ಜಿಲ್ಲೆಯ ವಿವಿಧೆಡೆ ರಥೋತ್ಸವ,ಮೆರವಣಿಗೆ ಸಂಭ್ರಮ

7

ಜಿಲ್ಲೆಯ ವಿವಿಧೆಡೆ ರಥೋತ್ಸವ,ಮೆರವಣಿಗೆ ಸಂಭ್ರಮ

Published:
Updated:
ಜಿಲ್ಲೆಯ ವಿವಿಧೆಡೆ ರಥೋತ್ಸವ,ಮೆರವಣಿಗೆ ಸಂಭ್ರಮಶನೇಶ್ವರಸ್ವಾಮಿ ರಥೋತ್ಸವ


ಬೇಲೂರು: ಪಟ್ಟಣಕ್ಕೆ ಸಮೀಪದ ಬಿಷ್ಟಮ್ಮನ ಕೆರೆ ಕೋಡಿ ಮಲ್ಲಾಪುರ ನೆಲೆಯಲ್ಲಿರುವ ಶನೇಶ್ವರಸ್ವಾಮಿ ರಥೋತ್ಸವ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.ಶನೇಶ್ವರಸ್ವಾಮಿ ಉತ್ಸವ ಮೂರ್ತಿಯನ್ನು ಪುಷ್ಪಾಲಂಕೃತ ರಥದಲ್ಲಿ ಕೂರಿಸಿದ ಬಳಿಕ ಮಧ್ಯಾಹ್ನ 2ಗಂಟೆ ವೇಳೆಗೆ ನೆರೆದಿದ್ದ ಭಕ್ತರು ಭಕ್ತಿಯಿಂದ ರಥವನ್ನು ದೇವಾಲಯದ ಸುತ್ತ ಎಳೆದರು. ರಥ ಎಳೆಯುವ ಸಂದರ್ಭದಲ್ಲಿ ಭಕ್ತರು ಬಾಳೆಹಣ್ಣನ್ನು ರಥದ ಮೇಲೆ ಎಸೆದು ಭಕ್ತಿ ಪ್ರದರ್ಶಿಸಿದರು. ರಥ ಎಳೆಯುವ ಮುನ್ನ ಬಾಳೆ ಗೊನೆಯ ಬಲಿಯನ್ನು ನೀಡಲಾಯಿತು.ಶನೇಶ್ವರ ಸ್ವಾಮಿ ರಥೋತ್ಸವಾದಿಗಳು ಗುರುವಾರದಿಂದಲೇ ಆರಂಭಗೊಂಡಿದ್ದವು. ಗಂಗಾಪೂಜೆ, ಚಂದ್ರಮಂಡಲೋತ್ಸವ ನಡೆದಿತ್ತು. ಶುಕ್ರವಾರ ಶನೇಶ್ವರಸ್ವಾಮಿಯ ಮೂಲ ಮೂರ್ತಿಗೆ ಮಹಾ ಮಂಗಳಾರತಿ ನಡೆದ ನಂತರ ರಥವನ್ನು ಎಳೆಯಲಾಯಿತು.ರಥೋತ್ಸವದ ಅಂಗವಾಗಿ ನೆರೆದಿದ್ದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ರಥೋತ್ಸವದ ಸಂದರ್ಭದಲ್ಲಿ ಪುರಸಭಾಧ್ಯಕ್ಷ ಎಚ್.ಎಂ.ದಯಾನಂದ್, ಜಿಪಂ ಸದಸ್ಯರಾದ ಎಂ.ವಿ.ಹೇಮಾವತಿ, ಜಿ.ಟಿ.ಇಂದಿರಾ, ಪುರಸಭಾ ಸದಸ್ಯರಾದ ಬಿ.ಸಿ.ಮಂಜುನಾಥ್, ಜಿ.ಶಾಂತಕುಮಾರ್, ಸತ್ಯವೇಲು, ಶನೇಶ್ವರಸ್ವಾಮಿ ಟ್ರಸ್ಟ್‌ನ ಪದಾಧಿಕಾರಿಗಳಾದ ಸುಳ್ಳಕ್ಕಿ ಧರ್ಮೇಗೌಡ, ಕೆ.ಎಂ.ರಮೇಶ್, ಯು.ಟಿ.ಕೇಶವಮೂರ್ತಿ, ಪಿ.ಎಂ.ದೇವರಾಜೇಗೌಡ, ಗ್ರಾಪಂ ಅಧ್ಯಕ್ಷ ಶಾಂತೇಗೌಡ, ತಾಪಂ ಉಪಾಧ್ಯಕ್ಷ ಜೆ.ಸಿ.ಮೋಹನ್‌ಕುಮಾರ್, ಸದಸ್ಯೆ ಸುಮಿತ್ರ ರುದ್ರಯ್ಯ ಇದ್ದರು.ಚಂದ್ರಮೌಳೇಶ್ವರ ಸ್ವಾಮಿ ಉತ್ಸವ

ಚನ್ನರಾಯಪಟ್ಟಣ: ಪಟ್ಟಣದಲ್ಲಿ ಪ್ರಸಿದ್ದ ಚಂದ್ರಮೌಳೇಶ್ವರ ಸ್ವಾಮಿ ರಥೋತ್ಸವ ಶುಕ್ರವಾರ ಜರುಗಿತು. ಬೆಳಿಗ್ಗೆ ಮೂಲ ದೇವರಿಗೆ ಅಭಿಷೇಕ, ಲಲಿತಾ ಸಹಸ್ರನಾಮ ಹೋಮ ನೆರವೇರಿಸಲಾಯಿತು. ದೇವರನ್ನು ಮೆರವಣಿಗೆಯಲ್ಲಿ ಕರೆತಂದು ರಥದಲ್ಲಿ ಪ್ರತಿಷ್ಟಾಪಿಸಲಾಯಿತು. ಬಾಳೆಮರ ಬಲಿ ನೀಡಿದ ನಂತರ ರಥ ಎಳೆಯಲಾಯಿತು. ಭಕ್ತರು ಬಾಳೆಹಣ್ಣು, ದ್ಯವನವನ್ನು ತೇರಿನತ್ತ ಎಸೆದು ಭಕ್ತಿ ಮೆರೆದರು.ಪುರಸಭಾಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷ ಸಿ.ಎನ್. ಮೂರ್ತಿ, ಮುಖ್ಯಾಧಿಕಾರಿ ಎಚ್.ಎಸ್. ಚಂದ್ರಶೇಖರ್, ಸದಸ್ಯರಾದ ಬಿ. ನಾಗರಾಜು, ಸಿ.ಕೆ. ಗೋಪಾಲಕೃಷ್ಣ, ಚಿಕ್ಕಣ್ಣ, ಕಲ್ಪನ, ಜಿ.ಪಂ. ಸದಸ್ಯೆ ಕುಸುಮ ಹಾಜರಿದ್ದರು.ಕಳೆದ ಶನಿವಾರದಂದು ಚಂದ್ರಮೌಳೇಶ್ವರ ಜಾತ್ರೆ ಅಂಗವಾಗಿ ದನಗಳ ಜಾತ್ರೆ ಆರಂಭವಾಗಿದ್ದು, ನಿತ್ಯ ಇಲ್ಲಿನ ಮಾಧ್ಯಮಿಕ ಶಾಲಾ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿವೆ. ಭಾನುವಾರ ಸ್ಥಳದಲ್ಲಿ ಚಿತ್ರ ಬರೆಯುವ ಸ್ಪರ್ಧೆ, ದೇಸಿ ಸೊಬಗು ಬಿಂಬಿಸುವ ಜಾನಪದ ಜಾತ್ರೆ ಆಯೋಜಿಸಲಾಗಿದೆ.ಕೃಷಿ ಮೇಳ ಉದ್ಘಾಟನೆ: ಕೃಷಿಗೆ ಪೂರಕ ವಾತಾವರಣ ನಿರ್ಮಾಣವಾಗದಿದ್ದರೆ ಆಹಾರ ಭದ್ರತೆಗೆ ತೊಂದರೆಯಾಗಲಿದೆ ಎಂದು ತಹಶೀಲ್ದಾರ್ ಬಿ.ಎನ್. ವರಪ್ರಸಾದರೆಡ್ಡಿ ಈಚೆಗೆ ತಿಳಿಸಿದರು.ಚಂದ್ರಮೌಳೇಶ್ವರ ಸ್ವಾಮಿಯ ದನಗಳ ಜಾತ್ರೆ ಅಂಗವಾಗಿ ಏರ್ಪಡಿಸಿದ್ದ ‘ಕೃಷಿ ಮೇಳದ ಉದ್ಘಾಟನಾ ಸಮಾರಂಭ’ದಲ್ಲಿ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಆಹಾರದಲ್ಲಿ ಸ್ವಾವಲಂಭಿಯಾಗಬೇಕು. ಭೂಮಿ ತಾಯಿ ನಂಬಿ ಕೆಟ್ಟವರಿಲ್ಲ. ರೈತರು ಶ್ರಮವಹಿಸಿ ದುಡಿಯಬೇಕು ಎಂದರು.

ಶಾಸಕ ಸಿ.ಎಸ್. ಪುಟ್ಟೇಗೌಡ, ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ, ರಾಷ್ಟ್ರ ಪರಿಸರ ಪ್ರಶಸ್ತಿ ಪುರಸ್ಕೃತ ಸಿ.ಎನ್. ಅಶೋಕ್ ಮಾತನಾಡಿದರು.

|

ಪುರಸಭಾಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷ ಸಿ.ಎನ್. ಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಹಮದ್‌ಗೌಸ್, ಮುಖ್ಯಾಧಿಕಾರಿ ಎಚ್.ಎಸ್. ಚಂದ್ರಶೇಖರ್, ಸದಸ್ಯರಾದ ಸಿ.ಕೆ. ಗೋಪಾಲಕೃಷ್ಣ, ಚಿಕ್ಕಣ್ಣ, ಕೆ.ಜೆ. ಸುರೇಶ್ ಉಪಸ್ಥಿತರಿದ್ದರು. ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಅಂಬೇಡ್ಕರ್ ಭವನಕ್ಕೆ ಪುರಸಭೆವತಿಯಿಂದ 5 ಲಕ್ಷರೂ. ಚೆಕ್ ವಿತರಿಸಲಾಯಿತು.ಹೆಬ್ಬಾರಮ್ಮ ದೇವಿ ಮೆರವಣಿಗೆ

ಹಿರೀಸಾವೆ: ಹಿರೀಸಾವೆ ಮತ್ತು ಹೊನ್ನೇನಹಳ್ಳಿಯಲ್ಲಿ ಹೆಬ್ಬಾರಮ್ಮ ದೇವರ ಮೆರವಣಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಶುಕ್ರವಾರ ನಡೆಯಿತು.

ಅಲಂಕೃತ ದೇವಿಯನ್ನು ಶುಕ್ರವಾರ ಮಧ್ಯಾಹ್ನ ತವರು ಗ್ರಾಮವಾದ ಹೊನ್ನೇನಹಳ್ಳಿಯಲ್ಲಿ ಭಕ್ತರು ಆರತಿಯೊಂದಿಗೆ ಬರಮಾಡಿಕೊಂಡು, ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಿದರು. ನಂತರ ದೇವರ ಪಾದದ ಕಲ್ಲಿನ ಹತ್ತಿರ ವಿಶೇಷ ಪೂಜೆ ಮಾಡಲಾಯಿತು, ಸಂಜೆ ಹಿರೀಸಾವೆ ಗ್ರಾಮಕ್ಕೆ ದೇವರು ಆಗಮಿಸಿದಾಗ ಭಕ್ತರು ದೇವಿಯ ನಾಮಸ್ಮರಣೆ ಮಾಡಿ, ಈಡುಗಾಯಿ ಹೊಡೆದು ಬರಮಾಡಿಕೊಂಡರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ, ಗ್ರಾಮದ ಮಧ್ಯದಲ್ಲಿರುವ ಉಯ್ಯಾಲೆ ಕಂಬದ ಮೇಲೆ ಆಸಿನಗೊಳಿಸಿ ಪೂಜೆ ಮಾಡಲಾಯಿತು, ನಂತರ ಚೌಡೇಶ್ವರಿ ದೇವಸ್ಥಾನದಲ್ಲಿ ಹೆಬ್ಬಾರಮ್ಮ ದೇವಿಯನ್ನು ಕೂರಿಸಲಾಯಿತು. ಅರ್ಚಕರಾದ ಚೌಡಯ್ಯ ಇತರರು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry