ಬುಧವಾರ, ನವೆಂಬರ್ 20, 2019
27 °C
ವಿಧಾನಸಭಾ ಚುನಾವಣೆ: ವಿವಿಧೆಡೆ ಅಖಾಡಕ್ಕೆ ಇಳಿದ ಅಭ್ಯರ್ಥಿಗಳು

ಜಿಲ್ಲೆಯಲ್ಲಿ 20 ನಾಮಪತ್ರ ಸಲ್ಲಿಕೆ

Published:
Updated:

ಚಿತ್ರದುರ್ಗ: ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ 20 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು  ಜಿಲ್ಲಾ ಚುನಾವಣಾಧಿಕಾರಿ ಡಾ.ಜೆ. ರವಿಶಂಕರ್ ತಿಳಿಸಿದ್ದಾರೆ.ಚಿತ್ರದುರ್ಗ ಕ್ಷೇತ್ರದಿಂದ 5 ನಾಮಪತ್ರ ಸಲ್ಲಿಕೆಯಾಗಿದ್ದು, ಪಕ್ಷೇತರರಾಗಿ ಅಸ್ಲಂಭಾಷಾ, ಗಣೇಶ, ಸಿ.ಕೆ. ರೆಹಮಾನ್, ಎಸ್. ಮೃತ್ಯುಂಜಯಪ್ಪ ಹಾಗೂ ಬಹುಜನ ಸಮಾಜವಾದಿ ಪಕ್ಷದಿಂದ ಜಿ.ಆರ್. ಪಾಂಡುರಂಗ ನಾಮಪತ್ರ ಸಲ್ಲಿಸಿದ್ದಾರೆ.ಚಳ್ಳಕೆರೆ ಕ್ಷೇತ್ರದಿಂದ ಪಕ್ಷೇತರರಾಗಿ ಕೆ.ಪಿ. ಭೂತಯ್ಯ, ಮತ್ತು ಎಂ. ಪಾಲಯ್ಯ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಮೊಳಕಾಲ್ಮುರು ಕ್ಷೇತ್ರದಿಂದ ಪಕ್ಷೇತರರಾಗಿ ಡಿ.ಟಿ. ಶ್ರಿನಿವಾಸನಾಯಕ್, ಎನ್.ಆರ್. ಮಲ್ಲಯ್ಯಸ್ವಾಮಿ ಹಾಗೂ ಜೆಡಿಎಸ್‌ನಿಂದ ಟಿ.ಡಿ. ದೊಡ್ಡಯ್ಯ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.ಹಿರಿಯೂರು ಕ್ಷೇತ್ರದಿಂದ ಜೆಡಿಎಸ್ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಎನ್.ಆರ್. ಲಕ್ಷ್ಮೀಕಾಂತ್,  ಬಿಎಸ್‌ಆರ್‌ನಿಂದ ಎಂ. ಜಯಣ್ಣ, ಪಕ್ಷೇತರರಾಗಿ ಬಿ. ಸುಧಾಕರ ಒಟ್ಟು 4 ನಾಮಪತ್ರಗಳು ಸಲ್ಲಿಕೆಯಾಗಿವೆ. ಹೊಸದುರ್ಗ ಕ್ಷೇತ್ರದಿಂದ ಪಕ್ಷೇತರರಾಗಿ ಸೈಯದ್ ಇಸ್ಮಾಯಿಲ್, ಕೆಜೆಪಿಯಿಂದ ಎಸ್. ಲಿಂಗಮೂರ್ತಿ  ಹಾಗೂ ಸಮಾಜವಾದಿ ಪಕ್ಷದಿಂದ ಚಿತ್ತಪ್ಪ 3 ನಾಮಪತ್ರ ಸಲ್ಲಿಸಿದ್ದಾರೆ.ಹೊಳಲ್ಕೆರೆ ಕ್ಷೇತ್ರದಿಂದ ಪಕ್ಷೇತರರಾಗಿ ವಿ. ರಮೇಶ್, ಬಿಎಸ್‌ಪಿಯಿಂದ ಜಿ.ಎನ್. ಪರಮೇಶ್ ಹಾಗೂ ಭಾರತೀಯ ಪ್ರಜಾ ಪಕ್ಷದಿಂದ ಎಸ್. ರಘುಮೂರ್ತಿ ಸೇರಿದಂತೆ 3 ನಾಮಪತ್ರ ಸಲ್ಲಿಕೆಯಾಗಿದೆ ಎಂದು ತಿಳಿಸಿದ್ದಾರೆ.ಹಿರಿಯೂರು ವರದಿ

ಮಂಗಳವಾರ ಹಿರಿಯೂರು ವಿಧಾನ ಸಭಾ ಕ್ಷೇತ್ರಕ್ಕೆ ಬಿಎಸ್‌ಆರ್‌ಕಾಂಗ್ರೆಸ್‌ನಿಂದ ಎಂ. ಜಯಣ್ಣ, ಪಕ್ಷೇತರರಾಗಿ ಎನ್.ಆರ್. ಲಕ್ಷ್ಮೀಕಾಂತ್ ಮತ್ತು ಅರ್ಬನ್ ಸಹಕಾರಿ ಬ್ಯಾಂಕ್ ನಿರ್ದೇಶಕ ಬಿ. ಸುಧಾಕರ್ ನಾಮಪತ್ರ ಸಲ್ಲಿಸಿದರು.ಕಾಂಗ್ರೆಸ್‌ನ ಹಿರಿಯ ಮುಖಂಡ ಎ. ಕೃಷ್ಣಪ್ಪ ಅವರಿಗೆ ಬೆಂಗಳೂರಿನ ಕೆ.ಆರ್. ಪುರಂ ಕ್ಷೇತ್ರದ ಟಿಕೆಟ್ ನಿರಾಕರಿಸಿದ ನಂತರ, ಅವರನ್ನು ಜೆಡಿಎಸ್ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಪಕ್ಷದ ಅಧ್ಯಕ್ಷ ಕುಮಾರಸ್ವಾಮಿ ಅವರು ಯಾದವರು ಹೆಚ್ಚಿನ ಸಂಖ್ಯೆಯಲ್ಲಿರುವ ಹಿರಿಯೂರು ಕ್ಷೇತ್ರದಿಂದ ಸ್ಪರ್ಧಿಸಲು ಹಸಿರು ನಿಶಾನೆ ತೋರಿಸಿದ್ದಾರೆ. ಜೆಡಿಎಸ್ ಸಂಘಟಿಸಲು ಐದಾರು ತಿಂಗಳಿಂದ ತೀವ್ರ ಪ್ರಯತ್ನ ಮಾಡಿದ್ದ ಲಕ್ಷ್ಮೀಕಾಂತ್ ಅವರಿಗೆ ವರಿಷ್ಠರ ನಿರ್ಧಾರದಿಂದ ತೀವ್ರ ನಿರಾಸೆಯಾಗಿದೆ. ಪತ್ನಿ ಮಂಜುಳಾಕಾಂತ ಅವರ ಜತೆ ನಾಮಪತ್ರ ಸಲ್ಲಿಸಲು ಆಗಮಿಸಿದ ಅವರು ಸುದ್ದಿಗಾರರ ಜತೆ ತಮ್ಮ ಬೇಸರ ಹಂಚಿಕೊಂಡರು.ಇದುವರೆಗೂ ಶಾಸಕ ಡಿ. ಸುಧಾಕರ್ ಕ್ಷೇತ್ರದ ಹೊರಗಿನವರು. ಸ್ಥಳೀಯರನ್ನು ಆಯ್ಕೆ ಮಾಡುವಂತೆ ಒತ್ತಾಯಿಸುತ್ತಿದ್ದ ಜೆಡಿಎಸ್ ಮುಖಂಡರು ಕೃಷ್ಣಪ್ಪ ಅವರನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.ನಿರೀಕ್ಷೆಯಂತೆ ಬಿಎಸ್‌ಆರ್ ಕಾಂಗ್ರೆಸ್‌ನಿಂದ ಜಿ.ಪಂ. ಮಾಜಿ ಅಧ್ಯಕ್ಷ ಎಂ. ಜಯಣ್ಣ ಅವರು, ಸಾವಿರಾರು ಬೆಂಬಲಿಗರ ಜತೆ ತೇರುಮಲ್ಲೇಶ್ವರಸ್ವಾಮಿ ದೇಗುಲ, ನೇಕ್‌ಬೀಬಿ ದರ್ಗಾದಲ್ಲಿ ಪೂಜೆ-ಪ್ರಾರ್ಥನೆ ಸಲ್ಲಿಸಿದ ನಂತರ ಪ್ರಧಾನ ರಸ್ತೆಯಲ್ಲಿ ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.ಹಿಂದಿನ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿ ಕೊನೆಗೆ ನಾಮಪತ್ರ ಹಿಂದೆ ಪಡೆದಿದ್ದ ಪತ್ರ ಬರಹಗಾರ ಬಿ. ಸುಧಾಕರ್ ಪಕ್ಷೇತರರಾಗಿ ಮತ್ತೆ ನಾಮಪತ್ರ ಸಲ್ಲಿಸಿದ್ದಾರೆ.ಮೊಳಕಾಲ್ಮುರು ವರದಿ

ಸ್ಥಳೀಯ ವಿಧಾನಸಭಾ ಕ್ಷೇತ್ರ ಚುನಾವಣೆಗೆ ಮಂಗಳವಾರ ಮತ್ತೆ ಮೂರು ನಾಮಪತ್ರಗಳು ಸಲ್ಲಿಕೆಯಾಗುವ ಮೂಲಕ ಒಟ್ಟು 7 ಮಂದಿಯಿಂದ 13 ನಾಮಪತ್ರಗಳು ಸಲ್ಲಿಕೆಯಾಗಿದೆ.ಪಕ್ಷೇತರ ಅಭ್ಯರ್ಥಿಯಾಗಿ ರಾಂಪುರ ಗ್ರಾಮದ ಮಲ್ಲಯ್ಯಸ್ವಾಮಿ ಹಾಗೂ ಡಿ.ಟಿ. ಶ್ರೀನಿವಾಸ ನಾಯಕ ಅವರು ನಾಮಪತ್ರ ಸಲ್ಲಿಸಿದ್ದಾರೆ. ಈ ಪೈಕಿ ಮಲ್ಲಯ್ಯಸ್ವಾಮಿ ಸತತ ಮೂರನೇ ಬಾರಿ ನಾಮಪತ್ರ ಸಲ್ಲಿಸಿದ್ದು, ಕಳೆದ ಎರಡು ಬಾರಿ ಕಣದಲ್ಲಿ ಉಳಿದಿದ್ದರು. ಮಲ್ಲಯ್ಯಸ್ವಾಮಿ ಹಾಲಿ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರ ಅಳಿಯ ಎಂಬುದು ವಿಶೇಷ.ಡಿ.ಟಿ. ದೊಡ್ಡಯ್ಯ ಜೆಡಿಎಸ್ ಪರವಾಗಿ ಮತ್ತೊಂದು ನಾಮಪತ್ರವನ್ನು ಮಂಗಳವಾರ ಸಲ್ಲಿಸಿದ್ದಾರೆ ಎಂದು  ಮೂಲಗಳು ತಿಳಿಸಿವೆ.ಹೊಸದುರ್ಗ ವರದಿ

ಮೂರು ನಾಮಪತ್ರಗಳು ಸಲ್ಲಿಕೆಯಾಗಿದ್ದು, ಪಟ್ಟಣದಲ್ಲಿ ಮತ ಪ್ರಚಾರದ ಕಾರ್ಯ ಅಬ್ಬರದಿಂದ ನಡೆಯಲಿದೆ.ಕೆಜೆಪಿ ಅಭ್ಯರ್ಥಿ ಎಸ್. ಲಿಂಗಮೂರ್ತಿ ಅಪಾರ ಬೆಂಬಲಿಗರೊಂದಿಗೆ ತಾಲ್ಲೂಕು ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.ಪಟ್ಟಣದ ವೀರಭದ್ರಸ್ವಾಮಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ, ದೇವಾಲಯದಿಂದ ಟಿ.ಬಿ. ವೃತ್ತದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಹೊರಟ ಎಸ್. ಲಿಂಗಮೂರ್ತಿ ಅವರೊಂದಿಗೆ ಕ್ಷೇತ್ರದ ನಾನಾ ಭಾಗಗಳಿಂದ ಆಗಮಿಸಿದ್ದ ಬೆಂಬಲಿಗರು ಹಾಗೂ ಅಭಿಮಾನಿಗಳು ಸಾಗಿದರು.ಸುಡುಬಿಸಿಲನ್ನೂ ಲೆಕ್ಕಿಸದೇ ಮೆರವಣಿಗೆಯಲ್ಲಿ ನಡೆದ ಬೆಂಬಲಿಗರು ಲಿಂಗಮೂರ್ತಿ ಪರವಾಗಿ ಘೋಷಣೆಗಳನ್ನು ಕೂಗಿದರು.ಗೆಲ್ಲುವ ವಿಶ್ವಾಸ: ಬಿಎಸ್‌ವೈ ಅವರ ಆಡಳಿತದಲ್ಲಿ ಈ ರಾಜ್ಯದ ಅಭಿವೃದ್ಧಿಗಾಗಿ ಕೈಗೊಂಡಿರುವ ಅನೇಕ ಜನಪರ ಕಾರ್ಯಕ್ರಮಗಳು ಎಲ್ಲಾ ಜಾತಿ-ಜನಾಂಗದ ಮತದಾರರಿಗೆ ತಲುಪಿರುವುದರಿಂದ, ತಾಲ್ಲೂಕಿನ ಮತದಾರರು ಕೆಜೆಪಿ ಪಕ್ಷದ ತತ್ವಗಳನ್ನು ಒಪ್ಪಿಕೊಂಡು ಬೆಂಬಲಿಸುತ್ತಿರುವುದರಿಂದ ಈ ಬಾರಿ ಗೆಲುವು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಜೆಡಿಯು ಅಭ್ಯರ್ಥಿ ಸೈಯದ್ ಇಸ್ಮಾಯಿಲ್ ಕಾರ್ಯಕರ್ತರೊಂದಿಗೆ ತಾಲ್ಲೂಕು ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.ಗೆಲ್ಲುವ ವಿಶ್ವಾಸ: ತಾಲ್ಲೂಕಿನ ಎಲ್ಲಾ ಮತದಾರರು ಜೆಡಿಯು ಪಕ್ಷಕ್ಕೆ ಬೆಂಬಲ ನೀಡುತ್ತಿರುವುದರಿಂದ ಗೆಲ್ಲುವ ಹಂಬಲ ಹೊಂದಿದ್ದೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಸಮಾಜವಾದಿ ಪಕ್ಷದ ಅಭ್ಯರ್ಥಿ ಚಿತ್ತಪ್ಪ ಅನೇಕ ಕಾರ್ಯಕರ್ತರೊಂದಿಗೆ ತಾಲ್ಲೂಕು ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.ವಿಶ್ವಾಸ

ಅನೇಕ ವರ್ಷಗಳ ದುರಾಡಳಿತದಿಂದ ತಾಲ್ಲೂಕಿನ ಜನತೆ ನಲುಗಿದ್ದಾರೆ. ಹಾಗಾಗಿ, ಮತದಾರರು ಬದಲಾವಣೆ ಬಯಸಿ ಸಮಾಜವಾದಿ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸದೊಂದಿಗೆ ನಾಮಪತ್ರಸಲ್ಲಿಸಿದ್ದೇನೆ. ಈ ಕ್ಷೇತ್ರದಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂಬ ಹಂಬಲ ಹೊಂದಿದ್ದೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)