ಮಂಗಳವಾರ, ನವೆಂಬರ್ 12, 2019
20 °C

ಜಿಲ್ಲೆಯ ವಿವಿಧೆಡೆ ಅಂಬೇಡ್ಕರ್ ಜಯಂತಿ

Published:
Updated:

ಹಾಸನ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಭಾನುವಾರ ಜಿಲ್ಲೆಯ ವಿವಿಧೆಡೆ ಆಚರಿಸಲಾಯಿತು. `ಅಂಬೇಡ್ಕರ್ ತುಳಿತಕ್ಕೊಳಗಾದವರ ಆಶಾಕಿರಣ'

ಚನ್ನರಾಯಪಟ್ಟಣ: ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಪಟ್ಟಣದ ವಿವಿಧೆಡೆ ಭಾನುವಾರ ಆಚರಿಸಲಾಯಿತು.

ದಲಿತ ಸಂಘಟನೆಗಳ ಆಶ್ರಯದಲ್ಲಿ ಹೊಳೆನರಸೀಪುರ ವೃತ್ತದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ತಹಶೀಲ್ದಾರ್ ಪಿ.ಜಿ. ನಟರಾಜ್ ಪುಷ್ಪ ನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ತುಳಿತಕ್ಕೊಳಗಾದ ಜನರ ಬಾಳಿನ ಆಶಾಕಿರಣ. ಹಿಂದುಳಿದವರಿಗೆ, ದಲಿತರಿಗೆ ಸಂವಿಧಾನದಲ್ಲಿ ವಿಶೇಷ ಸಲವಲತ್ತು ನೀಡುವ ಮೂಲಕ ಸಾಮಾಜಿಕ ಕ್ರಾಂತಿ ಉಂಟು ಮಾಡಿ ಅವರ ಜೀವನಕ್ಕೆ ದಾರಿದೀಪವಾದರು ಎಂದರು.ದಲಿತ ಮುಖಂಡ ಕುಂದೂರು ರಾಜು ಮಾತನಾಡಿದರು. ಮುಖಂಡರಾದ  ಎನ್.ಬಿ. ಮಂಜಣ್ಣ, ಚಂದ್ರಪ್ಪ, ರವೀಂದ್ರ, ಎಸ್.ಎಂ.ಲಕ್ಷ್ಮಣ್, ಚೆಲುವಯ್ಯ, ಡಿ.ಎಸ್. ರವಿ, ಧರ್ಮಯ್ಯ, ಚೆಲುವಯ್ಯ ಇದ್ದರು.ತಾಲ್ಲೂಕು ಆಡಳಿತದ ವತಿಯಿಂದ ಇಲ್ಲಿನ ಮಿನಿವಿಧಾನಸೌಧದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ತಹಶೀಲ್ದಾರ್ ಪಿ.ಜಿ. ನಟರಾಜ್, ಸಮಾಜ ಕಲ್ಯಾಣಾಧಿಕಾರಿ ಡಾ.ಬಿ.ಎಸ್. ಹೇಮಲತಾ ಪುಷ್ಪ ಅರ್ಪಿಸಿ ನಮಿಸಿದರು. ತಹಶೀಲ್ದಾರ್ (ಗ್ರೇಡ್-2) ಸೋಮಶೇಖರ್, ಇನ್‌ಸ್ಪೆಕ್ಟರ್ ಎ.ಮಾರಪ್ಪ, ಪುರಸಭಾ ಮುಖ್ಯಾಧಿಕಾರಿ ಎಚ್.ಎಸ್. ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ. ಪಾಂಡು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಾಮಹನುಮಯ್ಯ, ದಲಿತ ಮುಖಂಡ ಸಿ.ಎನ್. ಮಂಜುನಾಥ್, ರಂಗಸ್ವಾಮಿ ಸೇರಿ ಅನೇಕ ಮುಖಂಡರು ಹಾಜರಿದ್ದರು.ಇಲ್ಲಿನ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಕಾಲೇಜು ಪ್ರಾಚಾರ್ಯ ಪ್ರೊ.ಎನ್. ಸೋಮಸುಂದರ್ ಮಾತನಾಡಿ, ಅಂಬೇಡ್ಕರ್ ಪ್ರತಿಪಾದಿಸಿದ ತತ್ವ, ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.'

ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎನ್. ಜಯರಾಂ, ನಿವೃತ್ತ ಸಹ ಪ್ರಾಧ್ಯಾಪಕ ಕೆ.ಎಸ್.ಪಾಪೇಗೌಡ ಮಾತನಾಡಿದರು.ಸಹಪ್ರಾಧ್ಯಾಪಕರಾದ ಕೆ. ಚಂದ್ರನ್, ಮೇಲಗಿರಿಗೌಡ, ಎಚ್.ಎಂ. ಕುಮಾರಸ್ವಾಮಿ, ಎಸ್.ಬಿ. ಶಿವಕುಮಾರ್, ಡಾ.ಎನ್.ಶಂಕರೇಶ್, ಈ. ನಾಗಣ್ಣ, ಕೆ. ಕುಮಾರ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಎ.ಜೆ. ರಂಜಿತ ಸ್ವಾಗತಿಸಿದರೆ, ಎ.ಬಿ. ವಿನಾಯಕ ವಂದಿಸಿದರು.

ಡಾ.ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನರಾಮ್ ಆಟೊ ಮಾಲೀಕರು, ಚಾಲಕರ ಸಂಘದ ಆಶ್ರಯದಲ್ಲಿ ಅಂಬೇಡ್ಕರ್ ದಿನಾಚರಣೆ  ನಡೆಸಲಾಯಿತು.`ಅಂಬೇಡ್ಕರ್ ಆದರ್ಶಗಳು ಎಲ್ಲ ಕಾಲಕ್ಕೂ ಪ್ರಸ್ತುತ'

ಅರಕಲಗೂಡು: ಮಹಾನ್ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳು ಎಲ್ಲ ಕಾಲಕ್ಕೂ ಪ್ರಸ್ತುತ ಎಂದು ತಹಶೀಲ್ದಾರ್ ಕೆ.ಪಿ. ಈಶ್ವರಪ್ಪ ತಿಳಿಸಿದರು.ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕು ಆಡಳಿತ ಭಾನುವಾರ ಏರ್ಪಡಿಸಿದ್ದ ಡಾ. ಅಂಬೇಡ್ಕರ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಶಿವರಾಮ್, ಬಿಇಒ ರೇವಣ್ಣ, ವೃತ್ತ ನಿರೀಕ್ಷಕ ರಾಜು, ಎಲ್ಲ ಇಲಾಖೆಗಳ ಅಧಿಕಾರಿಗಳು, ನೌಕರರು, ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಎನ್. ನಾಗರಾಜ್ ಸ್ವಾಗತಿಸಿದರು. ಕಾರ್ಯಕ್ರಮಕ್ಕೆ ಮುನ್ನ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.`ಸಂವಿಧಾನದ ನೀತಿ, ನಿಯಮ ಪಾಲಿಸಿ'

ಹೊಳೆನರಸೀಪುರ: ಡಾ. ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದಿಂದ ಜನರಿಗೆ ಸಾಮಾಜಿಕ ನ್ಯಾಯ ದೊರೆತಿದೆ. ಸಂವಿಧಾನದಲ್ಲಿನ ನೀತಿ ನಿಯಮಗಳನ್ನು ಎಲ್ಲರೂ ಗೌರವದಿಂದ ಪಾಲಿಸಿದಲ್ಲಿ ಸಮಾಜದಲ್ಲಿ ನೆಮ್ಮದಿ ನೆಲಸುತ್ತದೆ ಎಂದು ಡಿಎಸ್‌ಪಿ ಪ್ರದೀಪ್‌ಕುಮಾರ್ ಅಭಿಪ್ರಾಯ ಪಟ್ಟರು.ಭಾನುವಾರ ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಅವರ 122 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಭಾರತದಲ್ಲಿ ಇರುವ ಎಲ್ಲ ವರ್ಗದ, ಎಲ್ಲ ಜಾತಿ ಜನಾಂಗಗಳ, ಎಲ್ಲ ಧರ್ಮದ ಜನರಿಗೂ ಒಪ್ಪಿಗೆ ಆಗುವಂತಹ ಸಂವಿಧಾನ ರೂಪಿಸುವುದು ಅಷ್ಟು ಸುಲಭದ ಮಾತಲ್ಲ. ಎಲ್ಲರಿಗೂ ಅನ್ವಯವಾಗುವಂತಹ ಸಂವಿಧಾನ ಹಾಗೂ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪ್ರಪಂಚವೇ ಒಪ್ಪಿದೆ. ನಾವು ಅದನ್ನು ಗೌರವಿಸಿ ನಡೆಯಬೇಕು ಎಂದರು. ಅಂಬೇಡ್ಕರ್ ಅವರು ಇಡೀ ಮನುಕುಲಕ್ಕೆ ಸಮಾನತೆಯ ಸಂದೇಶ ಸಾರಿದರು. ಅವರ ಆದರ್ಶ ಅವರು ತೋರಿದ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು ಎಂದರು.ತಹಶೀಲ್ದಾರ್ ಮಂಜುಳಾ ಮಾತನಾಡಿ, ಪ್ರತಿಯೊಬ್ಬರೂ ಮೇಲು ಕೀಳೆಂಬ ಭಾವನೆ ಬಿಟ್ಟು ಎಲ್ಲರೂ ಸಮಾನರು ಎಂದು ನಡೆದುಕೊಂಡಾಗ ಮಾತ್ರ ನಾವು ಅಂಬೇಡ್ಕರ್ ಅವರಿಗೆ ಗೌರವ ನೀಡಿದಂತಾಗುತ್ತದೆ ಎಂದರು.ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ತಮ್ಮಣ್ಣೇಗೌಡ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಂಗರಾಜು, ಬಿಇಒ ಯೋಗೇಶ್, ಸರ್ಕಲ್ ಇನ್‌ಸ್ಪೆಕ್ಟರ್ ಗೋಪಾಲನಾಯಕ್, ದಲಿತ ಮುಖಂಡರಾದ ಸೋಮಶೇಖರ್, ಚಿನ್ನಸ್ವಾಮಿ, ದೇವರಾಜ್, ಉಪನ್ಯಾಸಕ ಶಿವರಾಂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.`ಅಂಬೇಡ್ಕರ್ ಜೀವನ ಶೋಷಿತರಿಗೆ ಮುಡಿಪು'

ಅರಸೀಕೆರೆ: ಭಾವನಾತ್ಮಕ ಸಂಬಂಧಗಳ ಮಧ್ಯೆ ಬದುಕುತ್ತಿರುವ ಶೋಷಿತ ಸಮುದಾಯದ ಏಳಿಗೆಗಾಗಿ ಡಾ. ಅಂಬೇಡ್ಕರ್ ಅವರು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದು, ತಳಮಟ್ಟದ ಜಾತಿಗಳನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಅವರ ಪಾತ್ರ ಮಹತ್ತರವಾದದ್ದು ಎಂದು ಶಾಸಕ ಕೆ.ಎಂ ಶಿವಲಿಂಗೇಗೌಡ ಭಾನುವಾರ ತಿಳಿಸಿದರು.ಡಾ. ಅಂಬೇಡ್ಕರ್ ಅವರ 122 ನೇ ಜಯಂತಿ ಅಂಗವಾಗಿ ಪಟ್ಟಣದ ಹಾಸನ ವೃತ್ತದಲ್ಲಿರುವ ಡಾ. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಅಂಬೇಡ್ಕರ್ ಅವರ ಸಿದ್ಧಾಂತ, ಶೋಷಿತ ಸಮುದಾಯಕ್ಕೆ ಅವರು ಕೊಟ್ಟ ಕೊಡುಗೆಯನ್ನು ನಾವುಗಳು ಗೌರವಿಸಬೇಕಿದೆ ಎಂದರು.ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬಿಳಿಚೌಡಯ್ಯ, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾರನಹಳ್ಳಿ ಶಿವಮೂರ್ತಿ, ದಲಿತ ಮುಖಂಡರಾದ ಜಿ. ರಾಮು, ನಾಗರಹಳ್ಳಿ ಚಂದ್ರಶೇಖರ್, ಪುರಸಭಾ ಸದಸ್ಯರಾದ ಎಂ.ಸಮೀವುಲ್ಲಾ, ಮನೋಜ್‌ಕುಮಾರ್, ಅನ್ನಪೂರ್ಣ, ಮಂಜುನಾಥ್ ಸುರೇಶ್, ಮಾಜಿ ಸದಸ್ಯ ಲೋಕೇಶ್, ನಾಗವೇದಿ ಕರಿಯಪ್ಪ ಡಿ.ಎಂಕುರ್ಕೆ ಡಿ.ಕೆ ಹರೀಶ್ ಲಾಳನಕೆರೆ ಯೋಗೀಶ್, ಧರ್ಮಣ್ಣ, ಧರ್ಮಶೇಖರ್ ಉಪಸ್ಥಿತರಿದ್ದರು.   ಅಂಬೇಡ್ಕರ್ ಜಯಂತಿ

ಹಿರೀಸಾವೆ: ದುಡಿಯುವ ವರ್ಗದವರು ಆಡಳಿತ ನಡೆಸಬೇಕು ಎಂಬ ಕನಸನ್ನು ಇಟ್ಟುಕೊಂಡು ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನವನ್ನು ರಚನೆ ಮಾಡಿದರು, ಆದರೆ ನಮ್ಮನ್ನು ಆಳಿದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಅದನ್ನು ಪೂರ್ಣ ಜಾರಿಗೆ ತರುವಲ್ಲಿ ವಿಫಲವಾಗಿದ್ದಾರೆ ಎಂದು ದಲಿತ ಸಂಘಟನೆ ಬೂಕದ ಗೋವಿಂದರಾಜು ವಿಷಾದಿಸಿದರು.ವಿವಿಧ ದಲಿತ ಪರ ಸಂಘಟನೆಗಳು ಪಟ್ಟಣದಲ್ಲಿ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್‌ರವರ 122 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ದಲಿತ ಸಾಹಿತ್ಯ ಪರಿಷತ್‌ನ ಹೋಬಳಿ ಘಟಕದ ಅಧ್ಯಕ್ಷ ಪೋಸ್ಟ್ ಜಯಣ್ಣ, ಬಹುಜನ ಸಮಾಜ ವಿದ್ಯಾರ್ಥಿ ಸಂಘದ ಮಧು, ದಲಿತ ಸಂಘಟನೆಗಳ ಮುಖಂಡರಾದ ನಾಗರಾಜು, ಮಂಜುನಾಥ್, ಕರವೇನ ಹೋಬಳಿ ಘಟಕದ ಅಧ್ಯಕ್ಷ ಮಹೇಶ್, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಚ್.ವಿ.ಶಶಿಧರ್ ಮತ್ತು ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)