ಶನಿವಾರ, ಮೇ 8, 2021
18 °C

ಜಿಲ್ಲೆಯ ಎಲ್ಲೆಡೆ ಸಕಾಲಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ನಾಗರಿಕ ಸೇವಾ ಖಾತ್ರಿ ಕಾಯ್ದೆಯು ಭ್ರಷ್ಟಾಚಾರ ನಿರ್ಮೂಲನೆಗೆ ಪ್ರಬಲ ಮತ್ತು ಮೊದಲ ಅಸ್ತ್ರವಾಗಿ ಕಾರ್ಯ ನಿರ್ವಹಿಸುವ ಶಕ್ತಿ ಹೊಂದಿದೆ ಎಂದು ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪಿ.ಯೋಗೀಶ್ವರ್ ಅಭಿಪ್ರಾಯಪಟ್ಟರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಜಂಟಿಯಾಗಿ ನಗರಸಭಾ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ನಾಗರಿಕರಿಗೆ ಸೇವೆಗಳ ಖಾತರಿ ಅಧಿನಿಯಮ-2011ಕ್ಕೆ ಜಿಲ್ಲಾ ಮಟ್ಟದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.ಸರ್ಕಾರದ ಕೆಲಸಕ್ಕೆ ಚುರುಕು ಮುಟ್ಟಿಸಲು, ನಾಗರಿಕರಿಗೆ ಅಗತ್ಯ ಸೇವೆಯನ್ನು ನಿಗದಿತ ಕಾಲಮಿತಿಯೊಳಗೆ ಒದಗಿಸಲು ಹಾಗೂ ಸ್ವಚ್ಛ, ಪ್ರಾಮಾಣಿಕ ಸೇವೆ ನೀಡಲು ಈ ಕಾಯ್ದೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.ಅಧಿಕಾರಿಗಳು ಮತ್ತು ರಾಜಕಾರಣಿಗಳ ಬಗ್ಗೆ ಲಘುವಾಗಿ ಮಾತನಾಡುವುದು ಇನ್ನು ಮುಂದಾದರೂ ತಪ್ಪಬಹುದು ಎಂದ ಅವರು, ಜಿಲ್ಲೆಯ ಎಲ್ಲ ತಹಶೀಲ್ದಾರ್‌ಗಳು ತಮ್ಮ ಬಳಿ ಯಾವುದೇ ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳಬಾರದು. ಕಾಲ ಮಿತಿಯೊಳಗೆ ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡಿ, ಜನತೆಯ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಬೇಕು. ನಾಗರಿಕರಿಗೆ ಅಗತ್ಯ ಸೇವಾ ಸೌಲಭ್ಯಗಳು ದೊರೆಯುವಂತಾಗಬೇಕು ಎಂದು ಅವರು ಎಚ್ಚರಿಸಿದರು.ಜಿಲ್ಲೆಗೆ ಬರುವ ಹೊಸ ಅಧಿಕಾರಿಗಳ ಮುಂದೆ ಹಳೆ ಕಡತಗಳು ಇರದಂತೆ ಎಲ್ಲ ಅಧಿಕಾರಿಗಳು ಎಚ್ಚರದಿಂದ ಆಯಾ ಕೆಲಸಗಳನ್ನು ಆಯಾ ದಿನವೇ ಮುಗಿಸಬೇಕು ಎಂದು ಸೂಚಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಕ್ಷವಾಗಿ ಕಾರ್ಯ ನಿರ್ವಹಿಸುತ್ತಿದ್ದು ಅವರನ್ನು ಪ್ರಶಂಸೆ ಮಾಡಿದರೆ ತಪ್ಪಲ್ಲ. ಇದೇ ರೀತಿ ಎಲ್ಲ ಅಧಿಕಾರಿಗಳು ಸಮರ್ಥ ಮತ್ತು ದಕ್ಷವಾಗಿ ಕಾರ್ಯ ನಿರ್ವಹಿಸಬೇಕು ಎಂದು ಅವರು ಕಿವಿಮಾತು ಹೇಳಿದರು.ಶಾಸಕ.ಕೆ.ರಾಜು ಮಾತನಾಡಿ, ಈ ಕಾಯ್ದೆ ಯಶಸ್ವಿಯಾಗಿ ಜಾರಿಯಾದರೆ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಜನತೆಯಲ್ಲಿ ಗೌರವ ಮತ್ತು ವಿಶ್ವಾಸ ಹೆಚ್ಚಾಗುತ್ತದೆ ಎಂದರು.`ಮಹತ್ವಾಕಾಂಕ್ಷೆಯ ಈ ಕಾಯ್ದೆಯಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಸೇರಿಸಿಲ್ಲ. ರಾಜ್ಯದ ಎಲ್ಲ ಕಡೆಯೂ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ದೂರುಗಳು ಇವೆ. ಇಂತಹ ಆರೋಪ ಮತ್ತು ದೂರುಗಳು ಬರುವ ಕಚೇರಿ ಮತ್ತು ಸೇವೆಗಳನ್ನು ಮೊದಲು ಈ ಕಾಯ್ದೆಯಡಿ ತಂದು ಜನತೆಯ ವಿಶ್ವಾಸಗಳಿಸಬೇಕು~ ಎಂದು ಅವರು ಇದೇ ಸಂದರ್ಭದಲ್ಲಿ ಸಲಹೆ ನೀಡಿದರು.ಜಿ.ಪಂ. ಅಧ್ಯಕ್ಷೆ ಯು.ಪಿ.ನಾಗೇಶ್ವರಿ, ನಗರಸಭೆ ಅಧ್ಯಕ್ಷ ಸಾಬಾನ್ ಸಾಬ್, ರಾ-ಚ ಪ್ರಾಧಿಕಾರದ ಅಧ್ಯಕ್ಷ ಕೆ. ಶೇಷಾದ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಅರ್ಚನಾ, ಎಸ್ಪಿ ಅನುಪಮ್ ಅಗರ್‌ವಾಲ್, ಜಿ.ಪಂ ಸಿಇಒ ಕೆ.ಎಸ್.ವೆಂಕಟೇಶಪ್ಪ ಉಪಸ್ಥಿತರಿದ್ದರು. ತಹಶೀಲ್ದಾರ್ ಡಾ. ರವಿ ತಿರ್ಲಾಪುರ ಸ್ವಾಗತಿಸಿದರು. ಜಿ.ಪಂ ಉಪ ಕಾರ್ಯದರ್ಶಿ ಸಿದ್ದರಾಮಯ್ಯ ವಂದಿಸಿದರು.ಸಕಾಲಕ್ಕೆ ಚಾಲನೆ

ಮಾಗಡಿ: ಕರ್ನಾಟಕ ನಾಗರಿಕ ಸೇವೆಗಳ ಖಾತರಿ ನಿಯಮದ ಕಾರ್ಯಾಲಯವನ್ನು ಸೋಮವಾರ ಶಾಸಕ ಎಚ್.ಸಿ. ಬಾಲಕೃಷ್ಣ ಉದ್ಘಾಟಿಸಿದರು.ಜಿ.ಪಂ.ಸದಸ್ಯ ಧನಂಜಯ, ಪುರಸಭೆಯ ಅಧ್ಯಕ್ಷ ಪುರುಷೋತ್ತಮ್, ಸದಸ್ಯ ಎನ್.ಗಂಗಯ್ಯ ಇತರರು ಉಪಸ್ಥಿತರಿದ್ದರು.ತಹಸೀಲ್ದಾರ್ ನಿರಂಜನ ಬಾಬು ಮತ್ತು ಆರ್.ಆರ್.ಟಿ ಶಿರಸ್ತೇದಾರ್ ಕರಿನಿಂಗಯ್ಯ ಉಪಸ್ಥಿತರಿದ್ದು ಶಾಸಕರಿಗೆ ಕರ್ನಾಟಕ ನಾಗರಿಕ ಸೇವೆಗಳ ಖಾತರಿ ಅಧಿನಿಯಮ 2011ರ ಬಗ್ಗೆ ಮಾಹಿತಿ ನೀಡಿದರು. ಶಾಸಕರು ತಮ್ಮ ಹುಟ್ಟೂರು ಹುಲಿಕಟ್ಟೆಯಲ್ಲಿ ಇರುವ ಜಮೀನಿನ ವಿವರ ತಿಳಿಯಲು ಕಂಪ್ಯೂಟರ್‌ನಲ್ಲಿ ಸ್ವತಃ ಅರ್ಜಿ ಸಲ್ಲಿಸಿದರು. ಇದೇ ದಿನ ಪುರಸಭೆಯ ಕಚೇರಿಯಲ್ಲೂ ಸಹ ಶಾಸಕರು ನಾಗರಿಕ ಸೇವೆಗಳ ಖಾತರಿ ಬಗ್ಗೆ ಕಾರ್ಯಾಲಯ ಉದ್ಘಾಟಿಸಿದರು.`ನಿಗದಿತ ಸಮಯಕ್ಕೆ ಪೂರ್ಣಗೊಳಿಸಿ~

ಚನ್ನಪಟ್ಟಣ: ಸಾರ್ವಜನಿಕ ಕೆಲಸಗಳು ಸಮರ್ಪಕವಾಗಿ, ನಿಗದಿತ ಸಮಯದೊಳಗೆ ಪೂರ್ಣವಾಗುವಂತೆ ಮಾಡುವುದೇ ನಾಗರಿಕ ಸೇವೆಗಳ ಖಾತರಿ ಅಧಿನಿಯಮ-2011ರ ಉದ್ದೇಶವಾಗಿದೆ ಎಂದು ನಗರಸಭಾ ಅಧ್ಯಕ್ಷೆ ರೇಷ್ಮಾಬಾನು ಹೇಳಿದರು.ನಾಗರಿಕ ಸೇವೆಗಳ ಖಾತರಿ ಅಧಿನಿಯಮ-2011ಕ್ಕೆ ನಗರಸಭಾ ಕಟ್ಟಡದಲ್ಲಿ ಕೊಠಡಿಯೊಂದನ್ನು ಮೀಸಲಿರಿಸಿ, ಸಿಬ್ಬಂದಿ ನೇಮಿಸಿ ಅರ್ಜಿ ಪಡೆಯುವ ಕೆಲಸಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.ನಗರಸಭೆ ಉಪಾಧ್ಯಕ್ಷ ಕೆ.ಎಲ್. ಕುಮಾರ್, ನಗರಸಭಾ ಸದಸ್ಯ ವಿಷಕಂಠ ಮೂರ್ತಿ, ಪೌರಾಯುಕ್ತ ರಾಮಚಂದ್ರಯ್ಯ ಮತ್ತಿತರರು ಹಾಜರಿದ್ದರು.ವಿವರ ಪ್ರಕಟ: ನಾಗರಿಕ ಸೇವಾ ಖಾತರಿ ಅಧಿನಿಯಮಕ್ಕೆ ಸಂಬಂಧಿಸಿದಂತೆ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬೃಹತ್ ನಾಮಫಲಕಗಳನ್ನು ಹಾಕಿ ನಿಯಮದ ಪ್ರಕಾರ ನಡೆಯಬೇಕಾಗಿರುವ ಕೆಲಸಗಳ ಅವಧಿಯನ್ನು ಗೊತ್ತುಪಡಿಸಿರುವ ವಿವರಗಳನ್ನು ಪ್ರಕಟಿಸಲಾಯಿತು.ತಹಶೀಲ್ದಾರ್ ಅರುಣಪ್ರಭ, ತಾ.ಪಂ.ಕಾರ್ಯ ನಿರ್ವಹಣಾಧಿಕಾರಿ ರವಿಕುಮಾರ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ಗುಣವಂತ ಮುಂತಾದವರು ಹಾಜರಿದ್ದರು.ಸದ್ಬಳಕೆಗೆ ಡಿಕೆಶಿ ಕರೆ

ಕನಕಪುರ: `ಸಕಾಲ~ ಯೋಜನೆಯನ್ನು ನಾಗರಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಡಿ.ಕೆ.ಶಿವಕುಮಾರ್ ಹೇಳಿದರು. ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸಕಾಲ ಯೋಜನೆಗೆ ಚಾಲನೆ ನೀಡಿದ ಅವರು, ಯೋಜನೆ ಜಾರಿಗೊಳಿಸುವಂತೆ  ಹಿಂದಿನ ಅಧಿವೇಶದಲ್ಲಿ ಒತ್ತಾಯಿಸಲಾಗಿತ್ತು. ಅದಕ್ಕೆ ಮುಖ್ಯಮಂತ್ರಿ ಹಾಗೂ ಕಾನೂನು ಸಚಿವ ಸುರೇಶ್ ಕುಮಾರ್ ಸ್ಪಂದಿಸಿ ಯೋಜನೆಯನ್ನು ಜಾರಿಗೊಳಿಸಿದ್ದಾರೆ ತಾಲ್ಲೂಕಿನ ಜನತೆಯ ಪರವಾಗಿ ಅವರನ್ನು ಈಸಂದರ್ಭದ ಅಭಿನಂದಿಸುತ್ತಿದ್ದೇನೆ ಎಂದರು.  ಈ ಯೋಜನೆ ಮಹರಾಷ್ಟ್ರ ಮತ್ತು ರಾಜಸ್ತಾನಗಳಲ್ಲಿ ಜಾರಿಯಲ್ಲಿದ್ದು ಜನಪ್ರಿಯವಾಗಿದೆ. ಇದು ಜನಪರ ಯೋಜನೆಯಾಗಿದ್ದು ಇಲಾಖೆ ಸಿಬ್ಬಂದಿ ಹಾಗೂ ನಾಗರಿಕರಿಗೆ ಯೋಜನೆಯ ಸಂಪೂರ್ಣ ಮಾಹಿತಿ ನೀಡಿ ಜಾಗೃತಿ ಮೂಡಿಸಬೇಕೆಂದರು. ತಹಶೀಲ್ದಾರ್ ಡಾ.ದಾಕ್ಷಾಯಿಣಿ, ಪುರಸಭೆ ಮುಖ್ಯಾಧಿಕಾರಿ ಕೆ.ಮಾಯಣ್ಣಗೌಡ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿಲೀಪ್, ಕಾಂಗ್ರೆಸ್ ಮುಖಂಡ ವಿ.ಶ್ರಿನಿವಾಸ್, ತುಂಗಣಿ ರಂಗಸ್ವಾಮಿ, ಇಲಾಖೆಯ ಮುಖ್ಯಸ್ಥರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.