ಶುಕ್ರವಾರ, ಮೇ 14, 2021
31 °C

ಜಿಲ್ಲೆಯಾದ್ಯಂತ ಸಂಭ್ರಮದ ಮಹಾವೀರ ಜಯಂತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಬಾಗ: ಭಗವಾನ ಮಹಾವೀರರ 2611ನೆಯ ಜಯಂತ್ಯುತ್ಸವವನ್ನು ಪಟ್ಟ ಣದ ಲಕ್ಷ್ಮಿಸೇನ ಶಿಕ್ಷಣ ಸಂಸ್ಥೆಯ ಮಹಾವೀರ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಏರ್ಪಡಿಸಲಾಗಿತ್ತು.ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ  ಎಸ್.ಬಿ. ಮುನ್ನೋಳಿ ಮಾತನಾಡಿ,  ಜೈನ ಧರ್ಮ ಎಂದರೆ ಮಾನವೀಯತೆಯನ್ನು ಗೆದ್ದವ ಎಂದರ್ಥ. ನೀನೂ ಬಾಳು ಪರರನ್ನು ಬಾಳಲು ಬಿಡಿ, ಇಲ್ಲಿ ಅಹಿಂಸೆಯೇ ಶ್ರೇಷ್ಠ ಧರ್ಮ ಎಂದು ವಿವರಿಸಿ ಭಗವಾನ ಮಹಾವೀರ ಅವರ ತತ್ವಾದರ್ಶಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಲು ತಿಳಿಸಿದರು.ಪ್ರಾಚಾರ್ಯ ಬಿ.ಎ.ಮಲಗೌಡರ ಮಾತನಾಡಿದರು. ಸಂಸ್ಥೆಯ ಉಪಾಧ್ಯಕ್ಷ ಎಸ್.ಬಿ.ಬಿರಾಜ ಅಧ್ಯಕ್ಷತೆ ವಹಿಸಿದ್ದರು.  ಸಂಸ್ಥೆಯ ಅಂಗಸಂಸ್ಥೆಗಳ ಮುಖ್ಯಸ್ಥರು,ವಿದ್ಯಾರ್ಥಿಗಳು, ಪಾಲಕರು ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಾಚಾರ್ಯ ಎ.ಬಿ.ಮಾನಗಾವಿ ಸ್ವಾಗತಿಸಿದರು.  ಮಹಾವೀರ ಪಾಟೀಲ ನಿರೂಪಿಸಿದರು. ಎಸ್.ಟಿ.ಭರಮರಾಹುತ ವಂದಿಸಿದರು.ಸಂಕೇಶ್ವರ ವರದಿ

 ವಿಶ್ವಕ್ಕೆ ಶಾಂತಿ ಮಂತ್ರವನ್ನು ಸಾರಿ ಹೇಳಿದ ಭಗವಾನ್ ಮಹಾವೀರ ಜಯಂತಿಯನ್ನು ಇಂದು ಸಂಕೇಶ್ವರದಲ್ಲಿ ಶ್ರದ್ದೆ ಮತ್ತು ಭಕ್ತಿಗಳಿಂದ ಆಚರಿಸಲಾಯಿತು. ಈ ನಿಮಿತ್ತ ಬೆಳಿಗ್ಗೆ ವಿಶೇಷ ಪೂಜೆ ಜರುಗಿತು. ನಂತರ ಮಠ ಗಲ್ಲಿಯಿಂದ ಆರಂಭವಾದ ಮೆರವಣಿಗೆ ಪಟ್ಟಣದ ತುಂಬಾ ನಡೆದು ಕೊನೆಗೆ ದೇವಾಲಯದಲ್ಲಿ ಮುಕ್ತಾಯ ಗೊಂಡಿತು. ಮಹಾವೀರರ ತತ್ವಗಳನ್ನು ಪ್ರತಿಯೊಬ್ಬರು ಪಾಲಿಸಬೇಕೆಂದು ಕರೆ ನೀಡಲಾಯಿತು.ಮೆರವಣಿಗೆಯಲ್ಲಿ ಸಂಕೇಶ್ವರ ಜೈನ ಸಮಾಜದ ಎಸ್.ಎನ್.ಜಾಬನ್ನವರ, ಎ.ಎಸ್.ಪಾಟೀಲ, ಬಾಬುರಾವ್ ಕುರಡೆ, ಸತೀಶ ಫಲಸೆ, ಆರ್.ವಿ.ಕುರಡೆ, ಜೀವನ ಮಿರ್ಜಿ ಮತ್ತಿತರರು ಇದ್ದರು.

ಹುಕ್ಕೇರಿ ವರದಿ

 ಪಟ್ಟಣದಲ್ಲಿ ಭಗವಾನ್ `ಮಹಾವೀರ ಜಯಂತಿ~ ಅನ್ನು ಬುಧವಾರ ನೂರಾರು ಭಕ್ತಾಧಿಗಳು ಭಕ್ತಿ ಭಾವದಿಂದ ವಿಧಿವತ್ತಾಗಿ ಆಚರಿಸಿದರು.ಜಯಂತಿ ನಿಮಿತ್ತ ಬೆಳಿಗ್ಗೆ ಧ್ವಹಾರೋಹಣ ಮಾಡಿ ಧಾರ್ಮಿಕ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಪೇಟೆ ಬೀದಿಯಲ್ಲಿಯ ಬಸದಿಯಲ್ಲಿ ಮಹಾವೀರ ಮೂರ್ತಿಗೆ ಅಭಿಷೇಕ ಮಾಡಲಾಯಿತು. ಮಹಿಳೆಯರನ್ನು ಒಳಗೊಂಡು ಪಟ್ಟಣದ ನೂರಾರು ಸಂಖ್ಯೆಯ ಭಕ್ತರು ಪೂಜಾ ಸಾಮಗ್ರಿ ಅರ್ಪಿಸಿ ನಮನ ಸಲ್ಲಿಸಿದರು.ನಂತರ ಬಸಿದಿಯಿಂದ ಪ್ರಾರಂಭ ಗೊಂಡ ಭಗವಾನ ಮಹಾವೀರರ ಭಾವಚಿತ್ರದ ಪಲ್ಲಕ್ಕಿ ಉತ್ಸವದಲ್ಲಿ ಶ್ರಾವಕ- ಶ್ರಾವಕಿಯರನ್ನೊಳಗೊಂಡು ನೂರಾರು ಜೈನ ಬಾಂಧವರು ಪಾಲ್ಗೊಂಡು ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಭಕ್ತರ ಮನೆಯ ಮುಂದೆ ಪಲ್ಲಕ್ಕಿ ಆಗಮಿಸಿದಾಗ ಅವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನೈವೇದ್ಯ ಹಿಡಿದು ಭಕ್ತಿ ಸಲ್ಲಿಸಿದರು.ಅಣ್ಣಸಾಹೇಬ ಖತಗಲ್ಲಿ, ಪ್ರಫುಲ್ ಅಡಿಕೆ, ಜೆ.ಬಿ. ದೇವರಮನಿ, ಬಿ.ಬಿ. ಚೌಗಲಾ, ನೇಮಿನಾಥ ಸೊಲ್ಲಾಪುರೆ, ಡಾ. ಬಿ.ಆರ್. ಹಂದೂರ, ಗೊಮಟೇಶ ಅಡಿಕೆ, ಅಶೋಕ ರಂಗೊಳ್ಳಿ, ಸಂಜಯ ಬಸ್ತವಾಡೆ, ಮಹಾವೀರ ಬಾಗಿ, ಸಂಜಯ ಅಡಿಕೆ, ಮಂಜುಳಾ ಹಂದೂರ, ಅರುಣ ಅಡಿಕೆ ಒಳಗೊಂಡು ಮತ್ತಿತರರು ಪಾಲ್ಗೊಂಡಿದ್ದರು. ಸಾರ್ವಜನಿಕರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.ಗೋಕಾಕ ವರದಿ

 ಭಗವಾನ ಮಹಾವೀರರ ತತ್ವಾದರ್ಶಗಳನ್ನು ಮೈಗೂಡಿಸಿ ಕೊಳ್ಳುವಂತೆ ಲಕ್ಷ್ಮಣರಾವ ಜಾರಕಿಹೊಳಿ ಬಿಬಿಎ ಕಾಲೇಜಿನ ಪ್ರಾಚಾರ್ಯ ಆರ್. ಎಸ್.ಪಂಡಿತ ಕರೆ ನೀಡಿದರು.ಬುಧವಾರ ನಗರದ ಲಕ್ಷ್ಮೀ ಏಜ್ಯುಕೇಶನ್ ಟ್ರಸ್ಟ್‌ನ ಲಕ್ಷ್ಮಣರಾವ ಜಾರಕಿಹೊಳಿ ಡಿ.ಇಡಿ ಹಾಗೂ ಬಿ.ಇಡಿ ಕಾಲೇಜ್ ಸಂಯುಕ್ತ ಆಶ್ರಯದಲ್ಲಿ ಜರುಗಿದ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಹಾವೀರರ  ಸಪ್ತ ತತ್ವಗಳಾದ ಉದಾರ ದೃಷ್ಟಿ, ಆರ್ಥಿಕ ಸಮತೋಲನ, ವಿಶ್ವ ಪ್ರೇಮ, ಅಹಿಂಸೆ, ಸತ್ಯ, ತ್ಯಾಗ ಹಾಗೂ ಆಶಾಭಾವನೆಗಳಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗಿದೆ ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಡಾ. ಎಸ್.ಎಮ್.ನದಾಫ್ ಮಾತ ನಾಡಿ, ಮಹಾನ್ ಪುರುಷರ ಆದರ್ಶ ಗಳನ್ನು  ಜೀವನದಲ್ಲಿ ಅಳವಡಿಸಿ ಕೊಂಡರೆ ಜಯಂತಿ ಆಚರಣೆ ಅರ್ಥ ಪೂರ್ಣವಾಗಿರುತ್ತದೆ ಎಂದರು.

 ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಶ್ರಿಧರರಾವ, ದೀಪಾ ಅಂಗಡಿ, ಎಮ್.ಬೀಳಗಿ, ಎ.ಬಿ.ಪಾಟೀಲ, ಐ.ಎಮ್.ಪೀರಜಾದೆ ಹಾಗೂ ಎಲ್.ವಿ.ಚಂದರಗಿ ಉಪಸ್ಥಿತರಿದ್ದರು.ವಿದ್ಯಾರ್ಥಿ ಪ್ರತಿಭಾ ಚೌಗಲಾ  ಸ್ವಾಗತಿಸಿದರು. ಶಿವಬಸು ಗುರವ ನಿರೂಪಿಸಿದರು. ಬಿ.ವೈ.ಖಂಡೇಪಟ್ಟಿ  ವಂದಿಸಿದರು.ಖಾನಾಪುರ ವರದಿ

 ಮಹಾವೀರ ಜಯಂತಿ ನಿಮಿತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬುಧವಾರ ಭಗವಾನ ಮಹಾವೀರನ ಪ್ರತಿಮೆಯ ಆಕರ್ಷಕ ಮೆರವಣಿಗೆ ಜರುಗಿತು. ಶ್ವೇತಾಂಬರ ಹಾಗೂ ದಿಗಂಬರ ಜೈನ ಸಮುದಾಯದ ಮುಖಂಡರು, ಯುವಕರು, ಮಹಿಳೆಯರು ಹಾಗೂ ಮಕ್ಕಳು ಉತ್ಸಾಹದಿಂದ ಮೆರವಣಿಗೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.ಬೆಳಗ್ಗೆ ಪಟ್ಟಣದ ಬಸ್ತಿಗಲ್ಲಿಯ ಜೈನಬಸದಿಯಿಂದ ಅಲಂಕೃತಗೊಂಡ ವಾಹನದಲ್ಲಿ ಮಹಾವೀರನ ಪ್ರತಿಮೆ ಯನ್ನು ಬಜಾರಪೇಟ, ಸಮಾದೇವಿಗಲ್ಲಿ, ಕಡೋಲ್ಕರಗಲ್ಲಿ,  ಚುರಮುರಕರ ಗಲ್ಲಿ ಮೂಲಕ ಸಿಂಡಿಕೇಟ್ ಬ್ಯಂಕ್ ಬಳಿಯಿರುವ ಶ್ವೇತಾಂಬರ ಜೈನ ಮಂದಿರಕ್ಕೆ ತರಲಾಯಿತು. ಯುವಕರು ಮೆರವಣಿಗೆಯುದ್ದಕ್ಕೂ ಸಮೂಹ ನೃತ್ಯದ ಮೂಲಕ ಜನಮನ ಸೆಳೆದರು. ಯುವತಿಯರು ಪೂರ್ಣಕುಂಭದೊಂದಿಗೆ ಮೆರವಣಿಗೆಗೆ ಮೆರಗು ನೀಡಿದರು. ಪ್ರತಿಯೊಬ್ಬರೂ ಶ್ವೇತವಸ್ತ್ರಧಾರಿಗಳಾಗಿ ಗಮನ ಸೆಳೆದರು.ಸಂಜೆ ಜೈನಬಸದಿಯಲ್ಲಿ ವಿಶೇಷ ಪೂಜೆ ಹಾಗೂ ಪ್ರಸಾದ ವಿತರಣೆ ಜರುಗಿತು. ಜೈನ ಸಮುದಾಯದ ಜನರು ಉತ್ಸಾಹದಿಂದ ಮಹಾವೀರ ಜಯಂತಿಯನ್ನು ಆಚರಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.