ಗುರುವಾರ , ನವೆಂಬರ್ 21, 2019
20 °C

ಜಿಲ್ಲೆಯಲ್ಲಿ 3,706 ಅಂಗವಿಕಲ ಮಕ್ಕಳು ಪತ್ತೆ!

Published:
Updated:

ಮಂಡ್ಯ: ಅಂಗವಿಕಲ ಮಕ್ಕಳು ಶಿಕ್ಷಣದ ಮುಖ್ಯವಾಹಿನಿಯಿಂದ ವಂಚಿತರಾಗು ವುದನ್ನು ತಪ್ಪಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಈಚೆಗೆ ನಡೆಸಿದ ವಿಶೇಷ ಅಗತ್ಯವುಳ್ಳ ಮಕ್ಕಳ ಗಣತಿ ಕಾರ್ಯದಲ್ಲಿ, ಜಿಲ್ಲೆಯಲ್ಲಿ ಒಟ್ಟು 3,706 ಅಂಗವಿಕಲ ಮಕ್ಕಳು ಇರುವುದು ಪತ್ತೆಯಾಗಿದೆ.ಸಾರ್ವಜನಿಕ ಶಿಕ್ಷಣ ಇಲಾಖೆಯು ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ನಡೆಸಿದ ವಿಶೇಷ ಗಣತಿಯಲ್ಲಿ ಈ ಅಂಕಿ-ಅಂಶಗಳು ಬೆಳಕಿಗೆ ಬಂದಿದೆ. 2012ರ ಡಿಸೆಂಬರ್ ಮಾಹೆಯಲ್ಲಿ ಗಣತಿ ನಡೆದಿತ್ತು.ವಿಶೇಷ ಅಗತ್ಯವುಳ್ಳ ಅಂಗವಿಕಲ ಮಕ್ಕಳಿಗಾಗಿ ಇರುವ `ಸಮನ್ವಯ ಶಿಕ್ಷಣ' ಮಧ್ಯವರ್ತನೆಯು ಸರ್ವ ಶಿಕ್ಷಣ ಅಭಿಯಾನದ ಅತ್ಯಂತ ಮಹತ್ವಾಕಾಂಕ್ಷೆಯ ಚಟುವಟಿಕೆ. ಅಂಗವಿಕಲ ಮಕ್ಕಳು ಸಮಾಜದ ಯಾವುದೇ ಸ್ತರದಲ್ಲಿ ಇದ್ದರೂ, ಶಿಕ್ಷಣದಿಂದ ವಂಚಿತರಾಗದೇ ಸಾಮಾನ್ಯ ಮಕ್ಕಳೊಂದಿಗೆ ಕೂಡಿ ಶೈಕ್ಷಣಿಕ ಸವಲತ್ತನ್ನು ಪಡೆಯಬೇಕು ಎನ್ನುವ ಪ್ರಧಾನ ಆಶಯದಿಂದ ಈವೊಂದು ವಿಶೇಷ ಗಣತಿಯನ್ನು ಕೈಗೊಳ್ಳಲಾಗಿತ್ತು.6 ರಿಂದ 14 ವರ್ಷ ವಯೋಮಾನದ ಎಲ್ಲ ಅಂಗವಿಕಲ ಮಕ್ಕಳನ್ನು ಈ ಗಣತಿಯಲ್ಲಿ ಗುರುತಿಸಲಾಗಿದೆ. ಗಣತಿ ಪ್ರಕಾರ ಜಿಲ್ಲೆಯಲ್ಲಿ 3,706 ಅಂಗವಿಕಲ ಮಕ್ಕಳಿದ್ದಾರೆ. ಈ ಪೈಕಿ 2,261 ಬಾಲಕರು ಹಾಗೂ 1,445 ಬಾಲಕಿಯರು ಇದ್ದಾರೆ.ಮಂಡ್ಯ ತಾಲ್ಲೂಕಿನಲ್ಲಿ (ಉತ್ತರ ಮತ್ತು ದಕ್ಷಿಣ ವಲಯ) ಅತಿ ಹೆಚ್ಚು ಅಂದರೆ 709 ಅಂಗವಿಕಲ ಮಕ್ಕಳಿದ್ದಾರೆ. ಶ್ರೀರಂಗಪಟ್ಟಣ ತಾಲ್ಲೂಕು -623 ಮತ್ತು ಮದ್ದೂರು ತಾಲ್ಲೂಕು -542 ಕ್ರಮವಾಗಿ ನಂತರದ ಸ್ಥಾನದಲ್ಲಿದೆ.ಈಗ ಗಣತಿಯಲ್ಲಿ ಗುರುತಿಸಿರುವ ಪ್ರಕಾರ, ಪಾರ್ಶ್ವ ದೃಷ್ಟಿ ದೋಷ -596 (ಗಂಡು-342, ಹೆಣ್ಣು-254); ಪೂರ್ಣ ದೃಷ್ಟಿ ದೋಷ -11 (7/4); ಎಚ್‌ಐ -349 (202/147); ಮಾತಿನ ದೋಷ -444 (291/153); ದೈಹಿಕ ನ್ಯೂನತೆ -731(454/277) ; ಬುದ್ಧಿ ಮಾಂದ್ಯತೆ -731(447/284); ಬಹು ವಿಕಲತೆ -481 (300/181); ಕಲಿಕೆಯಲ್ಲಿ ಹಿಂದುಳಿಯುವಿಕೆ -194 (112/82); ಮೆದುಳಿನ ಪಾರ್ಶ್ವವಾಯು -158 (100/58); ಆಟಿಸಂ -11 (6/5) ಸಮಸ್ಯೆಯಿಂದ ಮಕ್ಕಳು ಬಳಲುತ್ತಿದ್ದಾರೆ.ಶಾಲಾ ಪೂರ್ವ ಸಿದ್ಧತಾ ಕೇಂದ್ರ: 2012-13ನೇ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 4,075 ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಗುರುತಿಸಿದ್ದು, ಈ ಪೈಕಿ 3,456 ಮಕ್ಕಳು ಶಾಲೆಯಲ್ಲಿ ಕಲಿತಿದ್ದರೆ, 404 ಮಕ್ಕಳು ಶಾಲಾ ಪೂರ್ವ ಸಿದ್ಧತಾ ಕೇಂದ್ರಗಳಲ್ಲೂ, 215 ಮಕ್ಕಳಿಗೆ ಗೃಹಾಧಾರಿತ ಶಿಕ್ಷಣವನ್ನು ನೀಡಲಾಗುತ್ತಿತ್ತು.ಶಾಲೆಗೆ ಬರಲು ಸಾಧ್ಯವಾಗದೇ ಮನೆ ಯಲ್ಲಿಯೇ ಇರುವ ಮಕ್ಕಳಿಗೆ ಸ್ವಯಂ ಸೇವಕರ ಮೂಲಕ ಗೃಹಾಧಾರಿತ ಶಿಕ್ಷಣವನ್ನು ನೀಡಲಾಗುತ್ತದೆ. ಮೂರು ಮಕ್ಕಳಿಗೆ ಒಬ್ಬ ಸ್ವಯಂ ಸೇವಕ, ವಾರದಲ್ಲಿ ಎರಡು ದಿನ ಶಿಕ್ಷಣವನ್ನು ನೀಡುತ್ತಾರೆ ಎಂದು ಸರ್ವ ಶಿಕ್ಷಣ ಅಭಿಯಾನದ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಎಂ.ಡಿ.ಶಿವಕುಮಾರ್ `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.2013-14ನೇ ಶೈಕ್ಷಣಿಕ ಸಾಲಿನಲ್ಲಿ ಒಟ್ಟು 3706 ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಗುರುತಿಸಲಾಗಿದೆ. ಈ ಪೈಕಿ 3,157 ಮಕ್ಕಳು ಶಾಲೆಯಲ್ಲೂ, 314 ಮಕ್ಕಳು ಶಾಲಾ ಪೂರ್ವ ಸಿದ್ಧತಾ ಕೇಂದ್ರದಲ್ಲೂ ಹಾಗೂ 235 ಮಕ್ಕಳಿಗೆ ಗೃಹಾಧಾರಿತ ಶಿಕ್ಷಣವನ್ನು ನೀಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.ಅಂಧ ಮಕ್ಕಳಿಗೆ ಬ್ರೈಲ್ ಲಿಪಿ ಮೂಲಕ ಹಾಗೂ ಬುದ್ಧಿ ಮಾಂದ್ಯರಿಗೆ ವಿಶೇಷ ಚಟು ವಟಿಕೆ ಮೂಲಕ ಶಿಕ್ಷಣವನ್ನು ನೀಡಲಾಗುತ್ತದೆ. ವಿಶೇಷ ಅಗತ್ಯವುಳ್ಳ ಮಕ್ಕಳನ್ನು ತಾಲ್ಲೂಕು ಹಂತದಲ್ಲಿ ನಡೆಯುವ ವೈದ್ಯಕೀಯ ಶಿಬಿರದಲ್ಲಿ ತಪಾಸಣೆಗೆ ಒಳಪಡಿಸಿ, ವೈದ್ಯರ ಸಲಹೆ ಮೇರೆಗೆ ಅಗತ್ಯ ಸಾಧನ ಸಲಕರಣೆಗಳನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತದೆ. ಪ್ರತಿ ತಾಲ್ಲೂಕಿ ನಲ್ಲಿರುವ ಸಂಪನ್ಮೂಲ ಕೇಂದ್ರಗಳಲ್ಲಿ ಅಂಗವಿಲಕ ಮಕ್ಕಳಿಗೆ ಚಿಕಿತ್ಸೆ, ಫಿಸಿಯೋಥೆರಪಿ, ದೈಹಿಕ ವ್ಯಾಯಾಮ, ಪೋಷಕರಿಗೆ ನಿರ್ವಹಣೆ ಬಗೆಗಿನ ಕೌಶಲಗಳನ್ನು ತಿಳಿಸಲಾಗುತ್ತದೆ ಎಂದರು.

ಪ್ರತಿಕ್ರಿಯಿಸಿ (+)