ಜಿಲ್ಲೆಯ ವಿವಿಧೆಡೆ ಕಾರ್ಮಿಕ ದಿನ ಆಚರಣೆ

7

ಜಿಲ್ಲೆಯ ವಿವಿಧೆಡೆ ಕಾರ್ಮಿಕ ದಿನ ಆಚರಣೆ

Published:
Updated:
ಜಿಲ್ಲೆಯ ವಿವಿಧೆಡೆ ಕಾರ್ಮಿಕ ದಿನ ಆಚರಣೆ

ಹಾಸನ: ಕಳೆದ ತಿಂಗಳಿನಲ್ಲಿ ಎಂಟು ದಿನಗಳಲ್ಲಿ ತಾಲ್ಲೂಕು ಕಚೇರಿಯ 1.96ಲಕ್ಷ ದಾಖಲೆಗಳ ಕ್ಯಾಟಲಾಗಿಂಗ್ ಕಾರ್ಯ ಮುಗಿಸಿದ ಕಂದಾಯ ಇಲಾಖೆಯ ಸಿಬ್ಬಂದಿ ಕಾರ್ಮಿಕ ದಿನಾಚರಣೆ ದಿನ ಇಲ್ಲಿನ ಗೆಂಡೆಕಟ್ಟೆ ಅರಣ್ಯಧಾಮದಲ್ಲಿ ಕುಣಿದು ಕುಪ್ಪಳಿಸಿ ಒತ್ತಡವನ್ನು ನೀಗಿಸಿಕೊಂಡರು.ಕಾರ್ಮಿಕ ದಿನಾಚರಣೆ ಅಂಗವಾಗಿ ತಹಶೀಲ್ದಾರ ಮಥಾಯಿ ಅವರು ಸಿಬ್ಬಂದಿಗೆ ವಿಶೇಷ ಸ್ನೇಹ ಕೂಟ ಆಯೋಜಿಸಿದ್ದರು. ಮುಂಜಾನೆಯಿಂದ ಸಂಜೆಯವರೆಗೆ ವಿವಿಧ ಕ್ರೀಡೆಗಳು, ಸಾಂಸ್ಕೃತಿಕ ಕಾರ್ಯಕ್ರಮ, ಊಟ-ತಿಂಡಿ, ಡ್ಯಾನ್ಸ್ ಮಾಡಿದ ಸಿಬ್ಬಂದಿ ಒತ್ತಡ ಮರೆತು ಹಗುರವಾದರು.ಹಾಸನ ತಾಲ್ಲೂಕು ಕಚೇರಿಯ ದಾಖಲೆಗಳನ್ನು ಕಂಪ್ಯೂಟರ್‌ಗೆ ಅಳವಡಿಸಲು ಕ್ಯಾಟಲಾಗಿಂಗ್ ಕಾರ್ಯವನ್ನು ಮೂರು ವರ್ಷಗಳ ಹಿಂದೆಯೇ ಆರಂಭಿಸಿದ್ದರೂ, ಕೇವಲ 52ಸಾವಿರ ದಾಖಲೆಗಳ ಕ್ಯಾಟಲಾಗಿಂಗ್ ಮಾತ್ರ ಆಗಿತ್ತು. ಶೀಘ್ರದಲ್ಲೇ ಈ ಕಾರ್ಯವನ್ನು ಮುಗಿಸುವ ಉದ್ದೇಶದಿಂದ ಏಪ್ರಿಲ್ ತಿಂಗಳಲ್ಲಿ ತಾಲ್ಲೂಕು ಕಚೇರಿಯಲ್ಲಿ ಒಂದು ಅಭಿಯಾನವನ್ನೇ ಆರಂಭಿಸಲಾಗಿತ್ತು.

 

ಹಾಸನ ತಾಲ್ಲೂಕಿನ ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳು, ಹಾಗೂ ಇನ್ನೂ ಅನೇಕ ಸಿಬ್ಬಂದಿ ಭಾನುವಾರವನ್ನೂ ಬಿಡದೆ ಮುಂಜಾನೆ 7 ರಿಂದ ರಾತ್ರಿ 9 ಗಂಟೆಯವರೆಗೆ ದುಡಿದು 1.96ಲಕ್ಷ ದಾಖಲೆಗಳನ್ನು ಕ್ಯಾಟಲಾಗಿಂಗ್ ಮಾಡುವ ಮೂಲಕ ತಾವೇ ದಾಖಲೆ ಬರೆದಿದ್ದರು. ರಾಜ್ಯದಲ್ಲಿ ಯಾವ ತಾಲ್ಲೂಕಿನಲ್ಲೂ ಇಂಥ ಕಾರ್ಯ ಆಗಿಲ್ಲ ಎಂದು ತಹಶೀಲ್ದಾರ ಮಥಾಯಿ ತಿಳಿಸಿದರು.ಕ್ಯಾಟಲಾಗಿಂಗ್ ಅಭಿಯಾನ ಪೂರ್ಣಗೊಳ್ಳಬೇಕಾದರೆ ಮೂವರು ಮಹಿಳೆಯರು ಆಸ್ಪತ್ರೆಗೆ ದಾಖಲಾಗಿದ್ದರು. ಇನ್ನೂ ಹಲವರು ಕೆಲಸದ ಒತ್ತಡದಿಂದ ಬಳಲಿದ್ದರು. ಈ ದಣಿವನ್ನು ನಿವಾರಿಸುವ ಸಲುವಾಗಿ ಮತ್ತು ಕಾರ್ಮಿಕ ದಿನಾಚರಣೆ ಹಿನ್ನೆಲೆಯಲ್ಲಿ ಎಲ್ಲ ಸಿಬ್ಬಂದಿಗೆ ಸ್ನೇಹ ಕೂಟ ಆಯೋಜಿಸಲಾಗಿದೆ ಎಂದೂ ಮಥಾಯಿ ತಿಳಿಸಿದರು.ಮಂಗಳವಾರ ಮುಂಜಾನೆ ಗೆಂಡೆಕಟ್ಟೆ ಅರಣ್ಯಕ್ಕೆ ಬಂದ ಸಿಬ್ಬಂದಿ ಗೋಣಿ ಚೀಲದ ಓಟ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಗೆದ್ದವರಿಗೆ ಬಹುಮಾನ ನೀಡಲಾಯಿತು. ಜತೆಗೆ ಅಭಿಯಾನದ ಸಂದರ್ಭದಲ್ಲಿ ಅತಿ ಹೆಚ್ಚು ಕ್ಯಾಟಲಾಗ್ ತಯಾರಿಸಿದವರಿಗೆ ನಗದು ಬಹುಮಾನವನ್ನೂ ವಿತರಿಸಲಾಯಿತು.ವಿವಿಧ ವಿಭಾಗಗಳಿಗೆ ಸೇರಿದ 65ಕ್ಕೂಹೆಚ್ಚು ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ: ಹಾಸನ ಜಿಲ್ಲಾ ಕೂಲಿ ಕಾರ್ಮಿಕರ (ಹಮಾಲರ) ಸಂಘದ ಆಶ್ರಯದಲ್ಲಿ ಮಂಗಳವಾರ ಎಪಿಎಂಸಿಯ ಶ್ರಮಿಕರ ಭವನದಲ್ಲಿ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಪಿಎಂಸಿ ಅಧ್ಯಕ್ಷ ನಾಗರಾಜು ಮಾತನಾಡಿ, `ಕಾರ್ಮಿಕರು ತಮ್ಮ ಆರೋಗ್ಯ ಹಾಗೂ ಭವಿಷ್ಯದ ಕಡೆಗೆ ಹೆಚ್ಚು ಗಮನ ಕೊಡಬೇಕು~ ಎಂದರು.ಹಮಾಲಿ ಸಂಘದ ಅಧ್ಯಕ್ಷ ಶೇಖರ್ ಹಾಗೂ ಮಾಜಿ ಅಧ್ಯಕ್ಷ ರಾಜಶೇಖರ್ ಮಾತನಾಡಿ ಕಾರ್ಮಿ ಕರ ಕುಂದುಕೊರತೆಗಳನ್ನು ವಿವರಿಸಿದರು. `ಜಿಲ್ಲೆಯಲ್ಲಿ ಸುಮಾರು 600ಕ್ಕೂ ಹೆಚ್ಚು ಹಮಾಲರಿದ್ದಾರೆ. ಇತರ ಜಿಲ್ಲೆಗಳಲ್ಲಿ ಎಪಿಎಂಸಿ ಹಮಾಲರಿಗೆ ನಿವೇಶನಗಳನ್ನು ನೀಡಿದ್ದರೂ, ಹಾಸನದಲ್ಲಿ ಈ ವರೆಗೆ ನಮಗೆ ಯಾವ ಅನುಕೂಲವನ್ನೂ ನೀಡಿಲ್ಲ. ಹಮಾ ಲರು ಒಂದುವೇಳೆ ಅಕಾಲಿಕವಾಗಿ ಮರಣ ಹೊಂದಿದರೆ ಅವರಿಗೆ ಯಾವ ಸೌಭ್ಯವೂ ಸಿಗುವುದಿಲ್ಲ~ ಎಂದರು.ವರ್ತಕರ ಸಂಘದ ಕಡೆಯಿಂದ ಎಪಿಎಂಸಿಗೆ ಆಯ್ಕೆಯಾಗಿರುವ ಎಂ.ಎಸ್. ರಂಗೇಗೌಡ ಅವರು, `ಜಿಲ್ಲೆಯ ಮುಖಂಡರ ಜತೆಗೆ ಚರ್ಚಿಸಿ ಹಮಾಲರಿಗೆ ನಿವೇಶನಗಳನ್ನು ಕೊಡಿಸಲು ಪ್ರಯತ್ನಿಸಲಾಗುವುದು~ ಎಂದರು.  ವರ್ತಕ ಎಚ್.ಡಿ. ಗೋಪಾಲ್, `ಹಮಾಲರು ಒಂದುವೇಳೆ ಅಕಾಲಿಕವಾಗಿ ನಿಧನಹೊಂದಿದಲ್ಲಿ ಅವರಿಗೆ ಸಂಘದಿಂದ ನೆರವು ನೀಡಲು ಕ್ರಮ ಕೈಗೊಳ್ಳಲಾಗುವುದು~ ಎಂದು ಭರವಸೆ ನೀಡಿದರು.ಎಪಿಎಂಸಿ ಕಾರ್ಯದರ್ಶಿ ಕೆ.ಟಿ. ಸೋಮಶೇಖರ್  ವೇದಿಕೆಯಲ್ಲಿದ್ದರು.  ಸರ್ಕಾರದಿಂದ ನಾಮನಿರ್ದೇಶನಗೊಂಡಿರುವ ಸುರೇಶ್ ಕಾರ್ಮಿಕರ ಕುಂದು ಕೊರತೆಗಳನ್ನು ಆಲಿಸಿದರು.

ಇದೇ ಕಾರ್ಯಕ್ರಮದಲ್ಲಿ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಮಾಲರ ಸಂಘದಿಂದ ಎಪಿಎಂಸಿ ಅಧ್ಯಕ್ಷರಿಗೆ ಎರಡು ಮನವಿಗಳನ್ನು ಸಲ್ಲಿಸಲಾಯಿತು.ಹಮಾಲರ ಸಂಘದ ಉಪಾಧ್ಯಕ್ಷ ಚಿಕ್ಕೇಗೌಡ, ಕಾರ್ಯದರ್ಶಿ ಮಹಮ್ಮದ್ ಶಫಿ, ಖಜಾಂಜಿ ಶಂಕರಪ್ಪ ಮತ್ತಿತರರು ಉಪಸ್ಥಿತರಿದ್ದರು.`ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ~

ಹಿರೀಸಾವೆ: ಕಾರ್ಮಿಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಡಿ.ಜಿ.ಅಂಬಿಕರಾಮಕೃಷ್ಣ ಅವರು  ಹೇಳಿದರು. ಅವರು ಪಟ್ಟಣದ ಚೌಡೇಶ್ವರಿ ಹಮಾಲಿಗಳು ಮತ್ತು ಕಟ್ಟಡ ಕಾರ್ಮಿಕರ ಸಂಘವು ಶ್ರೀಕಂಠಯ್ಯ ವೃತ್ತದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

 

ಕಾರ್ಮಿಕರು ಕಷ್ಟಪಟ್ಟು ದುಡಿಯು ತ್ತಾರೆ, ಬಂದ ಹಣದಲ್ಲಿ ಹೆಚ್ಚು ಮದ್ಯಪಾನಕ್ಕೆ ಖರ್ಚು ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ, ಇವರಿಗೆ ಜನ ಪ್ರತಿನಿಧಿಗಳು, ಸಂಘ, ಸಂಸ್ಥೆಗಳ ಕಾರ್ಯಕರ್ತರು ಸರಿಯಾದ ಮಾರ್ಗದರ್ಶನ ನೀಡಿ ಉತ್ತಮ ರೀತಿ ಯಲ್ಲಿ ಸಮಾಜ ದಲ್ಲಿ ಬದುಕುವುದನ್ನು ಕಲಿಸಬೇಕಿದೆ ಎಂದರು.    ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎಸ್.ಶ್ರೀಧರ್ ಮಾತನಾಡಿ ಸಂಘದ ಕಟ್ಟಡ ನಿರ್ಮಿಸಲು ನಿವೇಶನ ನೀಡುವುದಾಗಿ ತಿಳಿಸಿದರು.  ತಾಲ್ಲೂಕು ಪಂಚಾಯಿತಿ ಸದಸ್ಯ ಎಚ್.ಎಸ್. ರವಿಕುಮಾರ್ ಮಾತನಾಡಿದರು. ಕೃಷಿ ಪತ್ತಿನ ಸಹ ಕಾರ ಸಂಘದ ಅಧ್ಯಕ್ಷ ಎಚ್.ವಿ.ಶಶಿಕುಮಾರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಜಿ. ಮಂಜುನಾಥ್, ಸಂಘದ ಗೌರವ ಅಧ್ಯಕ್ಷ ರಮೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಬೋರಣ್ಣ, ಕಿರಣ್, ಕರವೇನ ಹೋಬಳಿ ಘಟಕದ ಅಧ್ಯಕ್ಷ ಮಹೇಶ್, ಚನ್ನರಾಯಪಟ್ಟಣ ತಾಲ್ಲೂಕು ಕಾರ್ಮಿಕರ ಸಂಘದ ಅಧ್ಯಕ್ಷ ವಾಸು ಇತರರು ಇದ್ದರು.`ಒಡೆದು ಆಳುವ ನೀತಿ ಅನುಸರಣೆ~

ಚನ್ನರಾಯಪಟ್ಟಣ: ಚಾಮುಂಡೇಶ್ವರಿ ಷುಗರ್ಸ್‌ ಆಡಳಿತ ಮಂಡಳಿ, ಕಾರ್ಖಾನೆಯ ಕಾರ್ಮಿಕರನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಎಚ್‌ಎಸ್‌ಎಸ್‌ಕೆ ಕಾರ್ಮಿಕ ಸಂಘದ ಅಧ್ಯಕ್ಷ ಎಂ.ಎ.ಗೋಪಾಲಸ್ವಾಮಿ ದೂರಿದರು. ತಾಲ್ಲೂಕಿನ ಶ್ರೀನಿವಾಸಪುರದಲ್ಲಿ ಮಂಗಳವಾರ ನಡೆದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಾತನಾಡಿದರು. ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯನ್ನು 2007ರಲ್ಲಿ ಗುತ್ತಿಗೆಗೆ ಪಡೆದಿರುವ ಚಾಮುಂಡೇಶ್ವರಿ ಷುಗರ್ಸ್‌ನವರು ಇದುವರೆಗೆ ಸಮರ್ಪಕ ಗುತ್ತಿಗೆ ಹಣ ಪಾವತಿಸಿಲ್ಲ.ಅಷ್ಟು ಮಾತ್ರವಲ್ಲ ಒಪ್ಪಂದದಲ್ಲಿ ಆದ ಕರಾರಿನಂತೆ ಕಬ್ಬು ಅರೆಯವಿಕೆ ಸಾಮರ್ಥ್ಯವನ್ನು ಹೆಚ್ಚಿಸಿಲ್ಲ. ಕಾರ್ಮಿಕರ ಪರ ದನಿ ಎತ್ತಿದರೆ ಇಲ್ಲಸಲ್ಲದ ಆರೋಪ ಹೊರಿಸಿ ಕೆಲ ಕಾರ್ಮಿಕರನ್ನು ಅಮಾನತ್ತುಪಡಿಸಲಾಗಿದೆ. ಮತ್ತೊಂದು ಸಂಘವನ್ನು ಸ್ಥಾಪಿಸಲು ಅವಕಾಶ ನೀಡುವ ಮೂಲಕ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.ಬೇರೆ ಕಾರ್ಖಾನೆಯಲ್ಲಿ ಕಾರ್ಮಿಕರಿಗೆ 20 ಸಾವಿರ ರೂ. ಬೋನಸ್ ನೀಡಲಾಗುತ್ತಿದೆ. ಆದರೆ ಚಾಮುಂಡೇಶ್ವರಿ ಆಡಳಿತ ಮಂಡಳಿ ರೂ. 6 ಸಾವಿರ  ಮಾತ್ರ ಬೋನಸ್ ನೀಡುತ್ತಿದ್ದಾರೆ. ಕಾರ್ಖಾನೆಯ ಆವರಣ   ದಲ್ಲಿರುವ ಬೆಲೆ ಬಾಳುವ ತೇಗದ ಮರವನ್ನು ಕಡಿಮೆ ಬೆಲೆ ಮಾರಲಾಗಿದೆ. ಎಚ್‌ಎಸ್‌ಎಸ್‌ಕೆ ವ್ಯವಸ್ಥಾಪಕ     ನಿರ್ದೇಶಕ ಸಿ. ರಾಜಣ್ಣರೆಡ್ಡಿ, ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣಗೌಡ ಅವರು 500 ಕಾರ್ಮಿಕರ ಹಿತ ರಕ್ಷಿಸುತ್ತಿಲ್ಲ ಎಂದು ದೂರಿದ ಅವರು ಕಾರ್ಮಿಕರ ಹಿತ ಕಾಪಾಡಲು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಕಾರ್ಮಿಕ ನಿರೀಕ್ಷಕ ಎಚ್.ಕೆ. ಪ್ರಭಾಕರ, ಸಂಘದ ಸಹಕಾರ್ಯದರ್ಶಿ ಕೆ. ರಾಮಚಂದ್ರ, ಕಾರ್ಯದರ್ಶಿ ಡಿ.ಎಂ. ಶಂಕರೇಗೌಡ, ನಿರ್ದೇಶಕ ಆರ್. ರುದ್ರಸ್ವಾಮಿ ಮಾತನಾಡಿದರು. ನಿರ್ದೇಶಕರಾದ ಎನ್.ಕೆ .ರಾಮಕೃಷ್ಣ, ಸಿ.ಎನ್. ಸದಾಶಿವ ಇದ್ದರು. ಸಂಘದ ಉಪಾಧ್ಯಕ್ಷ ಎಸ್.ಜೆ. ಬಸವರಾಜು ಸ್ವಾಗತಿಸಿದರೆ, ಖಜಾಂಚಿ ಟಿ.ಎನ್. ಶಿವಕುಮಾರ್ ವಂದಿಸಿದರು.`ಕಾರ್ಮಿಕರಿಗೆ ಸೌಲಭ್ಯ ಒದಗಿಸಿ~

ಚನ್ನರಾಯಪಟ್ಟಣ: ದೇಶದ ಅಭಿವೃದ್ಧಿಗೆ ಕಾರಣವಾಗಿರುವ ಅಸಂಘಟಿತ ಕಾರ್ಮಿಕರಿಗೆ ಕಾನೂನು ಬದ್ಧ ಸವಲತ್ತುಗಳನ್ನು ನೀಡಬೇಕು ಎಂದು ಶೀಘ್ರ ವಿಲೇವಾರಿ ನ್ಯಾಯಾಧೀಶ ಬಿ. ಮುರಳೀಧರ ಪೈ, ಮಂಗಳವಾರ ಇಲ್ಲಿ ತಿಳಿಸಿದರು.ತಾಲ್ಲೂಕು ಕಾನೂನುಸೇವಾ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಕಾರ್ಮಿಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ~ `ಕಾನೂನು ಅರಿವು~ ಕಾರ್ಯಕ್ರಮದಲ್ಲಿ ಮಾತನಾಡಿದ, ಮಾಹಿತಿ ಕೊರತೆಯಿಂದ ಕಾರ್ಮಿಕರು ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಇಂಥವರಿಗೆ ಸವಲತ್ತು ಒದಗಿಸಬೇಕಾದ ಜವಬ್ದಾರಿ ಅಧಿಕಾರಿಗಳ ಮೇಲಿದೆ ಎಂದು ಹೇಳಿದರು.ಕಾರ್ಮಿಕ ನಿರೀಕ್ಷಕ ಎಚ್.ಕೆ. ಪ್ರಭಾಕರ, ಹಿರಿಯ ಸಿವಿಲ್ ನ್ಯಾಯಾಧೀಶ ಆರ್. ರವಿ ಮಾತನಾಡಿದರು. ಸಹಾಯಕ ಸರ್ಕಾರಿ ಅಭಿಯೋಜಕಿ ಜಿ. ವೆಂಕಟಲಕ್ಷ್ಮಮ್ಮ, ವಕೀಲರ ಸಂಘದ ಖಜಾಂಚಿ ಬಿ.ವಿ. ವಿಜಯ್ ಇದ್ದರು. ವಕೀಲ ಫಣೀಶ್ ಸ್ವಾಗತಿಸಿದರು.ಸಂಘಟಿತರಾಗಲು ಕಾರ್ಮಿಕರಿಗೆ ಸಲಹೆ

ಬಾಣಾವರ: ಕಾರ್ಮಿಕರು ಸಂಘಟಿತ ರಾಗಿ ವೃತ್ತಿ ಕೌಶ್ಯಲ ಹೆಚ್ಚಿಸಿಕೊಳ್ಳು ವುದರ ಜೊತೆಗೆ ಸರ್ಕಾರದ ಯೋಜನೆಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಬಿ.ರವಿಶಂಕರ್ ತಿಳಿಸಿದರು.   ಹಮಾಲಿ ಕಾರ್ಮಿಕರ ಸಂಘದ ವತಿಯಿಂದ ಪಟ್ಟಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ  ತನಾಡಿದರು. ಕಾರ್ಮಿಕರು ಸರ್ಕಾರದ ಸೌಲಭ್ಯಗಳಾದ ವಿಮೆ, ಸಾಮಾಜಿಕ ಭದ್ರತೆ, ಆರೋಗ್ಯ ಯೋಜನೆಗಳ ಮಾಹಿತಿ ಪಡೆದು ಅವುಗಳ ಸದ್ಬಳಕೆಮಾಡಿ ಕೊಳ್ಳಬೇಕು ಎಂದರು.

ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಟಿ.ಆರ್. ಕೃಷ್ಣಮೂರ್ತಿ ಮಾತನಾಡಿದರು.   ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಬಿಕಾರಮೇಶ್, ಮಾಜಿ ಎಪಿಎಂಸಿ ಅಧ್ಯಕ್ಷ ಬಿ.ಸಿ.ಶ್ರೀನಿವಾಸ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಿ.ಆರ್.ಶ್ರೀಧರ್, ಬಿ.ಎಂ.ಜಯಣ್ಣ, ಪಿ.ಆರ್.ನಾಗೇಂದ್ರ, ಗ್ರಾಮ ಪಂಚಾಯಿತಿ ಸದಸ್ಯರಾದ ಜಿ.ಕೆ.ಸತೀಶ್, ಮಂಜುನಾಥ್, ಸುರೇಶ್, ವರ್ತಕರ ಸಂಘದ ಅಧ್ಯಕ್ಷ ಶ್ಯಾಮಶೆಟ್ಟರು, ಕೆಪಿಸಿಸಿ ತಾಲ್ಲೂಕು ಅಲ್ಪಸಂಖ್ಯಾತ ವರ್ಗದ ಅಧ್ಯಕ್ಷ ಸಮ್ಮಿಉಲ್ಲಾ, ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಕೂಟ್ಟಪ್ಪ, ಹಮಾಲಿ ಸಂಘದ ಅಧ್ಯಕ್ಷ ಉಮೇಶ್ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry