ಭಾನುವಾರ, ಮೇ 9, 2021
19 °C
ಜನಜೀವನ ಅಸ್ತವ್ಯಸ್ತ*ಗುಡ್ಡ ಕುಸಿತ* ಮನೆ ಮೇಲೆ ಮರ* ಮುರಿದು ಬಿದ್ದ ವಿದ್ಯುತ್ ಕಂಬ

ಜಿಲ್ಲೆಯಾದ್ಯಂತ ಧಾರಾಕಾರ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಮುಂಗಾರು ಆರಂಭವಾದ ನಂತರ ಇದೇ ಮೊದಲ ಬಾರಿಗೆ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿದಿದೆ. ಕರಾವಳಿಯಲ್ಲಿ ದಿನವಿಡೀ ಮಳೆ ಸುರಿದಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು.ಬುಧವಾರ ರಾತ್ರಿ 10.30ರ ಸುಮಾರಿಗೆ ಬಲವಾದ ಗಾಳಿ ಬೀಸಿದ್ದರಿಂದ ಇಲ್ಲಿಯ ಎಮ್.ಜಿ.ರಸ್ತೆಯಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿವಾಸದ ಆವರಣದಲ್ಲಿದ್ದ ಮರವೊಂದು ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದರಿಂದ ಒಂದು ವಿದ್ಯುತ್ ಕಂಬ ಮುರಿದು ಮತ್ತೊಂದು ಕಂಬದ ಬುಡ ಕಿತ್ತುಬಂದಿದೆ. ಘಟನೆ ನಡೆದ ತಕ್ಷಣ ಈ ಬಾಗದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಯಿತು. ರಸ್ತೆಗೆ ಅಡ್ಡಲಾಗಿ ಬಿದ್ದ ಮರವನ್ನು ರಾತ್ರಿಯೇ ತೆರವುಗೊಳಿಸಲಾಗಿದೆ. ಬೆಳಿಗ್ಗೆ ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಸಿಬ್ಬಂದಿ ಮುರಿದ ಕಂಬವನ್ನು ತೆರವುಗೊಳಿಸಿ ಹೊಸ ಕಂಬವನ್ನು ಅಳವಡಿಸಿದರು.ಮಳೆಯೊಂದಿಗೆ ಆಗಾಗ ಗಾಳಿಯೂ ಬೀಸುತ್ತಿದ್ದರಿಂದ ಗುರುವಾರ ಬೆಳಿಗ್ಗೆ ತಾಲ್ಲೂಕಿನ ದೇವಬಾಗದ ಆನಂದ ಸೈರು ಕುರ್ಲೆ ಅವರ ಮನೆಯ ಮೇಲೆ ತೆಂಗಿನಮರ ಬಿದ್ದು ಸುಮಾರ 300 ಹಂಚುಗಳ ಒಡೆದು ಎರಡು ಜಂತಿಗಳು ಮುರಿದಿದೆ. ಮುಡಗೇರಿಯ ಮಂಜುನಾಥ ಹಳದನಕರ ಅವರ ಮನೆಯ ಮೇಲೆ ಮರದ ಟೊಂಗೆಯೊಂದು ಬಿದ್ದು ಹಾನಿಯಾಗಿದೆ.ತಾಲ್ಲೂಕಿನ ಪೋಸ್ಟ್ ಚೆಂಡಿಯಾದಲ್ಲಿ ದಾಮೋದರ ತಳೇಕರ ಅವರಿಗೆ ಸೇರಿದ ಮಳಿಗೆಯ ಮೇಲೆ ಮಾವಿನಮರವೊಂದು ಬಿದ್ದ ಪರಿಣಾಮ ಮಳಿಗೆಗೆ ಭಾಗಶಃ ಹಾನಿಯಾಗಿದ್ದು ಅಂದಾಜು ರೂ 15 ಸಾವಿರ ನಷ್ಟ ಆಗಿದೆ ಎಂದು ತಹಶೀಲ್ದಾರ್‌ಸಾಜಿದ್ ಮುಲ್ಲಾ `ಪ್ರಜಾವಾಣಿ'ಗೆ ತಿಳಿಸಿದರು.ಅಲೆಗಳ ಆರ್ಭಟ: ಅರಬ್ಬಿ ಸಮುದ್ರದಲ್ಲಿ ಗಾಳಿ ಬೀಸುತ್ತಿದ್ದರಿಂದ ಅಲೆಗಳ ಆರ್ಭಟ ಜಾಸ್ತಿಯಾಗಿತ್ತು. ಸಮುದ್ರದಲ್ಲಿ ಏಳುತ್ತಿದ್ದ ದೊಡ್ಡದೊಡ್ಡ ಅಲೆಗಳು ನಗರದ ರವೀಂದ್ರ ಟ್ಯಾಗೋರ್ ಕಡಲತೀರದಲ್ಲಿದ್ದ ಮೀನುಗಾರಿಕೆ ಶೆಡ್ ವರೆಗೂ ಬರುತ್ತಿತ್ತು.ಗುರುವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡು ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 12.5 ಸೆಂ. ಮೀ. ಮಳೆಯಾಗಿದೆ.ಅಂಕೋಲಾ 18.8, ಹೊನ್ನಾವರ 15.6, ಕಾರವಾರ 12.2, ಕುಮಟಾ 13.4, ಮುಂಡಗೋಡ 1.0, ಸಿದ್ದಾಪುರ 21.8, ಶಿರಸಿ 12.5, ಜೋಯಿಡಾ 8.0, ಯಲ್ಲಾಪುರ 33.6 ಮಿ.ಮೀ. ಮಳೆಯಾಗಿದೆ. ಜೂನ್ 1 ರಿಂದ 13 ರವರೆಗೆ ಸರಾಸರಿ 298.9 ಮಿ.ಮೀ ಮಳೆಯಾಗಿದೆ.`ಜಿಲ್ಲೆಯ ಕರಾವಳಿ ಹಾಗೂ ಘಟ್ಟದ ಮೇಲೆ ಉತ್ತಮ ಮಳೆಯಾಗಿದೆ. ನಾಳೆ ಆಗಾಗ ಮಳೆ ಆಗುವ ಸಾಧ್ಯತಿದೆ. ಗುರುವಾರ ಬೆಳಿಗ್ಗೆ 8ರಿಂದ ಸಂಜೆ 5.30ರ ವರೆಗೆ ಕಾರವಾರದಲ್ಲಿ 77.2 ಮಿಲಿ ಮೀಟರ್ ಮಳೆಯಾಗಿದೆ' ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.ವಿದ್ಯುತ್ ಅವಘಡ: ಹಾನಿ

ಅಂಕೋಲಾ: ತಾಲ್ಲೂಕಿನ ವಿವಿಧೆಡೆಯಲ್ಲಿ ಕಳೆದೆರಡು ದಿನಗಳಿಂದ ಮಳೆ ಸುರಿಯುತ್ತಿದ್ದು, ಬುಧವಾರ ರಾತ್ರಿ ಸಗಡಗೇರಿಯಲ್ಲಿ ವಿದ್ಯುತ್ ಅವಘಡದಿಂದ ಲಕ್ಷಾಂತರ ರೂಪಾಯಿ ಹಾನಿಯಾಗಿದೆ.ಕೆಲವು ಕಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದರೆ ರಾಷ್ಟ್ರೀಯ ಹೆದ್ದಾರಿ 66ರ ಶಿರೂರು ಸಮೀಪ ಗುಡ್ಡ ಕುಸಿದಿದ್ದು, ಆತಂಕ ಸೃಷ್ಟಿಯಾಗಿದೆ. ಭಾರಿ ಮಳೆ ಗಾಳಿ ಉಂಟಾದ ಪರಿಣಾಮ ಸಗಡಗೇರಿ ಗ್ರಾಮದಲ್ಲಿ ಬುಧವಾರ ರಾತ್ರಿ ವಿದ್ಯುತ್ ಅವಘಡದಿಂದಾಗಿ ಹಲವು ಮನೆಗಳ ಟಿ.ವಿ, ಫ್ರೀಜ್, ಫ್ಯಾನ್ ಸೇರಿದಂತೆ ಇನ್ನಿತರ ವಿದ್ಯುತ್ ಉಪಕರಣಗಳು ಹಾನಿಗೊಳಗಾಗಿದ್ದು, ಸುಮಾರು 10 ಲಕ್ಷ ರೂಪಾಯಿ  ಹಾನಿಯನ್ನು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಡಿ.ಐ. ಹೆಗ್ಗೊಂಡ, ಕಂದಾಯ ನಿರೀಕ್ಷಕ ಅಮರ ನಾಯ್ಕ ಹಾಗೂ ಹೆಸ್ಕಾಂ ಅಧಿಕಾರಿ ಎಸ್.ಎಂ. ಮುರ್ಡೇಶ್ವರ ಸೇರಿದಂತೆ ಇತರರು ಭೇಟಿ ನೀಡಿ ಪಂಚನಾಮೆ ನಡೆಸಿದರು.ಸಿದ್ದಾಪುರ: ಅಬ್ಬರದ ಮಳೆ

ಸಿದ್ದಾಪುರ:
ತಾಲ್ಲೂಕಿನಾದ್ಯಂತ ಗುರುವಾರ ಮಳೆಯ ಅಬ್ಬರ ಮುಗಿಲು ಮುಟ್ಟಿತು.ಬೆಳಗಿನಿಂದ ಮಧ್ಯಾಹ್ನದವರೆಗೆ ಆಗಾಗ ಬಿಡುವು ನೀಡುತ್ತ ಸುರಿದ ಮಳೆ, ಮಧ್ಯಾಹ್ನದ ನಂತರ  ಧಾರಾಕಾರವಾಗಿ ಸುರಿಯಿತು.ಇದರಿಂದ  ಪಟ್ಟಣದಲ್ಲಿ ಜನಜೀವನ  ಬಹುತೇಕ ಸ್ತಬ್ಧಗೊಂಡಿತು. ರಸ್ತೆಗಳೆಲ್ಲ ಗಟಾರದ ರೂಪ ತಾಳಿದರೆ, ಗಟಾರಗಳು ಹೊಳೆಯಂತಾದವು. ಸಂಜೆ ಶಾಲೆಯಿಂದ ಮನೆಗೆ ತೆರಳುವಾಗ ಮಕ್ಕಳು ಗಾಳಿ-ಮಳೆಯಿಂದ ಕಷ್ಟಪಡಬೇಕಾಯಿತು.  ಹಾನಿ: ಭಾರಿ ಮಳೆಯ ಕಾರಣದಿಂದ  ತಾಲ್ಲೂಕಿನ ಹುಕ್ಲಮಕ್ಕಿಯ ಗಣಪತಿ ಮಂಜಪ್ಪ ಹೆಗಡೆ ಅವರ ವಾಸ್ತವ್ಯದ ಮನೆಯ ಮೇಲೆ ಗುರುವಾರ ಸಂಜೆ ಮರ ಬಿದ್ದು,  ರೂ20 ಸಾವಿರ ಹಾನಿಯಾಗಿದೆ.  ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ವಿನಾಯಕ ಭಟ್ಟ ಭೇಟಿ ನೀಡಿದ್ದು, ಹಾನಿಯ ಪಂಚನಾಮೆ ಮಾಡಿರುವುದಾಗಿ ತಿಳಿಸಲಾಗಿದೆ.

ತಾಲ್ಲೂಕಿನ ಕ್ಯಾದಗಿ ಸಮೀಪದ ಹೆಗ್ಗೇರಿಯಲ್ಲಿ ಸೀತಾರಾಮ ಶೇಟ್ ಎಂಬವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಸುಮಾರು ರೂ 3 ಸಾವಿರ ಹಾನಿಯಾಗಿದೆ.ಗುರುವಾರ ಬೆಳಗಿನವರೆಗಿನ 24 ಗಂಟೆಯ ಅವಧಿಯಲ್ಲಿ ತಾಲ್ಲೂಕಿನ ಮಳೆ ಮಾಪನ ಕೇಂದ್ರದಲ್ಲಿ 21.8 ಮಿ.ಮೀ ಮಳೆ ದಾಖಲಾಗಿದ್ದು, ಇದುವರೆಗೆ ಒಟ್ಟು 240.2 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ಅವಧಿಯವರೆಗೆ 174.2 ಮಿ.ಮೀ. ಮಳೆ ದಾಖಲಾಗಿತ್ತು ಎಂದು ಕಂದಾಯ ಇಲಾಖೆಯ ಮೂಲಗಳು  ತಿಳಿಸಿವೆ.ಮುಂಗಾರು ಮತ್ತೆ ಚುರುಕು

ಶಿರಸಿ:
ಒಂದು ವಾರದಿಂದ ದುರ್ಬಲಗೊಂಡಿದ್ದ ಮುಂಗಾರು ಮಳೆ ಗುರುವಾರ ಮಧ್ಯಾಹ್ನದಿಂದ ಮತ್ತೆ ಚುರುಕುಗೊಂಡಿದೆ. ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು ರೈತರಲ್ಲಿ ಸಂತಸ ತಂದಿದೆ. ರಭಸದ ಗಾಳಿ ಜೊತೆ ಮಳೆ ಬಿರುಸುಗೊಂಡಿದೆ.ಮುಂಗಾರು ಆರಂಭದಲ್ಲಿ ಉತ್ತಮ ಮುನ್ಸೂಚನೆ ನೀಡಿದ್ದರೂ ನಂತರ ಜಿಟಿಜಿಟಿ ಮಳೆ ಹೊರತುಪಡಿಸಿದರೆ ನೀರಿನ ಒರತೆ ಸೃಷ್ಟಿಯಾಗುವ ಪ್ರಮಾಣದಲ್ಲಿ ಮಳೆ ಬಿದ್ದಿರಲಿಲ್ಲ.  ಗುರುವಾರ ಮಧ್ಯಾಹ್ನದಿಂದ ಸಂಜೆಯ ವರೆಗೆ ಎಡೆಬಿಡದೆ ಸುರಿದ ಮಳೆಯಿಂದ ಗ್ರಾಮೀಣ ಭಾಗದ ಕೆಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ.ಇನ್ನು ಕೆಲವೆಡೆ ದೂರವಾಣಿ ಸ್ಥಗಿತಗೊಂಡಿದೆ. ನಗರದ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಅಶ್ವಿನಿ ವೃತ್ತ, ಝೂ ವೃತ್ತಗಳಲ್ಲಿ ಅಸಮರ್ಪಕ ಚರಂಡಿಯಿಂದಾಗಿ ರಸ್ತೆ ಹೊಳೆಯಂತೆ ಕಾಣುತ್ತಿತ್ತು. ಹೊಳೆಯಂತಾಗಿದ್ದ ರಸ್ತೆಯಲ್ಲಿ ವಾಹನಗಳು ನೀರನ್ನು ಹಾರಿಸುತ್ತ ಸಾಗಿದ್ದು, ಪಾದಚಾರಿಗಳಿಗೆ ಕೆಸರಿನ ನೀರಿನ ಸಿಂಚನವಾಯಿತು.ನಿರಂತರ ಸುರಿದ ಮಳೆಗೆ ಇಲ್ಲಿನ ಬನವಾಸಿ ರಸ್ತೆಯ ಕೈಗಾರಿಕಾ ಸಂಕೀರ್ಣದ ಕಟ್ಟಡವೊಂದರ ಮೇಲೆ ಸಂಜೆ ವೇಳೆ ಮರ ಮುರಿದು ಬಿದ್ದು ಸುಮಾರು ಸುಮಾರು ರೂ50ಸಾವಿರ ಹಾನಿ ಸಂಭವಿಸಿದೆಯೆಂದು ಅಂದಾಜಿಸಲಾಗಿದೆ. ಉಳಿದಂತೆ ಯಾವುದೇ ರೀತಿಯ ಹಾನಿ ವರದಿಯಾಗಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.