿದ್ದ ಸಾಹಿತ್ಯ ಪರಿಷತ್ತು, ಜಿಲ್ಲೆಯನ್ನು ನಿರ್ಲಕ್ಷಿಸಿರುವುದು ಸಾಕಷ್ಟು ಬೇಸರ ಮೂಡಿಸಿದೆ. ಯಾವುದೇ ಸಾಹಿತ್ಯಿಕ ಕಾರ್ಯಕ್ರಮವಾಗಲಿ, ಕನ್ನಡ ಭಾಷೆಯ ವಿಚಾರ ಸಂಕಿರಣಸೇರಿದಂತೆ ಯಾವೊಂದು ಕಾರ್ಯಕ್ರಮಗಳನ್ನು ಆಯೋಜನೆ ಮಾಡುವಲ್ಲಿ ಸಾಹಿತ್ಯ ಪರಿಷತ್ತು ಸಂಪೂರ್ಣ ವಿಫಲವಾಗಿರುವುದು ಕನ್ನಡ ಪರ ಸಂಘಟನೆಗಳಲ್ಲೂ ತೀವ್ರ ಆಕ್ರೋಶ ಮೂಡಿಸಿದೆ.ಜಿಲ್ಲಾ ಕೇಂದ್ರದಲ್ಲಿ ಈಗಲೂ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕವೇ ಅಸ್ತಿತ್ವದಲ್ಲಿದ್ದು, ತಾಲ್ಲೂಕು ಸಾಹಿತ್ಯ ಸಮ್ಮೇಳನ ಸೇರಿದಂತೆ ಯಾವುದೇ ಕನ್ನಡಪರ ಕಾರ್ಯಕ್ರಮಗಳನ್ನು ಆಯೋಜಿಸಿಲ್ಲ. ಹಾಸ್ಯ ಸಂಜೆ ಬಿಟ್ಟರೇ, ಬೇರೆ ಯಾವುದೇ ಕನ್ನಡದ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂಬ ನೋವು ಜಿಲ್ಲೆಯ ಕನ್ನಡಿಗರನ್ನು ಕಾಡುತ್ತಿದೆ.ಸಂಘಟನೆಗಳ ಉತ್ಸಾಹ: ಒಂದೆಡೆ ಕನ್ನಡದ ಕೆಲಸಕ್ಕಾಗಿಯೇ ಇರುವ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಜಿಲ್ಲೆಯಲ್ಲಿ ಸಂಪೂರ್ಣ ಸ್ತಬ್ಧಗೊಂಡಿದ್ದರೆ, ಇನ್ನೊಂದೆಡೆ ಕನ್ನಡ ಕಟ್ಟುವ ಕೆಲಸಕ್ಕೆ ಸಂಘಟನೆಗಳು ಸಾಕಷ್ಟು ಉತ್ಸಾಹ ತೋರುತ್ತಿವೆ.2010 ರ ಸೆಪ್ಟೆಂಬರ್‌ನಲ್ಲಿ ಜಾನಪದ ಅಕಾಡೆಮಿ ಸಹಯೋಗದಲ್ಲಿ ಜಾನಪದ ಸಂಭ್ರಮವನ್ನು ನಗರದಲ್ಲಿ ಆಯೋಜಿಸಲಾಗಿತ್ತು. ನಂತರ 2011 ರ ಮಾರ್ಚ್ 15 ರಂದು ಸುರಪುರದ ಸಗರನಾಡು ಸೇವಾ ಪ್ರತಿಷ್ಠಾನದ ವತಿಯಿಂದ ಪ್ರಥಮ ಜಿಲ್ಲಾ ಯುವ ಸಾಹಿತ್ಯ ಸಮ್ಮೇಳನವು ನಗರದಲ್ಲಿ ನಡೆಯಿತು. 2011 ರ ನವೆಂಬರ್ 17 ರಂದು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕನ್ನಡಿಗರ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.ಇದೀಗ ಗುರುಮಠಕಲ್‌ನ ಪ್ರಯೋಗ ಪ್ರತಿಷ್ಠಾನವು ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಶನಿವಾರ (ಫೆ.11) ತಾಲ್ಲೂಕಿನ ಗುರುಮಠಕಲ್‌ನಲ್ಲಿ ಆಯೋಜಿಸಿದೆ.ಜಿಲ್ಲೆಯಲ್ಲಿರುವ ವಿವಿಧ ಸಂಘಟನೆಗಳು ಕನ್ನಡಪರ ಕೆಲಸಕ್ಕೆ ತೋರುತ್ತಿರುವ ಆಸಕ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ತೋರದೇ ಇರುವುದು ಸಾಕಷ್ಟು ಬೇಸರ ಮೂಡಿಸಿದೆ. ಇನ್ನೊಂದೆಡೆ ಜಿಲ್ಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿ ಮಾತ್ರವಿದ್ದು, ಅಧಿಕಾರಿಯೂ ಇಲ್ಲ, ಅಧಿಕಾರವೂ ಇಲ್ಲ ಎಂಬಂತಾಗಿದೆ.ಗಡಿ ಜಿಲ್ಲೆಯಲ್ಲಿ ನಿರ್ಲಕ್ಷ್ಯ ಸಲ್ಲ: ಆಂಧ್ರ ಪ್ರದೇಶದ ಗಡಿಗೆ ಹೊಂದಿ ಕೊಂಡಿರುವ ಯಾದಗಿರಿ ಜಿಲ್ಲೆಯಲ್ಲಿ ಕನ್ನಡವನ್ನು ಉಳಿಸಿ, ಬೆಳೆಸುವ ಕೆಲಸವನ್ನು ಮಾಡಬೇಕು. ಆದರೆ, ಈ ದಿಸೆಯಲ್ಲಿ ಕಾರ್ಯೋನ್ಮುಖ ಆಗಬೇಕಾದವರು ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿದ್ದಾರೆ.ಗಡಿ ಜಿಲ್ಲೆಯಲ್ಲಿ ಕನ್ನಡದ ಬಗ್ಗೆ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಉತ್ತರ ಕರ್ನಾಟಕ ಘಟಕದ ಅಧ್ಯಕ್ಷ ಶರಣು ಗದ್ದುಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾರೆ.ಯಾದಗಿರಿ ಜಿಲ್ಲೆಯಾಗಿ ಎರಡು ವರ್ಷ ಕಳೆದರೂ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕವಿಲ್ಲ. ಜಿಲ್ಲಾ ಕೇಂದ್ರದಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ಆಯೋಜಿಸಲು ಒಂದು ಸುಸಜ್ಜಿತ ಸಭಾಂಗಣವಿಲ್ಲ. ಸಾಹಿತ್ಯದ ಬಗ್ಗೆ ಒಲವು ಉಳ್ಳ ವ್ಯಕ್ತಿಗಳಿಗೂ ಕೊರತೆ ಉಂಟಾದಂತಿದೆ. ಇದೆಲ್ಲದರ ಪರಿಣಾಮ ಕನ್ನಡದ ನುಡಿಯ ಮೇಲೆ ಬೀಳುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ, ಗಡಿ ಜಿಲ್ಲೆಯಲ್ಲಿ ಸಂಪೂರ್ಣ ಆಂಧ್ರಪ್ರದೇಶದವರ ಪ್ರಭಾವ ಹೆಚ್ಚಾಗಲಿದ್ದು, ಕನ್ನಡವನ್ನು ಉಳಿಸುವ ಕೆಲಸ ಕಠಿಣವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಇದಕ್ಕೆ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಹೆಚ್ಚಿನ ಮುತುವರ್ಜಿ ವಹಿಸುವುದು ಅತ್ಯಗತ್ಯವಾಗಿದೆ ಎಂದು ಸಲಹೆ ಮಾಡುತ್ತಾರೆ.ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ ಇಂದು

ಗುರುಮಠಕಲ್: ಪ್ರಯೋಗ ಪ್ರತಿಷ್ಠಾನದ ಆಶ್ರಯದಲ್ಲಿ ಜಿಲ್ಲಾ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಪಟ್ಟಣದ ಗಾಂಧಿ ಮೈದಾನದ ಆವರಣದಲ್ಲಿ ಶನಿವಾರ (ಫೆ.11) ಹಮ್ಮಿಕೊಳ್ಳಲಾಗಿದೆ.ಬೆಳಿಗ್ಗೆ 9 ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ತಹಸೀಲ್ದಾರ ಕಚೇರಿಯಿಂದ ಗಾಂಧಿ ಮೈದಾನದವರೆಗೆ ನಡೆಯಲಿದ್ದು, ಶಾಂತವೀರ  ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮೆರವಣಿಗೆಯ 1 ನೇ ತರಗತಿಯ ವಿದ್ಯಾರ್ಥಿ ವೆಂಕಟೇಶ ಪಿ. ಮೆರವಣಿಗೆ ಉದ್ಘಾಟಿಸುವರು. ಶಾಸಕ ಬಾಬುರಾವ ಚಿಂಚನಸೂರ, ಸ್ವಾಗತ ಸಮಿತಿ ಅಧ್ಯಕ್ಷ ಚಂದುಲಾಲ ಚೌಧರಿ ಹಾಜರಿರುವರು.ಉದ್ಘಾಟನಾ ಸಮಾರಂಭ 10.30ಕ್ಕೆ ಜರುಗಲಿದ್ದು, ಬಾಲನಟ ಅಮಿತಾನಂದ ಉದ್ಘಾಟಿಸುವರು. 9ನೇ ತರಗತಿ ವಿದ್ಯಾರ್ಥಿ ಭಾರ್ಗವ ಯಾಲಾಲ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ವಹಿಸಲಿದ್ದು, ಅತಿಥಿಗಳಾಗಿ ಶಾಸಕ ಬಾಬುರಾವ ಚಿಂಚನಸೂರ, ಡಿಡಿಪಿಐ ಬಸಣ್ಣ ಮಹಂತಗೌಡ ಚಿತ್ರಕಲಾ ಹಿರಿಯ ವಿಷಯ ಪರಿವೀಕ್ಷಕ ಮಹಾಂತೇಶ ಕಂಟಿ, ಕಲಾವಿದ ಟಿ. ದೇವಿಂದ್ರಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಂಕರಲಿಂಗಪ್ಪ, ಕಸಾಪ ಸೈದಾಪುರ ವಲಯ ಘಟಕದ ಅಧ್ಯಕ್ಷ ವೆಂಕಪ್ಪ ಅಲೆಮನಿ ಆಗಮಿಸುವರು.ಶಾಂತವೀರ  ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

`ಶಿಕ್ಷಣ: ವಿದ್ಯಾರ್ಥಿಗಳ  ಇಷ್ಟದಂತೆಯೋ ಅಥವಾ ಪೋಷಕರ ಆಸಕ್ತಿಯಂತೆಯೋ?~ ಎಂಬ ಸಂವಾದ ಗೋಷ್ಠಿ, ಮಧ್ಯಾಹ್ನ 12 ಗಂಟೆಗೆ ಚೈತ್ರದ ಚಿತ್ತಾರ ಮಕ್ಕಳ ಸ್ಪರ್ಧೆ ಚಿತ್ರಗೋಷ್ಠಿ, ಮಧ್ಯಾಹ್ನ 2.15ಕ್ಕೆ ಕೇಂದ್ರ ಪಠ್ಯ ಅಳವಡಿಕೆ; ಸಾಧಕ ಮತ್ತು ಬಾಧಕಗಳು ಚಿಂತನಾ ಗೋಪ್ಠಿ, ಕವಿಗೋಷ್ಠಿ, ಚಿತ್ರಕಲೆ ಮತ್ತು ರಂಗೋಲಿ ಸ್ಪರ್ಧೆ ನಡೆಯಲಿವೆ. ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry