ಜಿಲ್ಲೆಯಲ್ಲಿ 1560 ಎಚ್‌ಐವಿ ಪೀಡಿತರು

7

ಜಿಲ್ಲೆಯಲ್ಲಿ 1560 ಎಚ್‌ಐವಿ ಪೀಡಿತರು

Published:
Updated:

ತುಮಕೂರು: ಜಿಲ್ಲೆಯಲ್ಲಿ ಈ ವರ್ಷ 1560 ಜನರಿಗೆ ಎಚ್‌ಐವಿ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯ ಗುಬ್ಬಿ, ಶಿರಾ, ಮಧುಗಿರಿ, ಚಿಕ್ಕನಾಯಕನಹಳ್ಳಿ, ತಿಪಟೂರು ತಾಲ್ಲೂಕುಗಳು ಅನುಕ್ರಮವಾಗಿ ಮೊದಲ ಐದು ಸ್ಥಾನದಲ್ಲಿವೆ.ಪರೀಕ್ಷೆಗೆ ಒಳಪಟ್ಟ 62,691 ಜನರಲ್ಲಿ 1475 ಮಂದಿಗೆ ಸೋಂಕು ಕಂಡುಬಂದರೆ, 42,824 ಗರ್ಭಿಣಿಯರಲ್ಲಿ 85 ಮಂದಿಗೆ ಸೋಂಕು ಇರುವುದು ಪತ್ತೆಯಾಗಿದೆ.

2009ರಲ್ಲಿ 1863 ಮಂದಿಗೆ ಸೋಂಕು ತಗುಲಿತ್ತು. 2010-11ರಲ್ಲಿ 1733 ಜನರು ಸೋಂಕಿಗೆ ತುತ್ತಾಗಿದ್ದರು. ಕಳೆದ ಮೂರು ವರ್ಷದಿಂದ ಈಚೆಗೆ ಸೋಂಕು ಪೀಡಿತರ ಸಂಖ್ಯೆಯಲ್ಲಿ ಕೊಂಚ ಇಳಿಮುಖವಾದಂತಾಗಿದೆ. ರಾಜ್ಯದಲ್ಲಿ ಕಳೆದ ಬಾರಿ ಇಳಿಮುಖ ಪಟ್ಟಿಯಲ್ಲಿ 3ನೇ ಸ್ಥಾನ ಹೊಂದಿದ್ದ ತುಮಕೂರು ಜಿಲ್ಲೆ ಈ ಬಾರಿ 21ನೇ ಸ್ಥಾನಕ್ಕೆ ಇಳಿದಿದೆ.ಎಚ್‌ಐವಿ, ಏಡ್ಸ್ ನಿಯಂತ್ರಿಸಲು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಜಿಲ್ಲೆಯಲ್ಲಿ ಹಲ ಕಾರ್ಯಕ್ರಮಹಮ್ಮಿಕೊಂಡಿದೆ. ಜಿಲ್ಲೆಯ 101 ಪದವಿ, ಪಿಯುಸಿ ಕಾಲೇಜುಗಳಲ್ಲಿ ಜಾಥಾ, ರೆಡ್ ರಿಬ್ಬನ್ ಕ್ಲಬ್ ಸ್ಥಾಪನೆ, ಕಂಸಾಳೆ ತಂಡದಿಂದ ಪ್ರದರ್ಶನ, ಮ್ಯೋಜೀಕ್ ಶೋ, ಬೀದಿ ನಾಟಕ ಮೊದಲಾದ ಕಾರ್ಯಕ್ರಮ ನಡೆಸಿದೆ.`ರೋಗ ತಡೆಗೆ ಮುಂಜಾಗ್ರತೆ ಎಲ್ಲಕ್ಕಿಂತ ಉತ್ತಮ ಮಾರ್ಗ' ಎನ್ನುತ್ತಾರೆ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಅಧಿಕಾರಿಗಳು. ಅಸುರಕ್ಷಿತ ಲೈಂಗಿಕತೆ, ಎಚ್‌ಐವಿ ಸೋಂಕು ಇರುವ ವ್ಯಕ್ತಿಯ ರಕ್ತ ಪಡೆಯುವುದು, ಉಪಯೋಗಿಸಿದ ಸಿರಿಂಜ್, ಸೂಜಿ, ಉಪಕರಣ ಬಳಸುವುದು ಅಪಾಯಕಾರಿ ಎನ್ನುತ್ತಾರೆ.ಜಿಲ್ಲೆಯಲ್ಲಿ 22 ಐಸಿಟಿಸಿ ಕೇಂದ್ರ, 65 ಪ್ರಾಥಮಿಕ ಆರೋಗ್ಯ ಕೇಂದ್ರ, ಮೂರು ಮೊಬೈಲ್ ಘಟಕ, ನಾಲ್ಕು ಖಾಸಗಿ ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ಆಪ್ತ ಸಮಾಲೋಚನೆ ಹಾಗೂ ಪರೀಕ್ಷೆ ನಡೆಸಲಾಗುತ್ತಿದೆ.ಎಆರ್‌ಟಿ ಕೇಂದ್ರದಲ್ಲಿ ಎಚ್‌ಐವಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮುಂಜಾಗ್ರತೆ ಹಿನ್ನೆಲೆಯಲ್ಲಿ ಜಿಲ್ಲೆಯ ಐದು ರಕ್ತನಿಧಿ ಕೇಂದ್ರಗಳಿಂದ 2011-12ರಲ್ಲಿ 11985 ರಕ್ತದ ಯೂನಿಟ್‌ಗಳನ್ನು ಶೇಖರಿಸಲಾಗಿದೆ.ಪ್ರಮುಖವಾಗಿ ಬರ್ಡ್ಸ್, ಕಾರ್ಡ್ ಸಂಸ್ಥೆಗಳು ಏಡ್ಸ್ ರೋಗ ಜಾಗೃತಿ, ತಡೆ ಕುರಿತು ಕಾರ್ಯ ನಿರ್ವಹಿಸುತ್ತಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು. ಹೆಚ್ಚಿನ ಮಾಹಿತಿ, ಸೌಲಭ್ಯಗಳ ಕುರಿತು ಸಾರ್ವಜನಿಕರು 0816-2271275, ಉಚಿತ ಸಹಾಯವಾಣಿ 1800-425-8500 ಕರೆ ಮಾಡಬಹುದು.

ಸೋಂಕಿನಲ್ಲೂ ಕೊಂಕದ ಉತ್ಸಾಹಿ ಸತೀಶ್!

ತುರುವೇಕೆರೆ: ಬದುಕಿನಲ್ಲಿ ಅಮಿತೋತ್ಸಾಹ. ಏನಾದರೂ ಸಾಧಿಸಬೇಕೆನ್ನುವ ಛಲ! ಅನ್ಯಾಯ, ಅಕ್ರಮಗಳಿಗೆ ಸೆಡ್ಡು ಹೊಡೆದು ನಿಂತು ಸಮಾಜದ ಋಣ ತೀರಿಸಿ ಹೋಗುವ ತವಕ. ಸದಾ ಲವಲವಿಕೆ, ಕ್ರಿಯಾಶೀಲತೆಯ ಜೀವನ್ಮುಖಿ ಮನೋಭಾವ... ಇದು ತಾಲ್ಲೂಕಿನ ಚೌಡೇನಹಳ್ಳಿಯ ಯುವಕ ಸತೀಶ್ ಅಲಿಯಾಸ್ ಸುನೀಲ್ ಕುಮಾರ್ ವ್ಯಕ್ತಿತ್ವ.

ಇಂಥ ಭರವಸೆಯ ಯುವಕರು ಸಾವಿರಾರು ಜನ ಇರಬಹುದು. ಆದರೆ ಸತೀಶ್ ಹೀಗಿರುವುದರಲ್ಲಿ ಒಂದು ವಿಶೇಷವಿದೆ. ಸತೀಶ್ ಸಾಮಾನ್ಯ ಯುವಕರಂತಲ್ಲ. ಹನ್ನೆರೆಡು ವರ್ಷಗಳಿಂದ ಎಚ್‌ಐವಿ ಸೋಂಕಿನಿಂದ ನರಳುತ್ತಿದ್ದಾರೆ. ಎಚ್‌ಐವಿ ಸೋಂಕು ಪೀಡಿತರು ಸಾಮಾನ್ಯವಾಗಿ ನೋವು, ಸಂಕೋಚ, ಹತಾಶೆ, ಖಿನ್ನತೆ, ಕೀಳರಿಮೆಯಿಂದ ಸಮಾಜದ ಮುಖ್ಯವಾಹಿನಿಯಿಂದ ದೂರವೇ ಉಳಿದು ಬಿಡುತ್ತಾರೆ. ಆದರೆ ಸತೀಶ್ ಧೃತಿಗೆಡದೆ ತಮ್ಮಂತೆ ಎಚ್‌ವಿಐ ಸೋಂಕಿಗೆ ಒಳಗಾದವರ ಕ್ಷೇಮಾಭ್ಯುದಯಕ್ಕೆ ನಿರಂತರ ದುಡಿಯುತ್ತಿದ್ದಾರೆ.ಪತ್ನಿ ಹೆರಿಗೆಗೆ ಹೋದಾಗ ಎಚ್‌ಐವಿ ಸೋಂಕಿದೆ ಎಂಬ ಕಾರಣಕ್ಕೆ ಅವರನ್ನು ಆಸ್ಪತ್ರೆಯಿಂದ ಹೊರಗೆ ಹಾಕಲಾಯಿತಂತೆ. ಆಗಲೇ ತಮಗೆ   ಎಚ್‌ಐವಿ ಸೋಂಕಿದೆ ಎಂಬ ಆಘಾತಕಾರಿ ಸತ್ಯ ಸತೀಶ್‌ಗೆ ತಿಳಿದಿದ್ದು. ಈ ಸೋಂಕು ಹೇಗೆ ಬಂತೆಂದು ತಮಗೆ ಗೊತ್ತಿಲ್ಲ ಎನ್ನುತ್ತಾರೆ ಸತೀಶ್! ಪತ್ನಿ ಈಗ ಜತೆಯಲ್ಲಿಲ್ಲ. ಸತೀಶ್ ಮತ್ತೊಬ್ಬರು ಎಚ್‌ಐವಿ ಸೋಂಕು ಪೀಡಿತರಿಗೆ ಬಾಳು ಕೊಟ್ಟಿದ್ದಾರೆ.ಸತೀಶ್ ಹತ್ತು ವರ್ಷಗಳಿಂದ ಎಚ್‌ಐವಿ ಸೋಂಕು ಪೀಡಿತರ ರಾಷ್ಟ್ರೀಯ ಸಂಘಟನೆ ಐಎನ್‌ಪಿಯ ಸದಸ್ಯರಾಗಿ, ರಾಷ್ಟ್ರೀಯ ಸೋಂಕು ಪೀಡಿತರ ಒಕ್ಕೂಟದ ಕಾರ್ಯದರ್ಶಿಯಾಗಿ, ರಾಜ್ಯ ಸಂಘಟನೆ ಸಂಚಾಲಕರಾಗಿ ಸೋಂಕು ಪೀಡಿತರ ಅಭ್ಯುದಯಕ್ಕೆ ಶ್ರಮಿಸಿದ್ದಾರೆ. ಎಚ್‌ಐವಿಗೆ ಚಿಕಿತ್ಸೆ ದುಬಾರಿಯಾಗಿದ್ದ ಕಾಲದಲ್ಲಿ ಸರ್ಕಾರ ಉಚಿತ, ಗುಣಮಟ್ಟದ ಚಿಕಿತ್ಸೆ ನೀಡಬೇಕು ಎಂದು ಒತ್ತಾಯಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.ಜಿಲ್ಲೆಯಲ್ಲಿ ಸೋಂಕು ಪೀಡಿತರಿಗೆ ಅರಿವು ಮೂಡಿಸಲು ಚಿರಜೀವನ ಸಂಸ್ಥೆ ಸಂಘಟಿಸಿ ಅದರ ಸ್ಥಾಪಕ ಸಂಚಾಲಕರಾಗಿ ಕೆಲಸ ಮಾಡಿದ್ದಾರೆ. ತಾಲ್ಲೂಕಿನ ಎಚ್‌ಐವಿ ಪೀಡಿತರನ್ನು ಸಂಘಟಿಸಿ ಎಆರ್‌ಟಿ ಚಿಕಿತ್ಸೆ ಬಗ್ಗೆ ಅರಿವು ಮೂಡಿಸಿದ್ದಾರೆ. ಅವರಲ್ಲಿ ಜೀವನೋತ್ಸಾಹ ತುಂಬುವ ಸಾರ್ಥಕ ಕೆಲಸ ಮಾಡುತ್ತಿದ್ದಾರೆ.ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿಯುವ ಸೋಂಕು ಪೀಡಿತರಿಗೂ ನಾವು ಮಾನವೀಯತೆ ತೋರಬೇಕಾಗುತ್ತದೆ. ಅಂತಹವರಿಗೆ ಅರಿವು ಮೂಡಿಸಿ ಅವರನ್ನೂ ಸಮಾಜದ ಮುಖ್ಯವಾಹಿನಿಗೆ ತರಬೇಕು. ನಿರಾಶ್ರಿತರಿಗೆ, ಎಡಪಂಥೀಯ ಸಂಘಟನೆಗಳಲ್ಲಿ ಕೆಲಸ ಮಾಡುವವರಿಗೆ, ಅಪರಾಧ ಲೋಕದಲ್ಲಿರುವವರಿಗೆ ಸೋಂಕು ತಗಲುವ ಸಂಭವ ಹೆಚ್ಚು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಉಗಾಂಡ, ರೂವಾಂಡ, ಸೋಮಾಲಿಯಾ ಮೊದಲಾದ ದೇಶಗಳಿಗೆ ಭೇಟಿ ನೀಡಿ ಸೊಂಕು ಪೀಡಿತರನ್ನು ಉಪಚರಿಸಿದ್ದೇನೆ ಎನ್ನುತ್ತಾರೆ.ಸತೀಶ್ ಸೋಂಕು ಪೀಡಿತರಾಗಿದ್ದರೂ ಧೃಡಕಾಯರಾಗಿದ್ದಾರೆ. ಪಿತ್ರಾರ್ಜಿತವಾಗಿ ಬಂದ ಆರು ಎಕರೆ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಎಳನೀರು, ಯಥೇಚ್ಛ ತರಕಾರಿ, ಒತ್ತಡ ರಹಿತ ಶಿಸ್ತುಬದ್ಧ ಜೀವನವಿದ್ದರೆ ಸೋಂಕಿನಿಂದ ಉಂಟಾಗಬಹುದಾದ ಇತರೆ ರೋಗಗಳ ಆಕ್ರಮಣ ತಡೆಗಟ್ಟಬಹುದು ಎನ್ನುತ್ತಾರೆ ಸತೀಶ್.ಸತೀಶ್ ಸಾಮಾಜಿಕ ಚಟುವಟಿಕೆ ಇಷ್ಟಕ್ಕೇ ಸೀಮಿತವಾಗಿಲ್ಲ. ಗುಡ್ಡಗಾಡು, ಕಾಡುಪ್ರದೇಶಗಳಲ್ಲಿರುವ ಗಿರಿಜನರ ಬಗ್ಗೆಯೂ ಅವರಿಗೆ ವಿಪರೀತ ಕಾಳಜಿ. ಗಿರಿಜನರ ಏಳಿಗೆಗೆ ಶ್ರಮಿಸುತ್ತಿರುವ ಹಲವು ಸಂಘಟನೆಗಳ ಬಗ್ಗೆಯೂ ಅವರಿಗೆ ಅನುಕಂಪವಿದೆ. ಈ ಜನರ ಜೀವನ ಮಟ್ಟ ಸುಧಾರಣೆಗೆ ಸತೀಶ್ ಶ್ರಮಿಸಿದ್ದಾರೆ. ಸ್ವಂತ ಗ್ರಾಮದಲ್ಲಿ ಒತ್ತುವರಿಯಾಗಿರುವ ಗುಂಡು ತೋಪು, ಗೋಮಾಳದ ಅತಿಕ್ರಮಣ ತೆರವುಗೊಳಿಸುವಂತೆ ಕೋರಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.ಸ್ವಂತ ದುಡ್ಡು, ಸಾರ್ವಜನಿಕರ ನೆರವಿನೊಂದಿಗೆ ಅಲ್ಲೊಂದು ಕೆರೆ ನಿರ್ಮಿಸುವ ಕನಸಿದೆ. ಎಚ್‌ಐವಿ ಪೀಡಿತ ವ್ಯಕ್ತಿಗಳ ಕುಟುಂಬಗಳು, ಪೊಲೀಸ್

ಕಾರ್ಯಾಚರಣೆಯಲ್ಲಿ ಮೃತಪಟ್ಟ ಕುಟುಂಬಗಳು ದುಸ್ಥಿತಿಯಲ್ಲಿವೆ. ಅವರ ಆಸ್ತಿ ಕಬಳಿಸಿ ಅರ್ಥಿಕವಾಗಿ ಅವರನ್ನು ಬೀದಿಗೆ ನಿಲ್ಲಿಸಲಾಗುತ್ತಿದೆ ಎಂದು ಅಕ್ರೋಶ ವ್ಯಕ್ತಪಡಿಸುವ ಸತೀಶ್ ತಮ್ಮ ಇಡೀ ಆಸ್ತಿಯನ್ನು ಎಚ್‌ಐವಿ ಪೀಡಿತರ ಕ್ಷೇಮಾಭಿವೃದ್ಧಿಗೆ, ಪೊಲೀಸ್ ಕಾರ್ಯಾಚರಣೆಯಲ್ಲಿ ಮೃತಪಟ್ಟವರ ಕುಟುಂಬದ ಮಕ್ಕಳ ಕಲ್ಯಾಣ ನಿಧಿಗೆ ಬಳಸುವಂತೆ ಒಂದು ಟ್ರಸ್ಟ್ ಮಾಡುವ ಉದ್ದೇಶ ಹೊಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry