ಶುಕ್ರವಾರ, ಜೂನ್ 25, 2021
30 °C
ಆಮೆ ಗತಿಯಲ್ಲಿ ಅರಣ್ಯ ಅತಿಕ್ರಮಣ ಸಕ್ರಮ ಪ್ರಕ್ರಿಯೆ

ಜಿಲ್ಲೆಯಲ್ಲಿ ಹಕ್ಕುಪತ್ರ ವಿತರಣೆಗೆ ತರಾತುರಿ!

ಎಂ.ಜಿ.ಹೆಗಡೆ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊನ್ನಾವರ: ಅರಣ್ಯ ಅತಿಕ್ರಮಣ ಭೂಮಿಯ ಮಂಜೂರಾತಿಗೆ ಸಂಬಂಧಿಸಿದ ಕೆಲಸಕಾರ್ಯಗಳು ಆಮೆಗತಿಯಲ್ಲಿ ಸಾಗಿರುವಂತೆಯೇ  ಅರಣ್ಯ ಅತಿಕ್ರಮಣದಾರರಿಗೆ ಹಕ್ಕುಪತ್ರ ನೀಡಲಾಗುತ್ತಿದೆ ಯೆಂಬ ಸುದ್ದಿ ಹೆಚ್ಚಿನ ಅರಣ್ಯ ಅತಿಕ್ರಮಣದಾರರ ಆತಂಕವನ್ನು ಇನ್ನಷ್ಟು ಹೆಚ್ಚಿಸಿದ್ದು ಹಕ್ಕುಪತ್ರ ವಿತರಣೆಗೆ ಯಾಕಿಷ್ಟು ತರಾತುರಿ ಎಂದು ಪ್ರಶ್ನಿಸುವಂತೆ ಮಾಡಿದೆ.ಇದೇ 3ರಂದು ಮೊದಲ ಹಂತದಲ್ಲಿ ಅರಣ್ಯ ಅತಿಕ್ರಮಣದಾರರಿಗೆ ಮಂಜೂರಾತಿ ಪತ್ರ ವಿತರಣೆ ಮಾಡಲಾಗುತ್ತಿದ್ದು ಪ್ರತಿಶತ 90ಕ್ಕೂ ಹೆಚ್ಚಿನ ಅರಣ್ಯ ಅತಿಕ್ರಮಣದಾರರು ಪ್ರಸ್ತುತ ಹಂತದ ಈ ಅರ್ಹ ಫಲಾನುಭವಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲವೆನ್ನಲಾಗಿದೆ.ಪ್ರತಿ ಗ್ರಾಮಪಂಚಾಯ್ತಿ ಹಾಗೂ ಪಟ್ಟಣ ಪಂಚಾಯ್ತಿ ಮಟ್ಟದಲ್ಲಿ ಅರಣ್ಯ ಹಕ್ಕು ಸಮಿತಿಗಳನ್ನು ರಚಿಸಲಾಗಿದ್ದು ಅತಿಕ್ರಮಣದಾರರಿಂದ ಅರ್ಜಿ ಸ್ವೀಕರಿಸಿ,ಸ್ಥಳ ಮತ್ತು ದಾಖಲೆ ಪರಿಶೀಲಿಸಿ ಅರ್ಹ ಅತಿಕ್ರಮಿತ ಜಾಗವನ್ನು ಮಂಜೂರಿಗೆ ಶಿಫಾರಸು ಮಾಡಿ ವಿಭಾಗೀಯ ಮಟ್ಟದ ಸಮಿತಿಗೆ ಕಳಿಸುವ ಅಧಿಕಾರವನ್ನು ತಳಮಟ್ಟದ ಈ ಸಮಿತಿಗೆ ನೀಡಲಾಗಿದೆ.ಅರಣ್ಯ ಭೂಮಿಯ ಮಂಜೂರಿಗೆ ಕೋರಿ ಈ ಸಮಿತಿಗಳಿಗೆ ಬಂದಿರುವ ಅರ್ಜಿ ಬೆಟ್ಟದಷ್ಟಿದ್ದು ನಿಯಮಾನುಸಾರ ಭೂಮಿ ಸಕ್ರಮಾತಿ ಕೈಗೊಳ್ಳಲು ಅಗತ್ಯ ತಾಂತ್ರಿಕ ಸಿಬ್ಬಂದಿ ಹಾಗೂ ಪರಿಕರಗಳ ಕೊರತೆ ಸಮಿತಿಯ ಕೆಲಸಕ್ಕೆ ದೊಡ್ಡ ತೊಡಕಾಗಿ ಪರಿಣಮಿಸಿದೆ.ಉಪ ವಲಯ ಅರಣ್ಯಾಧಿಕಾರಿಯನ್ನು ಗ್ರಾಮ ಮಟ್ಟದ ಜಿಪಿಎಸ್ ಸರ್ವೆ ಕಾರ್ಯಕ್ಕೆ ನಿಯೋಜಿಸಲಾಗಿದೆಯಾದರೂ ಅಗತ್ಯ ಪ್ರಮಾಣದ ಜಿಪಿಎಸ್ ಪರಿಕರಗಳಾಗಲಿ ಅಥವಾ ಈಕಾರ್ಯಕ್ಕೆ ಅಗತ್ಯವಾದ ತಾಂತ್ರಿಕ ತರಬೇತಿಯಾಗಲಿ ಈ ಉಪ ಅರಣ್ಯ ಅರಣ್ಯಾಧಿಕಾರಿಗಳಿಗೆ ಅಥವಾ ಅವರ ಕೆಳಗಿನ ಸಿಬ್ಬಂದಿಗೆ ಇಲ್ಲವೆನ್ನಲಾಗಿದೆ.ಯಾವ ಭೂಮಿ ಅರಣ್ಯ ಸಕ್ರಮ ನಿಯಮಾನುಸಾರ ಸಾಧ್ಯವೆಂಬ ಬಗ್ಗೆ ಸಮಿತಿಯ ಸದಸ್ಯರಲ್ಲಿರುವ ಅಜ್ಞಾನ ಹಾಗೂ ಗೊಂದಲ ಜನರನ್ನು ಸಂಕಷ್ಟಕ್ಕೆ ದೂಡಿದೆ.75 ವರ್ಷದ ವ್ಯಕ್ತಿಯ ಹೇಳಿಕೆ ಭೂಮಿ ಮಂಜೂರಾತಿಗೆ ಒಂದು ದಾಖಲೆಯಾಗುತ್ತದೆ ಎನ್ನುವ ನಿಯಮದ ಅರ್ಥೈಸುವಿಕೆ ಆಯಾ ಗ್ರಾಮದ ವಯೋವೃದ್ಧರಿಗೆ ಹೆಚ್ಚಿನ ‘ಬೇಡಿಕೆ‘ ತಂದಿದೆ. ಜೊತೆಗೆ ಝೆರಾಕ್ಸ್  ಯಂತ್ರ, ನೋಟರಿಗಳಿಗೂ ಬೇಡಿಕೆ ಹೆಚ್ಚಿದೆ.ಪ್ರತಿ ಗ್ರಾಮದಿಂದ ಪ್ರಸ್ತುತ ಮೊದಲ ಹಂತದ ಹಕ್ಕುಪತ್ರ ವಿತರಣೆಗೆ ಶಿಫಾರಸಾಗಿರುವ ಪ್ರಕರಣಗಳ ಹೆಚ್ಚಿನ ‘ಅರ್ಹತೆ’ ಏನು ಎಂದು ಸಾಕಷ್ಟು ದಾಖಲೆಗಳಿದ್ದಾಗ್ಯೂ ಇನ್ನೂ ಮಂಜೂರಾತಿಯಿಂದ ವಂಚಿತವಾಗಿರುವ ಹೆಸರು ಹೇಳಲಿಚ್ಛಿಸದ ಅತಿಕ್ರಮಣದಾರರು ಪ್ರಶ್ನೆ ಮಾಡಿದ್ದಾರೆ.‘ಕೆಲವರನ್ನು ಮಾತ್ರ ಮೊದಲ ಪಟ್ಟಿಯಲ್ಲಿ ಸೇರಿಸಿರುವುದರ ಹಿಂದೆ ಸ್ವಜನಪಕ್ಷಪಾತ ಹಾಗೂ ಹಣದ ಆಮಿಷ ಕಾರಣವಿರಬಹುದು’ ಎಂದು ಸಂಶಯ ವ್ಯಕ್ತಪಡಿಸಿರುವ ಅವರು ಲೋಕಸಭೆ ಚುನಾವಣೆ ಘೋಷಣೆಯಾಗಿ ನೀತಿಸಂಹಿತೆ ಜಾರಿಯಾದಲ್ಲಿ ‘ನಮಗೆ ಈ ಬಾರಿಯೂ ಮಂಜೂರು ಸೌಲಭ್ಯ ಕನಸಿನ ಮಾತಾಗಬಹುದು’ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.