ಜಿಲ್ಲೆಯಲ್ಲಿ ಹೈನುಗಾರಿಕೆ ಆರಂಭಿಸಲು ಸಲಹೆ

7

ಜಿಲ್ಲೆಯಲ್ಲಿ ಹೈನುಗಾರಿಕೆ ಆರಂಭಿಸಲು ಸಲಹೆ

Published:
Updated:

ಯಾದಗಿರಿ: ಜಿಲ್ಲೆಯ ಶೇ 75 ರಷ್ಟು ಭಾಗ ನೀರಾವರಿ ಸೌಲಭ್ಯ ಹೊಂದಿದೆ. ಆದರೂ ಇದುವರೆಗೆ ಹೈನುಗಾರಿಕೆ ಅಭಿವೃದ್ಧಿ ಆಗಿಲ್ಲ. ಜಿಲ್ಲೆಗೆ ಪ್ರತ್ಯೇಕ ಕೆಎಂಎಫ್‌ ಘಟಕ ಆರಂಭವಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಹನುಮೇಗೌಡ ಮರಕಲ್‌ ಆಗ್ರಹಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣ­ದಲ್ಲಿ ಗುರುವಾರ ನಡೆದ ಹಣಕಾಸು ಮತ್ತು ಯೋಜನಾ ಸ್ಥಾಯಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಹೈನುಗಾರಿಕೆ ಆರಂಭಿ­ಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳ­ಬೇಕು. ಇಲ್ಲಿಯ ರೈತರಿಗೆ ಬ್ಯಾಂಕ್‌­ಗಳಿಂದ ಸಾಲ ಒದಗಿಸಬೇಕು. ಈ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳನ್ನು ವಿವರಿಸುವಂತೆ ಕೇಳಿದರು.ಇದಕ್ಕೆ ಪ್ರತಿಕ್ರಿಯಿಸಿದ ಪಶುಸಂಗೋ­ಪನಾ ಇಲಾಖೆ ಉಪನಿರ್ದೇಶಕ ಡಾ. ಮಂಜುನಾಥ, ಜಿಲ್ಲೆಯ ದೋರನಳ್ಳಿ ಹಾಲು ಶಿಥಿಲೀಕರಣ ಘಟಕದ ಪುನ­ಶ್ಚೇತನ ಕಾರ್ಯ ಆರಂಭವಾಗಿದೆ. ಹುಣಸಗಿಯಲ್ಲೂ ಘಟಕದ ಕಾಮ­ಗಾರಿ ಆರಂಭವಾಗಿದೆ. ಈ ಎರಡೂ ಕಾಮಗಾರಿಗಳು ಶೀಘ್ರ ಪೂರ್ಣ­ವಾಗ­ಲಿದೆ. ಗುರುಮಠಕಲ್‌ನಲ್ಲಿ ಘಟಕದ ಸ್ಥಾಪನೆಗೆ ಕಟ್ಟಡ ಸಿಗುತ್ತಿಲ್ಲ. ಈಗಾಗಲೇ ಹಾಲು ಉತ್ಪಾದಕರ ಸಹಕಾರ ಸಂಘಗಳ ರಚಿಸಲಾಗಿದ್ದು, ಅವುಗಳ ಮೂಲಕ ಸದಸ್ಯರಿಗೆ ತಲಾ ₨1 ಲಕ್ಷ ಸಾಲವನ್ನು ಡಿಸಿಸಿ ಬ್ಯಾಂಕ್‌ನಿಂದ ಒದಗಿಸಲಾಗುವುದು ಎಂದರು.ಮೈಸೂರು ಜಿಲ್ಲೆಯ ಭಾಗವಾಗಿದ್ದ ಚಾಮರಾಜನಗರದಲ್ಲಿ ಇದೀಗ ಪ್ರತ್ಯೇಕ ಹಾಲು ಒಕ್ಕೂಟವಿದೆ. ಅದೇ ಮಾದರಿಯಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಕೆಎಂಎಫ್‌ನ ಪ್ರತ್ಯೇಕ ಘಟಕ ಆಗಬೇಕು ಎಂದು ಮುಖ್ಯ ಯೋಜನಾಧಿಕಾರಿ ಬಸವರಾಜ ಹೇಳಿದರು.

ಇದಕ್ಕೆ ಉತ್ತರಿಸಿದ ಡಾ. ಮಂಜು­ನಾಥ, ಕನಿಷ್ಠ 50 ಸಾವಿರ ಲೀಟರ್ ಹಾಲು ನಿತ್ಯ ಸಂಗ್ರಹವಾಗುತ್ತಿದ್ದರೆ ಮಾತ್ರ ಕೆಎಂಎಫ್‌ ಲಾಭ ಗಳಿಸಲು ಸಾಧ್ಯ. ಅಂತಹ ಪರಿಸ್ಥಿತಿ ಇದ್ದಲ್ಲಿ ಮಾತ್ರ ಪ್ರತ್ಯೇಕ ಕೆಎಂಎಫ್‌ ಘಟಕವನ್ನು ಜಿಲ್ಲೆಯಲ್ಲಿ ಸ್ಥಾಪಿಸಬಹುದು ಎಂದರು.

ಈ ಕುರಿತು ಕೆಎಂಎಫ್‌ ಅಧಿಕಾರಿಗಳ ಜೊತೆ ವಿವರವಾಗಿ ಚರ್ಚಿಸಲು ನಿರ್ಧರಿಸಲಾಯಿತು.ಕಳೆದ ವರ್ಷ ಗುರುಮಠಕಲ್ ವಿಭಾಗ­ದಲ್ಲಿ ವಿದ್ಯಾರ್ಥಿಗಳಿಗೆ ವಿಷಯಾ­ಧಾರಿತ ಪುಸ್ತಕ ನೀಡಿದ್ದರಿಂದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹೆಚ್ಚಳ ಕಂಡು ಬಂದಿತು. ಕಳೆದ ಸಭೆಯಲ್ಲಿ ಇದನ್ನು ಜಿಲ್ಲೆಗೆ ವಿಸ್ತರಿಸಲು ಕ್ರಮ ತೆಗೆದು­ಕೊಳ್ಳುವ ಭರವಸೆ ನೀಡಲಾಗಿತ್ತು. ಎಷ್ಟು ವಿದ್ಯಾರ್ಥಿಗಳಿಗೆ ಪುಸ್ತಕ ನೀಡಿದ್ದೀರಿ ಎಂದು ಸದಸ್ಯ ಶರಣೀಕ್‌­ಕುಮಾರ ದೋಖಾ ಪ್ರಶ್ನಿಸಿದರು.ಇನ್ನೂ ವಿತರಿಸಿಲ್ಲ ಎಂದು ಡಿಡಿಪಿಐ ನಾಸೀರುದ್ದೀನ್‌ ಹೇಳುತ್ತಿದ್ದಂತೆಯೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ದೋಖಾ, ‘ಅಲ್ರಿ ದಾನ ಕೊಡುವವರಿಗೂ ಬೇಡವೆನ್ನುತ್ತೀರಿ. ನೀವು ಕೊಡುವುದಿಲ್ಲ. ಅಂದ್ರ ನಮ್ಮ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿ ಹೇಗೆ ಸಾಧ್ಯ. ಯಾಕೆ ವಿತರಿಸಿಲ್ಲವೆಂಬ ಕಾರಣ ನೀಡಿ’ ಎಂದು ಪಟ್ಟು ಹಿಡಿದರು. ಮಧ್ಯ ಪ್ರವೇಶಿಸಿದ ಯೋಜನಾಧಿಕಾರಿ ಬಸವರಾಜು, ನಾಳೆವರೆಗೆ ವಿದ್ಯಾರ್ಥಿಗಳ ಪಟ್ಟಿ ನೀಡುವಂತೆ ಸೂಚಿಸಿದರು.ತಡವಾಗಿ ಮಾಹಿತಿ ಪುಸ್ತಕ ಸಲ್ಲಿಕೆ: ಪ್ರತಿ ಸಭೆಯಲ್ಲೂ ಮಾಹಿತಿ ಪುಸ್ತಕವನ್ನು ಏಳು ದಿನ ಮೊದಲೇ ನೀಡುವಂತೆ ಹೇಳಿದರೂ, ಮತ್ತೆ ಹಳೆಯ ಪದ್ಧತಿ­ಯನ್ನೇ ಮುಂದುವರಿಸ­ಲಾಗುತ್ತಿದೆ. ಸಭೆ ನಡೆಯುವ ದಿನವೇ ಮಾಹಿತಿ ಪುಸ್ತಕವನ್ನು ಸದಸ್ಯರಿಗೆ ನೀಡಲಾಗುತ್ತಿದೆ ಎಂದು ಸದಸ್ಯ ಹನುಮೇಗೌಡ ಮರಕಲ್‌ ಆಕ್ರೋಶ ವ್ಯಕ್ತಪಡಿಸಿದರು.ಇದಕ್ಕೆ ಧ್ವನಿಗೂಡಿಸಿದ ಅಧ್ಯಕ್ಷೆ ಭೀಮಮ್ಮ ಚಪೇಟ್ಲಾ,  ಸಭೆ ಬಹಿಷ್ಕರಿಸಲು ಮುಂದಾದರು.ಇದಕ್ಕೆ ಸ್ಪಷ್ಟನೆ ನೀಡಿದ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಹ್ಮದ್‌ ಯುಸೂಫ್‌, ಜಿಲ್ಲಾ ಮಟ್ಟದ ಅಧಿಕಾರಿಗಳ ನಿರ್ಲಕ್ಷಕ್ಕೆ ಬೇಸರವಾಗಿದೆ. ದಯವಿಟ್ಟು ಸಭೆ ನಡೆಸಿ. ಮತ್ತೊಮ್ಮೆ ಹೀಗೆ ಮಾಡಿದರೆ, ಅಂತಹ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲು ಇಲಾಖೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗು­ವುದು ಎಂದು ತಿಳಿಸಿದರು.6ತಿಂಗಳಿಂದ ಸಭೆ ನಡೆದಿಲ್ಲ. ನೀವು ಏನು ಪ್ರಗತಿ ಮಾಡಿದ್ದೀರಿ ಎಂಬುದು ನಮಗೆ ಹೇಗೆ ಗೊತ್ತಾಗಬೇಕು ಎಂದು ಶರಣೀಕ್‌ಕುಮಾರ ದೋಖಾ ಪ್ರಶ್ನಿಸಿ­ದರು. ಸಭೆಯ ನಡೆಯುವ ಏಳು ದಿನ ಮೊದಲೇ ಮಾಹಿತಿ ವರದಿ ನೀಡದವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರು­ಗಿಸಲಾಗುವುದು ಎಂದು ಯೋಜನಾಧಿ­ಕಾರಿ ಬಸವರಾಜ ಸೂಚಿಸಿದರು.ಸದಸ್ಯರಾದ ನಾಗನಗೌಡ ಸುಬೇ­ದಾರ, ಪಾರ್ವತಮ್ಮ ಕಾಡಂನೋರ್‌, ಮಲ್ಲಮ್ಮ ಕಣೇಕಲ್‌ ಇ­ದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry