ಜಿಲ್ಲೆಯಾದ್ಯಂತ ಸಂಭ್ರಮದ ಈದ್ ಆಚರಣೆ

7

ಜಿಲ್ಲೆಯಾದ್ಯಂತ ಸಂಭ್ರಮದ ಈದ್ ಆಚರಣೆ

Published:
Updated:

ಮಡಿಕೇರಿ: ಪ್ರವಾದಿ ಮಹಮದ್ ಪೈಗಂಬರರ ಜನ್ಮ ದಿನಾಚರಣೆಯನ್ನು ಮುಸ್ಲಿಂ ಬಾಂಧವರು ಬುಧವಾರ ಜಿಲ್ಲೆಯಾದ್ಯಂತ ಸಡಗರ- ಸಂಭ್ರಮದಿಂದ ಆಚರಿಸಿದರು. ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ಬದ್ರಿಯಾ ಮಸೀದಿ ಆಶ್ರಯದಲ್ಲಿ ಗದ್ದಿಗೆ ಬಳಿಯಿಂದ ಖಾಸಗಿ ಬಸ್ ನಿಲ್ದಾಣದವರೆಗೆ ಮುಖ್ಯ ಬೀದಿಗಳಲ್ಲಿ ನಡೆದ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು.ಬದ್ರಿಯಾ ಮಸೀದಿಯ ಅಧ್ಯಕ್ಷ ಎಂ.ಇ. ಹನೀಫ್, ಧರ್ಮಗುರು ಮೈದು ಫೈಝಿ, ಮುಖ್ಯಸ್ಥರಾದ ಅಬ್ದುಲ್ ಹಮೀದ್ ಮದನಿ, ಪಿ.ಎ. ಹಾರೂನ್, ಎ.ಆರ್. ಅಬ್ದುಲ್ ಲತೀಫ್ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ವಿವಿಧ ತಂಡಗಳಿಂದ ಇಸ್ಲಾಂ ಸಾಂಸ್ಕೃತಿಕ ‘ದಫ್’ ಪ್ರದರ್ಶನ ಗಮನಸೆಳೆಯಿತು. ಮೆಕ್ಕಾ- ಮದೀನಾ ಟ್ಯಾಬ್ಲೋಗಳು ರಾರಾಜಿಸಿದವು. ಬೈಕ್ ಹಾಗೂ ವಾಹನಗಳ ರ್ಯಾಲಿ ಮೆರವಣಿಗೆಗೆ ಕಳೆ ತಂದಿತು. ಆನಂತರ ಕೂರ್ಗ್ ಕಮ್ಯುನಿಟಿ ಹಾಲ್‌ನಲ್ಲಿ ಸಭಾ ಕಾರ್ಯಕ್ರಮ ನಡೆಯಿತು.ಈದ್-ಮಿಲಾದ್ ಪ್ರಯುಕ್ತ ಅರೇಬಿಕಾ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವಾದಿ ಕುರಿತು ಭಾಷಣ, ಕಥಾ ಪ್ರಸಂಗ, ಹಾಡುಗಾರಿಕೆ ಮತ್ತಿತರ ಸ್ಪರ್ಧೆ ಏರ್ಪಡಿಸಲಾಗಿತ್ತು. ಶಾಲಾ ಮಕ್ಕಳು ಕನ್ನಡ, ಉರ್ದು, ಇಂಗ್ಲಿಷ್, ಅರೇಬಿಕಾ ಸೇರಿದಂತೆ ನಾನಾ ಭಾಷೆಗಳಲ್ಲಿ ಪ್ರತಿಭೆ ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಜಿಲ್ಲೆಯ ಇತರ ಪ್ರಮುಖ ಪಟ್ಟಣಗಳಲ್ಲಿಯೂ ಬುಧವಾರ ಈದ್-ಮಿಲಾದ್ ಅನ್ನು ಸಂಭ್ರಮದಿಂದ ಆಚರಿಸಲಾಯಿತು.ವಿಶೇಷ ಪ್ರಾರ್ಥನೆ

ಕುಶಾಲನಗರ: ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಬುಧವಾರ ಸಂಭ್ರಮ, ಸಡಗರದಿಂದ ಈದ್ ಮಿಲಾದ್ ಹಬ್ಬವನ್ನು ಆಚರಿಸಿದರು. ಇಲ್ಲಿನ ಜಾಮೀಯ ಮಸೀದಿ ಮತ್ತು ದಾರುಲ್ ಉಲೂಂ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬೆಳಿಗ್ಗೆ ಹೊಸ ಉಡುಗೆ - ತೊಟ್ಟು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ದಾರುಲ್ ಉಲೂಂ ಅರಬ್ಬೀ ಶಾಲೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಖತೀಬ್ ಮುಸ್ತಾಫ ಫೈಜಿ, ದಾರುಲ್ ಉಲೂಂ ಮಸೀದಿ ಸಮಿತಿ ಅಧ್ಯಕ್ಷ ಎಂ.ವೈ.ಇಸ್ಮಾಯಿಲ್, ಮಾಜಿ ಅಧ್ಯಕ್ಷ ಬಿ.ಎಚ್.ಅಹ್ಮದ್, ಕಾರ್ಯದರ್ಶಿಗಳಾದ ಎಂ.ಇ.ಮೊಹಿದ್ದೀನ್, ಎಂ.ಎಂ.ಎಸ್.ಹುಸೇನ್, ಜಾಮೀಯ ಮಸೀದಿಯ ಅಧ್ಯಕ್ಷ ಬಷೀರ್ ಅಹ್ಮದ್, ನಿವೃತ್ತ ಶಿಕ್ಷಕ ಎಂ.ಎಚ್.ನಜೀರ್ ಅಹ್ಮದ್ ಇತರರು ಇದ್ದರು.ಕೂಡಿಗೆ, ನಂಜರಾಯಪಟ್ಟಣ, ಮುಳ್ಳುಸೋಗೆಯ ಜನತಾ ಕಾಲೋನಿ, ರಂಗಸಮುದ್ರ, ನೆಲ್ಲಿಹುದಿಕೇರಿ ಮತ್ತಿತರ ಕಡೆಗಳಲ್ಲಿ ಸಂಭ್ರಮದಿಂದ ನಡೆದ ಈದ್ ಆಚರಣೆಯಲ್ಲಿ ಮುಸ್ಲಿಂ ಬಾಂಧವರು ಮೆರವಣಿಗೆಯಲ್ಲಿ ತೆರಳಿ ಸೌಹಾರ್ದತಾ ಜಾಥಾ ನಡಿಸಿದರು. ಸುಂಟಿಕೊಪ್ಪ, ಏಳನೇ ಹೊಸಕೋಟೆಯಲ್ಲಿ ಮಂಗಳವಾರ ಈದ್ ಮಿಲಾದ್ ಅಂಗವಾಗಿ ಏರ್ಪಡಿಸಿದ್ದ ಮೆರವಣಿಗೆಯಲ್ಲಿ ಜನಾಂಗಬಾಂಧವರು, ಮಕ್ಕಳು ಸೌಹಾರ್ದ ಜಾಥಾ ನಡೆಸಿದರು.ಮೂರ್ನಾಡು: ಈದ್ ಆಚರಣೆ

ನಾಪೋಕ್ಲು: ಇಲ್ಲಿಗೆ ಸಮೀಪದ ಮೂರ್ನಾಡು ಹಿದಾಯತುಲ್ ಇಸ್ಲಾಂ ಮದರಸದಲ್ಲಿ ಈದ್ ಮಿಲಾದ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಮದರಸ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭವನ್ನು ಮೂರ್ನಾಡುವಿನ ಪಿ.ಅಹ್ಮದ್ ಸಖಾಫಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಜುಮಾ ಮಸೀದಿಯ ಉಪಾಧ್ಯಕ್ಷ ಕೆ.ಎಚ್.ಶೇಖ್ ಅಹ್ಮದ್, ಗ್ರಾ.ಪಂ. ಸದಸ್ಯ ಕೆ.ಎ.ಖಾದರ್, ಮಾಜಿ ಅಧ್ಯಕ್ಷರಾದ ಕೆ.ಯು ಮಮ್ಮುಞ, ಎಂ.ಎ.ವಜೀರ್, ಮಿಲಾದ್ ಕಮಿಟಿ ಅಧ್ಯಕ್ಷ ಕೆ.ಎಂ.ಅಬೂಬಕರ್, ಜಂಟಿ ಕಾರ್ಯದರ್ಶಿ ಕೆ.ಎಂ.ಅನ್ವರ್ ಸಾದತ್ ಉಪಸ್ಥಿತರಿದ್ದರು.ಸಮಾರಂಭದ  ಅಧ್ಯಕ್ಷತೆಯನ್ನು ಜಮಾಮಸೀದಿ ಅಧ್ಯಕ್ಷ ಕೆ.ಎಂ.ಮಜೀದ್ ವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಮದರಸದ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಜುಮಾ ಮಸೀದಿ ಕಾರ್ಯದರ್ಶಿ ಕೆ.ಎ.ಹಂಸ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಸುಲೇಮಾನ್ ಸೂಫಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ಸಡಗರದ ಆಚರಣೆ

ಶನಿವಾರಸಂತೆ: ಸಮೀಪದ ಗುಡುಗಳಲೆಯ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಬುಧವಾರ ಪ್ರವಾದಿ ಮಹ್ಮದ್ ಅವರ 1485ನೇ ಜನ್ಮದಿನಾಚರಣೆ ಸಮಾರಂಭವನ್ನು ಸಂಭ್ರಮ-ಸಡಗರದಿಂದ ಆಚರಿಸಲಾಯಿತು. ಮಸೀದಿ ಗುರು ಅಬ್ದುಲ್‌ಖಾದರ್ ಬಾಬವಿಯ ಮಾತನಾಡಿ ‘ಹಿಂದೂ-ಮುಸ್ಲಿಂ-ಕ್ರೈಸ್ತ ಧರ್ಮದ ಉದ್ಧಾರ ಹಾಗೂ ಲೋಕ ಕಲ್ಯಾಣಕ್ಕಾಗಿ ಪ್ರವಾದಿ ಮಹ್ಮದ್‌ರನ್ನು ಅಲ್ಲಾ ಪ್ರವಾದಿಯಾಗಿ ಕಳುಹಿಸಿರುತ್ತಾನೆ. ಎಲ್ಲಾ ಧರ್ಮ ಬಾಂಧವರಿಗೂ ಸುಖ ಶಾಂತಿ, ನೆಮ್ಮದಿ ದೊರೆಯಲಿ’ ಎಂದು ಹಾರೈಸಿದರು.ಅಧ್ಯಕ್ಷತೆ ವಹಿಸಿದ್ದ ಮಸೀದಿ ಅಧ್ಯಕ್ಷ ಜಿ.ಎಂ.ಹಮೀದ್ ಮಾತನಾಡಿ ‘ಮುಸ್ಲಿಂ ಬಾಂಧವರಿಗೆ ಈದ್ ಮಿಲಾದ್ ಹಬ್ಬದ ಶುಭಾಶಯ ಕೋರಿದರು. ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮಸೀದಿ ಉಪಾಧ್ಯಕ್ಷ ಸಿ.ಎಂ.ಅಬ್ದುಲ್, ಕಾರ್ಯದರ್ಶಿ ಕೆ.ಎ.ಹಸೇನ್,ಉಪ ಕಾರ್ಯದರ್ಶಿ ಸಿ.ಎ.ಹಮೀದ್ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಕೆ.ಎಸ್.ಹಸೇನಾರ್ ಕಾಜೂರ್ ಸ್ವಾಗತಿಸಿದರು. ಅಬ್ದುಲ್‌ರಜ್ಹಾಕ್ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry