ಜಿಲ್ಲೆಯ ಪರಿಸರ ಸ್ಥಿತಿ ಕಳವಳಕಾರಿ: ವರದಿ

7
ಶಿಂಷಾ, ಸುವರ್ಣಮುಖಿ ಇನ್ನಿತರ ನದಿಗಳ ಪುನಶ್ಚೇತನಕ್ಕೆ ಸಲಹೆ

ಜಿಲ್ಲೆಯ ಪರಿಸರ ಸ್ಥಿತಿ ಕಳವಳಕಾರಿ: ವರದಿ

Published:
Updated:
ಜಿಲ್ಲೆಯ ಪರಿಸರ ಸ್ಥಿತಿ ಕಳವಳಕಾರಿ: ವರದಿ

ತುಮಕೂರು: ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲೆಯ ಪರಿಸರ ಪರಿಸ್ಥಿತಿ ಮತ್ತು ಜೀವವೈವಿಧ್ಯದ ವರದಿ ಪ್ರಕಟಟಿಸಲಾಗಿದ್ದು, ಜಿಲ್ಲೆಯ ಪರಿಸರ, ಅರಣ್ಯ, ಜಲಮೂಲಗಳ ಪರಿಸ್ಥಿತಿ ತೀವ್ರ ಕಳವಳಕಾರಿಯಾಗಿದೆ ಎಂದು ಹೇಳಿದೆ.ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾ ಮಟ್ಟದ ಪರಿಸರ ಸ್ಥಿತಿ ವರದಿ ಪ್ರಕಟಗೊಂಡಿದ್ದು ಜಿಲ್ಲೆಗೆ ಹಿರಿಮೆ ತಂದರೂ ಜಿಲ್ಲೆಯ ಪರಿಸ್ಥಿತಿ ಮಾತ್ರ ಆಘಾತಕಾರಿಯಾಗಿದೆ. ಪರಿಸರ, ಭೂಮಿಯ ಸುಸ್ಥಿರತೆ ಕುರಿತು ಜರೂರು ಗಮನ ಹರಿಸಬೇಕಾಗಿರುವುದರ ಕಡೆ ವರದಿ ಗಮನ ಸೆಳೆದಿದೆ.ಪಶ್ವಿಮ ಘಟ್ಟ ಕಾರ್ಯಪಡೆ, ತುಮಕೂರು ವಿಜ್ಞಾನ ಕೇಂದ್ರ ಜಂಟಿಯಾಗಿ ಈ ವರದಿ ಸಿದ್ಧಪಡಿಸಿದ್ದು, ಬುಧವಾರ ನಡೆದ ಸಮಾರಂಭದಲ್ಲಿ ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಬಿಡುಗಡೆ ಮಾಡಿದರು. ಇದೇ ವೇಳೆ ಬಯಲು ಸೀಮೆಯ ಹಸಿರುಬೊಟ್ಟು- ಸಿದ್ಧರಬೆಟ್ಟ ಕೃತಿಯನ್ನು ಬಿಡುಗಡೆ ಮಾಡಿದರು.ಭಾರತ ದೂರ ಸಂವೇದಿ ಉಪಗ್ರಹ ಆಧಾರಿತ ಭೂ ಬಳಕೆ ಮತ್ತು ಭೂ ಹೂಡಿಕೆ ಬದಲಾವಣೆ ಅಧ್ಯಯನಗಳು ಜಿಲ್ಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಭೂ ಬದಲಾವಣೆ ಆಗಿರುವ ಕುರಿತು ಬೊಟ್ಟು ಮಾಡಿರುವುದನ್ನು ವರದಿ ಉಲ್ಲೇಖಿಸಿದೆ.ಅರಣ್ಯ ಭೂಮಿ, ಕೃಷಿ ಭೂಮಿ, ಬಂಜರು ಭೂಮಿಯು ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ಅಕ್ರಮ ಮರಳು ಗಣಿಗಾರಿಕೆಗೆ ದುರ್ಬಳಕೆ ಆಗುತ್ತಿದೆ. ಜಿಲ್ಲೆಯಲ್ಲಿ ಒಟ್ಟಾರೆ 3.5 ಚದರ ಕಿಲೋ ಮೀಟರ್‌ನಷ್ಟು ಅರಣ್ಯ ಪ್ರದೇಶವು ಅನ್ಯ ಉದ್ದೇಶಗಳಿಗೆ ಬಳಕೆಯಾಗಿರುವ ಕುರಿತು ಆತಂಕ ವ್ಯಕ್ತಪಡಿಸಿದೆ.ಜಿಲ್ಲೆಯ ಭೂ ಬಳಕೆ ಹಾಗೂ ಭೂ ಹೊದಿಕೆ ಸ್ವರೂಪದಲ್ಲಾಗಿರುವ ಬದಲಾವಣೆಯಿಂದ ಅರಣ್ಯ, ಪರಿಸರ, ಜೀವವೈವಿಧ್ಯ, ಸಾಮಾಜಿಕ, ಆರ್ಥಿಕ ಪರಿಸ್ಥಿತಿಯ ಮೇಲೂ ಗಂಭೀರ ಪರಿಣಾಮ ಬೀರಿದೆ ಎಂದು ಹೇಳಿದೆ.ಜಿಲ್ಲೆಯ ಒಟ್ಟು ಭೂ ವಿಸ್ತೀರ್ಣದ ಶೇ 10.42ರಷ್ಟು ಅರಣ್ಯ ಪ್ರದೇಶವಿದೆ. ಇದು ಕೂಡ ಕುರುಚಲು, ಅರೆ ಅರಣ್ಯವಾಗಿದೆ. ದಟ್ಟ ಅರಣ್ಯವೇ ಜಿಲ್ಲೆಯಲ್ಲಿ ಇಲ್ಲವಾಗಿದೆ. ಒತ್ತುವರಿಯಿಂದ ಅರಣ್ಯ ನಾಶವಾಗುತ್ತಿದೆ. ಜಿಲ್ಲೆಯ ಜೀವ ವೈವಿಧ್ಯದ ಆರೋಗ್ಯದ ದೃಷ್ಟಿಯಿಂದ ಶೇ 33ರಷ್ಟು ಅರಣ್ಯ ಇರಬೇಕು.. ಇತ್ತ ಕಡೆ ತುರ್ತು ಗಮನ ಹರಿಸುವಂತೆಯೂ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.ಇರುನೆಲೆ ಔಷಧಿ ವನಗಳನ್ನು ರಕ್ಷಿಸಬೇಕಿದೆ. ಅವುಗಳ ಸುಸ್ಥಿರ ಮತ್ತು ಕೊಯ್ಲು ವಿಧಾನಗಳನ್ನು ರೂಪಿಸಬೇಕಾಗಿದೆ. ಬಂಜರು ಭೂಮಿಯಲ್ಲಿ ಜೈವಿಕ ಇಂಧನ ಮರಗಳಾದ ಹೊಂಗೆ, ಹಿಪ್ಪೆ, ಸಿಮಾರೂಬ, ಜತ್ರೋಪ ಮರ ಬೆಳೆಯುವಂತೆಯೂ ಸಲಹೆ ನೀಡಿದೆ.ಜಿಲ್ಲೆಯ ಪ್ರಮುಖ ಪ್ರಾಣಿ ಸಂಕುಲಗಳಾದ ಚಿರತೆ, ಕರಡಿ, ಕತ್ತೆಕಿರುಬ, ಜಿಲ್ಲೆಯಲ್ಲಷ್ಟೇ ಕಂಡುಬರುವ ವಿಶಿಷ್ಟ ಬಗೆಯ ತೋಳ ವಿನಾಶದಂಚಿಗೆ ಸಾಗಿರುವ ಆಘಾತಕಾರಿ ಅಂಶವನ್ನು ಹೊರಹಾಕಿದೆ.

ರಾಜ್ಯದಲ್ಲಿ ದಾಖಲಾಗಿರುವ 80 ಪ್ರಮುಖ ಸಸ್ಯ ಪ್ರಬೇಧಗಳಲ್ಲಿ 20 ಸಸ್ಯ ಪ್ರಭೇದಗಳು ಜಿಲ್ಲೆಯಲ್ಲಿವೆ.ಇವುಗಳ ಪೈಕಿ ಜಾಲಾರಿ, ಶ್ರೀಗಂಧ, ರಕ್ತಚಂದನ, ಹೊನ್ನೆ ಪ್ರಬೇಧಗಳು ಜಾಗತಿಕ ಜೀವವೈವಿಧ್ಯ ಸಂರಕ್ಷಣಾ ಒಕ್ಕೂಟ ಹೊರತಂದಿರುವ ಜಾಗತಿಕ ವಿಪತ್ತಿಗೆ ಸಿಲುಕಿದ ಪಟ್ಟಿಯಲ್ಲಿ ಸೇರಿವೆ. ಜಿಲ್ಲೆಯ ವಿಶಿಷ್ಟ, ಅನುಪಮವಾದ ಜಾಲಾರಿ ಗಿಡಗಳು ಕ್ಷೀಣಿಸುತ್ತಿದ್ದರೂ ಅರಣ್ಯ ಇಲಾಖೆ ಇತ್ತ ಕಡೆ ಗಮನ ನೀಡಿಲ್ಲ ಎಂಬ ಆಘಾತಕಾರಿ ಅಂಶವನ್ನು ಒತ್ತಿ ಹೇಳಿದೆ.ಜಿಲ್ಲೆಯ 4,15,664 ಹೆಕ್ಟೇರ್ ಪ್ರದೇಶಕ್ಕೆ ಭೂ ಚಿಕಿತ್ಸೆ ನೀಡಬೇಕಾಗಿದೆ ಎಂದು ಸಲಹೆ ನೀಡಿದೆ. ಸಮಗ್ರ ಭೂ ಚಿಕಿತ್ಸೆಗೆ ಒಳಪಡಿಸುವ ಮೂಲಕ ಕಟ್ಟೆ, ಕುಂಟೆ, ಕೆರೆಗಳ ಪುನಶ್ಚೇತನೆ ಮಾಡುವ ಕಡೆಗೆ ಒತ್ತು ನೀಡಬೇಕು.ಜಿಲ್ಲೆಯಲ್ಲಿ ಕಾವೇರಿ, ಕೃಷ್ಣ ನದಿ ಪಾತ್ರಗಳ ಭೂಮಿಯನ್ನು ಸಮಗ್ರ ಭೂ ಚಿಕಿತ್ಸೆಗೆ ಒಳಪಡಿಸಿ ಜಯಮಂಗಲಿ, ಶಿಂಷಾ, ಸುವರ್ಣಮುಖಿ, ಗರುಡಾಚಲ, ಉತ್ತರ ಮತ್ತು ದಕ್ಷಿಣ ಪೆನ್ನಾರ್, ನಾಗಿನಿ ನದಿ ಹಾಗೂ ನೈಸರ್ಗಿಕ ಹೊಳೆಗಳ ಪುನಶ್ಚೇತನಕ್ಕೆ ಕಾರ್ಯಕ್ರಮ ರೂಪಿಸಬೇಕಾದ ತುರ್ತು ಜರೂರಿನ ಸಲಹೆಯನ್ನು ಸರ್ಕಾರಕ್ಕೆ ನೀಡಲಾಗಿದೆ.ಮರಳು ದಂದೆ, ಅಕ್ರಮ ಜೆಲ್ಲಿ ಕ್ರಷರ್ ತಡೆಯಬೇಕಾಗಿದೆ. ಮಧುಗಿರಿ, ಪಾವಗಡ, ಕೊರಟಗೆರೆಯಲ್ಲಿದ್ದ ತಲಪರಿಗೆ ವಿನಾಶದತ್ತ ಸಾಗಿವೆ. ಗಣಿಗಾರಿಕೆಯಿಂದಾಗಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 148 ಕೆರೆಗಳು ಹಾಳಾಗಿವೆ. ಅಲ್ಲದೆ 4207 ಹೆಕ್ಟೇರ್‌ನಲ್ಲಿ ಅರ್ಧದಷ್ಟು ಪ್ರದೇಶ ಕೆರೆ ನೀರಿನ ಸೌಲಭ್ಯದಿಂದ ವಂಚಿತವಾಗಿದೆ ಎಂದು ವರದಿ ಉಲ್ಲೇಖಿಸಿದೆ.ರಾಜ್ಯದಲ್ಲಿ ದಾಖಲಾಗಿರುವ 80 ಅಪರೂಪದ ಸಸ್ಯ ಪ್ರಬೇಧಗಳಲ್ಲಿ 20 ಪ್ರಬೇಧಗಳು ಜಿಲ್ಲೆಯಲ್ಲಿವೆ.  ಅವುಗಳಲ್ಲಿ ಅನೇಕ ಪ್ರಭೇದಗಳು ಅಳಿವಿನಂಚಿನಲ್ಲಿವೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry