ಸೋಮವಾರ, ಜೂನ್ 21, 2021
29 °C

ಜಿಲ್ಲೆಯಲ್ಲಿ 8577 ಮಂದಿಗೆ ನಾಯಿ ಕಡಿತ

ವಿಶೇಷ ವರದಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಜಿಲ್ಲೆಯಲ್ಲಿ ಕಳೆದ ವರ್ಷ ದಾಖಲಾದ ನಾಯಿ ಕಡಿತ ಪ್ರಕರಣಗಳ ಸಂಖ್ಯೆ 8577. 2010ನೇ ಸಾಲಿಗೆ ಹೋಲಿಸಿದರೆ ಈ ಸಂಖ್ಯೆ ಕಡಿಮೆ. ಆದರೆ ನಾಯಿ ಕಡಿತದಿಂದ ತೊಂದರೆ ಅನುಭವಿಸುತ್ತಿರುವವರ ಸಂಖ್ಯೆ ಹೆಚ್ಚು. ಅದರಲ್ಲೂ ಚಿಕ್ಕವಯಸ್ಸಿನವರು, ವಯೋವೃದ್ಧರು ಅಪಾಯಕ್ಕೆ, ನೋವಿಗೆ ಸಿಲುಕುತ್ತಲೇ ಇದ್ದಾರೆ. ಸಮಸ್ಯೆ ಗಂಭೀರವಾದರೂ ಪುರಸಭೆ, ನಗರಸಭೆ ಆಡಳಿತ ಸೂಕ್ತ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂಬ ದೂರು ಹೆಚ್ಚುತ್ತಿವೆ.ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದ ನಾಲ್ಕು ವರ್ಷಗಳ ಅಂಕಿ-ಅಂಶ ಗಮನಿಸಿದರೆ ಸನ್ನಿವೇಶ ಆಶಾದಾಯಕವಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ನಾಯಿ ಕಡಿತ ಪ್ರಕರಣ ಕ್ರಮೇಣ ಹೆಚ್ಚಿವೆ ಎಂಬುದು ಗಮನಾರ್ಹ.2008ರಲ್ಲಿ 6664 ಪ್ರಕರಣ ದಾಖಲಾಗಿದ್ದರೆ, 2009ರಲ್ಲಿ ಈ ಸಂಖ್ಯೆ ಎರಡು ಸಾವಿರ ಹೆಚ್ಚಿದೆ. ಆ ವರ್ಷ 8,572 ಪ್ರಕರಣ ದಾಖಲಾಗಿವೆ. 2010ರಲ್ಲಿ ಆತಂಕ ಮೂಡಿಸುವ ರೀತಿಯಲ್ಲಿ ಎರಡೂವರೆ ಸಾವಿರಕ್ಕಿಂತಲೂ ಹೆಚ್ಚು ಪ್ರಕರಣ (11,139) ದಾಖಲಾಗಿವೆ. ಹೀಗೆ ಏರಿದ ನಾಯಿ ಕಡಿತ ಪ್ರಕರಣ 2011ರಲ್ಲಿ ಮತ್ತೆ ಕಡಿಮೆಯಾಗಿದೆ. ಕಳೆದ ವರ್ಷ 8577 ಪ್ರಕರಣ ದಾಖಲಾಗಿವೆ.2012ರ ಫೆಬ್ರುವರಿಯಲ್ಲಿ ಮುಳಬಾಗಲುವಿನಲ್ಲಿ ಬಾಲಕನೊಬ್ಬ ನಾಯಿ ಕಚ್ಚಿ ಗಾಯಗೊಂಡ ಘಟನೆ ನಡೆದಿದೆ. ನಾಯಿ ಕಡಿತ ಪ್ರಕರಣಗಳಿಂದ ಸಂತ್ರಸ್ತರಾಗಿರುವವರಲ್ಲಿ ಮಕ್ಕಳೇ ಹೆಚ್ಚು ಇರುವುದು ಗಮನಾರ್ಹ. ಬೀದಿಗಳಲ್ಲಿ ಅಡ್ಡಾಡುವ ನಾಯಿಗಳೇ ಹೆಚ್ಚು ಮಂದಿಗೆ ಕಚ್ಚಿ ತೊಂದರೆ ಮಾಡಿವೆ.`ಈ ನಿಟ್ಟಿನಲ್ಲಿ ಆಯಾ ಪುರಸಭೆ, ನಗರಸಭೆ ಬೀದಿನಾಯಿ ಹಾವಳಿ ನಿಯಂತ್ರಿಸಬೇಕು. ನಾಯಿ ಕಡಿತಕ್ಕೆ ಚಿಕಿತ್ಸೆ ಆಸ್ಪತ್ರೆಗಳಲ್ಲಿ ದೊರಕುತ್ತದೆ. ಆದರೆ ಅವುಗಳ ನಿಯಂತ್ರಣವೇ ಮುಖ್ಯ. ಮಕ್ಕಳನ್ನು ಒಂಟಿಯಾಗಿ ಹೊರಗೆ ಕಳಿಸದಿರುವುದೂ ಮುನ್ನೆಚ್ಚರಿಕೆ ಕ್ರಮ. ಪೋಷಕರು ಈ ನಿಟ್ಟಿನಲ್ಲಿ ಗಂಭೀರವಾಗಿ ಆಲೋಚಿಸಬೇಕು ಎಂಬುದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸಿ.ಕುಪ್ಪುಸ್ವಾಮಿ ಸಲಹೆ.ಕಚ್ಚಿದ ಬಳಿಕ ಬೀದಿ ನಾಯಿಯನ್ನು ಅಟ್ಟಾಡಿಸಿಕೊಂಡು ಹೊಡೆಯುವುದು, ಕೊಲ್ಲುವುದೂ ಮಾಮೂಲಿ. ಇಂಥ ಸಂದರ್ಭಗಳಲ್ಲಿ ಭಯಗೊಂಡ ನಾಯಿಗಳು ಮತ್ತಷ್ಟು ಹಾನಿ ಮಾಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಸ್ಥಳೀಯ ಆಡಳಿತವೇ ಬೀದಿನಾಯಿ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅಗತ್ಯ ಎನ್ನುತ್ತಾರೆ ಹಿರಿಯ ನಾಗರಿಕರೊಬ್ಬರು.ಹಾವು ಕಡಿತ

ನಾಯಿ ಕಡಿತ ಪ್ರಕರಣಗಳೊಡನೆ ಪೈಪೋಟಿಗೆ ಬಿದ್ದಂತೆ ಹಾವು ಕಡಿತ ಪ್ರಕರಣಗಳು ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಈ ಪ್ರಕರಣ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕಂಡು ಬರುತ್ತಿವೆ.2008ರಲ್ಲಿ 282 ಪ್ರಕರಣ, 2009ರಲ್ಲಿ 291 ಪ್ರಕರಣ ದಾಖಲಾಗಿದ್ದವು. ಈ ಅಂಕಿ-ಅಂಶ ಮೀರಿಸುವ ರೀತಿ 2010ರಲ್ಲಿ ಪ್ರಕರಣ 403ಕ್ಕೆ ಏರಿವೆ. ಕಳೆದ ವರ್ಷ (2011) ಇನ್ನಷ್ಟು ಹೆಚ್ಚಿ 468 ಪ್ರಕರಣ ದಾಖಲಾಗಿವೆ. 2008ರಿಂದ ಇಲ್ಲಿವರೆಗೆ ಹಾವು ಕಡಿದು ನಾಲ್ವರು ಸಾವಿಗೀಡಾಗಿದ್ದಾರೆ. 2009, 2010ರಲ್ಲಿ ತಲಾ ಒಬ್ಬರು, 2011ರಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ.ನಾಯಿ ಕಡಿತಕ್ಕಿಂತಲೂ ಹಾವು ಕಡಿತ ಹೆಚ್ಚು ಅನಿರೀಕ್ಷಿತ. ಗ್ರಾಮೀಣ ಪ್ರದೇಶಗಳಲ್ಲಿ ಹೊಲ, ಗೋಮಾಳ, ಕಾಡು ಮೊದಲಾದ ಕಡೆ ನಡೆದಾಡುವ ಸಂದರ್ಭದಲ್ಲಿ ಜನರಿಗೆ ಹಾವಿನ ಇರುವಿಕೆ ತಕ್ಷಣಕ್ಕೆ ಗೊತ್ತಾಗುವುದಿಲ್ಲ. ಆದರೂ ಅಂಥ ಸ್ಥಳಗಳಲ್ಲಿ ಓಡಾಡುವಾಗ ಕಾಲಿಗೆ ಉತ್ತಮ ಬೂಟು ಧರಿಸುವುದು ರಕ್ಷಣೆ ದೃಷ್ಟಿಯಿಂದ ಅಗತ್ಯ ಎನ್ನುತ್ತಾರೆ ವೈದ್ಯರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.