ಮಂಗಳವಾರ, ನವೆಂಬರ್ 19, 2019
29 °C

ಜಿಲ್ಲೆಯಾದ್ಯಂತ ಮುಂದುವರಿದ ನಾಮಪತ್ರ ಸಲ್ಲಿಕೆ ಪರ್ವ

Published:
Updated:

ಹಾವೇರಿ: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಮುಂದುವರೆದಿದ್ದು, ಬುಧವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಮಂಗವಾರ ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳಿಗೆ 29 ಅಭ್ಯರ್ಥಿಗಳು ಒಟ್ಟು 32 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.ಶಿಗ್ಗಾವಿ ವಿಧಾನಸಭಾ ಕ್ಷೇತ್ರಕ್ಕೆ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಹಾವೇರಿ ವಿಧಾನ ಸಭಾ ಕ್ಷೇತ್ರಕ್ಕೆ ಡಾ.ಸಂಜಯ ಡಾಂಗೆ ಸೇರಿದಂತೆ ಐದು ಜನ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರೆ, ರಾಣೆಬೆನ್ನೂರ ವಿಧಾನಸಭೆ ಕ್ಷೇತ್ರದಲ್ಲಿ ಆರ್. ಶಂಕರ್ ಸೇರಿದಂತೆ ನಾಲ್ಕು, ಹಾನಗಲ್ ಕ್ಷೇತ್ರದಲ್ಲಿ ಐದು, ಬ್ಯಾಡಗಿ ಕ್ಷೇತ್ರದಲ್ಲಿ ಮೂರು, ಹಿರೇಕೆರೂರ ಕ್ಷೇತ್ರದಲ್ಲಿ ಏಳು ಹಾಗೂ ಶಿಗ್ಗವಾಗಿ ಕ್ಷೇತ್ರದಲ್ಲಿ ಎಂಟು ನಾಮಪತ್ರಗಳು ಸಲ್ಲಿಕೆಯಾಗಿವೆ.ಹಾವೇರಿ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಗಳಾಗಿ ಬಿಜೆಪಿಯಿಂದ ಹೊರಬಂದ ಡಾ. ಸಂಜಯ ಡಾಂಗೆ, ಮೋತಿಲಾಲ್ ದೊಡ್ಡಮನಿ, ಜಯ ಕರ್ನಾಟಕ ಸಂಘಟನೆಯ ಸಂಜಯಗಾಂಧಿ ಸಂಜೀವಣ್ಣನವರ, ಶಂಕ್ರಪ್ಪ ಕುನ್ನೂರ, ಡಿಎಸ್‌ಎಸ್ ಮುಖಂಡ ವಾಸಪ್ಪ ಬಸವ್ವನವರ ನಾಮಪತ್ರ ಸಲ್ಲಿಸಿದರು.ರಾಣೆಬೆನ್ನೂರ ವಿಧಾನಸಭಾ ಕ್ಷೇತ್ರದಲ್ಲಿ ಬಿಎಸ್‌ಆರ್ ಕಾಂಗ್ರೆಸ್‌ನಿಂದ ಕೊಟ್ರಪ್ಪ ಕೊರೇರ, ಪಕ್ಷೇತರರಾಗಿ ಆರ್.ಶಂಕರ್, ಬಿ.ಎಂ. ಜಯದೇವಮಠ ಎರಡು ನಾಮಪತ್ರ ಸಲ್ಲಿಸಿದರೆ, ಹಾನಗಲ್ ಕ್ಷೇತ್ರಕ್ಕೆ ಜೆಡಿಎಸ್‌ನಿಂದ ಖಾಜಾವುದ್ದೀನ್ ಅಣ್ಣಿಗೇರಿ, ಪಕ್ಷೇತರರಾಗಿ ಅಬ್ದುಲ್‌ವಹಾಬ್ ಭಂಡಾರಿ, ಚನ್ನಬಸನಗೌಡ ಪಾಟೀಲ, ನಾರಾಯಣ ರಾಯ್ಕರ, ರಾಮು ಎಲ್ಲೂರ ನಾಮಪತ್ರ ಸಲ್ಲಿಸಿದರು.ಬ್ಯಾಡಗಿ ಕ್ಷೇತ್ರಕ್ಕೆ ಜೆಡಿಎಸ್‌ನಿಂದ ಮಲ್ಲಿಕಾರ್ಜುನ ಬೇವಿನಮರದ, ಪಕ್ಷೇತರರಾಗಿ ಬಸವಂತಪ್ಪ ಹುಲ್ಲತ್ತಿ ನಾಮಪತ್ರ ಸಲ್ಲಿಸಿದರೆ, ಹಿರೇಕೆರೂರ ಕ್ಷೇತ್ರದಲ್ಲಿ ಬಿಎಸ್‌ಆರ್‌ಕಾಂಗ್ರೆಸ್‌ನ ಎಚ್.ಎಂ..ಅಶೋಕ, ಬಿಎಸ್‌ಪಿ ಸುಲೇಮಾನ್ ಬಳಿಗಾರ, ಲೋಕಸತ್ತಾ ಸಂಪತ್‌ಕುಮಾರ ಮುತ್ತಳ್ಳಿ, ಪಕ್ಷೇತರ ದಾದಾಪೀರ್ ಕೂಲಂಬಿ, ಮಾರುತಿ ಜೋಕನಾಳ, ರಾಜೇಶ ಜೋಳದ, ಚರಣ ಕುಸಗೂರ ನಾಮಪತ್ರ ಸಲ್ಲಿಸಿದ್ದಾರೆ.ಶಿಗ್ಗಾವಿ ಮತಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ (ಎರಡು), ಕೆಜೆಪಿಯ ಬಾಪುಗೌಡ ಪಾಟೀಲ, ಜೆಡಿಯು ಅಭ್ಯರ್ಥಿ ಅಶೋಕ ಬಸಪ್ಪ ಮೈಸೂರ, ಪಕ್ಷೇತರರಾಗಿ ಮೆಹಬೂಬಸಾಬ್ ಖಾಲೆಭಾಗ, ಬಸವರಾಜ ಕಂಬಾರ, ವಿರೇಶ ರುದ್ರಪ್ಪ ಪಾಟೀಲ, ಪುಟ್ಟಪ್ಪ ಅರ್ಜುನ ಅಗಡಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.ಚಕ್ಕಡಿ ಮೇಲೆ ಮೆರವಣಿಗೆ: ಹಾವೇರಿ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಡಾ. ಸಂಜಯ ಡಾಂಗೆ ಅವರು ಚಕ್ಕಡಿ ಮೇಲೆ ಮೆರವಣಿಗೆ ಮಾಡಿಕೊಂಡು ತಹಶೀಲ್ದಾರ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.ನಗರದ ವೀರಭದ್ರೇಶ್ವರ ದೇವಸ್ಥಾನದಿಂದ ಬೆಂಬಲಿಗರೊಂದಿಗೆ ಮೆರವಣಿಗೆ ಆರಂಭಿಸಿದ ಡಾ.ಡಾಂಗೆಯವರು, ನಗರದ ಪ್ರಮುಖ ಬೀದಿಗಳಲ್ಲಿ ಜನರ ಆಶೀರ್ವಾದಕ್ಕೆ ಮನವಿ ಮಾಡಿದರು. ಬೆಂಬಲಿಗರು ಡಾ.ಡಾಂಗೆ ಪರ ಘೋಷಣೆಗಳನ್ನು ಕೂಗಿದರು.ಅದೇ ರೀತಿ ಡಿಎಸ್‌ಎಸ್‌ನ ಮುಖಂಡ ವಾಸಪ್ಪ ಬಸವ್ವನವರ ಕೂಡಾ ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರೆ, ಸಂಜೀವಗಾಂಧಿ ಸಂಜೀವಣ್ಣನವರ ಅವರು ಜಯ ಕರ್ನಾಟಕ ರಾಜ್ಯ ಉಪಾಧ್ಯಕ್ಷ ರಮೇಶ ಆನವಟ್ಟಿ ಅವರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು.ರಾಣೆಬೆನ್ನೂರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಆರ್.ಶಂಕರ್ ಅವರು ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದ್ದು ವಿಶೇಷವಾಗಿತ್ತು.ನಾಮಪತ್ರ ಸಲ್ಲಿಸಲು ಕೊನೆ ದಿನ: ಏ. 10ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ನಾಮಪತ್ರ ಸಲ್ಲಿಸಲು ಏ. 17ರಂದು ಕೊನೆಯ ದಿನ. ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಕೊನೆಯ ದಿನವಾದ ಬುಧವಾರ ಕೂಡಾ ಕೆಲ ಅಭ್ಯರ್ಥಿಗಳು ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ.

ಹಾವೇರಿ ಕ್ಷೇತ್ರಕ್ಕೆ ಜೆಡಿಎಸ್‌ನಿಂದ ಸ್ಪರ್ಧೆ: ಮೇಗಳಮನಿ

ಹಾವೇರಿ: ಕಾಂಗ್ರೆಸ್‌ನ ಕೆಲ ಮುಖಂಡರು ಟಿಕೆಟ್ ಕೊಡಿಸುವುದಾಗಿ ಹೇಳಿ ತಮ್ಮ ವಂಚಿಸಿದ ಹಿನ್ನೆಲೆಯಲ್ಲಿ  ತಾವು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದಲ್ಲದೇ, ಅದೇ ಪಕ್ಷದಿಂದ ಹಾವೇರಿ ವಿಧಾನಸಭೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಜಿ.ಪಂ. ಮಾಜಿ ಅಧ್ಯಕ್ಷ ಪರಮೇಶಪ್ಪ ಮೇಗಳಮನಿ ತಿಳಿಸಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ವರಿಷ್ಠರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಂಡಿದ್ದು, ಏ. 17ರಂದು ನಾಮಪತ್ರ ಸಲ್ಲಿಸುವುದಾಗಿ ಹೇಳಿದರು.ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತಾ ಬಂದಿದೇನೆ. ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ. ಅದೇ ಕಾರಣಕ್ಕಾಗಿ ತಮಗೆ ಟಿಕೆಟ್ ದೊರೆಯುವ ವಿಶ್ವಾಸವಿತ್ತು. ಆದರೆ ಕೊನೆಯ ಕ್ಷಣದಲ್ಲಿ ನಾಯಕರಾದ ಎಚ್.ಕೆ. ಪಾಟೀಲ, ಕೆ.ಬಿ. ಕೋಳಿವಾಡ  ಸೇರಿದಂತೆ ಇತರರು ನನಗೆ ಟಿಕೆಟ್ ತಪ್ಪಿಸಿ ದ್ರೋಹ ಮಾಡಿದರು ಎಂದು ಆರೋಪಿಸಿದರು.ಪಕ್ಷದ ನಾಯಕರು ನಿರ್ಧಾರವನ್ನು ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಗೌರವಿಸಬೇಕು. ವರಿಷ್ಠರು ಯಾರಿಗೆ ಟಿಕೇಟ್ ನೀಡುತ್ತಾರೋ ಅವರ ಗೆಲುವಿಗೆ ಶ್ರಮಿಸಬೇಕೆಂದು ಜೆಡಿಎಸ್ ಜಿಲ್ಲಾ ಘಟಕದ ಆಧ್ಯಕ್ಷ ಎಂ.ಎ.ಗಾಜಿಗೌಡ್ರ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ರವಿ ಮೆಣಸಿನಕಾಯಿ, ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಣ್ಣ ಕೋಡಿಹಳ್ಳಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

ಪ್ರತಿಕ್ರಿಯಿಸಿ (+)