ಬುಧವಾರ, ನವೆಂಬರ್ 13, 2019
28 °C
ವಿಧಾನಸಭೆ ಚುನಾವಣೆ: ಅಂತಿಮ ಮತದಾರರ ಪಟ್ಟಿ ಪ್ರಕಟ; 60,887 ಮಂದಿ ಹೆಚ್ಚಳ

ಜಿಲ್ಲೆಯಲ್ಲಿ 14,61,456 ಮತದಾರರು

Published:
Updated:

ದಾವಣಗೆರೆ: ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಚುನವಣಾ ಆಯೋಗ ಮಂಗಳವಾರ ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದೆ. ಇದರಂತೆ ಜಿಲ್ಲೆಯಲ್ಲಿ 14,61,456 ಮತದಾರರಿದ್ದಾರೆ.ಏ. 16ರಂದೇ ಅಂತಿಮ ಮತದಾರರ ಪಟ್ಟಿ ಸಿದ್ಧಗೊಳ್ಳಬೇಕಿತ್ತು. ಆದರೆ, ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿಗೆ ಮತ್ತಷ್ಟು ಕಾಲಾವಕಾಶ ನೀಡುವಂತೆ ಚುನಾವಣಾ ಸಿಬ್ಬಂದಿ ಕೋರಿದ್ದರು. ಈ ಹಿನ್ನೆಲೆಯಲ್ಲಿ, ಏ. 17ರವರೆಗೂ ಅರ್ಜಿಗಳನ್ನು ವಿಲೇವಾರಿ ಮಾಡಲು ಚುನಾವಣಾ ಆಯೋಗ ತಿಳಿಸಿತ್ತು. ಇದೀಗ, ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ಮುಗಿದಿದ್ದು, ಏ. 17ರಲ್ಲಿದ್ದಂತೆ ಜಿಲ್ಲೆಯಲ್ಲಿ 14,61,456 ಮತದಾರರಿದ್ದಾರೆ. ಜ. 16 ಮತ್ತು 28ರಂದು ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಅಡಿ ಜಿಲ್ಲೆಯಲ್ಲಿ 14,00,569 ಮತದಾರರಿದ್ದರು. ಹೊಸದಾಗಿ ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿ ನಂತರ 60,887 ಮತದಾರರು ಹೆಚ್ಚಳವಾದಂತಾಗಿದೆ.ವಿಶೇಷ ಪರಿಷ್ಕರಣೆ ನಂತರ...

ಜಿಲ್ಲೆಯ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ, ಜ. 1ಕ್ಕೆ ಮತದಾರರ ಪಟ್ಟಿಗಳ ಸಂಕ್ಷಿಪ್ತ ಪರಿಷ್ಕರಣೆಯ ಅಡಿ ಜಗಳೂರು, ಹರಪನಹಳ್ಳಿ, ಹರಿಹರ, ಮಾಯಕೊಂಡ, ಚನ್ನಗಿರಿ ಹಾಗೂ ಹೊನ್ನಾಳಿ ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಜ. 16ರಂದು ಪ್ರಕಟಿಸಲಾಗಿತ್ತು. ದಾವಣಗೆರೆ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಜ. 28ರಂದು ಪ್ರಕಟಿಸಲಾಗಿತ್ತು. ಇದರಂತೆ, ಜಿಲ್ಲೆಯಲ್ಲಿ 7,16,664 ಪುರುಷರು ಹಾಗೂ 6,83,905 ಮಹಿಳೆಯರು ಸೇರಿ ಒಟ್ಟು 14,00,569 ಮತದಾರರು ಇದ್ದರು.ಇದಾದ ನಂತರ, ವಿಶೇಷ ಪರಿಷ್ಕರಣೆ ಕೈಗೊಂಡ ಚುನಾವಣಾ ಆಯೋಗ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ, ವರ್ಗಾವಣೆಗೆ ಹಾಗೂ ತಿದ್ದುಪಡಿಗೆ ಏ. 7ರವರೆಗೆ ಅವಕಾಶ ನೀಡಿತ್ತು. ಈ ಸಂದರ್ಭದಲ್ಲಿ ಸೇರ್ಪಡೆ, ತಿದ್ದುಪಡಿ ಹಾಗೂ ವರ್ಗಾವಣೆ ಕೋರಿ ನಿಗದಿತ ನಮೂನೆಯಲ್ಲಿ ಸಾವಿರಾರು ಮಂದಿ ಅರ್ಜಿ ಸಲ್ಲಿಸಿದ್ದರು. 65,232 ಮಂದಿ ಸೇರ್ಪಡೆ ಕೋರಿ, 5,048 ಅರ್ಜಿಗಳು ಪಟ್ಟಿಯಿಂದ ಹೆಸರು ತೆಗೆಯಲು, 10,825 ಅರ್ಜಿಗಳು ತಿದ್ದುಪಡಿ ಮಾಡುವಂತೆ ಹಾಗೂ 1,329 ಅರ್ಜಿಗಳು ವರ್ಗಾವಣೆ ಕೋರಿ ಸಲ್ಲಿಕೆಯಾಗಿದ್ದವು. ಇವುಗಳನ್ನು ತಹಶೀಲ್ದಾರರು ಪರಿಶೀಲಿಸಿ, ವಿಲೇವಾರಿ ಮಾಡಿದ್ದಾರೆ ಎಂದು ಮೂಲಗಳು `ಪ್ರಜಾವಾಣಿ'ಗೆ ತಿಳಿಸಿವೆ. ಇದರೊಂದಿಗೆ, ಮತಗಟ್ಟೆಗಳ ಸಂಖ್ಯೆ ಹೆಚ್ಚಿಸುವುದಕ್ಕೂ ಕ್ರಮ ಕೈಗೊಳ್ಳಲಾಗಿದೆ.ಜಿಲ್ಲೆಯಲ್ಲಿ, ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ ಅತಿಹೆಚ್ಚು ಅಂದರೆ 2,718 ಅರ್ಜಿ ಸಲ್ಲಿಕೆಯಾಗಿದ್ದವು. ಇದರಲ್ಲಿ, 29 ಅರ್ಜಿಗಳು ತಿರಸ್ಕೃತಗೊಂಡಿವೆ. ಮಾಯಕೊಂಡದಲ್ಲಿ ಅತಿ ಕಡಿಮೆ ಎಂದರೆ 492 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ 5 ಅರ್ಜಿ ತಿರಸ್ಕೃತಗೊಂಡಿವೆ.ಹರಪನಹಳ್ಳಿ ವರದಿ

ಹರಪನಹಳ್ಳಿ: ವಿಧಾನಸಭಾ ಕ್ಷೇತ್ರದಲ್ಲಿ ಏ. 7ರ ಅಂತ್ಯಕ್ಕೆ ಮತದಾರರ ಪಟ್ಟಿಯಲ್ಲಿ 7,120 ಯುವ ಹೊಸ ಮತದಾರರು ಸೇರ್ಪಡೆಯಾಗಿದ್ದು, ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ ಈಗ 1,84,859ಕ್ಕೆ ಏರಿಕೆಯಾಗಿದೆ ಎಂದು ಉಪ ವಿಭಾಗಾಧಿಕಾರಿ ಇಬ್ರಾಹಿಂ ಮೈಗೂರು ತಿಳಿಸಿದ್ದಾರೆ.ಹಾಲಿ ಮತದಾರರ ಪಟ್ಟಿಯಲ್ಲಿದ್ದ 918 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದ್ದು, ಈಗ 7,120 ಮತದಾರರು ಸೇರ್ಪಡೆಯಾಗಿದ್ದಾರೆ. ಹೀಗಾಗಿ, ಕ್ಷೇತ್ರದಲ್ಲಿ 94,702ಪುರುಷ ಹಾಗೂ 90,157ಮಹಿಳಾ ಮತದಾರರು ಸೇರಿದಂತೆ ಒಟ್ಟು 1,84,859 ಮತದಾರರು ಇದ್ದಾರೆ. ಪಟ್ಟಣದಲ್ಲಿ ಅತಿಹೆಚ್ಚು ಅಂದರೆ, 33,448 ಮತದಾರರು ಇದ್ದರೆ, ಅತಿಕಡಿಮೆ ಅಂದರೆ, 329 ಮತದಾರರು ತಾಲ್ಲೂಕಿನ ಬಿಕ್ಕಿಕಟ್ಟೆ ಗ್ರಾಮದಲ್ಲಿ ಇದ್ದಾರೆ.ಹೆಚ್ಚುವರಿ ಮತಗಟ್ಟೆ ಸ್ಥಾಪನೆ

ಚುನಾವಣೆಯ ಹಿನ್ನೆಲೆಯಲ್ಲಿ ಸುಗಮ ಮತದಾನಕ್ಕಾಗಿ ಈಗಾಗಲೇ ತಾಲ್ಲೂಕು ಆಡಳಿತ 227 ಮತಗಟ್ಟೆಗಳನ್ನು ತೆರೆಯಲು ಉದ್ದೇಶಿಸಿದೆ. ಆದರೆ, ಮತದಾರರ ಪಟ್ಟಿಯಲ್ಲಿ 7 ಸಾವಿರಕ್ಕೂ ಅಧಿಕ ಹೊಸ ಮತದಾರರು ಸೇರ್ಪಡೆಯಾದ ಪರಿಣಾಮ ಹೆಚ್ಚುವರಿ ಮತಗಟ್ಟೆಗಳನ್ನು ತೆರೆಯಬೇಕಾಗುತ್ತದೆ ಎಂದು ತಿಳಿಸಿದರು.ಚುನಾವಣಾ ಕಾರ್ಯಕ್ಕಾಗಿ 34 ಸಾರಿಗೆ ಸಂಸ್ಥೆ ಬಸ್, 2 ಜೀಪ್ ಬಳಸಲಾಗುವುದು. 1,400 ಮತಗಟ್ಟೆ ಸಿಬ್ಬಂದಿ ಸೇರಿದಂತೆ 34 ಮಂದಿ ಸೆಕ್ಟರ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)