ಜಿಲ್ಲೆಯ ವಿವಿಧೆಡೆ `ಅನ್ನಭಾಗ್ಯ' ಯೋಜನೆಗೆ ಚಾಲನೆ

ಮಂಗಳವಾರ, ಜೂಲೈ 23, 2019
20 °C

ಜಿಲ್ಲೆಯ ವಿವಿಧೆಡೆ `ಅನ್ನಭಾಗ್ಯ' ಯೋಜನೆಗೆ ಚಾಲನೆ

Published:
Updated:

ಅರಸೀಕೆರೆ: ಅನ್ನಭಾಗ್ಯ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ತಾಲ್ಲೂಕಿನ ಜಡ್ಡುಗಟ್ಟಿರುವ ಕೆಲ  ನ್ಯಾಯಬೆಲೆ ಅಂಗಡಿಗಳ ವಿಕೇಂದ್ರಿಕರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಒತ್ತಾಯಿಸಿದರು.ಪಟ್ಟಣದ ಸುಬ್ರಮಣ್ಯ ನಗರದ ಚರ್ಚ್ ಹಿಂಭಾಗದಲ್ಲಿರುವ ರಂಗನಾಥ ನ್ಯಾಯಬೆಲೆ ಅಂಗಡಿ ಮುಂಭಾಗ ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಪಂಚಾ ಯಿತಿ ಇವರ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ರೂಪಾಯಿಗೆ ಕೆ.ಜಿ ಅಕ್ಕಿ ಯೋಜನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಕ್ಕಿ ವಿತರಿಸಿ ಅವರು ಮಾತನಾಡಿದರು.  ತಾಲ್ಲೂಕಿನ ಹಾರನಹಳ್ಳಿಯಲ್ಲಿ 7 ನ್ಯಾಯಬೆಲೆ ಅಂಗಡಿಗಳಿದ್ದು ಈ ಗ್ರಾಮದ ಸುತ್ತಲಿನ ಹತ್ತಾರು ಹಳ್ಳಿಯ ಜನರು 8-10 ಕಿ.ಮೀ. ವ್ಯಾಪ್ತಿಯ ಜನರ್ಲ್ಲೆಲ ಪಡಿತರ ಪಡೆಯಲು ಈ ಗ್ರಾಮಕ್ಕೆ ಬರಬೇಕು. ಅಕ್ಕಿ ಒಂದು ಬಾರಿ ಸಕ್ಕರೆಗೆ ಇನ್ನೊಂದು ಬಾರಿ ಮತ್ತು ಗೋಧಿ ಸೀಮೆ ಎಣ್ಣೆಗೆ ಮತ್ತೊಂದು ದಿನ ಬರಬೇಕಿದ್ದು ಫಲಾನುಭವಿ ಸುತ್ತಿ ಸುತ್ತಿ ಸಾಕಾಗಿ ಪಡಿತರ ಧಾನ್ಯದ ಗೊಡವೆಯೇ ಬೇಡ ಎನ್ನುವ ಸ್ಥಿತಿಗೆ ತಲುಪಿದ್ದಾನೆ. ಈ ಬಗ್ಗೆ ಅಧಿಕಾರಿಗಳಿಗೆ ಹೇಳಿದರೂ ಇದುವರೆವಿಗೂ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ತಹಶೀಲ್ದಾರ್ ಕೇಶವಮೂರ್ತಿ ಮಾತನಾಡಿ, ತಾಲ್ಲೂಕಿನ 68625 ಬಿಪಿಎಲ್ ಕುಟುಂಬಗಳು ಅನ್ನಭಾಗ್ಯ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಈ ಪೈಕಿ 64211 ಮಂದಿ ಅಂತ್ಯೋದಯ ಹಾಗೂ 4384 ಮಂದಿ ಕೇಂದ್ರ ಅಂತ್ಯೋದಯ ಅನ್ನ ಫಲಾನುಭವಿಗಳು ಎಂದು  ತಿಳಿಸಿದರು.ಜಿ.ಪಂ ಸದಸ್ಯ ಬಿಳಿಚೌಡಯ್ಯ, ಸದಸ್ಯರಾದ ಹುಚ್ಚೇಗೌಡ ರತ್ನಮ್ಮ ಕೃಷ್ಣನಾಯಕ್, ತಾ.ಪಂ. ಅಧ್ಯಕ್ಷ ಹಾರನಹಳ್ಳಿ ಶಿವಮೂರ್ತಿ, ಸದಸ್ಯ ಶಿವಕುಮಾರ್, ಪುರಸಭಾ ಸದಸ್ಯರಾದ ಅನ್ನಪೂರ್ಣ, ಪಂಚಾಕ್ಷರಿ, ತಾ.ಪಂ. ಇಒ ಎಚ್.ಎಸ್. ಚಂದ್ರಶೇಖರ್, ಆಹಾರ ಇಲಾಖೆ ಶಿರಸ್ತೇದಾರ್ ಗಂಗಾಧರಯ್ಯ, ಆಹಾರ ನಿರೀಕ್ಷಕ ಬಾಲು, ರಾಜಸ್ವ ನಿರೀಕ್ಷಕ ಉಮೇಶ್ ಇದ್ದರು.  ಅನ್ನಭಾಗ್ಯ ಬಡವರಿಗೆ ವರದಾನ: ಶಾಸಕ

ಆಲೂರು ವರದಿ: ಅನ್ನಭಾಗ್ಯ ಯೋಜನೆ ಬಡವರ ಪಾಲಿಗೆ ವರದಾನವಾಗಿದೆ ಎಂದು ಶಾಸಕ ಎಚ್.ಕೆ.ಕುಮಾರಸ್ವಾಮಿ ತಿಳಿಸಿದರು.ಪಟ್ಟಣದ ಗಣಪತಿ ಸಮುದಾಯ ಭವನದಲ್ಲಿ ಗುರುವಾರ ನಡೆದ ಅನ್ನಭಾಗ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ  ಯೋಜನೆಗೆ ಸಂಬಂಧಿಸಿದಂತೆ ಹಲವು ಟೀಕೆಗಳು ವ್ಯಕ್ತವಾಗಿವೆ. ಬಡತನದ ಬವಣೆ ಅನುಭವಿಸಿದ ಸಮುದಾಯಕ್ಕೆ ಗೊತ್ತಿರುತ್ತದೆ. ರಾಜಕಾರಣ ಬದಿಗೊತ್ತಿ ಬಡವರ ಅಭಿವೃದ್ಧಿಗೆ ರಾಜಕಾರಣಿಗಳು ಒಗ್ಗೂಡಿ ಶ್ರಮಿಸಬೇಕಿದೆ ಎಂದರು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಯಶೋಧರ ಹರೀಶ್ ಮಾತನಾಡಿ, ಅಧಿಕಾರಿಗಳು ಪಡಿತರ ವಿತರಣೆಯಲ್ಲಿ ಲೋಪವಾಗದಂತೆ ಎಚ್ಚರವಹಿಸಬೇಕು ಎಂದು ಹೇಳಿದರು.ಸಕಲೇಶಪುರ ಉಪವಿಭಾಗಾಧಿಕಾರಿ ಶ್ರೀವಿದ್ಯಾ ಮಾತನಾಡಿ ಪಡಿತರ ಚೀಟಿ (ರೇಷನ್ ಕಾರ್ಡ್) ವಿತರಣೆಯಲ್ಲಿ ತಾರತಮ್ಯ ಕಂಡು ಬಂದರೆ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ತಿಳಿಸಿದರು.ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಸ್.ಮಂಜೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಪುರುಷೋತ್ತಮ್ ಮಾತನಾಡಿದರು. ಉಪತಹಶೀಲ್ದಾರ್ ಸುಬ್ಬಶೆಟ್ಟಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ರೇಣುಕ, ಸದಸ್ಯರಾದ ಕಾಂತರಾಜ್, ಕೆ.ಎನ್.ಕಾಂತರಾಜ್, ಪಟ್ಟಣ ಪಂಚಾಯಿತಿ ಸದಸ್ಯ ಮಂಜುನಾಥ್, ರತ್ನಮ್ಮ, ಕಾರ್ಯನಿರ್ವಹಕ ಅಧಿಕಾರಿ ಶಿವಕುಮಾರಪ್ಪ, ಸಹಾಯಕ ಕೃಷಿ ನಿದೇರ್ಶಕ ಕೆಂಪಚೌಡಪ್ಪ ಇದ್ದರು.`ಹೋಬಳಿಗಳಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ನಿರ್ಧಾರ'

ಬೇಲೂರು ವರದಿ: `ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಒಂದು ರೂಪಾಯಿಗೆ ಅಕ್ಕಿ ನೀಡುವ ಯೋಜನೆ ಜಾರಿಗೊಳಿಸುವ ಮೂಲಕ  ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ' ಎಂದು ಶಾಸಕ ವೈ.ಎನ್.ರುದ್ರೇಶ್‌ಗೌಡ ಹೇಳಿದರು.ತಾಲ್ಲೂಕಿನ ಅರೇಹಳ್ಳಿಯಲ್ಲಿ ಗುರುವಾರ `ಅನ್ನ ಭಾಗ್ಯ' ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ದೇಶದಲ್ಲಿ ಶೇಕಡ 75 ರಷ್ಟು ಬಡ ಹಾಗೂ ಮಧ್ಯಮ ವರ್ಗದ ಜನರಿದ್ದಾರೆ. ಈ ಕುಟುಂಬಗಳ ನಿರ್ವಹಣೆಗೆ 1 ರೂಪಾಯಿ ಯೋಜನೆಯ ಮೂಲಕ ಅಕ್ಕಿ ನೀಡುವುದು ಸಹಕಾರಿಯಾಗಲಿದೆ ಎಂದರು.ರಾಜ್ಯದ ಪ್ರತಿ ಹೋಬಳಿ ಕೇಂದ್ರದಲ್ಲಿ 40 ಲಕ್ಷ ರೂಪಾಯಿ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ. ಅರೇಹಳ್ಳಿಯ ಅಂಬೇಡ್ಕರ್ ನಗರದಲ್ಲಿ 30 ಲಕ್ಷ ರೂಪಾಯಿತಿ ವೆಚ್ಚದಲ್ಲಿ ಅಂಬೇಡ್ಕರ್ ಕಟ್ಟಡ ನಿರ್ಮಿಸಲಾಗುವುದು ಎಂದು ತಿಳಿಸಿದರು.ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಡಿ.ಚಂದ್ರೇಗೌಡ ಮಾತನಾಡಿ ಕರ್ನಾಟಕ ಆಹಾರ ನಿಗಮದ ಉಗ್ರಾಣಗಳೇ ಅವ್ಯವಹಾರಗಳ ತಾಣವಾಗಿದೆ. ನ್ಯಾಯಬೆಲೆ ಅಂಗಡಿ ಮಾಲೀಕರು ನ್ಯಾಯಬೆಲೆ ಅಂಗಡಿಗಳಿಗೆ ಅಕ್ಕಿ ತರುವ ಮುನ್ನವೇ ಉಗ್ರಾಣದಲ್ಲಿಯೇ ಅಕ್ಕಿ ಮಾರಾಟ ಮಾಡುತ್ತಾರೆ ಎಂದು ದೂರಿದರು.ಆಹಾರ ಇಲಾಖೆ ಉಪ ನಿರ್ದೇಶಕ ರಾಮೇಶ್ವರ್ ನಾಯಕ್, ಶಿರಸ್ತೇದಾರ್ ನಾಗರಾಜ್ ಇದ್ದರು.ಪಡಿತರ ಸಾಗಣೆ ವೆಚ್ಚ ಭರಿಸಲು ಆಗ್ರಹ

ಚನ್ನರಾಯಪಟ್ಟಣ ವರದಿ: ಆಹಾರ ಗೋದಾಮಿನಿಂದ ನ್ಯಾಯಬೆಲೆ ಅಂಗಡಿಗೆ ಪಡಿತರ ಸಾಗಿಸುವ ಪಟ್ಟಣದ ನ್ಯಾಯಬೆಲೆ ಅಂಗಡಿಯ ಮಾಲೀಕರಿಗೆ ಸಾಗಣೆ ವೆಚ್ಚ ನೀಡಬೇಕು ಎಂದು  ಶಾಸಕ ಸಿ.ಎನ್. ಬಾಲಕೃಷ್ಣ ಒತ್ತಾಯಿಸಿದರು.ಪಟ್ಟಣದಲ್ಲಿ ಗುರುವಾರ ಏರ್ಪಡಿಸಿದ್ದ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಸಾಗಣೆ ವೆಚ್ಚ ನೀಡಲು ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು.ತಾಲ್ಲೂಕಿನಲ್ಲಿ 57,061 ಬಿಪಿಎಲ್, 3382 ಎಪಿಎಲ್ ಹಾಗೂ 900 ಅಂತ್ಯೋದಯ ಅನ್ನಯೋಜನೆಯ ಪಡಿತರ ಚೀಟಿಗಳಿವೆ. ಪ್ರತಿ ತಿಂಗಳು 15 ರೊಳಗೆ ಪಡಿತರವನ್ನು ನ್ಯಾಯಬೆಲೆ ಅಂಗಡಿಗೆ ಎತ್ತುವಳಿ ಮಾಡಬೇಕು. ಬಡವರಿಗೆ ಯಾವುದೇ ಲೋಪವಾಗದಂತೆ ಸಮರ್ಪಕ ವಿತರಣೆಗೆ ಕ್ರಮ ತೆಗೆದುಕೊಳ್ಳಬೇಕು ಎಂದರು.ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎ. ರಂಗಸ್ವಾಮಿ ಮಾತನಾಡಿ, ಗೋದಾಮಿನಿಂದ ಅಂಗಡಿ ಮಾಲೀಕರಿಗೆ ಪಡಿತರ ವಿತರಿಸುವಾಗ ಪ್ರತಿಯೊಂದು ಚೀಲದಲ್ಲಿ ಒಂದರಿಂದ ಒಂದುವರೆ ಕೆ.ಜಿ.ಯಷ್ಟು ತೂಕದಲ್ಲಿ ವ್ಯತ್ಯಾಸವಾಗುತ್ತಿದೆ. ಈ ಲೋಪವಾಗದಂತೆ ನಿಗಾವಹಿಸಬೇಕು ಎಂದು ಹೇಳಿದರು.ತಹಶೀಲ್ದಾರ್ ಪಿ.ಜಿ. ನಟರಾಜ್, ಎಪಿ ಎಂಸಿ ಅಧ್ಯಕ್ಷ ಬಿ.ಆರ್. ದೊರೆಸ್ವಾಮಿ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಹೇಮಾವತಿ ಕೃಷ್ಣನಾಯಕ್, ಉಪಾಧ್ಯಕ್ಷೆ ಶಿಲ್ಪಾ ಶ್ರೀನಿವಾಸ್, ಮಾಜಿ ಉಪಾಧ್ಯಕ್ಷ ಮಲ್ಲೇಶ್, ಸದಸ್ಯೆ ವಸಂತಮ್ಮ, ಆಹಾರ ಇಲಾಖೆ ನಿರೀಕ್ಷಕ ಮಂಜುನಾಥ್, ಬಿ.ಎನ್. ಮಂಜೇಗೌಡ ಇದ್ದರು.`ಅನ್ನಭಾಗ್ಯ ಬಡವರಿಗೆ ತಲುಪಲಿ'

ಹೊಳೆನರಸೀಪುರ ವರದಿ: ಬಡ ಜನರಿಗೆ ರೂಪಾಯಿಗೆ ಕೆ.ಜಿ. ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಗೆ ವಿರೋಧ ಇಲ್ಲ. ಈ ಅಕ್ಕಿ ಪ್ರತಿತಿಂಗಳೂ ಬಡವರಿಗೆ ತಪ್ಪದೇ ತಲುಪುವಂತಾಗಬೇಕು ಎಂದು ಶಾಸಕ ಎಚ್.ಡಿ. ರೇವಣ್ಣ ನುಡಿದರು.ಪಟ್ಟಣದಲ್ಲಿ ಗುರುವಾರ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಹಳ್ಳಿಗಳಲ್ಲಿ ಗ್ರಾಮ ಲೆಕ್ಕಿಗರಿಗೆ ಹಣ ನೀಡಿದವರಿಗೆ 30 ಕೆ.ಜಿ ಅಕ್ಕಿ, ನೀಡದವರಿಗೆ 10 ಕೆ.ಜಿ. ಅಕ್ಕಿ ದೊರೆಯುವಂತೆ ದಾಖಲೆ ನಿರ್ಮಿಸುತ್ತಾರೆ. ತಹಶೀಲ್ದಾರ್ ಅವರು ಈ ಲೋಪಗಳು ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು. ರಾಜ್ಯದಲ್ಲಿ ಎಪಿಎಲ್ ಕಾರ್ಡ್ ಪಡೆದಿರುವವರೆಲ್ಲರೂ ಸಾಹುಕಾರರೇ ಅಲ್ಲ. ಮಧ್ಯಮವರ್ಗದವರಿಗೂ ಕಡಿಮೆ ಬೆಲೆಯಲ್ಲಿ ಅಕ್ಕಿ ನೀಡಬೇಕು ಎಂದು ಆಗ್ರಹಿಸಿದರು. ತಹಶೀಲ್ದಾರ್ ಮಂಜುಳಾ, ತಾ.ಪಂ ಅಧ್ಯಕ್ಷೆ ಚಂದ್ರಮತಿ,ಉಪಾಧ್ಯಕ್ಷ ಕೋಡಿಹಳ್ಳಿ ಹುಚ್ಚೇಗೌಡ, ಪುರಸಭೆ ಮಾಜಿ ಅಧ್ಯಕ್ಷ ಟಿ. ಮಲ್ಲೇಶ್, ಫುಡ್‌ಇನಸ್ಪೆಕ್ಟರ್ ರಾಮಚಂದ್ರ ಇದ್ದರು. ಫಲಾನುಭವಿಗಳಿಗೆ ಬಿ.ಪಿ.ಎಲ್ ಕಾರ್ಡ್  ವಿತರಿಸಲಾಯಿತು.    

   

`ಅರ್ಹರಿಗೆ  ಬಿಪಿಎಲ್ ಕಾರ್ಡ್ ತಲುಪಿಸಿ'

ಸಕಲೇಶಪುರ ವರದಿ: ದೇಶಕ್ಕೆ ಸ್ವಾತಂತ್ರ್ಯ ಸಂದು 67 ವರ್ಷಗಳು ಕಳೆದರೂ, ಬಡತನ ನಿರ್ಮೂಲನೆ ಮಾಡುವ ಬದಲಿಗೆ ಒಂದು ರೂಪಾಯಿಗೆ ಒಂದು ಕೆ.ಜಿ. ಅಕ್ಕಿ ನೀಡುವಂತಹ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ವಿಪರ್ಯಾಸ ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ಹೇಳಿದರು.ಇಲ್ಲಿಯ ಪುರಭವನದಲ್ಲಿ ಗುರುವಾರ ತಾಲ್ಲೂಕಿನಲ್ಲಿ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ರಾಜ್ಯದಲ್ಲಿ ಬಡತನದ ರೇಖೆಗಿಂತ ಕೆಳಗಿರುವ ನಿಜವಾದ ಬಹುತೇಕ ಅರ್ಹರಿಗೆ ಇನ್ನೂ ಬಿಪಿಎಲ್ ಕಾರ್ಡುಗಳು ದೊರೆತಿಲ್ಲ. ಅರ್ಹ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡುಗಳನ್ನು ವಿತರಣೆ ಮಾಡಿ ಅಂತವರಿಗೆ ಅಕ್ಕಿಯನ್ನು ವಿತರಣೆ ಮಾಡಿದರೆ ಯೋಜನೆ ಯಶಸ್ವಿಯಾಗುತ್ತದೆ ಎಂದರು.ವಿಧಾನ ಪರಿಷತ್ ಸದಸ್ಯ ಬಿ.ಬಿ.ಶಿವಪ್ಪ  ಮಾತನಾಡಿ, ಅನ್ನಭಾಗ್ಯದ ಬೆಳಕು ಗ್ರಾಮೀಣ ಭಾಗದಲ್ಲಿ ಪಸರಿಸಿದಾಗ ಮಾತ್ರ ಯೋಜನೆ ಸಾರ್ಥಕತೆ ಕಾಣಲು ಸಾಧ್ಯ. ಎಷ್ಟೋ ಶ್ರೀಮಂತ ಕುಟುಂಬಗಳಲ್ಲಿ  ಈಗಲೂ ಬಿಪಿಎಲ್ ಕಾರ್ಡುಗಳಿವೆ. ನಿಜವಾದ ಫಲಾನುಭವಿಗಳಿಗೆ ಯೋಜನೆಗಳ ಸವಲತ್ತು ದೊರೆಯದೇ ಅವರು ಹಸಿವಿನಿಂದ ಬಳಲುವ ಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.ಉಪವಿಭಾಗಾಧಿಕಾರಿ ಶ್ರಿವಿದ್ಯಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ  ಸುಮಂಗಲಿ, ಸದಸ್ಯ ಗೋಪಾಲಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜಮ್ಮ, ತಹಶೀಲ್ದಾರ್ ಬಾಬೂ ದೇವಾಡಿಗ, ಆಹಾರ ನಿರೀಕ್ಷಕ ರಾಮೇಗೌಡ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಸಿದ್ಧರಾಜು ಇದ್ದರು.`ಸಮರ್ಪಕ ಅನುಷ್ಠಾನ ಅಗತ್ಯ'

ಅರಕಲಗೂಡು ವರದಿ: ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಶಾಸಕ ಎ.ಮಂಜು ಅಧಿಕಾರಿಗಳಿಗೆ ಸೂಚಿಸಿದರು.ಪಟ್ಟಣದ ಶಿಕ್ಷಕರ ಭವನದಲ್ಲಿ ಗುರುವಾರ ನಡೆದ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಸಮಾಜದಲ್ಲಿನ ಬಡವರು ಹಸಿವಿನಿಂದ ನರಳಬಾರದು ಎಂದು ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದೆ. ಅರ್ಹ ಫಲಾನುಭವಿಗಳಿಗೆ ಯೋಜನೆಯನ್ನು ಸಮರ್ಪಕವಾಗಿ ತಲುಪಿಸುವ ಹೊಣೆ ಅಧಿಕಾರಿಗಳು, ನ್ಯಾಯಬೆಲೆ ಅಂಗಡಿ ಮಾಲೀಕರದ್ದು. ಫಲಾನುಭವಿಗಳು ಈ  ಸವಲತ್ತನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.ತಹಶೀಲ್ದಾರ್ ಕೆ.ಪಿ. ಈಶ್ವರಪ್ಪ ಮಾತನಾಡಿ ತಾಲ್ಲೂಕಿನಲ್ಲಿ 40 ಸಾವಿರ ಫಲಾನುಭವಿಗಳು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಇವರಲ್ಲಿ 38,172 ಮಂದಿ ಬಿಪಿಎಲ್ ಕಾರ್ಡ್‌ದಾರರು ಹಾಗೂ 2634 ಮಂದಿ ಅಂತ್ಯೋದಯ ಯೋಜನೆ ಫಲಾನುಭವಿಗಳಾಗಿದ್ದಾರೆ .ಈ ಯೋಜನೆಗಾಗಿ ತಾಲ್ಲೂಕಿಗೆ 12,325 ಕ್ವಿಂಟಲ್ ಅಕ್ಕಿ ಪೂರೈಕೆಯಾಗಿದೆ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹ ಅಧಿಕಾರಿ ಶಿವರಾಮ್, ನ್ಯಾಯ ಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಅಶೋಕ್ ಮಾತನಾಡಿದರು. ತಾಲ್ಲೂಕು ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಬಿ.ಎನ್. ಪುಟ್ಟೇಗೌಡ, ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಕೀರ್ತಿರಾಜ್, ತಾ.ಪಂ. ಅಧ್ಯಕ್ಷೆ ಕಾಮಾಕ್ಷಮ್ಮ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry