ಗುರುವಾರ , ನವೆಂಬರ್ 14, 2019
22 °C

ಜಿಲ್ಲೆಯಲ್ಲಿ 10 ನಾಮಪತ್ರ ತಿರಸ್ಕೃತ

Published:
Updated:

ತುಮಕೂರು: ಕುಣಿಗಲ್ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮುದ್ದಹನುಮೇಗೌಡ ಮತ್ತು ತುಮಕೂರು ನಗರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪಿ.ಎನ್.ಕೃಷ್ಣಮೂರ್ತಿ ಸೇರಿದಂತೆ ಜಿಲ್ಲೆಯಲ್ಲಿ 10 ಮಂದಿ ನಾಮಪತ್ರಗಳು ತಿರಸ್ಕೃತವಾಗಿವೆ.ವಿಧಾನಸಭೆ ಚುನಾವಣೆಗೆ ಗುರುವಾರ ನಾಮಪತ್ರ ಪರಿಶೀಲನೆ ನಡೆಯಿತು. ಮುದ್ದಹನುಮೇಗೌಡ ಅವರಿಗೆ ಜೆಡಿಎಸ್ ಬಿ ಫಾರಂ ನೀಡಿತ್ತು. ಆದರೆ ನಂತರದ ಬೆಳವಣಿಗೆಯಲ್ಲಿ ಡಿ.ನಾಗರಾಜಯ್ಯ ಅವರಿಗೆ ಜೆಡಿಎಸ್‌ನಿಂದ ಸಿ- ಫಾರಂ ನೀಡಿದ್ದರಿಂದ ಮುದ್ದಹನುಮೇಗೌಡ ನಾಮಪತ್ರ ತಿರಸ್ಕೃತವಾಗಿದೆ.ಜೆಡಿಎಸ್ ಸಿ ಫಾರಂ ದೊರೆತಿದೆ ಎಂದು ಸುದ್ದಿ ಹಬ್ಬಿಸಿದ್ದ ಪಿ.ಎನ್.ಕೃಷ್ಣಮೂರ್ತಿ ಗುರುವಾರ ಪಕ್ಷೇತರರಾಗಿ ನಗರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದರು. ಆದರೆ ನಿಯಮದಂತೆ 10 ಮಂದಿ ಸೂಚಕರು ಇಲ್ಲದ ಕಾರಣಕ್ಕೆ ನಾಮಪತ್ರ ತಿರಸ್ಕೃತವಾಗಿದೆ.

ತುಮಕೂರು ನಗರ ಕ್ಷೇತ್ರದಲ್ಲಿ ಇಬ್ಬರ ನಾಮಪತ್ರ ತಿರಸ್ಕೃತಗೊಂಡಿದ್ದು 20 ಮಂದಿ ನಾಮಪತ್ರ ಊರ್ಜಿತಗೊಂಡಿದೆ. ಪಿ.ಎನ್.ಕೃಷ್ಣಮೂರ್ತಿ (ಪಕ್ಷೇತರ) ಮತ್ತು ನಜೀರ್‌ಬೇಗ್ (ಜೆಡಿಎಸ್ ಬಿ ಫಾರಂ ಸಲ್ಲಿಸಿರಲಿಲ್ಲ) ನಾಮಪತ್ರ ತಿರಸ್ಕೃತಗೊಂಡಿವೆ.ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿದ್ದು 19 ಮಂದಿ ಕಣದಲ್ಲಿ ಉಳಿದಿದ್ದಾರೆ. ರಮೇಶ್‌ಗುರುದೇವ್ (ಬಿಜೆಡಿ) ಮತ್ತು ಆರ್.ನಂಜೇಗೌಡ (ಪಕ್ಷೇತರ) ನಾಮಪತ್ರ ತಿರಸ್ಕೃತಗೊಂಡಿವೆ.

ಶಿರಾ ಕ್ಷೇತ್ರದಲ್ಲಿ ಲೋಕಸತ್ತಾ ಅಭ್ಯರ್ಥಿ ಮಹದೇವಪ್ಪಗೌಡ ನಾಮಪತ್ರ ಸೂಚಕರ ಹೆಸರು ಹೊಂದಾಣಿಕೆಯಾಗದೆ ತಿರಸ್ಕೃತವಾಗಿದೆ.ತುರುವೇಕೆರೆ ಕ್ಷೇತ್ರದಲ್ಲಿ ಕೆ.ಹುಚ್ಚೇಗೌಡ ನಾಮಪತ್ರ ತಿರಸ್ಕೃತವಾಯಿತು. 14 ಮಂದಿ ಕಣದಲ್ಲಿ ಉಳಿದಿದ್ದಾರೆ. ಮಧುಗಿರಿ ಕ್ಷೇತ್ರದಲ್ಲಿ ಬಿ.ನಾಗೇಶಬಾಬು ನಾಮಪತ್ರ ತಿರಸ್ಕೃತವಾಗಿದೆ. 26 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚಿಕ್ಕನಾಯಕನಹಳ್ಳಿಯಲ್ಲಿ ಕವಿತಾ ಮತ್ತು ಶಿವಕುಮಾರ್ ನಾಮಪತ್ರ ತಿರಸ್ಕೃತವಾಗಿದೆ. ಇಬ್ಬರೂ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ ಬಿ ಫಾರಂ ನೀಡಿರಲಿಲ್ಲ.ನೀರಾವರಿ ಹಕ್ಕೋತ್ತಾಯ ಸಮಾವೇಶ ಮುಂದೂಡಿಕೆ

ಶಿರಾ: ಪಟ್ಟನಾಯಕನಹಳ್ಳಿ ನಂಜಾವಧೂತ ಸ್ವಾಮೀಜಿ 34ನೇ ಹುಟ್ಟುಹಬ್ಬ ಹಾಗೂ ನೀರಾವರಿ ಹಕ್ಕೊತ್ತಾಯ ಸಮಾವೇಶವನ್ನು ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂದು ಗುರುವಂದನಾ ಸಮಿತಿಯ ಎಸ್.ಬಿ.ರಮೇಶ್ ತಿಳಿಸಿದ್ದಾರೆ.ಸಮಾವೇಶದ ಅಂಗವಾಗಿ ಏರ್ಪಡಿಸುತ್ತಿದ್ದ ಸಾಮೂಹಿಕ ವಿವಾಹ ಸೇರಿದಂತೆ ಎಲ್ಲ ಕಾರ್ಯಕ್ರಮ ಮುಂದೂಡಲಾಗಿದ್ದು, ಮುಂದಿನ ಕಾರ್ಯಕ್ರಮದ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)